ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ‘ದುರದೃಷ್ಟಕರ’ ಎಂದು ಕರೆದ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, “ಮೈತೇಯಿ ಜನರು ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನವನ್ನು ಕೋರಿದ ನಂತರ ಎಲ್ಲವೂ ಪ್ರಾರಂಭವಾಯಿತು. ಆದ್ದರಿಂದ, ತಮ್ಮ ಸರ್ಕಾರ ತಪ್ಪಿತಸ್ಥರಲ್ಲ” ಎಂದು ಪ್ರತಿಪಾದಿಸಿದರು.
ಮುಖ್ಯಮಂತ್ರಿ ಸಚಿವಾಲಯದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ರಾಜ್ಯವು ಮಾನವ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಯಾವುದೇ ರಾಜಕೀಯ ಮಾಡಬಾರದು ಎಂದು ಹೇಳಿದರು.
ಮೇ 3, 2023 ರಂದು ಪ್ರಾರಂಭವಾದ ಹಿಂಸಾಚಾರವನ್ನು ನೆನಪಿಸಿಕೊಂಡ ಸಿಎಂ, “ಈ ಘಟನೆ ತುಂಬಾ ದುರದೃಷ್ಟಕರ. ಸಂಘರ್ಷಕ್ಕೆ ಕಾರಣ ಮೈತೆಯಿಯವರ ಎಸ್‌ಟಿ ಸ್ಥಾನಮಾನದ ಬೇಡಿಕೆ. ಎಲ್ಲರೂ ರಾಜ್ಯ ಸರ್ಕಾರವನ್ನು ನಾವು ತಪ್ಪು ಮಾಡಿದಂತೆ ಟೀಕಿಸುತ್ತಿದ್ದಾರೆ” ಎಂದರು.
“ವಾಸ್ತವವೆಂದರೆ, ಮಣಿಪುರ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಮೈತೇಯಿಯವರ ಎಸ್‌ಟಿ ಸ್ಥಾನಮಾನದ ಬೇಡಿಕೆಗೆ ಉತ್ತರಿಸುವಂತೆ ಕೇಳಿತ್ತು. ಅದನ್ನು ವಿರೋಧಿಸಿ, ರ‍್ಯಾಲಿ ನಡೆಸಲಾಯಿತು; ಮೈತೇಯಿಗಳಿಗೆ ಸೇರಿದ ಮನೆಗಳ ಮೇಲೆ ದಾಳಿ ಮಾಡಲಾಯಿತು. ಹೀಗೆ ಸಂಘರ್ಷ ಪ್ರಾರಂಭವಾಯಿತು” ಎಂದು ವಿವರಿಸಿದರು.
ಮಾರ್ಚ್ 27, 2023 ರಂದು, ಮಣಿಪುರ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ.ವಿ. ಮುರಳೀಧರನ್ ಅವರು, ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವುದನ್ನು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದರು.
ರಾಜ್ಯದ ಬುಡಕಟ್ಟು ಸಂಸ್ಥೆಗಳು ಇದನ್ನು ತೀವ್ರವಾಗಿ ವಿರೋಧಿಸಿದವು. ಮೇ 3 ರಂದು, ಮಣಿಪುರದ ಬೆಟ್ಟದ ಜಿಲ್ಲೆಗಳಲ್ಲಿ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ರ‍್ಯಾಲಿಯನ್ನು ನಡೆಸಿತು.
ಚುರಚಂದ್‌ಪುರ ಜಿಲ್ಲೆಯ ಗುಂಪೊಂದು ಒಂದು ಸ್ಥಳಕ್ಕೆ ನುಗ್ಗಿ ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವಿಕೆಯಲ್ಲಿ ತೊಡಗಿದ ನಂತರ ರ‍್ಯಾಲಿ ಹಿಂಸಾತ್ಮಕವಾಯಿತು. ಈ ವಿಷಯದ ಬಗ್ಗೆ ಅನೇಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಎಂ ಹೇಳಿಕೊಂಡರು.
“ಪರಿಹಾರ ಶಿಬಿರಗಳಲ್ಲಿರುವವರ ಶಿಕ್ಷಣ, ದೈನಂದಿನ ಸರಬರಾಜು, ಆರೋಗ್ಯ ಮತ್ತು ಇತರ ಎಲ್ಲ ಅಗತ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ.. ನಾವು ಮಾನವ ಬಿಕ್ಕಟ್ಟನ್ನು ನೋಡುತ್ತಿದ್ದೇವೆ ಮತ್ತು ಯಾವುದೇ ರಾಜಕೀಯವನ್ನು ಆಡಬಾರದು” ಎಂದು ಅವರು ಹೇಳಿದರು.
“ಮನಸ್ಥಿತಿ ಬದಲಾಗಬೇಕು. ಸಂಘರ್ಷ ನಡೆಯುತ್ತಿದೆ, ಅನೇಕರು ಕೊಲ್ಲಲ್ಪಟ್ಟರು ಮತ್ತು ಸ್ಥಳಾಂತರಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಮತ್ತು ಟಿವಿ ಚರ್ಚೆಗಳಲ್ಲಿ ಜನಪ್ರಿಯತೆಯನ್ನು ಹುಡುಕುವ ಸಮಯ ಈಗಿಲ್ಲ. ನಿಜವಾದ ವಿಷಯ ತಜ್ಞರು ಮತ್ತು ಭದ್ರತಾ ಪಡೆಗಳು ಸಂಘರ್ಷದ ಬಗ್ಗೆ ಮಾತನಾಡಲಿ” ಎಂದು ಸಿಂಗ್ ಹೇಳಿದರು.
‘ಹಿಂದಿನ ನಾಯಕರು’ ಸಂಕುಚಿತ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು, ತಪ್ಪುಗಳನ್ನು ಮಾಡುವುದು ಕಷ್ಟಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದ ಸಿಎಂ, “ನಾವು ಭೂಮಿ ಮತ್ತು ಸಮಾಜವನ್ನು ಉಳಿಸಲು ಅಪಾಯ, ತ್ಯಾಗಗಳನ್ನು ತೆಗೆದುಕೊಳ್ಳಬೇಕಾಗಿದೆ. ರಾಜಕೀಯವು ಚುನಾವಣೆಗಳನ್ನು ಗೆಲ್ಲಲು ಮಾತ್ರ ಅಲ್ಲ” ಎಂದು ಹೇಳಿದರು.
ಮಣಿಪುರದ ತೌಬಲ್‌ನಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೊಲೀಸರು ಮತ್ತು ಜನರ ನಡುವಿನ ಸಂಬಂಧ ಸುಧಾರಿಸಿದೆ ಎಂದು ಮುಖ್ಯಮಂತ್ರಿ ಹೇಳಿಕೊಂಡರು. ಈ ಹಿಂದೆ ಎಲ್ಲರೂ ಪೊಲೀಸರ ಬಗ್ಗೆ ಭಯದ ಮನೋರೋಗವನ್ನು ಹೊಂದಿದ್ದರು ಎಂದು ಹೇಳಿದರು.
ಈಶಾನ್ಯ ರಾಜ್ಯವು ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಗಳ ಹಿಡಿತದಲ್ಲಿದೆ. ಇದು 2023 ರ ಮೇ 3 ರಿಂದ 250 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದ್ದು, ಸಾವಿರಾರು ಜನರು ನಿರಾಶ್ರಿತರಾದರು.
ಕಾರ್ಯಕ್ರಮದ ಸಂದರ್ಭದಲ್ಲಿ, ಪರಿಹಾರ ಶಿಬಿರಗಳಲ್ಲಿ ವಾಸಿಸುವ ಕಾರ್ಮಿಕ ಕಾರ್ಡ್‌ದಾರರ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುವ ವಿಶೇಷ ಯೋಜನೆಯಡಿಯಲ್ಲಿ ಸಿಂಗ್ ಕಾರ್ಮಿಕ ಕಾರ್ಡ್‌ದಾರರಿಗೆ ಪ್ರಯೋಜನಗಳನ್ನು ವಿತರಿಸಿದರು.
ಇದನ್ನೂ ಓದಿ; ನಕ್ಸಲ್ ಸಂಪರ್ಕ ಆರೋಪದ ಎಲ್ಗರ್ ಪರಿಷತ್ ಪ್ರಕರಣ: ರೋನಾ ವಿಲ್ಸನ್, ಸುಧೀರ್ ಧಾವಳೆಗೆ ಜಾಮೀನು


