“ಗೋಡ್ಸೆ ಬಗ್ಗೆ ಸುಳ್ಳು ಪುಸ್ತಕಗಳನ್ನು ನೀಡಿ ನನ್ನನ್ನು ತಪ್ಪುದಾರಿಗೆಳೆದಿದ್ದರು” ಎಂದು ಆರೋಪಿಸಿರುವ ಹಿಂದೂ ಮಹಾಸಭಾದ ಕಾರ್ಯಕರ್ತ ಬಾಬೂ ಲಾಲ್ ಚೌರಾಸಿಯಾ ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾನೆ. ಈ ಕುರಿತು ವ್ಯಾಪಕ ಪರ-ವಿರೋಧ ಚರ್ಚೆ ನಡೆಯುತ್ತಿದೆ.
ಈ ಹಿಂದೆ ಈತ ಮಹಾತ್ಮ ಗಾಂಧಿ ಹಂತಕ ನಾಥೂರಾಂ ಗೋಡ್ಸೆ ಹೆಸರಿನ ದೇವಾಲಯ ಕಟ್ಟಿದ್ದನು. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಮಧ್ಯಪ್ರದೇಶದಲ್ಲಿ ರಾಜಕೀಯ ವಿವಾದ ಸೃಷ್ಟಿಸಿದೆ.
ಕಾಂಗ್ರೆಸ್ ಪಕ್ಷ ಸೇರಿದ ಬಳಿಕ ಹೇಳಿಕೆ ನೀಡಿದ ಚೌರಾಸಿಯಾ, “ಗೋಡ್ಸೆ ಬಗ್ಗೆ ಕೆಲ ಸುಳ್ಳು ಪುಸ್ತಕಗಳನ್ನು ನೀಡಿ ನನ್ನನ್ನು ಹಿಂದೂ ಮಹಾಸಭಾ ಮುಖಂಡರು ತಪ್ಪುದಾರಿಗೆ ಎಳೆದರು. ಆದರೆ ನನ್ನ ತಪ್ಪು ಇತ್ತೀಚೆಗೆ ಅರಿವಾಗಿದ್ದು, ಆ ಬಳಿಕ ಸಂಘಟನೆ ತೊರೆದೆ” ಎಂದು ಸ್ಪಷ್ಟಪಡಿಸಿದ್ದಾನೆ.
ಕಾಂಗ್ರೆಸ್ ಪಕ್ಷ ಚೌರಾಸಿಯಾ ಸೇರ್ಪಡೆಯನ್ನು ಸಮರ್ಥಿಸಿಕೊಂಡಿದ್ದು, “ಅವರು ಪಕ್ಷದ ಕಾರ್ಯಕರ್ತ. ಮತ್ತೆ ಪಕ್ಷದ ತೆಕ್ಕೆಗೆ ಬಂದಿದ್ದಾರೆ” ಎಂದು ಹೇಳಿದೆ.
ಇದನ್ನೂ ಓದಿ: ಕೇಂದ್ರ, ರಾಜ್ಯ ಸರ್ಕಾರಗಳು ಇಂಧನ ತೆರಿಗೆ ಇಳಿಸಿ: ಆರ್‌ಬಿಐ ಗವರ್ನರ್ ಸಲಹೆ
ಆದರೆ ಹಿಂದೂ ಮಹಾಸಭಾ ಚೌರಾಸಿಯಾ ಆರೋಪವನ್ನು ನಿರಾಕರಿಸಿದ್ದು, ಮೂರು ದಿನಗಳ ಹಿಂದೆ ಚೌರಾಸಿಯಾ ಅವರನ್ನು ಉಚ್ಚಟಿಸಿರುವುದಾಗಿ ಹೇಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಸಮ್ಮುಖದಲ್ಲಿ ಚೌರಾಸಿಯಾ ಗುರುವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದನು. ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ನರೋತ್ತಮ್ ಮಿಶ್ರಾ, “ಇದು ಕಾಂಗ್ರೆಸ್ ಪಕ್ಷದ ದ್ವಿಮುಖ ನೀತಿಯನ್ನು ಬಹಿರಂಗಪಡಿಸಿದೆ. ಕಾಂಗ್ರೆಸ್ ಪಕ್ಷ ರಾಷ್ಟ್ರಪಿತ ಮಹಾತ್ಮಗಾಂಧಿ, ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ಮತಕ್ಕಾಗಿ ಜಪಿಸುತ್ತದೆ” ಎಂದು ಕಿಡಿಕಾರಿದರು.
“ಗೋಡ್ಸೆ ವೈಭವೀಕರಣದ ಮೂಲಕ ಬಿಜೆಪಿ ಸರ್ಕಾರಕ್ಕೆ ಮಸಿ ಬಳಿಯಲು ಕಾಂಗ್ರೆಸ್ ಸಂಚು ರೂಪಿಸಿತ್ತು ಎನ್ನುವುದು ಇದೀಗ ಖಾತರಿಯಾಗಿದೆ” ಎಂದು ಬಿಜೆಪಿ ಮುಖಂಡ ರಜನೀಶ್ ಅಗರ್‌ವಾಲ್ ಹೇಳಿದ್ದಾರೆ.
2015ರ ಗ್ವಾಲಿಯರ್ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಚೌರಾಸಿಯಾ 2017ರಲ್ಲಿ ಗೋಡ್ಸೆ ದೇವಾಲಯ ನಿರ್ಮಿಸಿದ್ದರು. ಅಗ ಅವರು ಹಿಂದೂ ಮಹಾಸಭಾ ಸದಸ್ಯರಾಗಿದ್ದರು. 2020ರಲ್ಲಿ ಕೂಡಾ ಗೋಡ್ಸೆ ಬೆಂಬಲಿಸಿ ನಡೆದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದನು.
ಇದನ್ನೂ ಓದಿ: 300 ಕ್ಕೂ ಹೆಚ್ಚು ಗುಡಿಸಲುಗಳ ಧ್ವಂಸ: ಚಿಕ್ಕಮಗಳೂರು ನಗರಸಭೆಯ ವಿರುದ್ದ ಪ್ರತಿಭಟನೆ



ಪಕ್ಷ ಬದಲಾದರೂ ಸಿದ್ಧಾಂತ ಒಂದೇ ಅಲ್ವಾ?