ಜನವರಿ 12 ರಂದು ಸೋನಿಪತ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ, ದಲಿತ, ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್‌ಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕೊಲೆ ಯತ್ನದ ಪ್ರಕರಣದಲ್ಲಿ ಶುಕ್ರವಾರ (ಫೆ.26) ಜಾಮೀನು ನೀಡಿದೆ. ನೊದೀಪ್ ಕೌರ್ ಅವರನ್ನು ಹರಿಯಾಣದ ಕರ್ನಾಲ್ ಜೈಲಿನಲ್ಲಿರಿಸಲಾಗಿದೆ.
ತನ್ನನ್ನು ಬಂಧಿಸಿದ ನಂತರ ಸೋನಿಪತ್ ಪೊಲೀಸ್ ಠಾಣೆಯಲ್ಲಿ ತೀವ್ರವಾಗಿ ಥಳಿಸಿದ್ದಾರೆ ಎಂದು ದಲಿತ, ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯಲ್ಲಿ ಹೇಳಿದ್ದರು.
23 ವರ್ಷದ ಹೋರಾಟಗಾರ್ತಿ ನೊದೀಪ್ ಪಂಜಾಬ್‌ನ ಮುಕ್ತಸರ್ ಜಿಲ್ಲೆಯವರಾಗಿದ್ದು, ತನ್ನ ಬಂಧನದಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 54 ಅನ್ನು ಉಲ್ಲಂಘಿಸಲಾಗಿದೆ, ತನ್ನನ್ನು ವೈದ್ಯಕೀಯ ಪರೀಕ್ಷೆ ನಡೆಸಿಲ್ಲ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಸಿಂಘು ಗಡಿ: ದಲಿತ ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್ ಬಂಧನ ಯಾಕಾಗಿದೆ?
ತನ್ನ ಕಾನೂನು ಸಲಹೆಗಾರರಾದ ಅರ್ಷ್‌ದೀಪ್ ಸಿಂಗ್ ಚೀಮಾ ಮತ್ತು ಹರಿಂದರ್ ದೀಪ್ ಸಿಂಗ್ ಬೈನ್ಸ್ ಅವರ ಮೂಲಕ ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ, ಐಪಿಸಿಯ 307 (ಕೊಲೆ ಯತ್ನ) ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ನೊದೀಪ್ ತಿಳಿಸಿದ್ದರು.
ಪಂಜಾಬ್ ಮೂಲದ ಮಜ್ದೂರ್ ಅಧಿಕಾರ ಸಂಘಟನ್ (ಎಂಎಎಸ್) ಕಾರ್ಮಿಕ ಸಂಘದ ಕಾರ್ಯಕರ್ತೆಯಾಗಿರುವ ದಲಿತ ಸಮುದಾಯದ ನೊದೀಪ್ ಕೌರ್ ಡಿಸೆಂಬರ್ 2020 ರಿಂದ ಸಿಂಘು ಗಡಿಯಲ್ಲಿ ರೈತರ ಆಂದೋಲನದಲ್ಲಿ ಭಾಗವಹಿಸುತ್ತಿದ್ದರು.
BREAKING: Punjab and Haryana High Court Grants Bail to #NodeepKaur pic.twitter.com/JLyRmqAwoT
— Live Law (@LiveLawIndia) February 26, 2021
ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಚಳವಳಿಗೆ ಭಾರಿ ಬೆಂಬಲವನ್ನು ನೀಡುವಲ್ಲಿ ಯಶಸ್ವಿಯಾಗಿದ್ದರಿಂದ, ಈ ಪ್ರಕರಣದಲ್ಲಿ ತನ್ನನ್ನು ಗುರಿಯಾಗಿಸಲಾಗಿದೆ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ನೊದೀಪ್ ವಿರುದ್ದ ಗಲಭೆ, ಕಾನೂನುಬಾಹಿರ ಸಭೆ, ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸದಂತೆ ತೊಂದರೆ ನೀಡುವುದು, ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ, ಸುಲಿಗೆ, ಕೊಲೆ ಯತ್ನ ಸೇರಿದಂತೆ ಭಾರತೀಯ ದಂಡ ಸಂಹಿತೆ ಹಲವು ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಇದನ್ನೂ ಓದಿ: ‘ಪೊಲೀಸ್ ಠಾಣೆಯಲ್ಲಿ ತನಗೆ ಥಳಿಸಲಾಗಿದೆ’- ಹೈಕೋರ್ಟ್‌ನಲ್ಲಿ ಹೋರಾಟಗಾರ್ತಿ ನೊದೀಪ್

ಇದೊಂದು ಸ್ವಾಗತಾರ್ಹ ಬೆಳವಣಿಗೆ. ಜನಪರ ಹೋರಾಟಗಾರರ ವಿರುದ್ದ, ಸುಳ್ಳು ಪ್ರಕರಣಗಳನ್ನು ದಾಕಲಿಸಿ, ಅವರನ್ನು ಜೈಲಿಗಟ್ಟುವ ಪ್ರಯತ್ನಗಳನ್ನು ಪ್ರಬುತ್ವ ಇನ್ನಾದರೂ ಕೈಬಿಡಬೇಕು.