‘ಪೊಲೀಸ್‌ ಠಾಣೆಯಲ್ಲಿ ತನಗೆ ಥಳಿಸಲಾಗಿದೆ’- ಹೈಕೋರ್ಟ್‌ನಲ್ಲಿ ಹೋರಾಟಗಾರ್ತಿ ನೊದೀಪ್
PC: Times Of India

ಕಳೆದ ತಿಂಗಳು ಸೋನಿಪತ್ ಪೊಲೀಸರು ತನ್ನನ್ನು ಬಂಧಿಸಿದ ನಂತರ ಪೊಲೀಸ್ ಠಾಣೆಯಲ್ಲಿ ತೀವ್ರವಾಗಿ ಥಳಿಸಿದ್ದಾರೆ ಎಂದು ದಲಿತ, ಕಾರ್ಮಿಕ ಹೋರಾಟಗಾರ್ತಿ ನೊದೀಪ್‌ ಕೌರ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಂದೆ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ಹೇಳಿದ್ದಾರೆ.

23 ವರ್ಷದ ಹೋರಾಟಗಾರ್ತಿ ನೊದೀಪ್‌ ಪಂಜಾಬ್‌ನ ಮುಕ್ತಸರ್ ಜಿಲ್ಲೆಯವರಾಗಿದ್ದು, ತನ್ನ ಬಂಧನದಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 54 ಅನ್ನು ಉಲ್ಲಂಘಿಸಲಾಗಿದೆ, ತನ್ನನ್ನು ವೈದ್ಯಕೀಯ ಪರೀಕ್ಷೆ ನಡೆಸಿಲ್ಲ ಎಂದು ಆರೋಪಿಸಿದ್ದಾರೆ. ನೊದೀಪ್ ಕೌರ್ ಪ್ರಸ್ತುತ ಹರಿಯಾಣದ ಕರ್ನಾಲ್ ಜೈಲಿನಲ್ಲಿದ್ದಾರೆ.

ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೋಮವಾರ ಮುಂದೂಡಿದ್ದು, ಫೆಬ್ರವರಿ 24 ಕ್ಕೆ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ: ದಲಿತ ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಅಕ್ರಮ ಬಂಧನ: ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್

ತನ್ನ ಕಾನೂನು ಸಲಹೆಗಾರರಾದ ಅರ್ಷ್‌ದೀಪ್ ಸಿಂಗ್ ಚೀಮಾ ಮತ್ತು ಹರಿಂದರ್ ದೀಪ್ ಸಿಂಗ್ ಬೈನ್ಸ್ ಅವರ ಮೂಲಕ ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ, ಐಪಿಸಿಯ 307 (ಕೊಲೆ ಯತ್ನ) ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಆರೋಪಿಯಾಗಿ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ನೊದೀಪ್ ಹೇಳಿದ್ದಾರೆ.

ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಚಳವಳಿಗೆ ಭಾರಿ ಬೆಂಬಲವನ್ನು ನೀಡುವಲ್ಲಿ ಯಶಸ್ವಿಯಾಗಿದ್ದರಿಂದ, ಈ ಪ್ರಕರಣದಲ್ಲಿ ತನ್ನನ್ನು ಗುರಿಯಾಗಿಸಲಾಗಿದೆ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಸೋನಿಪತ್ ಜಿಲ್ಲೆಯ ಕುಂಡ್ಲಿಯಲ್ಲಿ ರೈತರಿಗೆ ಬೆಂಬಲವಾಗಿ ಸ್ಥಳೀಯ ಕಾರ್ಮಿಕರನ್ನು ಸಜ್ಜುಗೊಳಿಸಿದ್ದೆವು. ಇದು ಆಡಳಿತಕ್ಕೆ ಕಿರಿಕಿರಿ ಉಂಟಾಗಿದ್ದು, ಪ್ರತಿಭಟನೆಯನ್ನು ಇಲ್ಲವಾಗಿಸಲು ನನ್ನನ್ನು  ಬಂಧಿಸಲಾಗಿದೆ ಎಂದು ಮನವಿಯಲ್ಲಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿಂಘು ಗಡಿ: ದಲಿತ ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್‌ ಬಂಧನ ಯಾಕಾಗಿದೆ?

LEAVE A REPLY

Please enter your comment!
Please enter your name here