ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ ಗ್ರಾಮದಲ್ಲಿ ಜನವರಿ 1ರಂದು ನಡೆದಿದೆ ಎಂದು ವರದಿಯಾಗಿದೆ.
ಹಲ್ಲೆಗೊಳಗಾದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಖಚಿತಪಡಿಸಿರುವುದಾಗಿ ಆಲ್ಟ್ ನ್ಯೂಸ್ ವರದಿ ಮಾಡಿದೆ.
ಘಟನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಎರಡ್ಮೂರು ವಿಡಿಯೋಗಳು ವೈರಲ್ ಆಗಿವೆ. ನಮಗೆ ದೊರೆತ ಮೊದಲ ವಿಡಿಯೋದಲ್ಲಿ ಹಲ್ಲೆಗೊಳಗಾದ ವ್ಯಕ್ತಿ ಕೊಳೆಯಾದ ಬಟ್ಟೆ ಧರಿಸಿ ರಸ್ತೆ ಬದಿಯ ಕಸದ ರಾಶಿಯ ಮುಂದೆ ಕುಳಿತಿದ್ದು, ಕಸದ ರಾಶಿಯಲ್ಲಿ ಸತ್ತ ಹಸುವಿನ ಕಳೇಬರದಂತಹ ವಸ್ತು ಇದೆ. ದುಷ್ಕರ್ಮಿಗಳ ಗುಂಪು ಆ ವ್ಯಕ್ತಿಯ ಬಳಿಗೆ ತೆರಳಿ ಪ್ರಶ್ನಿಸಲು ಪ್ರಾರಂಭಿಸುತ್ತಾರೆ. ಒಬ್ಬ ವ್ಯಕ್ತಿಯು “ಹಸು ನಮ್ಮ ತಾಯಿ” ಎಂದು ಹೇಳಲು ಒತ್ತಾಯಿಸುತ್ತಾನೆ. ಗುಂಪಿನಲ್ಲಿದ್ದ ಕೆಲವರು, “ಅವನು ಹೊರಗಿನವನು, ಇಲ್ಲಿಂದ ಬಂದವನಲ್ಲ” ಎಂದು ಹೇಳುತ್ತಾರೆ.
ನಮಗೆ ದೊರೆತ ಇನ್ನೊಂದು ವಿಡಿಯೋ ದುಷ್ಕರ್ಮಿಗಳು ಆ ವ್ಯಕ್ತಿಯನ್ನು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಎಳೆದೊಯ್ಯುವ, ಕ್ರೂರವಾಗಿ ಥಳಿಸುವ, ಕಾಲಿನಿಂದ ಒದಿಯುವ ಮತ್ತು ಆ ವ್ಯಕ್ತಿ ನೋವಿನಿಂದ ‘ಅಯ್ಯೋ ಅಪ್ಪ’ ಎಂದು ಚೀರಾಡುವ ದೃಶ್ಯವಿದೆ. ಈ ವೇಳೆ ಓರ್ವ ದುಷ್ಕರ್ಮಿ ‘ಆತ ಮುಸ್ಲಿಂ’ ಎಂದು ಹೇಳುವುದನ್ನು ಕೇಳಬಹುದು.
‘ಅಯ್ಯೋ ಅಪ್ಪ’ ಎಂದು ದಕ್ಷಿಣ ಭಾರತ ಭಾಷೆಗಳಲ್ಲಿ ಹೇಳುವ ಪದವಾಗಿದೆ. ಹಾಗಾಗಿ, ಹಲ್ಲೆಗೊಳಗಾದ ವ್ಯಕ್ತಿ ದಕ್ಷಿಣ ಭಾರತೀಯ ಆಗಿರಬಹುದು ಎಂದು ಅಲ್ಟ್ ನ್ಯೂಸ್ ಅಭಿಪ್ರಾಯಪಟ್ಟಿದೆ.
ಘಟನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನಾವು ಝಾಲಾವರ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಅವರನ್ನು ಸಂಪರ್ಕಿಸಿದ್ದೇವೆ. ಘಟನೆಯ ವಿಡಿಯೋ ದೊರೆತ ಬಳಿಕ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಹಸುವನ್ನು ಕೊಂದು, ಅದರ ಮಾಂಸ ಸೇವಿಸಿದ ಶಂಕೆಯ ಮೇಲೆ ಥಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ ಎಂದು ಅಲ್ಟ್ ನ್ಯೂಸ್ ವರದಿ ಮಾಡಿದೆ.
ಆಲ್ಟ್ ನ್ಯೂಸ್ ಜೊತೆ ಮಾತನಾಡಿದ ಅಕ್ಲೇರಾ ಪೊಲೀಸ್ ಇನ್ಸ್‌ಪೆಕ್ಟರ್ ಧರ್ಮರಾಮ್, ಬಲಿಪಶು ಮಾನಸಿಕ ಅಸ್ವಸ್ಥನಾಗಿದ್ದು, ಸತ್ತ ಹಸುವಿನ ಅವಶೇಷಗಳ ಬಳಿ ಕುಳಿತಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ. ಆತ ಒಬ್ಬ ಅಲೆಮಾರಿಯಾಗಿದ್ದು, ದಾಳಿಯ ನಂತರ ಸ್ಥಳದಿಂದ ಹೊರಟು ಹೋಗಿದ್ದಾರೆ. ಪೊಲೀಸರು ಇನ್ನೂ ಬಲಿಪಶುವನ್ನು ಪತ್ತೆಹಚ್ಚದಿದ್ದರೂ, ಹಲ್ಲೆ ನಡೆಸಿದವರನ್ನು ರಾಕೇಶ್, ರೋಹನ್ ಮತ್ತು ಅಜಯ್ ಎಂದು ಗುರುತಿಸಲಾಗಿದೆ. ಅವರನ್ನು ಬಂಧಿಸಲಾಗಿದೆ ಎಂದು ಧರ್ಮರಾಮ್ ಮಾಹಿತಿ ನೀಡಿದ್ದಾರೆ.
ದೈನಿಕ್ ಭಾಸ್ಕರ್ ವರದಿಯು ಆರೋಪಿಗಳನ್ನು ರಾಕೇಶ್ ರಾವ್, ಅಜಯ್ ಪರೇಟಾ ಮತ್ತು ರೋಹನ್ ಸೇನ್ ಎಂದು ಹೆಸರಿಸಿದೆ.
ಹಲ್ಲೆ ನಡೆಸಿದ ದುಷ್ಕರ್ಮಿಗಳ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳಲು ನಾವು ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದ್ದೇವೆ. ಅವರು ಹಿಂದುತ್ವ ಸಂಘಟನೆ ಬಜರಂಗದಳದ ಜೊತೆ ಸಂಬಂಧ ಹೊಂದಿದ್ದಾರೆ ಮತ್ತು ತಮ್ಮನ್ನು ತಾವು ಗೋರಕ್ಷಕರು ಎಂದು ಹೇಳಿಕೊಂಡಿದ್ದಾರೆ ಎಂದು ಆಲ್ಟ್ ನ್ಯೂಸ್ ತಿಳಿಸಿದೆ.
ಈ ಕುರಿತ ವಿವರವಾದ ವರದಿಯನ್ನು ಇಲ್ಲಿ ಓದಬಹುದು


