- Advertisement -
- Advertisement -
ಕೊವಿಡ್-19ರ ಸಂಕಷ್ಟದ ಸಮಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಸರ್ಕಾರದ ಭರವಸೆ ಹುಸಿಯಾಗಿದೆ. ಹಣದ ಕೊರತೆಯಿಂದಾಗಿ ಉದ್ಯೋಗ ಖಾತ್ರಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಹಾಗಾಗಿ ಗ್ರಾಮೀಣ ಪ್ರದೇಶದ ಕೂಲಿಕಾರ್ಮಿಕರು ಮತ್ತು ಬಡಜನತೆ ಉದ್ಯೋಗವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಕೂಲಿಯೂ ಇಲ್ಲ ಮಾಡಿರುವ ಕೆಲಸಕ್ಕೆ ರೊಕ್ಕವೂ ಇಲ್ಲದಂತಹ ಪರಿಸ್ಥಿತಿ ಉದ್ಭವಿಸಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವು ಕಡೆ 30 ಮಾನವ ದಿನಗಳ ಕೆಲಸ ಸೃಜನೆಯಾಗಿದೆ. ಇನ್ನೂ ಕೆಲ ಕಡೆ 15 ದಿನಗಳ ಕೆಲಸ ದೊರಕಿದೆ. ಕೆಲಸ ಬೇಕೆಂದು ಗ್ರಾಮ ಪಂಚಾಯಿತಿಗಳಿಗೆ ಹಲವರು ಅರ್ಜಿ ಸಲ್ಲಿಸಿದ್ದರೂ ಜಾಬ್ ಕಾರ್ಡ್ ಗಳನ್ನು ನೀಡಿಲ್ಲ. ಜಾಬ್ ಕಾರ್ಡ್ ಕೊಡುವಂತೆ ಕೇಳಿದರೂ ಗ್ರಾಮ ಪಂಚಾಯಿತಿಗಳಿಂದ ಯಾವುದೇ ಪ್ರತಿಕ್ರಿಯೆ ದೊರೆಯುತ್ತಿಲ್ಲ. ಇದು ಕೆಲಸ ಅರಸುತ್ತಿರುವವರಿಗೆ ಬೇಸರ ಮೂಡಿಸಿದೆ.
ಬೆಂಗಳೂರು ಸೇರಿದಂತೆ ಎಲ್ಲೆಡೆ ಕೊರೊನ ಸೋಂಕು ವ್ಯಾಪಕವಾಗಿ ಹರಡಿದ ಪರಿಣಾಮ ನಗರಗಳಲ್ಲಿದ್ದ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ಹಳ್ಳಿಗಳಿಗೆ ಮರಳಿದರು. ಹೀಗೆ ಬಂದವರಿಗೆ ಉದ್ಯೋಗ ಖಾತ್ರಿ ಯೋಜನೆ ಕೈಹಿಡಿಯಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಆರಂಭದಲ್ಲಿ ಕೆಲಸ ಸಿಕ್ಕಿದರೂ ಈಗ ಕೆಲಸವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು ಕೂಡ ಕೆಲಸ ಮಾಡುತ್ತಿದ್ದಾರೆ. ಕೆಲವು ಯುವಕರು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ನಿರುದ್ಯೋಗಿಗಳು ಮತ್ತು ವಲಸೆ ಕಾರ್ಮಿಕರಿಗೆ ಕೆಲಸ ನೀಡುವ ಉದ್ದೇಶದಿಂದ ಸಾವಿರಾರು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ 61 ಸಾವಿರ ಕೋಟಿ, ಎರಡನೇ ಕಂತಿನಲ್ಲಿ 40 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು. ಆದರೆ ರಾಜ್ಯಕ್ಕೆ ಎಷ್ಟು ಹಣ ಬಂದಿದೆ. ಈ ಹಣದಲ್ಲಿ ಎಷ್ಟು ಖರ್ಚಾಗಿದೆ ಎಂಬ ಮಾಹಿತಿಗಳನ್ನು ರಾಜ್ಯ ಸರ್ಕಾರ ಇದುವರೆಗೂ ಬಿಡುಗಡೆ ಮಾಡಿಲ್ಲ.
ಗ್ರಾಮ ಪಂಚಾಯಿತಿಗಳಲ್ಲಿ ನೋಂದಾಯಿಸಿಕೊಂಡ ಫಲನುಭವಿಗಳಿಗೆ ವರ್ಷದಲ್ಲಿ 100 ಮಾನವ ಕೆಲಸದ ದಿನಗಳನ್ನು ಒದಗಿಸುವುದಾಗಿ ಭರವಸೆ ನೀಡಿತ್ತು. ಆದರೆ ಬಹುತೇಕ ಕಡೆ ಕನಿಷ್ಠ 90 ದಿನಗಳ ಕೆಲಸವನ್ನೂ ನೀಡಿಲ್ಲದಿರುವುದು ಕಂಡುಬಂದಿದೆ. ಕೊರೊನ ಕಾಲದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ತಿಂಗಳು ಕೆಲಸ ದೊರಕಿದೆ. ಇದರಲ್ಲಿ ಕೇವಲ 15 ದಿನಗಳ ಕೂಲಿಯನ್ನು ಮಾತ್ರ ನೀಡಲಾಗಿದೆ.
ಲಕ್ಷಾಂತರ ಮಂದಿ ನಿರುದ್ಯೋಗಿಗಳು, ವಲಸೆ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ್ದು ಕೆಲವು ಕಡೆ 10 ದಿನ, ಮತ್ತೆ ಕೆಲವು ಕಡೆ ಒಂದು ವಾರದ ಹಣ ಹಾಗೂ ಇನ್ನೂ ಕೆಲವು ಕಡೆ ಒಂದು ತಿಂಗಳ ಹಣ ಬಂದಿಲ್ಲ. ಇದು ನಿರುದ್ಯೋಗಿಗಳನ್ನು ಮತ್ತಷ್ಟು ಸಂಕಷ್ಟ ದೂಡುವಂತೆ ಮಾಡಿದೆ. ತಾಲುಕು ಪಂಚಾಯಿತಿ ಕಾರ್ಯನಿರ್ವಾಹಕ ಅದಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ಸಬೂಬು ನೀಡುತ್ತಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಹಣಕಾಸಿನ ಕೊರತೆಯೇ ಇದಕ್ಕೆ ಕಾರಣ. ಪಾವಗಡ ತಾಲೂಕು ವೆಂಕಟಾಪುರ ಮತ್ತು ವಿರುಪಸಮುದ್ರ ಗ್ರಾಮ ಪಂಚಾಯಿತಿಯಲ್ಲಿ 30 ಮಾನವ ಕೆಲಸದ ಸೃಜನೆಯಾಗಿದೆ. ಆದರೆ ಇಲ್ಲಿ ಅರ್ಧದಷ್ಟು ಕೂಲಿಯನ್ನು ಕಾರ್ಮಿಕರಿಗೆ ನೀಡಿಲ್ಲ.

‘ಸರ್ಕಾರ ನೂರು ದಿನಗಳ ಕೆಲಸ ನೀಡುವುದಾಗಿ ಹೇಳುತ್ತಿದೆ. ಆದರೆ 90 ದಿನಗಳ ಕೆಲಸವನ್ನೂ ಕೊಡುತ್ತಿಲ್ಲ. ನಾವು 200 ದಿನಗಳಿಗೆ ಕೆಲಸದ ದಿನಗಳನ್ನು ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಸರ್ಕಾರ ನಿಗದಿಪಡಿಸಿರುವ ಕೆಲಸದ ದಿನಗಳಲ್ಲಿ ಕೆಲಸ ಕೊಡುತ್ತಿಲ್ಲ. ಪಾವಗಡ ತಾಲೂಕಿನಲ್ಲಿ ಉದ್ಯೋಗ ಖಾತ್ರಿಯ ಬಗ್ಗೆ ಜನರಲ್ಲಿ ತಿಳುವಳಿಕೆ ಇಲ್ಲ. ಇದನ್ನು ಗ್ರಾಮ ಪಂಚಾಯಿತಿ ಸದಸ್ಯರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ ನಾನುಗೌರಿ.ಕಾಂಗೆ ತಿಳಿಸಿದ್ದಾರೆ.
ಜನರಿಗೆ ಇರುವ ತಿಳುವಳಿಕೆಯ ಕೊರತೆಯನ್ನೇ ಬಂಡವಾಳ ಮಾಡಿಕೊಂಡಿರುವ ಗ್ರಾಮ ಪಂಚಾಯಿತಿ ಸದಸ್ಯರು ಜಾಬ್ ಕಾರ್ಡ್ ಗಳನ್ನು ತಮ್ಮ ಬಳಿ ಇಟ್ಟುಕೊಂಡು ಮೊದಲಿಗೆ ತಮ್ಮ ಖಾತೆಗಳಿಗೆ ಹಣ ಜಮಾ ಮಾಡಿಕೊಂಡು ಫಲಾನುಭವಿಗಳಿಗೆ ಕಡಿಮೆ ಹಣ ನೀಡುವ ಮೂಲಕ ವಂಚನೆ ಮಾಡುತ್ತಿದ್ದಾರೆ. ಹಾಗಾಗಿ ಬಡವರಿಗೆ ಹಣ ತಲುಪುತ್ತಿಲ್ಲ. ಜಾಬ್ ಕಾರ್ಡ್ ಇದ್ದು ಬ್ಯಾಂಕ್ ಖಾತೆ ಹೊಂದಿರುವವರಿಗೆ ನೇರವಾಗಿ ಹಣ ಖಾತೆಗೆ ವರ್ಗಾವಣೆಯಾಗುತ್ತದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಬಹುತೇಕ ಕಡೆ ಪಂಚಾಯಿತಿ ಸದಸ್ಯರೇ ಹಣ ಗುಳುಂ ಮಾಡಿರುವ ಪ್ರಕರಣಗಳು ಇವೆ’ ಎಂದು ಅವರು ಆರೋಪಿಸಿದ್ದಾರೆ.
ಸ್ವಗ್ರಾಮಗಳಿಗೆ ಮರಳಿರುವ ವಲಸೆ ಕಾರ್ಮಿಕರು ಅದರಲ್ಲೂ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಕೆಲ ಯುವಕರು ಗ್ರಾಮಗಳಲ್ಲಿ ಸ್ವಯಂ ಉದ್ಯೋಗದಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಇನ್ನೂ ಹಲವಾರು ಯುವಕರು ಮತ್ತು ಕಾರ್ಮಿಕರು ಯಾವುದೇ ಕೆಲಸ ಇಲ್ಲದೆ ಕಾಲ ದೂಡುವುದು ಕಷ್ಟವಾಗಿದೆ.


