ಮಹಾರಾಷ್ಟ್ರ ಸರ್ಕಾರ ರಚನೆ ಸಂಬಂಧ ಎನ್‌ಸಿಪಿ ಪಕ್ಷವು ಮೊದಲು ಬಿಜೆಪಿಯೊಂದಿಗಿನ ಎಲ್ಲಾ ಸಂಬಂಧ ಕಡಿದುಕೊಂಡು ನಂತರ ಮಾತುಕತೆಗೆ ಬನ್ನಿ ಎಂದು ಶಿವಸೇನೆಗೆ ಖಡಕ್ ಆಗಿ ಹೇಳಿದೆ. ಸದ್ಯ ಕೇಂದ್ರ ಸಚಿವ ಸಂಪುಟದಲ್ಲಿ ಶಿವಸೇನೆಯಿಂದ ಅರವಿಂದ್ ಸಾವಂತ್ ಸಚಿವರಾಗಿದ್ದಾರೆ. ಅವರು ತಕ್ಷಣ ರಾಜಿನಾಮೆ ನೀಡಿ ಹೊರಬರಬೇಕು ಮತ್ತು ಎನ್‌ಡಿಎ ಜೊತೆಗೆ ಶಿವಸೇನೆ ಸಂಬಂಧ ಕಡಿದುಕೊಳ್ಳಬೇಕು. ನಂತರ ನಾವು ಬೆಂಬಲ ನೀಡಬಹುದು ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲ್ಲಿಕ್‌ರವರು ತಿಳಿಸಿದ್ದಾರೆ.
ಅಲ್ಲದೇ ಕೆಲವು ಶಿವಸೇನೆಯ ಶಾಸಕರು ಈಗಲೂ ಬಿಜೆಪಿಯ ಸಂಪರ್ಕದಲ್ಲಿದ್ದಾರೆ. ಅದು ಸಂಪೂರ್ಣ ತಪ್ಪಬೇಕು. ಆನಂತರವಷ್ಟೇ ನಾವು ಬೆಂಬಲ ನೀಡಬಹುದು ಎಂದು ನವಾಬ್ ಮಲ್ಲಿಕೆ ತಿಳಿಸಿದ್ದಾರೆ. ಒಮ್ಮೆ ನಾವು ಬೆಂಬಲ ಕೊಟ್ಟಲ್ಲಿ ಅದು ಸ್ಥಿರ ಸರ್ಕಾರವಾಗಿರಬೇಕು. ಹಾಗಾಗಿ ಶಿವಸೇನೆ ಸಂಪೂರ್ಣವಾಗಿ ಬಿಜೆಪಿಯನ್ನು ತ್ಯಜಿಸಿ ಬಂದರೆ ಮಾತ್ರ ಬೆಂಬಲ ನೀಡಬಹುದು ಎಂದಿದ್ದಾರೆ.
ಏನಾದರೂ ಕೇಳಿ ಮುಖ್ಯಮಂತ್ರಿ ಹುದ್ದೆ ಬಿಟ್ಟು- ಬಿಜೆಪಿ
ಇನ್ನು ಬಿಜೆಪಿ ಪಕ್ಷವೂ ಈಗಲೂ ಶಿವಸೇನೆಗೆ ಬಿಜೆಪಿಯ ಬಾಗಿಲು ಮುಕ್ತವಾಗಿ ತೆಗೆದಿದೆ. ಬನ್ನಿ ಏನಾದರೂ ಬೇಕಾದರೆ ಕೇಳಿ ಆದರೆ ಮುಖ್ಯಮಂತ್ರಿ ಮಾತ್ರ ದೇವೇಂದ್ರ ಫಡ್ನಾವೀಸ್ ಆಗಿರುತ್ತಾರೆ ಎಂದು ಬಿಜೆಪಿ ಹೇಳಿದೆ.
ಮಾತುಕತೆಗೆ ದಿನದ 24 ಗಂಟೆಯೂ ಬಿಜೆಪಿಯ ಬಾಗಿಲು ತೆರೆದಿದೆ. ಏಕೆಂದರೆ ಜನ ನಮಗೆ ಬಹುಮತ ನೀಡಿದ್ದಾರೆ. ಹಾಗಾಗಿ ಸರ್ಕಾರ ರಚಿಸಬೇಕಾದರೆ ನಾವು ಮಾತುಕತೆ ಮಾಡಬೇಕಿದೆ ಎಂದು ಮುಖ್ಯಮಂತ್ರಿಗಳ ಸಭೆಯ ನಂತರ ಬಿಜೆಪಿಯ ಮುಖಂಡ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
ಶಿವಸೇನೆ ಪಟ್ಟು ಹಿಡಿಯಲು ಕಾರಣವೇನು?
ಮಹಾರಾಷ್ಟ್ರದಲ್ಲಿ ಶಿವಸೇನೆಯವರು ಮುಖ್ಯಮಂತ್ರಿಯಾಗಿ 20 ವರ್ಷವಾಗಿದೆ. 1999ರಲ್ಲಿ ನಾರಾಯಣ್ ರಾಣೆ ಮುಖ್ಯಮಂತ್ರಿಯಾಗಿದ್ದೆ ಕೊನೆ. ಇನ್ನು ಕಳೆದ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಇಲ್ಲದೇ 63 ಸ್ಥಾನಗಳನ್ನು ಗೆದ್ದಿದ್ದ ಶಿವಸೇನೆ ಈ ಬಾರಿ ಚುನಾವಣಾ ಪೂರ್ವ ಮೈತ್ರಿ ಇದ್ದರೂ ಸಹ 56ಕ್ಕೆ ಕುಸಿದಿದೆ. ಅಂದರೆ ಶಿವಸೇನೆ ಬಲಾಢ್ಯ ಇದ್ದ ಜಾಗಗಳಲೆಲ್ಲಾ ಬಿಜೆಪಿ ಗೆಲ್ಲುತ್ತಾ ಬಂದಿದೆ. ಹಾಗಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಶಿವಸೇನೆಗೆ ಮತ್ತೆ ಅಧಿಕಾರ ಬೇಕಿದೆ. ಹಾಗಾಗಿ ಅದು ಪಟ್ಟು ಬಿಡದೇ ಕುಳಿತಿದೆ ಮಾತ್ರವಲ್ಲ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೂ ಮೈತ್ರಿಗೆ ಮುಂದಾಗಿದೆ.
ಹಾಗೆ ನೋಡಿದರೆ 2014ರಿಂದಲೇ ಶಿವಸೇನೆಯ ಸ್ಥಾನವನ್ನು ಬಿಜೆಪಿ ಆಕ್ರಮಿಸುತ್ತಾ ಬಂದಿದೆ. ಹಾಗಾಗಿಯೇ ಶಿವಸೇನೆ ಬಿಜೆಪಿಯನ್ನು ಬಹಿರಂಗವಾಗಿಯೇ ಟೀಕಿಸುತ್ತಾ ಬಂದಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯಲ್ಲಿ ಭಿನ್ನಮತ ಭುಗಿಲೆದ್ದಿತು. ಹೇಗೋ ನಿವಾರಿಸಿಕೊಂಡರೂ ಸಹ ಅವರ ನಡುಗೆ ಅಂತಹ ಭಾಂದವ್ಯವೇನೂ ಉಳಿದಿಲ್ಲ. ಹಾಗಾಗೆ ಈ ಬಾರಿ ಬಿಜೆಪಿಗೆ ಶಿವಸೇನೆ ಬಿಟ್ಟರೆ ಬೇರೆ ಆಯ್ಕೆಗಳೇ ಇಲ್ಲದಂತಾಗಿದೆ. ಇದೇ ಸಂದರ್ಭ ಬಳಸಿಕೊಂಡು ಮುಖ್ಯಮಂತ್ರಿ ಹುದ್ದೆ ಪಡೆದೇ ತೀರಬೇಕೆಂದು ಶಿವಸೇನೆ ತೀರ್ಮಾನಿಸಿದೆ.
ಇನ್ನು ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಪಡೆದ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಅದಕ್ಕೆ ಶಿವಸೇನೆಯ ಬೆಂಬಲವಿಲ್ಲದೇ ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ. ಆದರೆ ಮುಖ್ಯಮಂತ್ರಿಯ ಹುದ್ದೆಯನ್ನು ಸಹ ಬಿಟ್ಟುಕೊಡಲು ಬಿಜೆಪಿ ಸಿದ್ದರಿಲ್ಲ. ಹೆಚ್ಚು ಕಮ್ಮಿ ಇಡೀ ದೇಶವೇ ಬಿಜೆಪಿಯ ಕೈಯಲ್ಲಿರುವಾಗ ಅತಿದೊಡ್ಡ ಆರ್ಥಿಕತೆ ಹೊಂದಿರುವ ಮಹಾರಾಷ್ಟ್ರವನ್ನು ಬಿಟ್ಟುಕೊಡಲು ಅದು ತಯಾರಿಲ್ಲ. ಇನ್ನು ಸರ್ವಾಧಿಕಾರಿ ಮನಸ್ಥಿತಿಯ ಬಿಜೆಪಿ ಮತ್ತೊಂದು ಸರ್ವಾಧಿಕಾರಿ ಮನಸ್ಥಿತಿಯ ಶಿವಸೇನೆಯ ಕೈಕೆಳಗೆ ಕೆಲಸ ಮಾಡುವುದು ಅವರ ಅಹಂಕಾರಕ್ಕೆ ಅಡ್ಡಿಯಾಗಿದೆ ಎನ್ನಲಾಗುತ್ತಿದೆ.
ಸರ್ಕಾರ ರಚನೆಗೆ ಇನ್ನೆರೆಡು ದಿನಗಳು ಮಾತ್ರ ಬಾಕಿ ಉಳಿದಿವೆ. ಹಗ್ಗ ಜಗ್ಗಾಟ ಮುಂದುವರೆದಿದೆ. ಯಾರು ಯಾರ ಜೊತೆಗೆ ಬೇಕಾದರೂ ಸೇರಿ ಸರ್ಕಾರ ರಚಿಸುವ ಅವಕಾಶವಿದೆ. ಇಲ್ಲವೇ ರಾಷ್ಟ್ರಪತಿ ಆಡಳಿತಕ್ಕೆ ಹೋಗುವ ದಾರಿಯಿದೆ. ಇನ್ನೆರೆಡು ದಿನದಲ್ಲಿ ಏನಾಗಲಿದೆ ಕಾದು ನೋಡಬೇಕಿದೆ.


