ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಚ್ಚರಿಕೆಯ ಹೊರತಾಗಿಯೂ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿಗಳ ಕಿರುಕುಳ ಹೆಚ್ಚಾಗಿದ್ದು, ಆತ್ಮಹತ್ಯೆ ಮಾಡಿಕೊಂಡವರ ಸರಣಿ ಮುಂದುವರಿದಿದೆ.
ಪಡೆದಿದ್ದ ಸಾಲಕ್ಕೆ ಮನೆಯನ್ನೇ ಜಪ್ತಿ ಮಾಡಿದ ಕಂಪನಿಯ ಸಿಬ್ಬಂದಿಯವರ ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಯ ಯತ್ನಿಸಿ ಇಂದು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಕೊನ್ನಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅಂದಾನಯ್ಯ ಎಂಬುವರ ಪತ್ನಿಯಾದ 52 ವರ್ಷದ ಪ್ರೇಮ ಮಂಗಳವಾರ ಬೆಳಿಗ್ಗೆ 11.30 ರ ಸುಮಾರಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸಾವು ಬದುಕಿನೊಡನೆ ಹೋರಾಟ ನಡೆಸುತ್ತಿದ್ದ ಅವರಿಗೆ ಹಲಗೂರು ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ಮರಣ ಹೊಂದಿದ್ದಾರೆ.
ಖಾಸಗಿ ಫೈನಾನ್ಸ್ ಕಂಪನಿಯೊಂದರಿಂದ ₹6 ಲಕ್ಷ ಸಾಲ ಪಡೆದಿದ್ದ ಪ್ರೇಮ, ಕಳೆದ 5-6 ವರ್ಷಗಳಿಂದ ಸಾಲದ ಕಂತಿನ ಹಣ ಕಟ್ಟುತ್ತ ಬಂದಿದ್ದರು. ಆದರೆ ಆ ಹಣ ಬಡ್ಡಿಗೆ ಜಮಾ ಆಗಿದೆ ಎಂದು ಹೇಳಿ ₹6 ಲಕ್ಷ ಹೊಸ ಸಾಲ ಎಂದು ನವೀಕರಿಸಿಕೊಂಡು ಉಳಿಕೆ ಬಡ್ಡಿ ಸೇರಿ ಒಟ್ಟು ₹8 ಲಕ್ಷ ಕಟ್ಟಬೇಕೆಂದು ಕಂಪನಿಯವರು ಪಟ್ಟು ಹಿಡಿದಿದ್ದರು. ಇದಕ್ಕಾಗಿ ಕಂಪನಿಯವರು ನೋಟೀಸ್ ನೀಡಿದ್ದರು ಎನ್ನಲಾಗಿದೆ.
ಹಣ ಕಟ್ಟಲು ವಿಳಂಬವಾದ ಕಾರಣಕ್ಕೆ ಒಂದು ವಾರದ ಹಿಂದೆ ಕಂಪನಿಯವರು ಈ ಕುಟುಂಬ ವಾಸವಿದ್ದ ಮನೆಯನ್ನು ಜಫ್ತಿ ಮಾಡಿದ್ದರು. ಕಳೆದ ಒಂದು ವಾರದಿಂದ ಪ್ರೇಮ ಹಾಗೂ ಕುಟುಂಬದವರು ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು. ಇದರಿಂದ ಮನನೊಂದ ಪ್ರೇಮ ಅವರು ಮಂಗಳವಾರ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ; ಕಾರ್ಪೊರೇಟ್ ಜಗತ್ತಿನ ಸಂಪತ್ತು, ಬಿಗ್ ಬಾಸ್ ಹನುಮಂತು, ಟ್ರ್ಯಾಪ್ ಆದ ಕೆಲವು ಪ್ರಗತಿಪರ ಚಿಂತಕರು…


