ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಹತ್ತು ‘ಸಿ’ ದರ್ಜೆ ಗಣಿಗಳಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತ ತನಿಖೆಯನ್ನು ಲೋಕಾಯುಕ್ತ ವಿಶೇಷ ತನಿಖಾ ದಳ (ಎಸ್‌ಐಟಿ)ಕ್ಕೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಗುರುವಾರ (ನ.14) ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಶೇಖಡ 15ಕ್ಕಿಂತ ಹೆಚ್ಚು ಪ್ರಮಾಣದ ನಿಯಮ ಉಲ್ಲಂಘಣೆ, ಗಡಿಯ ಹೊರಗೆ ಅಕ್ರಮ ಗಣಿಗಾರಿಕೆ ನಡೆದ ಗಣಿ
ಗುತ್ತಿಗೆಗಳನ್ನು’ಸಿ’ ದರ್ಜೆಯಲ್ಲಿ ಗುರುತಿಸಲಾಗಿತ್ತು. ಒಟ್ಟು 49 ಗಣಿಗಳನ್ನು ‘ಸಿ’ ದರ್ಜೆಗೆ ಸೇರಿಸಲಾಗಿತ್ತು. ಈ ಪೈಕಿ 10 ಕಂಪನಿಗಳಾದ ಮೈಸೂರು ಮ್ಯಾಂಗನೀಸ್ ಕಂಪನಿ, ದಶರಥ ರಾಮಿರೆಡ್ಡಿ, ಅಲ್ಲಂ ವೀರಭದ್ರಪ್ಪ, ಕರ್ನಾಟಕ ಲಿಂಪೊ, ಅಂಜನ ಮಿನರಲ್ಸ್, ರಾಝಿಯಾ ಖಾನುಂ, ಮಿಲನಾ ಮಿನರಲ್ಸ್, ಎಂ.ಶ್ರೀನಿವಾಸಲು, ಚನ್ನಕೇಶವ ರೆಡ್ಡಿ, ಜಿ. ರಾಜಶೇಖರ್ ಗಣಿ ಗುತ್ತಿಗೆ ಪ್ರದೇಶಗಳಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಎಸ್‌ಐಟಿಗೆ ವಹಿಸಲಾಗುವುದು ಎಂದು ಹೆಚ್.ಕೆ ಪಾಟೀಲ್ ಹೇಳಿದ್ದಾರೆ.
ಆರು ಪ್ರಕರಣಗಳ ವಸ್ತು ಸ್ಥಿತಿ ವರದಿಗೆ ಸೂಚನೆ
ರಾಜ್ಯ ಹಾಗೂ ಹೊರ ರಾಜ್ಯಗಳ ಬಂದರುಗಳ ಮೂಲಕ ರಾಜ್ಯದ ಅದಿರಿನ ರಫ್ತು, ರೈಲಿನ ಮೂಲಕ ಅದಿರು ಕಳ್ಳ ಸಾಗಣೆ ಸೇರಿದಂತೆ ಸಿಬಿಐ ತನಿಖೆ ನಡೆಸದೇ ವಾಪಾಸು ನೀಡಿದ್ದ ಆರು ಪ್ರಕರಣಗಳ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಚಿವ ಸಂಪುಟ ಸಭೆಯಲ್ಲಿ ಸೂಚಿಸಲಾಗಿದೆ.
ಗೋವಾದ ಮರ್ಮಗೋವಾ ಮತ್ತು ಪಣಜಿ, ತಮಿಳುನಾಡಿನ ಎನ್ನೋರು ಮತ್ತು ಚೆನ್ನೈ, ಕರ್ನಾಟಕದ ನವ ಮಂಗಳೂರು ಮತ್ತು ಕಾರವಾರ, ಆಂಧ್ರ ಪ್ರದೇಶದ ಕೃಷ್ಣ ಪಟ್ಟಣಂ, ಕಾಕಿನಾಡ ಮತ್ತು ವಿಶಾಖಪಟ್ಟಣಂ ಬಂದರುಗಳ ಮೂಲಕ ಅಕ್ರಮವಾಗಿ ಅದಿರು ರಫ್ತು ಪ್ರಕರಣಗಳ ತನಿಖೆ ನಡೆಸಿದ್ದ ಸಿಬಿಐ, ಪ್ರಕರಣಗಳನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ನೀಡಿತ್ತು. ಈ ಎಲ್ಲಾ ಪ್ರಕರಣಗಳನ್ನು ಪರಿಶೀಲನೆ ನಡೆಸಿ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ.
ಇದನ್ನೂ ಓದಿ : ಬಿಜೆಪಿ ಅವಧಿಯ ಕೋವಿಡ್ ಹಗರಣ : ತನಿಖೆಗೆ ಎಸ್‌ಐಟಿ ರಚಿಸಲು ಸಂಪುಟ ನಿರ್ಧಾರ


