ಮಕ್ಕಳು ತಮ್ಮ ಹೆಸರಿಗೆ ಆಸ್ತಿ ಬರೆಯಿಸಿಕೊಂಡು ಚಿಕಿತ್ಸೆ ನೆಪದಲ್ಲಿ ವೃದ್ಧ ಪೋಷಕರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಇತ್ತೀಚಿಗೆ ಹೆಚ್ಚಾಗುತ್ತಿವೆ.
ಅಂತಹ ಮಕ್ಕಳ ಪರವಾಗಿ ಮಾಡಿರುವ ವಿಲ್ ಅಥವಾ ಆಸ್ತಿ ವರ್ಗಾವಣೆಗಳನ್ನು ರದ್ದುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ ವಿವಿಧ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದ್ದಾರೆ.
ಇಂತಹ ಪ್ರಕರಣಗಳು ಕಂಡು ಬಂದ ತಕ್ಷಣ ಸಂಬಂಧಪಟ್ಟ ಕಂದಾಯ ಉಪ ವಿಭಾಗಾಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ನಿರ್ದೇಶಕರು ದೂರು ನೀಡಬೇಕು. ಪೋಷಕರು ಕೂಡ ತಮ್ಮ ಮಕ್ಕಳ ಪರವಾಗಿ ಮಾಡಿರುವ ವಿಲ್ ಅಥವಾ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದ್ದಾರೆ.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಒಂದರಲ್ಲೇ 150ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಮಕ್ಕಳು ತೊರೆದ ಪ್ರಕರಣಗಳು ವರದಿಯಾಗಿವೆ. ರಾಜ್ಯದಾದ್ಯಂತ ಇತರ ವೈದ್ಯಕೀಯ ಸಂಸ್ಥೆಗಳಲ್ಲಿ ಇಂತಹ 100ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ಈ ವಿಷಯ ಅರಿತ ವೈದ್ಯಕೀಯ ಶಿಕ್ಷಣ ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದ್ದರಲ್ಲದೆ, ಕೂಡಲೇ ವಿಲ್‌ಗಳು ಮತ್ತು ಆಸ್ತಿ ವರ್ಗಾವಣೆಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ. ಕಳೆದ ಒಂದು ವಾರದಿಂದ ವಿಕಾಸ ಸೌಧದಲ್ಲಿ ರಾಜ್ಯದ ವಿವಿಧ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಇತರ ಸದಸ್ಯರ ಸಭೆ ನಡೆಸಿ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
“ನಮ್ಮ ಮಕ್ಕಳು ನಮ್ಮನ್ನು ನೋಡಿಕೊಳ್ಳಲು ಆಗದೇ ತೊರೆದಿದ್ದಾರೆ. ಕೆಲವರು ಆರ್ಥಿಕ ಸಂಕಷ್ಟಗಳಿಂದ ನಮ್ಮನ್ನು ಇಲ್ಲಿ ಬಿಟ್ಟಿದ್ದಾರೆ. ನಮ್ಮ ಆಸ್ತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ ನಂತರ ಮಕ್ಕಳು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಗೆ ಸೇರಿಸಿ ಹೊರಟು ಹೋಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಊಟ, ವಸತಿ, ಆಶ್ರಯ ಉಚಿತವಾಗಿ ಸಿಗುತ್ತದೆ ಎಂಬ ಉದ್ದೇಶದಿಂದ ನಮ್ಮನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ” ಎಂದು ಪರಿತ್ಯಕ್ತ ಪೋಷಕರು ಹೇಳಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂತಹ ಪರಿತ್ಯಕ್ತ ಹಿರಿಯ ನಾಗರಿಕರಿಗೆ ಬಿಮ್ಸ್ ಅಧಿಕಾರಿಗಳು ಬೆಳಗಾವಿ ಮತ್ತು ಸುತ್ತಮುತ್ತಲಿನ 70 ಹಿರಿಯ ನಾಗರಿಕ ಗೃಹಗಳಲ್ಲಿ ಅಥವಾ ವೃದ್ದಾಶ್ರಮಗಳಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಇನ್ನೂ ಆನೇಕರು ಆಸ್ಪತ್ರೆಗಳಲ್ಲಿಯೇ ಇದ್ದಾರೆ ಎಂದು ವರದಿಗಳು ಹೇಳಿವೆ.
ಹಿರಿಯ ನಾಗರಿಕ ಕಾಯ್ದೆಯಡಿ ಕ್ರಮ
“ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ-2207ರ ಅಡಿಯಲ್ಲಿ ಉಪ ವಿಭಾಗಾಧಿಕಾರಿಗಳು ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರು ದೂರು ಸಲ್ಲಿಸಬೇಕು” ಎಂದು ಎಲ್ಲಾ ಅಧಿಕಾರಿಗಳಿಗೆ ಸಚಿವ ಶರಣಪ್ರಕಾಶ್ ಪಾಟೀಲ ಸೂಚನೆ ನೀಡಿದ್ದಾರೆ.
“ಈ ಕಾನೂನಿನ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರಿಗೆ ಆರ್ಥಿಕ ಮತ್ತು ವೈದ್ಯಕೀಯ ಬೆಂಬಲವನ್ನು ಒದಗಿಸಬೇಕು ಎಂಬ ನಿಯಮವಿದೆ. ಅವರು ಹಾಗೆ ಮಾಡಲು ವಿಫಲವಾದರೆ, ಪೋಷಕರು ತಮ್ಮ ಮಕ್ಕಳ ಪರವಾಗಿ ಮಾಡಿದ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಲು ಕಾನೂನುಬದ್ಧ ಹಕ್ಕು ಹೊಂದಿರುತ್ತಾರೆ” ಎಂದು ಹೇಳಿದ್ದಾರೆ.
“ಕಾಯ್ದೆಯ ಸೆಕ್ಷನ್ 23ರ ಪ್ರಕಾರ, ಮಕ್ಕಳು ಆಸ್ತಿಯನ್ನು ಅನುವಂಶಿಕವಾಗಿ ಪಡೆದ ನಂತರ ಹೆತ್ತವರನ್ನು ನಿರ್ಲಕ್ಷಿಸಿದರೆ ಅಥವಾ ತ್ಯಜಿಸಿದರೆ, ವಿಲ್ ಅಥವಾ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಲು ಮತ್ತು ವಯಸ್ಸಾದ ಪೋಷಕರಿಗೆ ಮಾಲೀಕತ್ವವನ್ನು ಪುನಃ ಪಡೆಯಲು ಕಾಯ್ದೆಯಲ್ಲಿ ಅನುಮತಿ ಇದೆ” ಎಂದು ಸಚಿವರು ವಿವರಿಸಿದ್ದಾರೆ.
ಅತ್ತೆ ಮಾವನ ಮೇಲೆ ಹಲ್ಲೆ, ವೈದ್ಯೆಗೆ ನೋಟಿಸ್
ಅತ್ತೆ ಹಾಗೂ ಮಾವನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ.ಪ್ರಿಯದರ್ಶಿನಿ ಎನ್. ಅವರಿಗೆ ಬಿಎಂಸಿಆರ್‌ಐ ಡೀನ್ ಡಾ.ರಮೇಶ್ ಕೃಷ್ಣ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ವರದಿಯಾಗಿದೆ.
ಡಾ. ಪ್ರಿಯದರ್ಶಿನಿ ಅವರು ಅತ್ತೆ ಹಾಗೂ ಮಾವನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾರ್ಚ್ 10ರಂದು ಹಲ್ಲೆ ಸಂಬಂಧ ಡಾ. ಪ್ರಿಯದರ್ಶಿನಿ ಅವರ ವಿರುದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತಮ್ಮ ವಿರುದ್ದದ ಆರೋಪದ ಕುರಿತು ಲಿಖಿತ ಸಮಜಾಯಿಸಿ ನೀಡಬೇಕು. ತಪ್ಪಿದ್ದಲ್ಲಿ ಮುಂದಿನ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಶೋಕಾಸ್ ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದು ವರದಿ ಹೇಳಿದೆ.
ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ಸೌಜನ್ಯ ಪರ ಹೋರಾಟಗಾರರ ವಕೀಲರಿಂದ ಲೀಗಲ್ ನೋಟಿಸ್


