ಉತ್ತರಾಖಂಡ ವಿಧಾನಸಭೆಯಲ್ಲಿ ಫೆಬ್ರವರಿ ವೇಳೆ ನಡೆದ ಬಜೆಟ್ ಅಧಿವೇಶನದಲ್ಲಿ “ಸಾಲಾ ಪಹಾಡಿ” ಎಂಬ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ಬಂದ ನಂತರ ಉತ್ತರಾಖಂಡದ ಹಣಕಾಸು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರೇಮ್‌ಚಂದ್ ಅಗರ್ವಾಲ್ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ ಸವಾಲಾಗಿ ಪರಿಣಮಿಸಿದ್ದು, 2022 ರ ವಿಧಾನಸಭಾ ಚುನಾವಣೆಯ ನಂತರ ಭರ್ತಿಯಾಗದೆ ಉಳಿದಿರುವ ನಾಲ್ಕು ಸ್ಥಾನಗಳು ಸೇರಿದಂತೆ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿಯಾಗಿವೆ. ಸಚಿವ ರಾಜೀನಾಮೆ
ಅಗರ್ವಾಲ್ ಅವರ ಹೇಳಿಕೆಯು ರಾಜ್ಯಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿದ್ದು, ವ್ಯಾಪಕ ಪ್ರತಿಭಟನೆಗಳಿಗೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆಗೆ ಕಾರಣವಾಯಿತು. ವಿಧಾನಸಭಾ ಅಧಿವೇಶನದಲ್ಲಿ ಕೇಳಿದ್ದ ಕ್ಷಮೆಯಾಚನೆ ಸೇರಿದಂತೆ ಹಲವಾರು ಕ್ಷಮೆಯಾಚನೆಗಳನ್ನು ನೀಡಿದ್ದರೂ, ಸಾರ್ವಜನಿಕರ ಆಕ್ರೋಶ ಕಡಿಮೆಯಾಗಿಲ್ಲ. ಸಚಿವ ರಾಜೀನಾಮೆ
“ನನ್ನ ಹೇಳಿಕೆಗೆ ನಾನು ತೀವ್ರವಾಗಿ ವಿಷಾದಿಸುತ್ತೇನೆ” ಎಂದು ಅಗರ್ವಾಲ್ ಹೇಳಿದ್ದಾರೆ. ಉತ್ತರಾಖಂಡದ ಚಳವಳಿಯೊಂದಿಗಿನ ತನ್ನ ದೀರ್ಘಕಾಲದ ಸಂಬಂಧವನ್ನು ಒತ್ತಿ ಹೇಳಿದ ಅವರು, ತಾನು ಎಂದಿಗೂ ಯಾರನ್ನೂ ನಿಂದಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ವಿಧಾನಸಭೆ ಅಧಿವೇಶನ ಮುಗಿದ ನಂತರವೂ ಪ್ರತಿಭಟನೆಗಳು ಮುಂದುವರೆದಿದ್ದು, ಅಂತಿಮವಾಗಿ ಅವರ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಡ ಹೇರಲಾಗಿದೆ.
ಅಗರ್ವಾಲ್ ಅವರ ರಾಜೀನಾಮೆಯೊಂದಿಗೆ, ಧಾಮಿ ಸಚಿವ ಸಂಪುಟದಲ್ಲಿ ಈಗ ಕೇವಲ ಆರು ಸಚಿವರು ಉಳಿಸಿದ್ದಾರೆ. ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್, ಕೃಷಿ ಸಚಿವ ಗಣೇಶ್ ಜೋಶಿ, ಶಿಕ್ಷಣ ಸಚಿವ ಧನ್ ಸಿಂಗ್ ರಾವತ್, ಅರಣ್ಯ ಸಚಿವ ಸುಬೋಧ್ ಉನಿಯಲ್, ಕ್ರೀಡಾ ಸಚಿವೆ ರೇಖಾ ಆರ್ಯ ಮತ್ತು ಪಶುಸಂಗೋಪನಾ ಸಚಿವೆ ಸೌರಭ್ ಬಹುಗುಣ.
ಕಳೆದ ವರ್ಷ ಮಾಜಿ ಕ್ಯಾಬಿನೆಟ್ ಸಚಿವ ಚಂದನ್ ರಾಮದಾಸ್ ಅವರ ನಿಧನದ ನಂತರ ಸಂಪುಟದಲ್ಲಿ ಸದಸ್ಯರ ಕೊರತೆಯಾಗಿತ್ತು. ಅವರ ಸ್ಥಾನ ಸೇರಿದಂತೆ ಪ್ರಸ್ತುತ ಭರ್ತಿಯಾಗದ ಸಚಿವ ಸ್ಥಾನಗಳ ಒಟ್ಟು ಸಂಖ್ಯೆ ಐದಕ್ಕೆ ಏರಿದೆ.
ಭಾರತದ ಸಂವಿಧಾನದ 164(1A) ನೇ ವಿಧಿಯ ಪ್ರಕಾರ, ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಮಂತ್ರಿಮಂಡಲವು 70 ಸದಸ್ಯರ ಉತ್ತರಾಖಂಡ ವಿಧಾನಸಭೆಯಲ್ಲಿ ಒಟ್ಟು ಸದಸ್ಯರಲ್ಲಿ 15 ಪ್ರತಿಶತವನ್ನು ಮೀರಬಾರದು. ಹೆಚ್ಚುವರಿಯಾಗಿ, ಮುಖ್ಯಮಂತ್ರಿ ಸೇರಿದಂತೆ ಕನಿಷ್ಠ ಸಚಿವರ ಸಂಖ್ಯೆ 12 ಆಗಿರಬೇಕು. ಪ್ರಸ್ತುತ, ಧಾಮಿ ಸಚಿವ ಸಂಪುಟವು ಖಾಲಿ ಹುದ್ದೆಗಳ ಕಾರಣದಿಂದಾಗಿ ಈ ಅವಶ್ಯಕತೆಯನ್ನು ಪೂರೈಸುತ್ತಿಲ್ಲ.
ಬಿಜೆಪಿ ಹೈಕಮಾಂಡ್ ಈಗ ಸಂಪುಟಕ್ಕೆ ಹೊಸ ಮುಖಗಳ ಹುಡುಕಾಟದಲ್ಲಿದ್ದು, ಪಕ್ಷದ ನಾಯಕರಲ್ಲಿ ತೀವ್ರ ಲಾಬಿ ನಡೆಯುತ್ತಿದೆ. ಪ್ರಸ್ತುತ ಸಚಿವರ ಕಾರ್ಯಕ್ಷಮತೆಯ ವಿಮರ್ಶೆಗಳು ಸಹ ನಡೆಯುತ್ತಿವೆ ಮತ್ತು ಕೆಲವು ಸಚಿವರು ನಿರೀಕ್ಷೆಗಳನ್ನು ಪೂರೈಸಲು ವಿಫಲವಾದರೆ, ಅವರನ್ನು ಪಕ್ಷವು ತೆಗೆದುಹಾಕಲಿದೆ ಎಂದು ಮೂಲಗಳು ಸೂಚಿಸಿವೆ.
“ರಿಪೋರ್ಟ್ ಕಾರ್ಡ್‌ಗಳು ನಿರೀಕ್ಷೆಗಳನ್ನು ಪೂರೈಸದಿದ್ದರೆ, ಕನಿಷ್ಠ ಒಬ್ಬರು ಮತ್ತು ಬಹುಶಃ ಇಬ್ಬರು, ಅಸ್ತಿತ್ವದಲ್ಲಿರುವ ಸಚಿವರ ತಲೆದಂಡವಾಗಲಿದೆ” ಎಂದು ಬಿಜೆಪಿ ಮೂಲಗಳು ಹೇಳಿವೆ.
2027 ರ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದ್ದು, ಮುಂಬರುವ ಸಚಿವ ಸಂಪುಟ ಪುನರ್ರಚನೆಯಲ್ಲಿ ಪಕ್ಷವು ಪ್ರಾದೇಶಿಕ ಮತ್ತು ರಾಜಕೀಯ ಸಮತೋಲನವನ್ನು ಕಾಯ್ದುಕೊಳ್ಳುವತ್ತ ಗಮನಹರಿಸುತ್ತಿದೆ. ಸತ್ಪಾಲ್ ಮಹಾರಾಜ್, ಧನ್ ಸಿಂಗ್ ರಾವತ್ ಮತ್ತು ಸುಬೋಧ್ ಉನಿಯಾಲ್ ಅವರಂತಹ ಸಚಿವರು ಪೌರಿ ಲೋಕಸಭಾ ಕ್ಷೇತ್ರಕ್ಕೆ ಸೇರಿದವರಾಗಿದ್ದರೂ, ಹರಿದ್ವಾರ, ಉತ್ತರಕಾಶಿ, ಪಿಥೋರಗಢ ಮತ್ತು ಚಮೋಲಿಯಂತಹ ಗಮನಾರ್ಹ ಪ್ರದೇಶಗಳು ಪ್ರಸ್ತುತ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವಿಲ್ಲದೆ ಉಳಿದಿವೆ ಎಂದು ಚರ್ಚೆಗಳು ನಡೆಯುತ್ತಿವೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮತದಾರರ ಗುರುತಿನ ಚೀಟಿ ವಿಚಾರದ ಬಗ್ಗೆ ಚರ್ಚೆಗೆ ಮೋದಿ ಸರ್ಕಾರ ಸಿದ್ದವೆ?: ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಪ್ರಶ್ನೆ
ಮತದಾರರ ಗುರುತಿನ ಚೀಟಿ ವಿಚಾರದ ಬಗ್ಗೆ ಚರ್ಚೆಗೆ ಮೋದಿ ಸರ್ಕಾರ ಸಿದ್ದವೆ?: ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಪ್ರಶ್ನೆ

