“ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದರೆ, ಆಕೆ ಭಯಭೀತಳಾಗಬೇಕಿತ್ತು. ಸಹಜವಾಗಿ ವರ್ತಿಸುತ್ತಿರಲಿಲ್ಲ ಮತ್ತು ಆಟವಾಡುತ್ತಿರಲಿಲ್ಲ” ಎಂದಿರುವ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ, ಅಪ್ರಾಪ್ತ ಬಾಲಕಿಯ ಅತ್ಯಾಚಾರ ಆರೋಪಿಯನ್ನು ಇತ್ತೀಚೆಗೆ ದೋಷಮುಕ್ತಗೊಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
ನ್ಯಾಯಮೂರ್ತಿ ಗೋವಿಂದ್ ಸನಪ್ ಅವರ ಏಕ ಸದಸ್ಯ ಪೀಠ ಬಾಲಕಿಯ ತಾಯಿಯ ಆರೋಪವನ್ನು ಗಮನಿಸಿದೆ. ಆಕೆ (ತಾಯಿ) ಹೇಳಿದಂತೆ ಸಮಾಜ ಮಂದಿರದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಆಕೆ (ತಾಯಿ) ಘಟನಾ ಸ್ಥಳಕ್ಕೆ ಹೋದಾಗ ಬಾಲಕಿ ಆಟವಾಡುತ್ತಿದ್ದಳು.
“ತಾನು ಘಟನಾ ಸ್ಥಳಕ್ಕೆ ಹೋದಾಗ ಸಂತ್ರಸ್ಥೆ ಆಟವಾಡುತ್ತಿದ್ದಳು ಎಂದು ಬಾಲಕಿಯ ತಾಯಿ ಹೇಳಿದ್ದಾರೆ. ಒಂದು ವೇಳೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ, ಅದು ಗಂಭೀರ ವಿಷಯವಾಗಿದೆ. ಅಂತಹ ಕೃತ್ಯ ನಿಸ್ಸಂಶಯವಾಗಿ ಆಕೆಯನ್ನು ಭಯಭೀತಗೊಳಿಸಬೇಕಿತ್ತು. ಅಲ್ಲದೆ, ಭಾರೀ ನೋವು, ಸಂಕಟ ಮತ್ತು ಆಘಾತ ಉಂಟುಮಾಡಬೇಕಿತ್ತು” ಎಂದು ಆಗಸ್ಟ್ 14 ರಂದು ನೀಡಿದ ಆದೇಶದಲ್ಲಿ ನ್ಯಾಯಾಧೀಶರು ಹೇಳಿದ್ದಾರೆ. ಈ ಆದೇಶ ಪ್ರತಿ ಕಳೆದ ಗುರುವಾರ ಲಭ್ಯವಾಗಿದೆ ಎಂದು ಲೈವ್ ಲಾ ವರದಿ ಹೇಳಿದೆ.
ಸಾಮಾನ್ಯವಾಗಿ, ಇಂತಹ ಕೃತ್ಯದ (ಲೈಂಗಿಕ ದೌರ್ಜನ್ಯ) ನಂತರ ಸಂತ್ರಸ್ತೆ ಘಟನಾ ಸ್ಥಳದಿಂದ ಮನೆಗೆ ಓಡಿ ಹೋಗಿ ತನ್ನ ತಾಯಿಗೆ ಘಟನೆಯನ್ನು ವಿವರಿಸುತ್ತಾಳೆ ಎಂದೂ ನ್ಯಾಯಾಧೀಶರು ಹೇಳಿದ್ದಾರೆ.
2019ರ ಮಾರ್ಚ್‍ನಲ್ಲಿ ನಡೆದ ಪ್ರಕರಣದಲ್ಲಿ ಎಂಟು ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಅಮರಾವತಿ ಜಿಲ್ಲೆಯ ಅಚಲಪುರ ನಿವಾಸಿ ವಿಜಯ್ ಜವಾಂಜಲ್ ಮೇಲಿತ್ತು. ಪೋಕ್ಸೊ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376ಎಬಿ ಅಡಿಯಲ್ಲಿ ವಿಚಾರಣಾ ನ್ಯಾಯಾಲಯ, ಆರೋಪಿಗೆ 20 ವರ್ಷಗಳ ಕಠಿಣ ಜೈಲುಶಿಕ್ಷೆ ವಿಧಿಸಿತ್ತು.
ಪ್ರಾಸಿಕ್ಯೂಷನ್ ಪ್ರಕಾರ, 3ನೇ ತರಗತಿ ವಿದ್ಯಾರ್ಥಿನಿ ಮನೆ ಪಕ್ಕದ ಸಮುದಾಯದ ಮಂದಿರದ ಬಳಿಗೆ ಆಟವಾಡಲು ಹೋಗಿದ್ದಳು. ದೂರು ನೀಡಿದ ತಾಯಿಗೆ ಮಗಳು ಪತ್ತೆಯಾಗಿರಲಿಲ್ಲ. ಸ್ವಲ್ಪಹೊತ್ತಿನ ಬಳಿಕ, ಬಾಲಕಿ ಅದೇ ಆವರಣದಲ್ಲಿ ಆಟವಾಡುವುದು ಕಂಡುಬಂದಿತ್ತು. ತಾಯಿ ಆಕೆಯನ್ನು ಶಾಲೆಗೆ ಬಿಟ್ಟು ಬಂದಿದ್ದರು. ಶಾಲೆಯಿಂದ ಮರಳಿದ ಬಳಿಕ ಬಾಲಕಿ ಮಂಕು ಕವಿದಂತಿದ್ದಳು ಹಾಗೂ ಸಹಜವಾಗಿರಲಿಲ್ಲ. ಆರೋಪಿ ಸಿಹಿತಿಂಡಿ ನೀಡುವ ನೆಪದಲ್ಲಿ ಕರೆದೊಯ್ದು ಗುಪ್ತಾಂಗವನ್ನು ಸ್ಪರ್ಶಿಸಿದ ಹಾಗೂ ಆಗ ಅತೀವ ನೋವು ಆಗಿತ್ತು ಎಂದು ಬಾಲಕಿ ತಾಯಿಗೆ ಹೇಳಿದ್ದಳು. ತಾಯಿ ಅಸೇಗಾಂವ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು.
“ಆರೋಪಿ ನನ್ನ ಮಗಳು ಆಟವಾಡುತ್ತಿದ್ದಾಗ ಪಕ್ಕದಲ್ಲೇ ಕುಳಿತಿದ್ದ” ಎಂದು ತಾಯಿ ಸಾಕ್ಷ್ಯ ನುಡಿದಿದ್ದರು. ಆದರೆ ಈ ಬಗ್ಗೆ ಎಚ್ಚರಿಕೆಯಿಂದ ಪರಿಶೀಲನೆ ನಡೆಸಿ ಮಗುವಿಗೆ ಯಾವುದೇ ಬಗೆಯ ಕಿರುಕುಳ ನೀಡಿಲ್ಲ ಎನ್ನುವ ನಿರ್ಧಾರಕ್ಕೆ ಕೋರ್ಟ್ ಬಂದಿದೆ. ಏಕೆಂದರೆ, ಆರೋಪಿಯ ಹೆಸರನ್ನು ಹೇಳುವಂತೆ ತಾಯಿ ತನಗೆ ಕಿರುಕುಳ ನೀಡಿದ್ದಾಗಿ ಬಾಲಕಿ ಸಾಕ್ಷ್ಯ ನುಡಿದಿರುವುದೇ ತಾಯಿಯ ಸಾಕ್ಷ್ಯವನ್ನು ನಾಶಪಡಿಸಿದಂತಾಗಿದೆ” ಎಂದು ನ್ಯಾಯಮೂರ್ತಿ ಸನಪ್ ಹೇಳಿದ್ದಾರೆ.
ತಮ್ಮ ಜಮೀನಿನಲ್ಲಿ ಹುಲ್ಲು ಕಟಾವು ಮಾಡಿದ್ದಕ್ಕಾಗಿ ಬಾಲಕಿಯ ತಂದೆಗೆ ಕಪಾಳಮೋಕ್ಷ ಮಾಡಿದ್ದೆ. ಆ ಕಾರಣಕ್ಕೆ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂಬ ಮೇಲ್ಮನವಿದಾರ ಅಥವಾ ಆರೋಪಿಯ ಪ್ರತಿವಾದವನ್ನು ಪೀಠವು ಪರಿಗಣಿಸಿದೆ. ವಿಚಾರಣಾ ನ್ಯಾಯಾಲಯವು ಪ್ರಮುಖ ಸಂಗತಿಗಳನ್ನು ಪರಿಗಣಿಸಲು ವಿಫಲವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಕೃಪೆ : ಲೈವ್ ಲಾ
ಇದನ್ನೂ ಓದಿ : ನಗರಗಳಲ್ಲಿ ಒಳಚರಂಡಿ, ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಶೇ.92ರಷ್ಟು ಕಾರ್ಮಿಕರು ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗದವರು : ವರದಿ


