ಚಲಿಸುತ್ತಿದ್ದ 108 ಆಂಬ್ಯುಲೆನ್ಸ್‌ನಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದಿದೆ.
ನವೆಂಬರ್ 22ರಂದು ಅಪರಾಧ ನಡೆದಿದ್ದು, ಆಂಬ್ಯುಲೆನ್ಸ್ ಚಾಲಕ ಸೇರಿದಂತೆ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ತಾಯಂದಿರು, ಅನಾರೋಗ್ಯದ ಶಿಶುಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ತುರ್ತು ಆರೋಗ್ಯ ಸೇವೆಯನ್ನು ಒದಗಿಸುವ, ಮಧ್ಯ ಪ್ರದೇಶ ರಾಜ್ಯ ಸರ್ಕಾರದ ಅಧೀನಲ್ಲಿರುವ ಆಂಬ್ಯುಲೆನ್ಸ್‌ನಲ್ಲಿ ಅತ್ಯಾಚಾರ ನಡೆದಿದೆ. ಈ ಆಂಬ್ಯುಲೆನ್ಸ್ ಅನ್ನು ಸರ್ಕಾರಿ-ಖಾಸಗಿ ಪಾಲುದಾರಿಕೆ (ಪಿಪಿಪಿ) ವ್ಯವಸ್ಥೆಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ.
ನವೆಂಬರ್ 22ರಂದು ಸಂತ್ರಸ್ತ ಬಾಲಕಿ, ಸಹೋದರಿ ಮತ್ತು ಆಕೆಯ ಪತಿಯೊಂದಿಗೆ (ಭಾವ) ಆಂಬ್ಯುಲೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಈ ಮೂವರ ಜೊತೆ ಚಾಲಕ ಮತ್ತು ಆತನ ಸಹಾಯಕ ಆಂಬ್ಯುಲೆನ್ಸ್‌ನಲ್ಲಿ ಇದ್ದರು. ಅವರಲ್ಲಿ ಯಾರೂ ರೋಗಿಗಳಾಗಿರಲಿಲ್ಲ.
ಆಂಬ್ಯುಲೆನ್ಸ್ ಸಾಗುತ್ತಿದ್ದಾಗ ದಾರಿ ಮಧ್ಯೆ ಬಾಲಕಿಯ ಸಹೋದರಿ ಮತ್ತು ಆಕೆಯ ಗಂಡ ನೀರು ತರುವ ನೆಪದಲ್ಲಿ ಕೆಳಗೆ ಇಳಿದಿದ್ದಾರೆ. ಈ ವೇಳೆ ಅವರಿಗಾಗಿ ಕಾಯುವ ಬದಲು ಚಾಲಕ ಆಂಬ್ಯುಲೆನ್ಸ್ ಅನ್ನು ವೇಗವಾಗಿ ಚಲಾಯಿಸಿದ್ದಾನೆ. ಈ ವೇಳೆ ಚಾಲಕನ ಸಹಾಯಕ ರಾಜೇಶ್ ಕೇವತ್ ಎಂಬಾತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ದುಷ್ಕೃತ್ಯದ ಬಳಿಕ ರಾತ್ರಿಯಿಡೀ ಬಾಲಕಿಯನ್ನು ತಮ್ಮ ಜೊತೆ ಒತ್ತೆಯಾಳಾಗಿಟ್ಟುಕೊಂಡಿದ್ದ ಆರೋಪಿಗಳು, ಮರುದಿನ ಬೆಳಿಗ್ಗೆ ಆಕೆಯನ್ನು ರಸ್ತೆಬದಿ ಬಿಟ್ಟು ಹೋಗಿದ್ದಾರೆ. ನಂತರ ಬಾಲಕಿ ನಡೆದಿರುವ ವಿಷಯವನ್ನು ತಾಯಿಗೆ ತಿಳಿಸಿದ್ದು, ಅವರು ನ.25ರಂದು ದೂರು ದಾಖಲಿಸಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರವೆಸಗಲು ಸಹಕಾರ ನೀಡಿದ ಆರೋಪ ಹೊತ್ತಿರುವ ಬಾಲಕಿಯ ಸಹೋದರಿ ಮತ್ತು ಆಕೆಯ ಪತಿಯನ್ನು ಬಂಧಿಸಲು ಹುಡುಕಾಟ ಆರಂಭಿಸಲಾಗಿದೆ ಎಂದು ರೇವಾ ವಲಯದ ಡಿಐಜಿಪಿ ಸಾಕೇತ್ ಪಾಂಡೆ ತಿಳಿಸಿದ್ದಾರೆ.
ಆರೋಪಿಗಳ ವಿರುದ್ದ ಪೋಕ್ಸೋ ಮತ್ತು ಬಿಎನ್‌ಎಸ್ ಕಾಯ್ದೆಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಾಕೇತ್ ಪಾಂಡೆ ಹೇಳಿದ್ದಾರೆ.
ಇದನ್ನೂ ಓದಿ : ಗಂಭೀರ ಸಮಸ್ಯೆಗಳೊಂದಿಗೆ ಶಿಶು ಜನನ : ನಾಲ್ವರು ವೈದ್ಯರ ವಿರುದ್ಧ ಪ್ರಕರಣ, ತನಿಖೆಗೆ ಆದೇಶ


