ನ್ಯಾಯಾಲಯದ ಕಲಾಪದ ವೇಳೆ ನ್ಯಾಯಾಧೀಶರು ವಕೀಲರ ವಿರುದ್ಧ ಅನುಚಿತವಾಗಿ ನಡೆದುಕೊಳ್ಳುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರಿಗೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ಮನವಿ ಮಾಡಿದೆ.
ನ್ಯಾಯಾಧೀಶರ ಅನುಚಿತ ವರ್ತನೆ ತಡೆಯುವ ಜೊತೆಗೆ ಅವರಿಗೆ ಮಾನಸಿಕ ತರಬೇತಿ, ಪುನಶ್ಚೇತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಬಿಸಿಐ ಅಧ್ಯಕ್ಷ ಮತ್ತು ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಅವರು ಪತ್ರ ಬರೆದಿದ್ದಾರೆ. ನ್ಯಾಯಧೀಶರುಗಳ ಮಾನಸಿಕ ಆರೋಗ್ಯವನ್ನು ಆಗಾಗ ಪರೀಕ್ಷೆ ನಡೆಸುವುದರಿಂದ ಅನುಚಿತ ವರ್ತನೆ ತಡೆಯಲು ಸಹಕಾರಿಯಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಆರ್ ಸುಬ್ರಮಣಿಯನ್ ಅವರು ಹಿರಿಯ ವಕೀಲ ಪಿ ವಿಲ್ಸನ್ ಅವರ ವಿರುದ್ಧ ವಿಚಾರಣೆಯ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಿಜೆಐ ಅವರಿಗೆ ಬಿಸಿಐ ಪತ್ರ ಬರೆದಿದೆ.
ಪ್ರಕರಣವೊಂದರಲ್ಲಿ ಸಂಭಾವ್ಯ ಹಿತಾಸಕ್ತಿ ಸಂಘರ್ಷವೊಂದನ್ನು ಎತ್ತಿ ತೋರಿಸಲು ವಿಲ್ಸನ್ ಅವರು ಮುಂದಾದಾಗ ನ್ಯಾ. ಸುಬ್ರಮಣಿಯನ್ ಅನುಚಿತ ಭಾಷೆ ಬಳಸಿ ಕಟುವಾಗಿ ಪ್ರತಿಕ್ರಿಯಿಸಿದ್ದರು. ನ್ಯಾಯಾಲಯದಲ್ಲಿ ಹಾಜರಿದ್ದ ಇನ್ನೊಬ್ಬ ವಕೀಲರ ವಿರುದ್ಧವೂ ಅವರು ಹರಿಹಾಯ್ದಿದ್ದರು.
ನಿಯಮಿತವಾಗಿ ನ್ಯಾಯಾಧೀಶರ ಮಾನಸಿಕ ಆರೋಗ್ಯ ಪರಿಶೀಲಿಸುವ ಮೂಲಕ ಸಿಡಿಮಿಡಿ, ಒತ್ತಡ ಮತ್ತಿತರ ಸಮಸ್ಯೆಗಳನ್ನು ಮೊದಲೇ ಪತ್ತೆ ಹಚ್ಚಬಹುದು. ನ್ಯಾಯಾಲಯದ ಶಿಷ್ಟಾಚಾರ ಕಾಪಾಡಿಕೊಳ್ಳುವ ಜೊತೆಗೆ, ವಕೀಲರು ಮತ್ತು ನ್ಯಾಯಾಂಗದ ನಡುವಿನ ಸಂವಾದ ಸುಧಾರಣೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ತುರ್ತು ಸುಧಾರಣೆ ಅಗತ್ಯವಿದೆ. ನ್ಯಾಯಾಲಯದ ಸಿಬ್ಬಂದಿಯೊಂದಿಗೆ ಗೌರವಯುತವಾಗಿ ಮತ್ತು ವೃತ್ತಿಪರ ರೀತಿಯಲ್ಲಿ ಸಂವಹನ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಧೀಶರಿಗೆ ನೀತಿ ಸಂಹಿತೆಯ ಅಗತ್ಯ ಇದೆ. ನಿವೃತ್ತ ನ್ಯಾಯಾಧೀಶರ ಸಮಿತಿಯೊಂದನ್ನು ರಚಿಸಬೇಕು. ಈ ಸಮಿತಿ ಒತ್ತಡ ಇಲ್ಲವೇ ಅನುಚಿತ ವರ್ತನೆ ತೋರುವ ನ್ಯಾಯಾಧೀಶರಿಗೆ ಸೂಕ್ತ ನೆರವು, ತರಬೇತಿ ಮತ್ತು ಸಮಾಲೋಚನೆ ನಡೆಸಲು ಮುಂದಾಗಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ.
ಸೌಜನ್ಯ : ಬಾರ್ & ಬೆಂಚ್
ಇದನ್ನೂ ಓದಿ : ಹರಿಯಾಣ | 20 ಕ್ಷೇತ್ರಗಳ ಇವಿಎಂಗಳನ್ನು ಸೀಲ್ ಮಾಡಲು ಕೇಳಿದ ಕಾಂಗ್ರೆಸ್


