ಬೆಂಗಳೂರು: ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಶಾಸಕ ಬಿ.ಆರ್.ಪಾಟೀಲ್ ಅವರು ಮುಖ್ಯಮಂತ್ರಿ ಸಲಹೆಗಾರ ಹುದ್ದೆಗೆ ಶನಿವಾರ (ಫೆ.01) ಹಠಾತ್ತನೇ ರಾಜೀನಾಮೆ ನೀಡುವ ಮೂಲಕ ರಾಜಕೀಯ ಸುಳಿಗಾಳಿ ಎಬ್ಬಿಸಿದ್ದಾರೆ. ರಾಜೀನಾಮೆ ಸಲ್ಲಿಕೆ ಮಾಡಿರುವ ವಿಚಾರವನ್ನು ಬಿ ಆರ್ ಪಾಟೀಲ್ ಅವರೇ ಸ್ವತಃ ಅಧಿಕೃತಗೊಳಿಸಿದ್ದಾರೆ.
ಸಿಎಂ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿ ಕೇವಲ ಶಾಸಕರಾಗಿ ಮುಂದುವರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮೂಲಕ ಪರೋಕ್ಷವಾಗಿ ಮತ್ತೊಮ್ಮೆ, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಿ ಈ ಹಿಂದೆ ಸಹ ಸರಕಾರದ ವಿರುದ್ಧ ಬಹಿರಂಗ ಪತ್ರ ಬರೆದಿದ್ದರು.
ಇದಲ್ಲದೆ, ಈ ಹಿಂದೆ ನಡೆದ ಕಾಂಗ್ರೆಸ್ ಸಿಎಲ್ ಪಿ ಸಭೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿ ಹೊರನಡೆದು ಬಿಸಿ ಮುಟ್ಟಿಸಿದ್ದರು.
ಬೆಂಗಳೂರಿನಲ್ಲಿ ಶನಿವಾರ ಹಠಾತನೇ ತಮ್ಮ ರಾಜೀನಾಮೆಯನ್ನು ಸಿಎಂ ಕಚೇರಿಗೆ ಕಳಿಸಿರುವ ಅವರು, ರಾಜಿನಾಮೆ ಸ್ವೀಕಾರ ಆಗುವುದನ್ನು ಕಾಯುತ್ತಿದ್ದಾರೆ. ಬಳಿಕ ತಮ್ಮ ಮುಂದಿನ ನಡೆ ಏನು ಎನ್ನುವುದನ್ನು ಘೋಷಣೆ ಮಾಡಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಸಿಎಂ ಸಲಹೆಗಾರನ ಹುದ್ದೆಗೆ ನಾನು ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಈಗಾಗಲೇ ತಲುಪಿಸಿದ್ದೇನೆ ಎಂದರು.
ಅಳಂದ ಶಾಸಕ ಬಿ ಆರ್ ಪಾಟೀಲ್ ಅವರು ಈ ಹಿಂದೆಯೂ ಸರ್ಕಾರದ ಕೆಲವೊಂದು ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಿದೆ. ಇತ್ತೀಚೆಗೆ ಕಲಬುರಗಿಯಲ್ಲಿ ನಡೆಸಿದ್ದ ಕ್ಯಾಬಿನೆಟ್ ಸಭೆಯ ಬಗ್ಗೆಯೂ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಇದೀಗ ಇದ್ದಕ್ಕಿದ್ದಂತೆ ಸಿಎಂ ಸಲಹೆಗಾರ ಸ್ಥಾನಕ್ಕೆ ಬಿ ಆರ್ ಪಾಟೀಲ್ ಅವರು ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಸದ್ಯ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆಯನ್ನು ಅಂಗೀಕಾರ ಮಾಡಿರುವ ಕುರಿತು ಇನ್ನು ಸ್ಪಷ್ಟಗೊಂಡಿಲ್ಲ.
ಬಿಆರ್ ಪಾಟೀಲ್ ರಾಜೀನಾಮೆ ಸದ್ಯಕ್ಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಆಂತರಿಕ ಭಿನ್ನಮತದ ನಡುವೆಯೂ ಈ ರಾಜೀನಾಮೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅಂಬೇಡ್ಕರ್ ಮನುಸ್ಮೃತಿ ಸುಟ್ಟು ದೇಶಕ್ಕೆ ಸಂವಿಧಾನ ಕೊಟ್ಟರು – ಮುಖ್ಯಮಂತ್ರಿ ಸಿದ್ದರಾಮಯ್ಯ


