ರಾಜಕಾರಣಿಗಳು ಬಡವರ ಮಕ್ಕಳನ್ನು ತಮ್ಮ ರಾಜಕಾರಣಕ್ಕೆ ಬಳಸಿಕೊಂಡು, ತಮ್ಮ ಮಕ್ಕಳನ್ನು ಮಾತ್ರ ಸುಖವಾಗಿ ಬೆಳೆಸುತ್ತಾರೆಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ.
ಹಿಂದುತ್ವದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಯುವಕರ್‍ಯಾರಾದರೂ ಮೃತರಾದರೆ ಅವರ ಹೆಸರಲ್ಲಿ ರಾಜಕಾರಣ ಮಾಡುತ್ತಿರುವುದು ನಡೆಯುತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ‘ಮೃತ ವ್ಯಕ್ತಿಯ ಕುಟುಂಬದ ಸದಸ್ಯರಿಗೆಯೇ ಎಂಎಲ್‌ಎ ಟಿಕೆಟ್ ನೀಡಬೇಕು’ ಎಂಬ ಆಗ್ರಹ ಕೇಳಿಬಂದಿದೆ.
ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆ ಹಿಂದುತ್ವ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಹರ್ಷನ ಸಾವಿಗೆ ನ್ಯಾಯ ದೊರಕಿಸಿಕೊಡಲು ಒತ್ತಾಯಿಸಿವೆ. ಇತ್ತ ಮತ್ತೊಂದೆಡೆ ‘ಹರ್ಷನ ತಾಯಿ ಅಥವಾ ಸಹೋದರಿಗೆ ಟಿಕೆಟ್ ನೀಡುವ ಮೂಲಕ ಹರ್ಷನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂಬ ಆಗ್ರಹ ಕೇಳಿಬರುತ್ತಿದೆ.
ಹರ್ಷ ಕುಟುಂಬಕ್ಕೆ ಕೇವಲ ಆರ್ಥಿಕ ನೆರವು ನೀಡುವುದಷ್ಟೇ ಅಲ್ಲ, ಬಡವರ ಮಕ್ಕಳು ರಾಜಕಾರಣದ ಕಾರಣಕ್ಕೆ ಸಾವಿಗೀಡಾಗುತ್ತಿದ್ದಾರೆ. ಅಂತಹ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಲಾಗುತ್ತಿದೆ.
“ನಮ್ಮ ಹರ್ಷ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟಿದ್ದಾನೆ. ಬಿಜೆಪಿಗೆ ಹರ್ಷನ ಅಕ್ಕ ಹಾಗೂ ತಾಯಿಗೆ ಶಿವಮೊಗ್ಗದಲ್ಲಿ ಎಂಎಲ್‌ಎ ಟಿಕೆಟ್ ಕೊಡುವುದು ಕಷ್ಟವೇ? ಬಡವರ ಮನೆಗೂ ಎಂಎಲ್‌ಎ ಟಿಕೆಟ್ ಕೊಡಿ ನಾವೇ ಗೆಲ್ಲಿಸುತ್ತೇವೆ” ಎಂದು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.
“ಬಿಜೆಪಿ ತನ್ನ ನಿಜವಾದ ದೇಶಭಕ್ತಿ ತೋರಿಸಲು ಉತ್ತಮವಾದ ಅವಕಾಶ ಇದು” ಎಂದು ಪ್ರಗತ್ ಕೆ.ಆರ್. ಪೋಸ್ಟ್ ಮಾಡಿದ್ದಾರೆ.
ಹರ್ಷ ಅವರ ತಾಯಿ ಆಸ್ಪತ್ರೆಗೆ ತೆರಳಿ ಗಲಭೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸುತ್ತಿರುವ ವಿಡಿಯೊವನ್ನು ಹಂಚಿಕೊಂಡಿರುವ ಪ್ರಗತ್, “ನಾವು ಸುಮ್ ಸುಮ್ಮನೇ ಹೇಳ್ತಿಲ್ಲ. ಮನೆಯಲ್ಲಿ ಮಗನ ಸಾವಾದರೂ ಈ ಮಹಾತಾಯಿ ಗಲಭೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದಾರೆ. ಇಂತವರಿಂದ ನಿಜವಾದ ಜನಸೇವೆಯನ್ನು ನಾವು ನಿರೀಕ್ಷಿಸಬಹುದು” ಎಂದು ಬರೆದಿದ್ದಾರೆ.
ಇದನ್ನೂ ಓದಿರಿ: ಶಿವಮೊಗ್ಗ: ಹರ್ಷ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ, ಮೃತನ ಪೋನ್ ನಾಪತ್ತೆ


