ತೃಕ್ಕಕರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಉಮಾ ಥಾಮಸ್ ಅವರು 15 ಎತ್ತರದ ವೇದಿಕೆಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆಯೊಳಗೆ (ಜ.2) ಪೊಲೀಸರೆದುರು ಶರಣಾಗುವಂತೆ ಕಾರ್ಯಕ್ರಮದ ಸಂಘಟಕರಾಗಿರುವ ಆರೋಪಿಗೆ ಕೇರಳ ಹೈಕೋರ್ಟ್ ಇಂದು (ಜ.1) ಆದೇಶಿಸಿದೆ.
ಬಿಎನ್‌ಎಸ್ ಸೆಕ್ಷನ್ 110ರ ಅಡಿ ಆರೋಪಿಯ ಅಪರಾಧ ಜಾಮೀನು ರಹಿತ ಸ್ವರೂಪದ್ದಾಗಿದೆ ಎಂಬ ತನಿಖಾಧಿಕಾರಿಗಳ ಅಫಿಡವಿಟ್ ಪರಿಗಣಿಸಿದ ನ್ಯಾಯಾಲಯ, ನಾಳೆ ಮಧ್ಯಾಹ್ನ 2 ಗಂಟೆಗೂ ಮುನ್ನ ಪೊಲೀಸರೆದುರು ಶರಣಾಗುವಂತೆ ಸೂಚಿಸಿದೆ.
ಮೃದಂಗ ವಿಷನ್‌ನ ಮಾಲಕರಾದ ‘ನಿಗೋಷ್‌ಕುಮಾರ್’ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಕೃಷ್ಣ ಕುಮಾರ್ ಅವರ ರಜಾಕಾಲೀನ ಪೀಠ, ಈ ಆದೇಶ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಜನವರಿ 3ರಂದು (ಶುಕ್ರವಾರ) ನಡೆಯಲಿದೆ.
ಡಿಸೆಂಬರ್ 29, 2024ರಂದು ಕೊಚ್ಚಿಯ ಕಾಲೂರಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ‘ಮೃದಂಗ ನಾದಂ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ 12,000 ಕಲಾವಿದರು ಏಕಕಾಲದಲ್ಲಿ ಭರತನಾಟ್ಯ ಪ್ರದರ್ಶಿಸಿದ್ದರು.
ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿದ್ದ ಶಾಸಕಿ ಉಮಾ ಥಾಮಸ್ 15 ಅಡಿ ಎತ್ತರದ ವೇದಿಕೆಯಿಂದ ಆಯತಪ್ಪಿ ಕೆಳಗೆ ಬಿದ್ದಿದ್ದರು. ಇದರಿಂದ ಅವರ ಮೆದುಳು, ಬೆನ್ನುಮೂಳೆಯ ಮತ್ತು ಶ್ವಾಸಕೋಶಗಳಿಗೆ ಗಂಭೀರ ಗಾಯಗಳಾಗಿವೆ. ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ವಿವಿಐಪಿ ಗ್ಯಾಲರಿಗೆ ಸೂಕ್ತ ಬ್ಯಾರಿಕೇಡ್ ಅಳವಡಿಸಿರಲಿಲ್ಲ. ವೇದಿಕೆಗೆ ತೆರಳಲು ವಿಶಾಲವಾದ ಮಾರ್ಗಗಳಿರಲಿಲ್ಲ ಎಂದು ಆರೋಪಿಸಿ ಶಾಸಕರ ಸಿಬ್ಬಂದಿ ಶಾಲು ವಿನ್ಸೆಂಟ್ ಅವರು ನೀಡಿದ ದೂರಿನ ಆಧಾರದ ಮೇಲೆ, ಬಿಎನ್ಎಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕಾರ್ಯಕ್ರಮದ ಸಂಘಟಕರ ವಿರುದ್ದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಪತ್ರ ಬರೆದ ಕೇಜ್ರಿವಾಲ್


