Homeಕರ್ನಾಟಕಖಾಸಗಿ ಶಾಲೆ ಕಟ್ಟಲು ಹೊರಟು, ಕೊನೆಗೆ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಿ ಮಾದರಿಯಾದ ಯುವಕರು

ಖಾಸಗಿ ಶಾಲೆ ಕಟ್ಟಲು ಹೊರಟು, ಕೊನೆಗೆ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಿ ಮಾದರಿಯಾದ ಯುವಕರು

ಈ ಶಾಲೆಗಳ ಅಭಿವೃದ್ದಿ ಮತ್ತು ಯುವಕರ ಕ್ರಿಯಾಶೀಲತೆಯನ್ನು ಮೆಚ್ಚಿ ಇತ್ತೀಚೆಗೆ ಪ್ರಕಾಶ್‍ರಾಜ್ ಫೌಂಡೇಶನ್ ಕೂಡ ಈ ಶಾಲೆಗಳಿಗೆ ನೆರವು ನೀಡಲು ಮುಂದೆ ಬಂದಿದೆ.

- Advertisement -
- Advertisement -

| ಮುತ್ತುರಾಜು |

ಒಂದೇ ವಾರಗೆಯ ಗೆಳೆಯರಿವರು. ಒಟ್ಟಿಗೆ ಓದಿದ ಇವರು ಏನು ಮಾಡಿದರೂ ಎಲ್ಲರೂ ಜೊತೆಗೂಡುತ್ತಿದ್ದರು. ಯುವಕ ಸಂಘದ ಹೆಸರಿನಲ್ಲಿ ರಕ್ತದಾನ ಮಾಡುವುದು, ಆರೋಗ್ಯ ಶಿಬಿರ ಏರ್ಪಡಿಸುವುದು, ಕಾಡು ಬೆಳೆಸಿ ಪರಿಸರ ರಕ್ಷಿಸುವಂತಹ ಜನಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಜೊತೆಗೆ ಒಟ್ಟಿಗೆ ಪ್ರವಾಸ ಹೋಗುವುದು, ಚೀಟಿ ಹಾಕಿ ಹಣ ಉಳಿತಾಯ ಮಾಡುವುದು, ಕ್ರಿಕೆಟ್ ಟೂರ್ನಿಮೆಂಟ್ ನಡೆಸುವುದು, ಗಣೇಶ ಪ್ರತಿಷ್ಠಾಪನೆ ಮಾಡಿ ಹಬ್ಬ ಆಚರಿಸುವುದು.. ಹೀಗೆ. ಓದು ಮುಗೀತು. ಕೆಲವರು ಕೆಲಸಕ್ಕೆ ಸೇರಿದರು, ಕೆಲವರು ಕೃಷಿ ನಂಬಿದರು ಮತ್ತೆ ಕೆಲವರು ಸ್ವಯಂಉದ್ಯೋಗ ಸೃಷ್ಟಿಸಿಕೊಂಡರು. ಮದುವೆಯಾಯಿತು, ಮಕ್ಕಳು ಆದವು.

ಮಕ್ಕಳಾಗುತ್ತಿದ್ದಂತೆಯೇ ಇವರಿಗೊಂದು ಚಿಂತೆ ಶುರುವಾಯಿತು. ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು? ತಾವೆಲ್ಲರೂ ಸರ್ಕಾರಿ ಶಾಲೆಯಲ್ಲಿ ಓದಿದ್ದರೂ ತಮ್ಮ ವಾರಗೇಯಇ ತರ ಗೆಳೆಯರು ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಸೇರಿಸಲು ಹೆಣಗಾಡುತ್ತಿದ್ದರು. ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂಬ ಬಯಕೆ ಎಲ್ಲರಲ್ಲಿದ್ದ ಕಾರಣ ಇವರು ಕೂಡ ಅಕ್ಕ ಪಕ್ಕದೂರಿನಲ್ಲಿದ್ದ ಕಾನ್ವೆಂಟ್‍ಗಳನ್ನು ವಿಚಾರಿಸುವುದರ ಜೊತೆಗೆ ಹತ್ತಿರದ ನಗರದ ಖಾಸಗಿ ಶಾಲೆಗಳ ದುಬಾರಿ ಶುಲ್ಕಗಳ ಪಟ್ಟಿ ನೋಡಿ ದಂಗುಬಡಿದರು.

ಕೊನೆಗೆ ಇವರಿಗೆ ಒಂದು ಸೂಪರ್ ಐಡಿಯಾ ಹೊಳೆಯಿತು. ಅದರಂತೆ ಏಳೆಂಟು ಜನ ಸ್ನೇಹಿತರು ಸೇರಿ ಒಂದು ತೀರ್ಮಾನಕ್ಕೆ ಬಂದರು. ಅದೇನೆಂದರೆ ತಮ್ಮ ಮಕ್ಕಳನ್ನು ದುಬಾರಿ ಹಣಕೊಟ್ಟು ಕಾನ್ವೆಂಟ್‍ಗೆ ಸೇರಿಸುವುದರ ಬದಲು ತಮ್ಮೂರಿನಲ್ಲಿ ತಾವೇ ಒಂದು ಹೆಚ್ಚು ಫೀಸ್ ತೆಗೆದುಕೊಳ್ಳದ ಸುಮಾರಾಗಿರುವ ಕಾನ್ವೆಂಟ್ ಆರಂಭಿಸಿವುದು!

ಸರ್ಕಾರಿ ಶಾಲೆಯಲ್ಲಿ ಜನಪ್ರಿಯ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿದ್ದ ತಮ್ಮ ಪ್ರೀತಿಯ ಗುರುಗಳಾದ ರಾಮಕೃಷ್ಣಪ್ಪರವರ ಬಳಿ ಈ ರೀತಿ ಮಾಡುತ್ತಿದ್ದೇವೆ ಸಲಹೆ ಕೊಡಿ ಎಂದು ಕೇಳಿದರು. ರಾಮಕೃಷ್ಣಪ್ಪನವರು ಕೂಲಂಕುಷವಾಗಿ ಇವರು ಹೇಳಿದ್ದನ್ನು ಕೇಳಿಸಿಕೊಂಡು ಸರಿ ಈ ವರ್ಷ ಒಂದಷ್ಟು ಕಡೆ ಓಡಾಡೋಣ, ಮುಂದಿನ ವರ್ಷದಿಂದ ಜಾರಿಮಾಡೋಣ ಎಂದರು. ನಂತರ ಈಗಾಗಲೇ ಸರ್ಕಾರಿ ಶಾಲೆಗಳನ್ನು ಸಮುದಾಯಗಳೆ ಮುಂದೆ ನಿಂತು ಅಭಿವೃದ್ದಿಪಡಿಸಿ ಮಕ್ಕಳ ಮನೆ ಹೆಸರಿನಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳನ್ನು ತೆರೆದು, ತಮ್ಮ ಕೈಯಾರೆ ಉತ್ತಮ ಇಂಗ್ಲಿಷ್ ಕಲಿಸುವ ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಶಾಲೆ, ಮಾದಹಳ್ಳಿ ಶಾಲೆ, ತುಮಕೂರಿನ ಕೋರಾ ಮತ್ತು ಕಳ್ಳಬಂಳ್ಳ ಶಾಲೆಗಳನ್ನು ಇವರಿಗೆ ತೋರಿಸಿದರು.

ಅಲ್ಲಿಯ ಸರ್ಕಾರಿ ಶಾಲೆಗಳು ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಎಸ್‍ಡಿಎಂಸಿ ಸದಸ್ಯರ ಕಾಳಜಿಯಿಂದ ಸುತ್ತಲಿನ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಉಚಿತವಾಗಿ ಅತ್ಯುತ್ತಮ ಶಿಕ್ಷಣ ನೀಡುತ್ತಿದ್ದವು. ಇದನ್ನು ನೋಡಿದ ಈ ಗೆಳೆಯರ ಬಳಗ ಖಾಸಗಿ ಶಾಲೆ ಮಾಡುವ ತಮ್ಮ ನಿರ್ಧಾರವನ್ನು ಕೈ ಬಿಟ್ಟು ತಮ್ಮೂರಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸುವ ಕೆಲಸಕ್ಕೆ ಕೈ ಹಾಕಿದರು. ಈಗ ಮೂರು ವರ್ಷಗಳ ನಂತರ ಅವರ ಸರ್ಕಾರಿ ಶಾಲೆಗಳು ನಳನಳಿಸುವಂತೆ ಆದವು ಮತ್ತು ಅವರೆಲ್ಲರ ಮಕ್ಕಳು ಅದೇ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹದು.

ಇದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ, ಹುಳಿಯಾರು, ದಬ್ಬಗುಂಟೆ, ಕಲ್ಲೇನಹಳ್ಳಿ ಗ್ರಾಮಗಳ ಮತ್ತು ಚಿಕ್ಕನಾಯಕನಹಳ್ಳಿ ಟೌನ್‍ನ ಸುವರ್ಣ ವಿದ್ಯಾಚೇತನ ಸಂಸ್ಥೆಯ ಯುವಕರ ಯಶೋಗಾಥೆ. ಯುವರಾಜು, ಶಿವಣ್ಣ, ಗುರು, ಮಂಜುನಾಥ್, ಅಜ್ಜಪ್ಪ, ಗೀರೀಶ್ ಗ್ರಾ.ಪಂ ಸದಸ್ಯರಾದ ರಘು, ಪತ್ರಕರ್ತ ರಂಗನಕೆರೆ ಮಹೇಶ್, ಮಲ್ಲಪ್ಪ ಮತ್ತಿತರರ ಗೆಳೆಯರು ಈ ವಿಶಿಷ್ಟ ಪ್ರಯೋಗದ ಸಾಧಕರಾದರೆ ಇವರ ಗುರುಗಳಾದ ರಾಮಕೃಷ್ಣಪ್ಪ ಮತ್ತು ಇಂದಿರಮ್ಮನವರು ಇವರಿಗೆ ಮಾರ್ಗದರ್ಶಕರು. ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಘಟನೆ ಇವರಿಗೆ ನೆರವು ಮತ್ತು ಮಾರ್ಗದರ್ಶನ ನೀಡುತ್ತಿದೆ. ಅಲ್ಲಿನ ಐದು ಸರ್ಕಾರಿ ಶಾಲೆಗಳನ್ನು ಒಟ್ಟಿಗೆ ಅಭಿವೃದ್ದಿ ಮಾಡುವ ಪಣತೊಟ್ಟಿರುವ ಈ ಯುವಪಡೆ ತಮ್ಮ ಮಕ್ಕಳಿಗೆ ಮಾತ್ರವಲ್ಲದೇ ತಮ್ಮೂರಿನ ಪ್ರತಿಯೊಬ್ಬರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಉಚಿತವಾಗಿ ಸಿಗುವಂತೆ ಮಾಡುವಲ್ಲಿ ದಿನೇ ದಿನೇ ಯಶಸ್ವಿಯಾಗುತ್ತಿದೆ. ಒಂದೇ ಉದಾಹರಣೆ ನೀಡುವುದಾದರೆ ಚಿಕ್ಕನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 1-7ನೇ ತರಗತಿಯವರೆಗೆ 120 ಮಕ್ಕಳಿದ್ದರೆ ಎಲ್.ಕೆ.ಜಿ, ಯು.ಕೆ.ಜಿಯಲ್ಲಿ 61 ಮಕ್ಕಳು ಕಲಿಯುತ್ತಿದ್ದಾರೆ. ಕಳೆದ ವರ್ಷ ಯು.ಕೆ.ಜಿ ಕಲಿತ 28 ಮಕ್ಕಳು ಈ ವರ್ಷಇದೇ ಶಾಲೆಗೆ ಒಂದನೇ ತರಗತಿಗೆ ದಾಖಲಾಗಿದ್ದಾರೆ.

ಈ ಯುವಜನರು ಇಷ್ಟೆಲ್ಲಾ ಮಾಡುವುದರ ಬದಲು ಒಂದು ವೇಳೆ ಖಾಸಗಿ ಶಾಲೆಯನ್ನು ಆರಂಭಿಸಿಬಿಟ್ಟಿದ್ದರೆ ಬಹುಶಃ ಇಂದು ಅವರೂರಿನ ಸರ್ಕಾರಿ ಶಾಲೆ ಮಕ್ಕಳಿಲ್ಲದೇ ಮುಚ್ಚುವ ಅಥವಾ ವಿಲೀನಗೊಳ್ಳುವ ಶಾಲೆಗಳ ಪಟ್ಟಿಯಲ್ಲಿರುತ್ತಿತ್ತೇನೊ? ಆದರೆ ಶಿಕ್ಷಣದ ವ್ಯಾಪಾರೀಕರಣದ ಅಪಾಯಗಳನ್ನು ಮನಗಂಡಿದ್ದ ಅವರ ಗುರುಗಳಾದ ರಾಮಕೃಷ್ಣಪ್ಪನವರ ಕಾಳಜಿಯಿಂದ ಇಂದು ಈ ಯುವಕರು ಸಮಾಜಕ್ಕೆ ಮತ್ತು ಉಳಿದ ಯುವಜನರಿಗೆ ಮಾದರಿಯಾಗಿದ್ದಾರೆ. ನಿಮ್ಮೂರಿನ ಸರ್ಕಾರಿ ಶಾಲೆಯನ್ನು ಈ ರೀತಿ ಅಭಿವೃದ್ಧಿಗೊಳಿಸಲು ಆಸಕ್ತಿ ಇರುವವರು ಸಂಪರ್ಕಿಸಬಹುದು. ರಾಮಕೃಷ್ಣಪ್ಪನವರ ಮೊಬೈಲ್ ಸಂಖ್ಯೆ: 9901121224

ಹಳೆಯ ವಿದ್ಯಾರ್ಥಿಗಳ ಸಮ್ಮಿಲನ
ಈ ರೀತಿಯ ಹಳೆಯ ವಿದ್ಯಾರ್ಥಿಗಳ ಸಂಘ ಮಾಡುವ ಮೂಲಕ ತಾವು ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡುವುದರಿಂದ ಸ್ವಲ್ಪವಾದರೂ ಋಣ ತೀರಿಸಬಹುದು ಎಂಬ ವಿಚಾರ ಇವರಿಗೆ ಹೊಳೆಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಈ ತಂಡ ತಮ್ಮ ಹಳೆಯ ಸ್ನೇಹಿತರಿಗೆಲ್ಲಾ ಫೋನ್ ಮಾಡಿ ಜೊತೆಗೂಡಲು ಮನವಿ ಮಾಡಿದರು. ತಮ್ಮ ತಮ್ಮ ಬ್ಯಾಚಿನ ಹತ್ತಾರು ವಾಟ್ಸಾಪ್ ಗುಂಪುಗಳನ್ನು ಮಾಡಿ ವಿಚಾರ ಹಂಚಿಕೊಂಡರು. 2016ರ ಜನವರಿ 24 ಮತ್ತು 25 ಈ ಎರಡು ದಿನ ಸುತ್ತಮುತ್ತಲ ಹತ್ತಾರು ಊರಿನ ಹಳೆಯ ವಿದ್ಯಾರ್ಥಿಗಳೆಲ್ಲಾ ಒಂದು ಕಡೆ ಸೇರಿ ‘ಹಳೆಯ ವಿದ್ಯಾರ್ಥಿಗಳ ಸಮ್ಮಿಲನ’ ಕಾರ್ಯಕ್ರಮವನ್ನು ಅದ್ಭುತವಾಗಿ ಸಂಘಟಿಸಿದರು. ಅಲ್ಲಿ ತಮ್ಮೂರಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಕನಸಿಗೆ ಮೊಳಕೆ ಬಂತು. ನೂರಾರು ಹಿರಿಯ ವಿದ್ಯಾರ್ಥಿಗಳು ಧನಸಹಾಯದ ನೆರವಿನ ಭರವಸೆ ನೀಡಿದರು.
ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ಸಾಥ್
ದೇಶದ ಪ್ರತಿಯೊಬ್ಬ ಮಕ್ಕಳಿಗೂ ಸಮಾನವಾದ, ವೈಜ್ಞಾನಿಕವಾದ ಗುಣಮಟ್ಟದ, ಉಚಿತ ಮತ್ತು ಕಡ್ಡಾಯ ಶಿಕ್ಷಣ ದೊರಯಲೇಬೇಕೆಂಬ ಆಶಯದೊಂದಿಗೆ ನೂರಾರು ಸರ್ಕಾರಿ ಶಾಲೆಗಳ ಜೊತೆ ಕೆಲಸ ಮಾಡುತ್ತಿರುವ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಘಟನೆಯು ಇವರ ಬೆನ್ನೆಲುಬಿಗೆ ನಿಂತಿದೆ. ತಾರತಮ್ಯರಹಿತ ಶಿಕ್ಷಣ ಪ್ರತಿಯೊಬ್ಬ ಮಕ್ಕಳ ಹಕ್ಕು ಎಂದು ಭಾವಿಸುವ ಈ ವೇದಿಕೆಯು ಶಿಕ್ಷಕರ ನೇಮಕಾತಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಬಲವರ್ಧನೆಗೆ ಒತ್ತಾಯಿಸಿ ಕಳೆದ 8 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಸಂಘರ್ಷ ಮತ್ತು ನಿರ್ಮಾಣ ತತ್ವದಲ್ಲಿ ನಂಬಿಕೆಯಿಟ್ಟಿರುವ ಈ ವೇದಿಕೆಯು ಹೋರಾಟದ ಜೊತೆಗೆ ತಾನೇ ಮುಂದೆ ನಿಂತು ಹಲವು ಪೋಷಕರ ನೆರವಿನೊಂದಿಗೆ ನೂರಾರು ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸಿದ್ದು ಈ ಗೆಳೆಯರಿಗೂ ಆಸರೆಯಾಗಿದೆ.
ವಿಜ್ಞಾನ ಮತ್ತು ಕ್ರೀಡೆಗೆ ಹೆಚ್ಚಿನ ಒತ್ತು
ಬೋರನಕಣಿವೆ ಸರ್ಕಾರಿ ಪ್ರೌಢಶಾಲೆ ಮತ್ತು ಪ.ಪೂ ಕಾಲೇಜಿನ ಏಳ್ಗೆಗೂ ಕೈ ಹಾಕಿದ ಈ ತಂಡ ಅಲ್ಲಿನ ವಿದ್ಯಾರ್ಥಿಗಳಿಗೆ ಪ್ರತಿದಿನ ಮಧ್ಯಾಹ್ನ ಮತ್ತು ಸಂಜೆ ವೇಳೆ ಥ್ರೋಬಾಲ್, ಕಬ್ಬಡ್ಡಿ, ವಾಲಿಬಾಲ್, ಖೊ ಖೋ ಸೇರಿದಂತೆ ಹಲವು ಕ್ರೀಡೆಗಳ ತರಭೇತಿ ನೀಡಲು ಆರಂಭಿಸಿದರು. ಅಲ್ಲಿನ ಶಿಕ್ಷಕರೊಡನೆ ಉತ್ತಮ ಸಂಬಂಧ ಮತ್ತು ಸಂವಾದ ಸಾಧಿಸಿ ಒಳ್ಳೆಯ ಗಣಿತ ಮತ್ತು ವಿಜ್ಞಾನ ಪ್ರಯೋಗಾಲಯಗಳನ್ನು ಸಿದ್ಧಪಡಿಸಿದರು. ಇದರಿಂದ ಪ್ರತಿವರ್ಷ ನಡೆಯುವ ಶೈಕ್ಷಣಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಈ ಊರಿನ ಮಕ್ಕಳು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಥ್ರೋಬಾಲ್ ಸ್ಪರ್ಧೆಯಲ್ಲಿ ಕಳೆದ ಮೂರು ವರ್ಷ ಸತತವಾಗಿ ರಾಜ್ಯಮಟ್ಟದವರೆಗೂ ಪೈಪೋಟಿ ನೀಡುತ್ತಿದ್ದಾರೆ. ಈ ಶಾಲೆಯ ಹಸಿರು ಪರಿಸರ ಎಲ್ಲರ ಕಣ್ಮನ ಸೆಳೆಯುವಲ್ಲಿ ಈ ಯುವಜನರ ಪಾತ್ರವೂ ದೊಡ್ಡದು. ಸ್ಫೂರ್ತಿ ಗಾರ್ಡನ್ ಹೆಸರಿನಲ್ಲಿ ಪ್ರತಿ ಶಾಲೆಯನ್ನು ಅಂದಗೊಳಿಸುವ ಕೆಲಸಕ್ಕೆ ಈ ವರ್ಷದಿಂದ ಕೈಹಾಕಿದ್ದಾರೆ.
ಶಾಲೆಗಾಗಿ ಹೋರಾಟಕ್ಕೂ ಸೈ ಅಂದರು.
ಈ ಯುವಕರ ಪ್ರಯತ್ನದಿಂದ ಐದು ಶಾಲೆಗಳು ಚೆನ್ನಾಗಿ ಆದವು. ಮಕ್ಕಳ ಸಂಖ್ಯೆಯು ಕೂಡ ಗಣನೀಯವಾಗಿ ಹೆಚ್ಚಳವಾಯಿತು. ಆದರೆ ಜಿಲ್ಲಾಕೇಂದ್ರದಿಂದ ದೂರವಿರುವ ಗಡಿನಾಡ ಪ್ರದೇಶವಾದ್ದರಿಂದ ಹೆಚ್ಚಿನ ಶಿಕ್ಷಕರು ಬರಲಿಲ್ಲ. ಮೊದಲೇ ಶಿಕ್ಷಕರ ಕೊರತೆಯಿತ್ತು. ಇದರಿಂದ ಸಿಟ್ಟಿಗೆದ್ದ ಈ ಯುವಜನರು ಪೋಷಕರನ್ನು ಸಂಘಟಿಸಿ 2017ರ ಜೂನ್ ತಿಂಗಳಲ್ಲಿ ಐದು ದಿನ ನಿರಂತರವಾಗಿ 33 ಶಾಲೆಗಳನ್ನು ಬಂದ್ ಮಾಡಿ ಹಗಲು ರಾತ್ರಿ ಧರಣಿ ನಡೆಸಿದರು. ಸ್ಥಳಕ್ಕೆ ಡಿಡಿಪಿಐ ಬರುವವರೆಗೂ ಹೋರಾಟ ನಿಲ್ಲಲಿಲ್ಲ. ಕೊನೆಗೆ ಹೋರಾಟಕ್ಕೆ ಜಯ ಸಿಕ್ಕಿತು. 17 ಶಿಕ್ಷಕರು ಕೆಲಸಕ್ಕೆ ಬಂದರು. ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿತು.
ಶಾಲೆಗಳಿಗೆ ದೇಣಿಗೆ ತರುವುದರಲ್ಲಿ ಎತ್ತಿದ ಕೈ
ರಾಮಕೃಷ್ಣಪ್ಪನವರ ಶಿಷ್ಯ ಬಳಗ ದೊಡ್ಡದು. ಅವರೆಲ್ಲರೂ ಕೂಡ ಶಾಲೆಯ ಅಭಿವೃದ್ದಿಗಾಗಿ ತಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದಾರೆ. ಸುವರ್ಣ ವಿದ್ಯಾಚೇತನ ಸಂಸ್ಥೆಯ ಗೆಳೆಯರೆಲ್ಲರೂ ಸಾಕಷ್ಟು ದೇಣಿಗೆ ನೀಡುತ್ತಿದ್ದಾರೆ. ಜೊತೆಗೆ ಸ್ಥಳೀಯ ಶಾಸಕರ ಅನುದಾನ, ಜಿ.ಪಂ ಮತ್ತು ಗ್ರಾ.ಪಂ ನಿಂದ ಶಾಲಾ ಕೈ ತೋಟಕ್ಕಾಗಿ ಅನುದಾನವನ್ನು ಪಡೆದು ಸದ್ಬಳಕೆ ಮಾಡಿಕೊಂಡಿದ್ದಾರೆ. ಈ ಶಾಲೆಗಳ ಅಭಿವೃದ್ದಿ ಮತ್ತು ಯುವಕರ ಕ್ರಿಯಾಶೀಲತೆಯನ್ನು ಮೆಚ್ಚಿ ಇತ್ತೀಚೆಗೆ ಪ್ರಕಾಶ್‍ರಾಜ್ ಫೌಂಡೇಶನ್ ಕೂಡ ಈ ಶಾಲೆಗಳಿಗೆ ನೆರವು ನೀಡಲು ಮುಂದೆ ಬಂದಿದೆ.
ಮಕ್ಕಳಿಗಾಗಿ ಹಣ್ಣು ತರಕಾರಿ
ಈ ಐದು ಶಾಲೆಗಳಲ್ಲಿಯೂ ‘ನ್ಯೂಟ್ರಿಷಿಯಸ್’ ಎಂಬ ವಿಶೇಷ ಕಾರ್ಯಯೋಜನೆ ನಡೆಯುತ್ತಿದೆ. ಪ್ರತಿ ತಿಂಗಳು ಕಡ್ಡಾಯವಾಗಿ ನಡೆಯುವ ಪೋಷಕರ ಸಭೆಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದರ ಮಹತ್ವವನ್ನು ವಿವರಿಸುತ್ತಾರೆ. ಅಷ್ಟೇ ಅಲ್ಲದೆ ಹಣ್ಣು ಮತ್ತು ತರಕಾರಿಯ ತಲಾ ಎರಡು ಗಿಡಗಳನ್ನು ಪ್ರತಿ ಪೋಷಕರಿಗೆ ಉಚಿತವಾಗಿ ನೀಡುವುದರ ಜೊತೆಗೆ ಇನ್ನೆರೆಡು ಗಿಡಗಳನ್ನು ಕೊಂಡುಕೊಳ್ಳುವಂತೆ ಮನವೊಲಿಸಲಾಗುತ್ತದೆ. ಸೀಬೆಹಣ್ಣು, ಪೊಪ್ಪಾಯ, ಬಾಳೆಹಣ್ಣು, ನೇರಳೆ, ಮಾವು ಗಿಡಗಳ ಜೊತೆಗೆ ನಾಟಿತರಕಾರಿ ಬೀಜಗಳನ್ನು ನೀಡಿ ಮನೆಯ ಹತ್ತಿರ ಬೆಳೆದು ಮಕ್ಕಳಿಗೆ ತಿನ್ನಿಸುವಂತೆ ಪ್ರೋತ್ಸಾಹಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ತುಮಕೂರಿನ ‘ಸಹಜ ಬೇಸಾಯ ಶಾಲೆ’ಯ ಡಾ.ಮಂಜುನಾಥ್ ಮತ್ತು ಎನ್.ಇಂದಿರಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ.
“ಬಹುತೇಕ ಖಾಸಗಿ ಶಾಲೆಗಳು ಇಂದು ಹಣ ಮಾಡುವ ಕೇಂದ್ರಗಳಾಗಿರುವುದರಿಂದ ಸರ್ಕಾರಿ ಶಾಲೆಗಳನ್ನು ಬೆಳೆಸುವುದು ಅತೀ ಅಗತ್ಯ. ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಸರ್ಕಾರಿ ಶಾಲೆಗಳ ಸಬಲೀಕರಣ ಸಾಧ್ಯ ಎನ್ನುವುದು ನಮ್ಮ ಅನುಭವದಲ್ಲಿ ಗೊತ್ತಾಗಿದೆ. ಗುಣಮಟ್ಟದ ಕಲಿಕೆ ಮತ್ತು ಪೋಷಕರು ಹಾಗೂ ಶಾಲೆಗಳ ಬಾಂಧವ್ಯ ವೃದ್ಧಿಯಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.” ಎನ್ನುತ್ತಾರೆ ರಾಮಕೃಷ್ಣಪ್ಪನವರು.
ರಾಮಕೃಷ್ಣಪ್ಪ ಮತ್ತು ಯುವರಾಜ್
ಜೊತೆಗೆ ಹೊಯ್ಸಳಕಟ್ಟೆ ಶಾಲೆಯ ಹಿರಿಯ ವಿದ್ಯಾರ್ಥಿಯಾದ ಯುವರಾಜ್, ಖಾಸಗಿ ಶಾಲೆಗಳಿಂದ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಾಧ್ಯವಿಲ್ಲ, ಅದು ಸರ್ಕಾರಿ ಶಾಲೆಗಳಿಂದ ಮಾತ್ರ ಸಾಧ್ಯ ಎಂಬ ಅನುಭವ ಸಿಕ್ಕಿದೆ. ನಾವು ಕಲಿತ ಶಾಲೆಯ ಋಣ ತೀರಿಸುವುದರ ಜೊತೆಗೆ ನಮ್ಮ ಮಕ್ಕಳೊಂದಿಗೆ ಊರಿನ ಎಲ್ಲಾ ಮಕ್ಕಳಿಗೂ ಉತ್ತಮ ಶಿಕ್ಷಣ ನಮ್ಮೂರಿನಲ್ಲೇ ಸಿಗುತ್ತಿರುವುದಕ್ಕೆ ಖುಷಿ ಇದೆ ಎಂದರು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...