ಪ್ರಧಾನಿ ಮೋದಿ ಅವರು ಮಾಧ್ಯಮಗಳನ್ನು ಎದುರಿಸುವುದಿಲ್ಲ, ಪತ್ರಿಕಾಗೋಷ್ಠಿ ನಡೆಸುವುದಿಲ್ಲ, ಪ್ರಶ್ನೆಗಳನ್ನು ಎದುರಿಸುವುದಿಲ್ಲ. ವಿಶ್ವದ ಎಲ್ಲಾ ಪ್ರಜಾತಾಂತ್ರಿಕ ದೇಶದ ನಾಯಕರು ಮಾಧ್ಯಮಗಳನ್ನು ಎದುರಿಸಿ ತಮ್ಮ ಕ್ರಮಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಅದು ಆ ನಾಯಕರು ಪ್ರಜಾಸತ್ತಾತ್ಮಕ ನಾಯಕರಾಗಿ ಕಾರ್ಯನಿರ್ವಹಿಸಲು ಬೇಕಿರುವ ಸಾಮಥ್ರ್ಯವನ್ನು ತೋರಿಸುತ್ತದೆ ಮತ್ತು ಅದು ಅವರ ಆತ್ಮವಿಶ್ವಾಸದ ಪ್ರತೀಕವೂ ಹೌದು. ಕೇವಲ ನಿರಂಕುಶಾಧಿಕಾರಿಗಳು ಮಾಧ್ಯಮಗಳನ್ನು ಎದುರಿಸುವುದಿಲ್ಲ, ಅವರು ಸ್ವತಂತ್ರವಾಗಿ ನಡೆದುಕೊಳ್ಳುವಾಗ ಅವರು ಜನರ ದನಿಯಾಗಿರುತ್ತಾರೆ. ಈ ತರ್ಕದಲ್ಲಿ ನೋಡಿದರೆ, ತನ್ನ ನಿರ್ಣಯಗಳನ್ನು ಸಮರ್ಥಿಸಿಕೊಳ್ಳಲು ವಾದ ಮಾಡಲು ಹಿಂಜರಿಯುವ ನಾಯಕರಂತೆ ಕಾಣುತ್ತಾರೆ ಪ್ರಧಾನಿ ಮೋದಿ. ತನ್ನ ನಿರ್ಧಾರಗಳ ಬಗ್ಗೆ ಮಾತನಾಡುವುದು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ನಾಯಕರ ಬಹುಮುಖ್ಯ ಲಕ್ಷಣವೂ ಹೌದು.
ಮೋದಿ ಕೊನೆಯ ಬಾರಿ ಒಬ್ಬ ನಿಜವಾದ ಪತ್ರಕರ್ತನನ್ನು ಎದುರಿಸಿದ್ದು ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ. ಅದೊಂದು ಪುಟ್ಟ ಸಂದರ್ಶನವಾಗಿತ್ತು ಏಕೆಂದರೆ ಗುಜರಾತ್ ಹಿಂಸಾಕಾಂಡದ ಬಗ್ಗೆಯ ಪ್ರಶ್ನೆಗಳಿಗೆ ತನ್ನ ಕಾರ್ಯವೈಖರಿಯನ್ನು ಸಮರ್ಥಿಸಲಾಗದೇ ಮೋದಿಯವರು ಸಂದರ್ಶನವನ್ನು ಅಷ್ಟಕ್ಕೇ ನಿಲ್ಲಿಸಿ ಹೊರನಡೆದಿದ್ದರು. ಇದು ತೋರಿಸುವುದೇನೆಂದರೆ, ಈ ವ್ಯಕ್ತಿಯೊಳಗೂ ಒಳಗೆಲ್ಲೋ ಒಂದು ಆತ್ಮಸಾಕ್ಷಿ ಅಡಗಿ ಕುಳಿತಿದೆ ಹಾಗೂ ಈ ಸತ್ಯ ಅವರಿಗೆ ಅಷ್ಟು ಇಷ್ಟವಿಲ್ಲವೇನೋ. ಹಾಗಾಗಿ ಪ್ರಧಾನಿಯಾಗಿ ಮೋದಿ ಒಂದು ಸೋಗಿನ ನಡತೆಯನ್ನು ಅಳವಡಿಸಿಕೊಂಡಿದ್ದಾರೆ – ಅವರು ಜನರು ಏನು ಮಾಡಬೇಕು, ಏನೆಲ್ಲ ಯೋಚಿಸಬೇಕು ಹಾಗೂ ತನ್ನ ಆಳ್ವಿಕೆಯ ಬಗ್ಗೆ ಏನು ಅಂದುಕೊಳ್ಳಬೇಕು ಎನ್ನವುದನ್ನು ಜನರಿಗೆ ಹೇಳುತ್ತಾರೆ. ಇವರು ಸಾರ್ವಜನಿಕವಾಗಿಯೇ ಈ ರೀತಿ ವರ್ತಿಸುತ್ತಾರೆಂದರೆ, ಕಛೇರಿಯ ಒಳಗೆ ನಡೆಯುವ ಅಧಿಕೃತ ಸಭೆಗಳು ಹೇಗೆ ನಡೆಯುತ್ತವೆ ಎನ್ನುವುದನ್ನು ಯಾರಾದರೂ ಊಹಿಸಬಹುದು.
ಕೇಂದ್ರ ಕ್ಯಾಬಿನೆಟ್ ಸಭೆಯ ಒಂದು ಚಿತ್ರ ಹೊರಗಡೆ ಲೀಕ್ ಆಯಿತು. ಆ ಚಿತ್ರ ಪ್ರಧಾನಿಗಳು ತಮ್ಮ ಜವಾಬ್ದಾರಿಯನ್ನು, ತಮ್ಮ ಕಛೇರಿಯನ್ನು ಹೇಗೆ ನಡೆಸುತ್ತಾರೆ ಎಂಬುದರ ಬಗ್ಗೆ ಬೆಳಕು ಚೆಲ್ಲಿತು. ಆ ಚಿತ್ರದಲ್ಲಿ ಮೋದಿ ಎತ್ತರದಲ್ಲಿ ಕುಳಿತಿದ್ದು, ತಮ್ಮ ಎಲ್ಲಾ ಕ್ಯಾಬಿನೆಟ್ ಸಚಿವರು ಕೆಳಸ್ತರದಲ್ಲಿದ್ದಾರೆ. ಮೋದಿಯ ಪ್ರಶ್ನೆಗಳಿಗೆ ಉತ್ತರಿಸಬೇಕಾದ ತಮ್ಮ ಸರದಿ ಬಂದಾಗ ಎಲ್ಲರೂ ಎದ್ದುನಿಂತೇ ಉತ್ತರಿಸಬೇಕಿತ್ತು, ಶಾಲೆಯಲ್ಲಿ ಒಬ್ಬ ಕಟ್ಟುನಿಟ್ಟಿನ ಶಿಕ್ಷಕನೊಂದಿಗೆ ವಿದ್ಯಾರ್ಥಿಗಳು ನಡೆದುಕೊಳ್ಳುವ ರೀತಿಯನ್ನು ನೆನಪಿಸಿತು ಆ ಚಿತ್ರ. ಸ್ವಾಭಾವಿಕವಾಗಿಯೇ ತಮ್ಮ ಕ್ಯಾಬಿನೆಟ್ ಸಚಿವರನ್ನು ನಡೆಸಿಕೊಳ್ಳುವ ಈ ರೀತಿಗೆ ಬಹಳಷ್ಟು ಟೀಕೆಗಳು ಕೇಳಿಬಂದವು. ಪೇಚಿಗೀಡಾದ ಮೋದಿ ಆಳ್ವಿಕೆಯು ಆ ನಂತರ ಆರ್‍ಎಸ್‍ಎಸ್ ಶಾಖೆಯಲ್ಲಿ ನಡೆಯುವ ರೀತಿಯಲ್ಲಿ ನಡೆದ ಅಂತಹ ನಡೆಯನ್ನು ಮುಂದುವರೆಸಲಿಲ್ಲ.
ಒಬ್ಬ ರಾಜಕೀಯ ನಾಯಕನ ಸಂವಹನದ ಶೈಲಿಯು ಆ ನಾಯಕ ಹೇಗೆ ಯೋಚಿಸುತ್ತಾನೆ ಹಾಗೂ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾಳೆ/ನೆ ಎಂಬುದನ್ನು ತೋರಿಸುತ್ತದೆ. ಮೋದಿಯ ಸಾರ್ವಜನಿಕ ಪ್ರದರ್ಶನಗಳನ್ನು ರೂಪಿಸುವಲ್ಲಿ, ಅವರನ್ನು ಸ್ಪಷ್ಟ ಚಿಂತನೆಯುಳ್ಳ ಹಾಗೂ ಗಟ್ಟಿಯಾದ ನಾಯಕತ್ವವುಳ್ಳ ವ್ಯಕ್ತಿ ಎಂದು ಬಿಂಬಿಸಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನ ಮಾಡಲಾಯಿತು. ಕೋವಿಡ್ 19ರ ಸಂದರ್ಭದಲ್ಲಿ ಜನರು ಈ ರೀತಿ ವರ್ತಿಸಬೇಕು, ಆ ರೀತಿ ವರ್ತಿಸಬೇಕು ಎಂದು ಹೇಳಿದ ಇತ್ತೀಚಿನ ಹಲವಾರು ಟಿವಿ ದರ್ಶನಗಳಲ್ಲಿ ಆ ಅಂಶ ಮತ್ತೇ ಸಾಬೀತಾಯಿತು. ಆದರೆ, ವಲಸೆ ಕಾರ್ಮಿಕರು ಯಾವುದೇ ಸೌಕರ್ಯವಿಲ್ಲದೇ, ಇದ್ದ ಕೆಲಸವನ್ನು ಕಳೆದುಕೊಂಡು, ಹೇಗಾದರೂ ಮಾಡಿ ಮನೆಂಬ ಸುರಕ್ಷತೆಯ ಕಡೆಗೆ ನೂರಾರು ಕಿಲೋಮೀಟರ್‍ಗಳಷ್ಟು ನಡೆದುಹೋಗುವ ಮತ್ತು ಇತರ ಸಂಕಷ್ಟಗಳಿಂದ ಸಾಬೀತಾದ ತನ್ನ ನಿರ್ಣಯಗಳ ಅಪಾಯಕಾರಿ ಪರಿಣಾಮಗಳು ಬೆಳಕಿಗೆ ಬಂದಾಗ, ಅವರದೇ ಯೋಜನೆಯಿಲ್ಲದೇ ಮಾಡಿದ ರಾಷ್ಟ್ರವ್ಯಾಪಿ ಲಾಕ್‍ಡೌನ್ ನಿರ್ಧಾರದಿಂದ ಆದ ಸಂಕಷ್ಟಗಳ ಬಗ್ಗೆ ಮೋದಿಯವರು ಒಂದು ಬಾರಿಯೂ ತುಟಿಬಿಚ್ಚಲಿಲ್ಲ. ಮೋದಿಯವರ ವ್ಯಕ್ತಿತ್ವಕ್ಕೆ ಸಹಾನುಭೂತಿಯ ನಾಯಕತ್ವವು ಹೊಂದುವುದಿಲ್ಲವೇನೋ.
ತನಗೆ ಮತ ನೀಡಿ ಅಧಿಕಾರಕ್ಕೆ ತಂದ ಮತದಾರನ ಬಗ್ಗೆಯೇ ಈ ರೀತಿಯ ನಡೆಯಾಗಿದ್ದರೆ, ಅವರಿಗೆ ಮತ ಹಾಕಲು ಸಾಧ್ಯವಿಲ್ಲದವರ ಪಾಡು ಏನಾಗಿರಬೇಡ – ಅವು ಭಾರತದ ಜೀವವೈವಿಧ್ಯತೆ ಹಾಗೂ ಪರಿಸರ. ಪರಿಸರದ ವಿಷಯಗಳಲ್ಲಿ ಮೋದಿಯವರ ಎರಡನೇ ಅವಧಿಯ ಮೊದಲ ವರ್ಷದಲ್ಲಿ ಅವರ ಕಾರ್ಯನಿರ್ವಹಣೆಯನ್ನು ಅವಲೋಕಿಸಿದರೆ ಸಿಗುವ ಉತ್ತರ ಅತ್ಯಂತ ಸರಳವಾಗಿದೆ: ಭಾರತದ ಪರಿಸರದ ಮತ್ತು ಮಾನವ ಹಕ್ಕುಗಳಿಗೆ ಈ ಆಡಳಿತವು ಅತ್ಯಂತ ಅನಾಹುತಕಾರಿಯಾಗಿದೆ. ಹಿಂದಿನ ಯಾವುದೇ ಸರಕಾರವನ್ನೂ ಬಿಡೋಣ; ಪ್ರಧಾನಿಯಾಗಿ ಅವರದೇ ಮೊದಲ ಅವಧಿಗೆ ಹೋಲಿಸದರೂ ಅದೇ ಉತ್ತರ ಸಿಗುತ್ತದೆ.
ಈ ಟೀಕೆ ಕಟುವಾದರೂ ಸರಿ ಏಕೆ ಎಂದು ತಿಳಿಯಬೇಕಾದರೆ, ಅವರು ಪ್ರಧಾನಿಯಾದ ನಂತರ ತೆಗೆದುಕೊಂಡ ಮೊದಲ ಬಹುಮುಖ್ಯ ಪಾಲಿಸಿ ನಿರ್ಣಯವನ್ನು ನೋಡೋಣ. ಅದು ಭಾರತದ ಪರಿಸರ, ಅರಣ್ಯ ಮತ್ತು ಜೀವವೈವಿಧ್ಯದ ಕಾನೂನುಗಳ ಪರಿಶೀಲನೆಯ ಸಮಗ್ರ ಪರಿಶೀಲನೆಯನ್ನು ಆದೇಶಿಸಿದ್ದು. ಆ ಜವಾಬ್ದಾರಿಯನ್ನು ಸಮಿತಿಯ ಅಧ್ಯಕ್ಷರಾದ ಟಿಎಸ್‍ಆರ್ ಸುಬ್ರಹ್ಮಣ್ಯನ್ ಅವರು ಒಪ್ಪಿಕೊಂಡು ಮೂರು ತಿಂಗಳಲ್ಲಿ ಕೆಲಸ ಮುಗಿಸಿದರು. ಹೂಡಿಕೆದಾರರಿಗೆ ಅನುಕೂಲವಾಗುವ ‘ಅತ್ಯಂತ ಸದುದ್ದೇಶದ ತತ್ವ’ದ ಆಧಾರದ ಮೇಲೆ ಅವರು ತಮ್ಮ ಶಿಫಾರಸ್ಸುಗಳನ್ನು ಮುಂದಿಟ್ಟರು. ಸರಳವಾಗಿ ಹೇಳಬೇಕೆಂದರೆ, ಅವರ ಶಿಫಾರಸುಗಳು ಹೀಗಿದ್ದವು: ಹೂಡಿಕೆದಾರರ ಮತ್ತು ಕೈಗಾರಿಕೋದ್ಯಮಿಗಳ ವ್ಯವಹಾರಗಳನ್ನು ಪರಿಸರ ನಿಯಂತ್ರಣ ಸಂಸ್ಥೆಗಳು ನಿಯಂತ್ರಿಸಬಾರದು, ಅದರ ಬದಲಿಗೆ ಅವರು ಸದುದ್ದೇಶದಿಂದ ಕೆಲಸ ಮಾಡುತ್ತಾರೆ ಎಂಬ ನಂಬಿಕೆಯನ್ನಿರಿಸಬೇಕು ಹಾಗೂ ಅವರು ತಪ್ಪು ಮಾಡಿದಲ್ಲಿ ಮಾತ್ರ ಅವರನ್ನು ಹಿಡಿಯಬೇಕು.
ಇದರರ್ಥ, ಯಾವುದೇ ನಿಯಂತ್ರಕ ವ್ಯವಸ್ಥೆ ಇಲ್ಲದೆ ಅಥವಾ ವಾಸ್ತುಶಾಸ್ತ್ರದ (ಆರ್ಕಿಟೆಕ್ಚರಲ್) ಮುನ್ನೋಟವೂ ಇಲ್ಲದೇ ಒಬ್ಬ ಸಿವಿಲ್ ಇಂಜಿನಿಯರ್‍ಗೆ ಎಲ್ಲವೂ ಸರಿಯೇ ಆಗುತ್ತೆ ಎಂದು ನಂಬಿ ಒಂದು ಬೃಹತ್ ಗಗನಚುಂಬಿ ಕಟ್ಟಡ ನಿರ್ಮಿಸುವುದಕ್ಕೆ ಅನುವು ಮಾಡಿಕೊಟ್ಟಂತೆ. ಈ ತತ್ವದ ಆಧಾರದ ಮೇಲೆ, ಪರಿಸರ, ಅರಣ್ಯ ಹಾಗೂ ಜೀವವೈವಿಧ್ಯದ ಕಾನೂನುಗಳಿಗೆ ಅನೇಕ ‘ಸುಧಾರಣೆ’ಗಳನ್ನು ಮಾಡಬೇಕು ಎಂದು ಶಿಫಾರಸು ಮಾಡಲಾಯಿತು, ಈ ಎಲ್ಲಾ ಸುಧಾರಣೆಗಳು ಉದ್ಯಮಿಗಳ ವ್ಯಾಪಾರದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡೇ ಮಾಡಿದ್ದವು ಎಂದು ಇನ್ನೊಮ್ಮೆ ಹೇಳಬೇಕಿಲ್ಲ.
ಪರಿಸರದ ಕಾನೂನುಗಳನ್ನು ದುರ್ಬಲಗೊಳಿಸುವ ಆ ವರದಿಗೆ ಬಂದ ಟೀಕೆಗಳ ಪರಿಣಾಮವಾಗಿ, ಆ ವರದಿಯನ್ನು ರದ್ದುಗೊಳಿಸಲಾಯಿತು. ಆದರೆ, ಕಾನೂನುಗಳನ್ನು ದುರ್ಬಲಗೊಳಿಸುವ ಕಾರ್ಯ ನಿರಂತರವಾಗಿ ಹಾಗೂ ವ್ಯವಸ್ಥಿತವಾಗಿ ಮುಂದುವರೆಯಿತು. ಅದನ್ನು ಪರಿಸರ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯದ ಕಾರ್ಯನಿರ್ವಾಹಕ ಅಧಿಕಾರಗಳನ್ನು ಬಳಸಿಕೊಂಡು ಮಾಡಲಾಯಿತು. ಹಾಗೂ ಪರಿಸರದ ನಿಯಮಾವಳಿ ಮತ್ತು ಮಾನವ ಹಕ್ಕುಗಳ ಮಾನದಂಡಗಳನ್ನು ಬದಿಗಿಟ್ಟು ವ್ಯಾಪಾರದ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ತರುವ ಸುತ್ತೋಲೆ ಮತ್ತು ಅಧಿಸೂಚನೆಗಳ ಮೂಲಕ ಮಾಡಲಾಯಿತು. ಪರಿಸರದ ಕಾನೂನು ಮತ್ತು ನೀತಿಗಳನ್ನು ದುರ್ಬಲಗೊಳಿಸುವ ಈ ಹುನ್ನಾರದ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನೆಗಳೇ ಕೇಳಿಬರಲಿಲ್ಲ. ಪರಿಸರದ ರಕ್ಷಣೆ ಮತ್ತು ಮಾನವ ಹಕ್ಕುಗಳಿಗೆ ಇದು ನೇರಾನೇರವಾದ ಮತ್ತು ಹಿಂದಿನ ಸ್ಥಿತಿಗೆ ಮರಳಲಾಗದಂತಹ ಪೆಟ್ಟು ನೀಡಿತು.
ಪರಿಸರದ ಕಾನೂನುಗಳನ್ನು ದುರ್ಬಲಗೊಳಿಸುವ ಕೆಲಸ ಆಗಿದ್ದು ಇದೇ ಮೊದಲ ಬಾರಿಯೇನೂ ಅಲ್ಲ. ಡಾ.ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಪರಿಸರದ ಮೇಲಿನ ಪರಿಣಾಮಗಳ ಮೌಲ್ಯಮಾಪನೆ ಅಧಿಸೂಚನೆ 2006 (Environment Impact Assessment Notification 2006) ಅನ್ನು ಪರಿಚಯಿಸುವುದರ ಮೂಲಕ ಪರಿಸರದ ನಿಯಂತ್ರಣವನ್ನು ದುರ್ಬಲಗೊಳಿಸುವುದು ಶುರುವಾಗಿತ್ತು. ಇದು, ಪರಿಸರದ ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಜನರ ಪಾಲ್ಗೊಳ್ಳುವಿಕೆಯ ಹಕ್ಕಿಗೆ ದೊಡ್ಡ ಪೆಟ್ಟು ನೀಡಿತು. ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿತರಾದ ಲಕ್ಷಾಂತರ ಜನರ ಮೇಲೆ ಹಾಗೂ ಬಡ ನಗರವಾಸಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಪರಿಸರ ಮತ್ತು ಹವಾಮಾನ ವೈಪರೀತ್ಯ ಇಲಾಖೆಗಳು ಮಾಡಿದ ಈ ಬದಲಾವಣೆಗಳಲ್ಲಿ/ನಿರ್ಣಯಗಳಲ್ಲಿ ಯಾವುದೇ ರೀತಿಯ ತರ್ಕ, ಸಹಾನುಭೂತಿ ಹಾಗೂ ವಿಜ್ಞಾನ ಕಾಣುತ್ತಿಲ್ಲ ಎಂದು ಯುಪಿಎ-2ರಲ್ಲಿ ಪರಿಸರ ಸಚಿವರಾದ ಜೈರಾಮ್ ರಮೇಶ್ ಖುದ್ದಾಗಿ ಹೇಳಿದರು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಇಲಾಖೆಯ ನಿರ್ಣಯಗಳು ಭ್ರಷ್ಟತೆ ಮತ್ತು ಮೋಸದಿಂದ ಕೂಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದರು.
ಮೋದಿ ಆಳ್ವಿಕೆಯ ವ್ಯತ್ಯಾಸವೇನೆಂದರೆ ಜನರ ಬದುಕಿನಲ್ಲಿ ಅನಾಹುತ ಮಾಡಿದ, ಅರಣ್ಯಗಳ ನಾಶಕ್ಕೆ ಕಾರಣವಾದ ಪರಿಸರದ ನಿರ್ಣಯಗಳ ಬಗ್ಗೆ ಕ್ಷಮಾಪಣೆ ಬಿಡಿ, ಅವುಗಳನ್ನು ವಿವರಿಸುವ ಯಾವ ಪ್ರಯತ್ನವನ್ನು ಮಾಡುವುದಿಲ್ಲ. ಮೋದಿಯವರಂತೆ, ಪರಿಸರ ಸಚಿವರಾದ ಪ್ರಕಾಶ್ ಜಾವಡೇಕರ್ ಆಗಿರಲಿ, ಸಾರಿಗೆ ಸಚಿವ ನಿತಿನ್ ಗಡ್ಕರಿ ಆಗಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಲಿ ಅಥವಾ ಮೋದಿ ಕ್ಯಾಬಿನೆಟ್‍ನ ಬೇರೆ ಯಾವ ಸಚಿವರೂ ತಮ್ಮ ಕೃತ್ಯಗಳನ್ನು ಸಮರ್ಥಿಸುವ ಗೋಜಿಗೆ ಹೋಗುವುದಿಲ್ಲ. ಅವರು ತಮ್ಮ ಉದ್ದೇಶವನ್ನು ವ್ಯಕ್ತಪಡಿಸಿ ಅದರ ನಂತರ ತಮ್ಮ ಮಾತುಗಾರಿಕೆಯೇ ವಿವರಿಸುವುದು ಎಂಬ ಧೋರಣೆ ಪ್ರದರ್ಶಿಸುತ್ತಾರೆ. ಗಣರಾಜ್ಯ ಪ್ರಜಾಪ್ರಭುತ್ವದಲ್ಲಿ ಇಂತಹ ನೀತಿಬೋಧಕ ಆಡಳಿತಕ್ಕೆ ಯಾವುದೇ ಸ್ಥಾನ ಇರಬಾರದು.
ದೇಶವು ಲಾಕ್‍ಡೌನ್‍ನಲ್ಲಿದ್ದಾಗ, ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ವರ್ಚುವಲ್ (ಅಂತರ್ಜಾಲದ) ಸಭೆಗಳ ಆಧಾರದ ಮೇಲೆ ಹಲವಾರು ಅನುಮತಿಗಳನ್ನು ನೀಡಿದ್ದಾರೆ. ಅದರಲ್ಲಿ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದ ಮೂಲಕ ಹಾದುಹೋಗುವ ರೈಲು ಮತ್ತು ರಸ್ತೆ ಯೋಜನೆಗಳಿಗೆ ಅನುಮತಿ, ಸರಸ್ವತಿ ನದಿಯುದ್ದಕ್ಕೆ ಬೃಹತ್ ಹೈಡ್ರೋ ಯೋಜನೆಯ ನಿರ್ಮಾಣದ ಹಂತಕ್ಕೆ ಚಾಲನೆ ನೀಡುವುದು, ಅರುಣಾಚಲ ಪ್ರದೇಶದಲ್ಲಿಯ ಹಿಮಾಲಯದ ಅತ್ಯುತ್ತಮ ಅರಣ್ಯಗಳನ್ನು ಧ್ವಂಸಗೊಳಿಸುವ ಯೋಜನೆಗೆ ಮುಂಚಾಲನೆ ನೀಡುವುದು, ಭಾರತದುದ್ದಕ್ಕೂ ಸಾವಿರಾರು ಹಳ್ಳಿ ಮತ್ತು ಅರಣ್ಯಗಳ ಮೂಲಕ ಹಾದುಹೋಗುವ ರಸ್ತೆ ಮತ್ತು ರೈಲ್ವೇ ವಿಸ್ತರೀಕರಣದ ಯೋಜನೆಗಳನ್ನು ಹೆಚ್ಚಿಸುವುದು ಹಾಗೂ ಇಂತಹ ಯೋಜನೆಗಳಿಗೆ ಮಂಜೂರಾತಿಯನ್ನು ಸಲೀಸುಗೊಳಿಸುವುದು ಒಳಗೊಂಡಿವೆ.
ಈಗ ಸಚಿವ ಜಾವಡೇಕರ ಅವರು ಪರಿಸರದ ಮೇಲಾಗುವ ಪರಿಣಾಮಗಳ ಮೌಲ್ಯಮಾಪನೆಯ ಕುರಿತು ಅಧಿಸೂಚನೆಗಳನ್ನು ಸಮಗ್ರವಾಗಿ ತಿದ್ದುಪಡಿ ತರುವ ಕುರಿತು ಮಾತನಾಡುತ್ತಿದ್ದಾರೆ. ಭಾರತದ ಸ್ವರೂಪ, ನೈಸರ್ಗಿಕ ಸಂಪನ್ಮೂಲ ಮತ್ತು ಜನತೆಯ ಹಿತದೃಷ್ಟಿಯನ್ನು ಬದಿಗಿಟ್ಟು ಕಾರ್ಪೋರೇಟ್ ಹಿತದೃಷ್ಟಿಗಾಗಿಯೇ ಈ ಕ್ರಮಗಳು ಎಂಂಬುದು ಸ್ಪಷ್ಟ.
ಎರಡು ವರ್ಷಗಳ ಹಿಂದೆ, ಡಾ.ಹರ್ಷವರ್ಧನ್ ಅವರು ಪರಿಸರ ಸಚಿವರಾಗಿದ್ದಾಗ, ಭಾರತದ ಅರಣ್ಯ ನೀತಿಗಳನ್ನು ತಿದ್ದುಪಡಿ (ರೀಡ್ರಾಫ್ಟ್) ಮಾಡುವುದು ಶುರುವಾಯಿತು. ಈ ಕರಡಿನಲ್ಲಿ ಆದಿವಾಸಿಗಳ ಹಕ್ಕನ್ನು ಖಾತರಿ ಮಾಡುವ ಐತಿಹಾಸಿಕ ಅರಣ್ಯ ಹಕ್ಕು ಕಾಯಿದೆಯನ್ನು ಅನುಷ್ಠಾನಗೊಳಿಸುವ ಯಾವ ಉದ್ದೇಶವೂ ಕಾಣಲಿಲ್ಲ ಅಥವಾ ಜೀವಸಂಪನ್ಮೂಲಗಳಿಗೆ ಜನರಿಗಿರುವ ಮೂಲಭೂತ ಹಕ್ಕನ್ನು ರಕ್ಷಿಸುವ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಇರುವ ಜೀವವೈವಿಧ್ಯತೆಯ ಕಾಯಿದೆಯನ್ನು ಅನುಷ್ಠಾನಗೊಳಿಸುವ ಉದ್ದೇಶವೂ ಇರಲಿಲ್ಲ. ಈ ನೀತಿಯು ಮಾಡಿದ್ದೇನೆಂದರೆ, ಅರಣ್ಯಗಳ ಖಾಸಗೀಕರಣಕ್ಕೆ ಅನುವು ಮಾಡಿಕೊಡುವುದು ಹಾಗೂ ಅವುಗಳ ಮೇಲೆ ಕಾರ್ಪೋರೇಟ್ ಹಿಡಿತ ಸಾಧಿಸುವಂತೆ ಮಾಡುವುದು. ಈ ಕ್ರಮಗಳನ್ನು ನೋಡಿ ಬಹುಶಃ ಈಸ್ಟ್ ಇಂಡಿಯಾ ಕಂಪನಿಯೂ ನಾಚಿಕೆ ಪಟ್ಟುಕೊಳ್ಳುತ್ತಿತ್ತೇನೋ.
ಅದೃಷ್ಟವಶಾತ್, ಬಾರತೀಯ ಸಂಸತ್ತು ರಕ್ಷಣೆಗೆ ಬಂತು. ಭಾರತದಲ್ಲಿಯ ಪರಿಸರ ನ್ಯಾಯಕ್ಕೆ ಇರುವ ಒಕ್ಕೂಟದ ಪ್ರಾತಿನಿಧ್ಯದ ಆಧಾರದ ಮೇಲೆ ಪರಿಸರ ಮತ್ತು ಅರಣ್ಯದ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯು ಸಚಿವಾಲಯ ಸೂಚಿಸಿದ ಬದಲಾವಣೆಗಳನ್ನು ಪರಿಶೀಲಿಸಿ, ಈ ತಿದ್ದುಪಡಿಗಳು ಆದಿವಾಸಿಗಳ ಹಕ್ಕುಗಳ ವಿರುದ್ಧ ಹಾಗೂ ಇತರ ಅರಣ್ಯವಾಸಿಗಳ ಹಕ್ಕುಗಳ ವಿರುದ್ಧ ಇವೆ ಹಾಗೂ ಇದರಿಂದ ಅರಣ್ಯ ನಾಶವಾಗುವ ಸಾಧ್ಯತೆ ಇದೆ ಎಂದು ತೀರ್ಮಾನಿಸಿ, ಪರಿಸರ ಸಚಿವಾಲಯಕ್ಕೆ ವಾಪಸ್ ಕಳುಹಿಸಿತು. ಅದು ಮತ್ತೊಮ್ಮೆ ಕಾಣಿಸಿಕೊಂಡಿಲ್ಲ.
ಈಗ ಮೋದಿ ಅವರು ವಿಧಿಸಿದ ಲಾಕ್‍ಡೌನ್ ಕಾರಣದಿಂದಾಗ ದೇಶದ ಆರ್ಥಿಕತೆ ಹದಗೆಟ್ಟಿದೆ. ಆದಾಯವನ್ನು ಹೆಚ್ಚಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಪರಿಸರ ನೀತಿಗಳನ್ನು ಮತ್ತು ಕಾರ್ಮಿಕ ನೀತಿಗಳನ್ನು ಸಡಿಲಗೊಳಿಸಬೇಕು ಎಂಬ ಮಾತುಗಳು ಕಾರ್ಪೋರೇಟ್ ಲಾಬಿಗಳಲ್ಲಿ ಕೇಳಿಬರುತ್ತಿವೆ.
ನಮ್ಮೆದರಿಗೇ ವಿಶಾಖಪಟ್ಟಣಂನಲ್ಲಿ ಆದ ಅಪಘಾತದ ನೆರಳಿನಲ್ಲೇ, ಆ ಅಪಘಾತಕ್ಕೆ ದುರ್ಬಲ ನಿಯಂತ್ರಣಗಳೇ ನೇರ ಕಾರಣ ಎಂಬುದು ಸ್ಪಷ್ಟವಿದ್ದಾಗಲೇ ಇನ್ನಷ್ಟು ದುರ್ಬಲಗೊಳಿಸುವ ವಿಚಾರ ನಡೆಯುತ್ತಿದೆ. ‘ಸದುದ್ದೇಶದ ತತ್ವ’ ಕಾರ್ಯನಿರ್ವಹಿಸುತ್ತಿರುವಾಗ ಆದ ಈ ಘಟನೆಯು ಮೋದಿಯವರ ನಿರ್ಧಾರದ ಹಿಂದೆ ತರ್ಕ ಇರುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತುಪಡಿಸಿದೆ. ಎಷ್ಟೇ ಆದರೂ, ‘ಏಳು ದಶಕಗಳ ಕಾಲ ಅಭಿವೃದ್ಧಿ ಕಾಣದ ಭಾರತವನ್ನು ಮುಂದೊಯ್ಯುವ ಹೊಣೆಗಾರಿಕೆ’ ಹೊತ್ತಿರುವುದು ಮೋದಿಯವರು ತಾನೇ?
ಅವರ ರಾಜಕೀಯ ನಿಲುವು ಏನೇ ಆಗಿರಲಿ, ಭಾರತದ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಏನೇ ಆದರೂ ಯಾವುದೇ ಪರಿಸ್ಥಿತಿಯಲ್ಲೂ ಕೈಗಾರಿಕೆ ಮತ್ತು ಮೂಲಸೌಕರ್ಯಗಳ ವೃದ್ಧಿಗೆ ಒತ್ತು ನೀಡುತ್ತಾರೆ ಎನ್ನುವುದು ಸ್ಪಷ್ಟವಾಗುತ್ತಿದೆ. ಇದರರ್ಥ ಹಿಂದೆಂದೂ ಕಾಣದಂತಹ ಗತಿಯಲ್ಲಿ ಪರಿಸರದ ವಿನಾಶ ಮತ್ತು ಸಾಮಾಜಿಕ ಆಸ್ಫೋಟ.
ಕೋವಿಡ್‍ನಿಂದಾದ ಆರ್ಥಿಕ ಹಿಂಜರಿತದಿಂದ ಭಾರತವನ್ನು ಮೇಲೆತ್ತಲು ಬೃಹತ್ ಯೋಜನೆಗಳನ್ನು ಮುಲಾಜಿಲ್ಲದೇ ಶುರು ಮಾಡುವುದು ಸ್ಪಷ್ಟ. ಇವೆಲ್ಲವುಗಳನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತವನ್ನು ‘ರಿಬೂಟ್’ ಮಾಡಲು ಅವಶ್ಯಕವಾದ ಪ್ಯಾಕೇಜ್ ಎಂದೂ ಬಿಂಬಿಸಬಹುದು.
ಕೈಗಾರಿಕೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಈ ಅಮಾನವೀಯವಾದ ಮತ್ತು ಪರಿಸರಕ್ಕೆ ವಿನಾಶಕಾರಿಯಾ ನಡೆಯನ್ನು ವಿರೋಧಿಸುವುದು, ತಡೆ ಒಡ್ಡುವುದು ನಮ್ಮ ಸಂವಿಧಾನಿಕ ಕರ್ತವ್ಯವಾಗಿದೆ, ಈ ಕರ್ತವ್ಯವನ್ನು ನಾವು ನಿಭಾಯಿಸಲೇಬೇಕಿದೆ. ನಮ್ಮ ಜೀವನದ ಗುಣಮಟ್ಟ, ನಮ್ಮ ಹೊಟ್ಟೆಪಾಡು ಹಾಗೂ ನಮ್ಮ ಮುಂದಿನ ಪೀಳಿಗೆಗಳ ಜೀವಗಳೂ ಭಾರತದ ‘ಬೊಲ್ಸೊನಾರೊ’ ನ ಯೋಜನೆಗಳಿಗೆ ಒಡ್ಡುವ ಪ್ರತಿರೋಧದ ಮೇಲೆ ನಿಂತಿದೆ.
ಲಿಯೋ ಎಫ್ ಸಲ್ಡಾನಾ
ಅನುವಾದ: ರಾಜಶೇಖರ್ ಅಕ್ಕಿ
(ಲಿಯೋ ಎಫ್ ಸಲ್ಡಾನಾ ಅವರು ಪರಿಸರ ಬೆಂಬಲ ಗುಂಪಿನ ಮೂಲಕ ದಶಕಗಳ ಕಾಲ ಸಕ್ರಿಯವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಪಾರಿಸರಿಕ ಮತ್ತು ಸಾಮಾಜಿಕ ನ್ಯಾಯ, ಅದರಲ್ಲೂ ಶೋಷಿತ ಸಮುದಾಯಗಳ ಹಕ್ಕನ್ನು ಎತ್ತಿಹಿಡಿಯುವುದಕ್ಕೆ ಅವರ ಆದ್ಯತೆ.)


