ಮೋದಿ ಸರಕಾರದ ಭಾರತದ ಎದೆ ಸೀಳುವ ಕ್ರಮಗಳಾದ CAA, NRC, NPR ಕುರಿತು ಸಿಪಿಐ(ಎಂ) ಸದ್ಯದಲ್ಲೇ ಪ್ರಕಟಿಸಲಿರುವ ಪುಸ್ತಿಕೆಯ ಸಾರಾಂಶ ಇಲ್ಲಿದೆ. ಇವುಗಳ ವಿರುದ್ಧ ತೀವ್ರ ಪ್ರತಿಭಟನೆಯ ನಂತರ ಈ ಕುರಿತು ಮೋದಿ ಸರಕಾರ ಹರಿಯಬಿಟ್ಟಿರುವ ಹತ್ತು ಮಹಾ ಸುಳ್ಳುಗಳನ್ನು ಬಯಲು ಮಾಡಿ ಸತ್ಯ ಸಂಗತಿಯನ್ನು ಈ ಪುಸ್ತಿಕೆಯಲ್ಲಿ ವಿವರಿಸಲಾಗಿದೆ. ಇಲ್ಲಿ ಹತ್ತು ಮಹಾ ಸುಳ್ಳುಗಳು ಮತ್ತು ಚುಟುಕಾದ ಉತ್ತರವಿದೆ.
ಮೋದಿ ಸರಕಾರವು ಭಾರತದ ಎದೆಯನ್ನೇ ಸೀಳಲು ಇರಿದಿರುವ ತ್ರಿಶೂಲದ ಮೂರು ಅಲಗುಗಳೆಂದರೆ : ಪೌರತ್ವ ತಿದ್ದುಪಡಿ ಕಾಯಿದೆ (CAA), ನಾಗರಿಕರ ರಾಷ್ಟ್ರೀಯ ರಿಜಿಸ್ಟರ್ (NRC) ಮತ್ತು ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ (NPR ). ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ (ಎನ್.ಪಿ.ಆರ್) ನ್ನು ಸಮಕಾಲೀನಗೊಳಿಸಲು ತಕ್ಷಣ ತಯಾರಿ ನಡೆಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ಈಗ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ವ್ಯಕ್ತವಾಗಿರುವುದರಿಂದ ಮೊದಿ-ಶಾ ಜೋಡಿ ತಮ್ಮ ಸುಳ್ಳಿನ ಸಾಮೂಹಿಕ ಉತ್ಪಾದನೆಯ ಫ್ಯಾಕ್ಟರಿಗಳನ್ನು ಕೆಲಸಕ್ಕೆ ಹಚ್ಚಿದ್ದಾರೆ. ಹಿಟ್ಲರನ ಜರ್ಮನಿಯಲ್ಲಿ ನಾಜೀ ಪ್ರಚಾರದ ನೀತಿಯೊಂದನ್ನು ಇಲ್ಲಿ ನೆನಪಿಸಿಕೊಳ್ಳಬಹುದು : “ಒಂದು ಸುಳ್ಳನ್ನು ಸಾವಿರ ಬಾರಿ ಹೇಳುತ್ತಾ ಹೋದರೆ ಅದು ಸತ್ಯವಾಗುತ್ತದೆ”. ಅದೇ ಮೋದಿ ಸರಕಾರದ ನೀತಿ ಸಹ ಆಗಿದೆ. ಆದ್ದರಿಂದ ಈ ಮೋದಿ ಸರಕಾರದ ಪ್ರತಿಯೊಂದು ಸುಳ್ಳನ್ನು ಬಯಲುಪಡಿಸಬೇಕಾಗಿದೆ.
ಅವರ ಸುಳ್ಳಿನ ಪಟ್ಟಿ ದಿನೇ ಹೆಚ್ಚುತ್ತಲೇ ಇದೆ. ಇಲ್ಲಿಯವರೆಗಿನ ಹತ್ತು ಮಹಾ ಸುಳ್ಳುಗಳು ಹೀಗಿವೆ :
ಮಹಾಸುಳ್ಳು 1 : ಸಿಎಎ ಕಾಯಿದೆಯಲ್ಲಿ ತಾರತಮ್ಯವಿಲ್ಲ. ಕಿರುಕುಳಕ್ಕೊಳಗಾದವರ ನೆರವಿಗೆ ಧಾವಿಸುವುದು ಭಾರತದ ಸಂಸ್ಕೃತಿ. ಯಾವ ಭಾರತೀಯ ನಾಗರಿಕನಿಗೂ ಇದರಿಂದ ತೊಂದರೆಯಾಗುವುದಿಲ್ಲ.
ಸತ್ಯ ಸಂಗತಿ : ಭಾರತೀಯ ಪೌರತ್ವ ಕಾಯಿದೆ 1955ರ ಪ್ರಕಾರ ಭಾರತೀಯ ನಾಗರಿಕನಾಗುವ ಐದು ವಿಧಾನಗಳಲ್ಲಿ (ಹುಟ್ಟಿನಿಂದ, ತಂದೆ-ತಾಯಿ ನಾಗರಿಕತ್ವದಿಂದ, ನೆಲೆಸುವಿಕೆಯಿಂದ, ರಿಜಿಸ್ಟರ್ ಮಾಡುವ ಮೂಲಕ, ಪ್ರದೇಶದ ಸೇರಿಸುವಿಕೆಯಿಂದ) ಮತಧರ್ಮದ ಅಥವಾ ಇನ್ಯಾವುದೇ ಆಧಾರದ ಮೇಲೆ ಯಾವುದೇ ತಾರತಮ್ಯವಿರಲಿಲ್ಲ. ಇದು ಪೌರತ್ವಕ್ಕೆ ಮತಧರ್ಮ ಸೇರಿದಂತೆ ಯಾವುದೇ ನೆಲೆಯಲ್ಲಿ ತಾರತಮ್ಯ ಮಾಡದಿರುವ ನಮ್ಮ ಸಂವಿಧಾನದ ಆಶಯಕ್ಕೆ ಅನುಗುಣವಾಗಿದೆ. ಸಿಎಎ ಮೂರು ವಿಧದ ತಾರತಮ್ಯವನ್ನು ಸೇರಿಸಿ ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿದೆ. ನೆರೆಯ ದೇಶಗಳಲ್ಲಿ ಮೂರು ದೇಶಗಳ – ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ – ವಲಸೆಗಾರರಿಗೆ ಬೇರೆ ನಿಯಮಗಳನ್ನು ರೂಪಿಸಿದೆ. ಈ ಮೂರು ದೇಶಗಳ ವಲಸೆಗಾರರಲ್ಲೂ ಮುಸ್ಲಿಮರನ್ನು ಹೊರಗಿಡಲಾಗಿದೆ. ಈ ಮೂರು ದೇಶಗಳ ಮುಸ್ಲಿಮೇತರ ವಲಸೆಗಾರರಿಗೆ ಪೌರತ್ವಕ್ಕೆ ಅರ್ಹತೆಯ ಅವಧಿಯನ್ನು ಇತರರಿಗೆ ಇರುವ 11 ವರ್ಷಗಳಿಂದ 5 ವರ್ಷಕ್ಕೆ ಕಡಿತಗೊಳಿಸಲಾಗಿದೆ.
ಕಿರುಕುಳಕ್ಕೊಳಗಾದವರ ಮತ್ತು ನಿರಾಶ್ರಿತರ ನೆರವಿಗೆ ಧಾವಿಸುವುದು ಸರಿಯಾದ್ದೇ. ಆದರೆ ಅಲ್ಲೂ ಮತಧರ್ಮ, ದೇಶ, ಭಾಷೆಗಳ ಆಧಾರದಲ್ಲಿ ತಾರತಮ್ಯ ತೋರಲಾಗಿದೆ. ಶ್ರೀಲಂಕಾದಲ್ಲಿ ಧಾರ್ಮಿಕ, ಭಾಷೆ ಎರಡೂ ನೆಲೆಗಳಲ್ಲಿ ತಾರತಮ್ಯ ಕಿರುಕುಳ ತಾಳಲಾರದೆ ಭಾರತದಲ್ಲಿ ದಶಕಗಳಿಂದ ನೆಲೆಸಿರುವ ಹತ್ತಾರು ಲಕ್ಷ ತಮಿಳರನ್ನು ಹೊರಗಿಡಲಾಗಿದೆ. ಪಾಕಿಸ್ತಾನದಲ್ಲಿ ಧಾರ್ಮಿಕ ತಾರತಮ್ಯಕ್ಕೊಳಗಾಗಿರುವ ಶಿಯಾ, ಅಹಮದೀಯ ಮುಂತಾದ ಅಲ್ಪಸಂಖ್ಯಾತರನ್ನೂ, ಮ್ಯಾನ್ಮಾರಿನ ರೋಹಿಂಗ್ಯ ಮುಸ್ಲಿಮರ ನೆರವಿಗೆ ಧಾವಿಸದಿರುವುದು ಭಾರತೀಯ ಸಂಸೃತಿಯ ಘನತೆ ಮತ್ತು ಸಂವಿಧಾನದ ಆಶಯ ಎರಡಕ್ಕೂ ತಕ್ಕುದಲ್ಲ.
ಮಹಾಸುಳ್ಳು 2 : ವಲಸಿಗ ಸಮುದಾಯಗಳನ್ನು ಹಿಂದೆ ಬೆಂಬಲಿಸಿದ ಕಾಂಗ್ರೆಸ್ ಮತ್ತು ಸಿಪಿಐ(ಎಂ) (20ನೇ ಮಹಾಧಿವೇಶನದ ನಿರ್ಣಯ ಮತ್ತು ಆಗಿನ ಪ್ರಧಾನ ಕಾರ್ಯದರ್ಶಿಯ ಪತ್ರದಲ್ಲಿ ದಾಖಲಿಸಿದಂತೆ) ಪಕ್ಷಗಳು ಈಗ ಮತಬ್ಯಾಂಕ್ ರಾಜಕೀಯದಿಂದಾಗಿ ಈ ತಿದ್ದುಪಡಿಯನ್ನು ವಿರೋಧಿಸುತ್ತಿವೆ.
ಸತ್ಯ ಸಂಗತಿ : ಕಿರುಕುಳಕ್ಕೊಳಗಾದವರಿಗೆ ನಿರಾಶ್ರಿತರಾದವರಿಗೆ ಆಶ್ರಯ ಕೊಡಬೇಕೆಂಬುದು ಯಾವತ್ತೂ ಕಮ್ಯುನಿಸ್ಟ್, ಎಡ ಚಳುವಳಿಗಳ, ಸಿಪಿಐ(ಎಂ) ಪಕ್ಷದ ನಿಲುವಾಗಿತ್ತು. 1947ರ ದೇಶ ವಿಭಜನೆ ಮತ್ತು 1971ರ ಪಾಕಿಸ್ತಾನಿ ಮಿಲಿಟರಿ ಸರಕಾರದ ದೌರ್ಜನ್ಯಗಳ ಬಲಿಪಶುಗಳಾದ ಈಗಿನ ಬಾಂಗಾದೇಶದ ನಿರಾಶ್ರಿತರಿಗೆ ನೆಲೆ ಒದಗಿಸಲು ಪೌರತ್ವ ಕೊಡಲು ಸಿಪಿಐ(ಎಂ) ಹೋರಾಡಿತ್ತು. ಮಾತ್ರವಲ್ಲ ನಿರಾಶ್ರಿತರಾಗಿ ಬಂದು ನೆಲೆಸಿದ ನಾಮಶೂದ್ರರಿಗೆ ದಲಿತ ಸ್ಥಾನಮಾನವನ್ನೂ ಪಶ್ಚಿಮ ಬಂಗಾಳದಲ್ಲಿ ಒದಗಿಸಿತ್ತು. ಅವರು ನೆಲೆಸಿದ ಇತರ ರಾಜ್ಯಗಳಲ್ಲೂ ಈ ಸ್ಥಾನಮಾನ ಸಿಗುವಂತೆ ಹೋರಾಟ ನಡೆಸಿತ್ತು. ಆದರೆ ಯಾವತ್ತೂ ಮತಧರ್ಮದ ಅಥವಾ ಇನ್ಯಾವುದೇ ಆಧಾರದ ಮೇಲೆ ತಾರತಮ್ಯದ ನೀತಿಯನ್ನು ಬೆಂಬಲಿಸಿರಲಿಲ್ಲ. ಸಿಎಬಿ ಗೆ ಸಿಪಿಐ(ಎಂ) ಮಂಡಿಸಿದ ತಿದ್ದುಪಡಿಯಲ್ಲಿ ನಿರಾಶ್ರಿತರಿಗೆ ವಲಸಿಗರಿಗೆ ಆಶ್ರಯ ಕೊಡುವಲ್ಲಿ ತಾರತಮ್ಯವನ್ನು ತೆಗೆದು ಹಾಕುವ ತಿದ್ದುಪಡಿಗಳನ್ನು ಮಂಡಿಸಿತ್ತು. ಈಗ ಮೊಸಳೆ ಕಣ್ಣೀರು ಹಾಕುವ ಆರೆಸ್ಸೆಸ್ ಆಗ ಬಂಗಾಳದ ನಿರಾಶ್ತಿತರ ಬಗ್ಗೆ ಮೌನವಾಗಿತ್ತು. ಬಿಜೆಪಿ ಆಡಳಿತದ ಯು.ಪಿ, ಉತ್ತರಾಖಂಡ, ಮಧ್ಯಪ್ರದೇಶದ ಬಿಜೆಪಿ ಸರಕಾರಗಳು ನಾಮಶೂದ್ರರಿಗೆ ದಲಿತ ಸ್ಥಾನಮಾನ ಕೊಡುವುದಕ್ಕೆ ನಿರಾಕರಿಸಿದ್ದವು.
ಮಹಾಸುಳ್ಳು 3 : ಸಿಎಎ (ಪೌರತ್ವ ತಿದ್ದುಪಡಿ ಕಾಯಿದೆ) ಗೂ ಎನ್.ಆರ್.ಸಿ.(ನಾಗರಿಕರ ರಾಷ್ಟ್ರೀಯ ರಿಜಿಸ್ಟರ್)ಗೂ ಯಾವುದೇ ಸಂಬಂಧವಿಲ್ಲ. ಅವುಗಳು ಪ್ರತ್ಯೇಕವಾದುವುಗಳು. ವಿರೋಧ ಪಕ್ಷಗಳು ಇವೆರಡರ ನಡುವೆ ತಪ್ಪಾಗಿ ಸಂಬಂಧ ಕಲ್ಪಿಸುತ್ತಿವೆ.
ಸತ್ಯ ಸಂಗತಿ : ಸಿಎಎ ಗೂ ಎನ್.ಆರ್.ಸಿ. ಗೂ ಸಂಬಂಧ ಕಲ್ಪಿಸಿರುವುದು ಗೃಹಮಂತ್ರಿ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು, ವಿರೋಧ ಪಕ್ಷಗಳಲ್ಲ. ಈ ವರ್ಷವೇ ಏಪ್ರಿಲ್ ನಲ್ಲಿ ಬಂಗಾಳದಲ್ಲಿ ಮತ್ತು ಡಿಸೆಂಬರ್ 9 ರಂದು ಪಾರ್ಲಿಮೆಂಟಿನಲ್ಲಿ ಮಾಡಿದ ಹೇಳಿಕೆಗಳಲ್ಲಿ ಅಮಿತ್ ಶಾ ಮತ್ತು ಡಿಸೆಂಬರ್ 19 ರಂದು ಜೆ ಪಿ ನಡ್ಡಾ ಹೇಳಿಕೆಗಳಿಂದ ಬಿಜೆಪಿಯ ಈ ಹುನ್ನಾರ ಸ್ಪಷ್ಟ. ಸಿಎಎ ಮುಸ್ಲಿಮೇತರ ‘ನಿರಾಶ್ರಿತ’ರಿಗೆ ನಾಗರಿಕತ್ವ ಕೊಡುತ್ತದೆ. ಎನ್. ಆರ್.ಸಿ. “ನುಸುಳುಕೋರರ”ನ್ನು ಗುರುತಿಸುತ್ತದೆ. ಸಿಎಎ ನಲ್ಲಿ ಹೊರಗಿಟ್ಟ ಮುಸ್ಲಿಮರನ್ನು “ನುಸುಳುಕೋರರ”ನ್ನಾಗಿ ಮಾಡಿ ಹೊರಗಟ್ಟುವುದು ಬಿಜೆಪಿಯ ಹುನ್ನಾರ
ಮಹಾಸುಳ್ಳು 4 : ಡಿಸೆಂಬರ್ 22ರ ದೆಹಲಿ ರ‍್ಯಾಲಿಯಲ್ಲಿ “ತಮ್ಮ ಸರಕಾರ 2014ರಲ್ಲಿ ನನ್ನ ಸರಕಾರಕ್ಕೆ ಅಧಿಕಾರಕ್ಕೆ ಬಂದಾಗಿನಿಂದ ಎನ್.ಆರ್.ಸಿ ಬಗ್ಗೆ ಎಲ್ಲೂ ಯಾವುದೇ ಚರ್ಚೆ ನಡೆದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸತ್ಯ ಸಂಗತಿ : ಜೂನ್ 20, 2019 ರ ಸದನಗಳ ಜಂಟಿ ಅಧಿವೇಶನಕ್ಕೆ ಅಧ್ಯಕ್ಷರು ಮಾಡಿದ ಭಾಷಣದಲ್ಲಿ, ನವೆಂಬರ್ 21, 2019ರಂದು ಅಮಿತ್ ಶಾ ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಎನ್.ಆರ್.ಸಿ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಮಾತ್ರವಲ್ಲ, ಎನ್.ಆರ್.ಸಿ ಜಾರಿಯ ಬಗ್ಗೆ ಕೇಂದ್ರ ಸರಕಾರದ ಮಂತ್ರಿಗಳ 9 ಅಧಿಕೃತ ಹೇಳಿಕೆಗಳಿವೆ. ಇವೆಲ್ಲ ಹೇಳಿಕೆಗಳನ್ನು ಕೇಂದ್ರ ಸಂಪುಟದಲ್ಲಿ ಯಾವುದೇ ಚರ್ಚೆಯಿಲ್ಲದೆ ಮಾಡಲಾಗಿದೆಯೇ?
ಮಹಾಸುಳ್ಳು 5 : ಎನ್.ಆರ್.ಸಿ. ಪ್ರಕ್ರಿಯೆ ಕಾನೂನು ಪ್ರಕಾರ ಈವರೆಗೆ ಸ್ಥಾಪಿತವಾಗಿಲ್ಲ ಮತ್ತು ವಿರೋಧ ಪಕ್ಷಗಳು ಸುಳ್ಳುಗಳನ್ನು ಹರಡುತ್ತಿವೆ ಎಂದು ಪ್ರಧಾನಿ ಮೋದಿ, ಅವರ ಸಂಪುಟ ಸಚಿವರುಗಳು, ಪಕ್ಷದ ವಕ್ತಾರರು ಹಾಗೂ ಬಾಲಡುಕ ಮಾಧ್ಯಮ ಮಿತ್ರರು ವಿರೋಧ ಪಕ್ಷಗಳನ್ನು ದೂರುತ್ತಿದ್ದಾರೆ. “ದೇಶದಾದ್ಯಂತ ಎನ್.ಆರ್.ಸಿ ಪ್ರಕ್ರಿಯೆಯನ್ನು ಈ ವರೆಗೆ ಅಧಿಸೂಚಿತಗೊಳಿಸಿಲ್ಲ ಮತ್ತು ಯಾರೂ ಈ ಕುರಿತು ಹೆದರಬೇಕಾಗಿಲ್ಲ.” ಎಂದು ಗೃಹ ಖಾತೆಯ ರಾಜ್ಯ ಮಂತ್ರಿ ಜಿ. ಕಿಶನ್ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಸತ್ಯ ಸಂಗತಿ : ಎನ್.ಆರ್.ಸಿ. ಪ್ರಕ್ರಿಯೆಯನ್ನು ಕಾನೂನು ಪ್ರಕಾರ ಸ್ಥಾಪಿಸಲು ವಾಜಪೇಯಿ ಸರಕಾರದ ಅವಧಿಯಲ್ಲಿ ಗೃಹ ಮಂತ್ರಿ ಎಲ್.ಕೆ.ಅಡ್ವಾಣಿ ಅವರಿಂದ ಮಂಡಿತವಾಗಿ 2003ರಲ್ಲಿ ಅಂಗೀಕೃತವಾಯಿತು. ಇದಕ್ಕಾಗಿ ಪ್ರತ್ಯೇಕ ಕಾನೂನು ರಚನೆಯಾಗಿಲ್ಲ. ಬದಲಿಗೆ, ಭಾರತ ಪೌರತ್ವ ಕಾಯಿದೆ 1955ಗೆ ತಿದ್ದುಪಡಿ ಮಾಡಲಾಗಿದೆ. ಎನ್.ಆರ್.ಸಿ. ಜಾರಿಗೆ ನಿಯಮಾವಳಿಯನ್ನು ಸಹ ರಚಿಸಿ 2003ರಲ್ಲೇ ಅಂಗೀಕರಿಸಲಾಗಿದೆ.
ಮಹಾಸುಳ್ಳು 6 : ಎನ್.ಆರ್.ಸಿ. ಪ್ರಕ್ರಿಯೆ ಇ್ಲನ್ನೂ ಆರಂಭವಾಗಿಲ್ಲ ಮತ್ತು ಆ ಕುರಿತು ಯಾವುದೇ ಅಧಿಸೂಚನೆಯೂ ಇಲ್ಲ.
ಎನ್.ಆರ್.ಸಿ. ಜಾರಿಗೆ ನಿಯಮಾವಳಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ (ಎನ್.ಪಿ ಆರ್.) ಪ್ರಕ್ರಿಯೆಯೊಂದಿಗೆ ಆರಂಭವಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಎನ್.ಪಿ.ಆರ್. ಪ್ರಕ್ರಿಯೆ ಮುಗಿದ ನಂತರ ಅದರ ಆಧಾರದ ಮೇಲೆ ಎನ್.ಆರ್.ಸಿ. ರಚಿಸಲಾಗುವುದು. ಎನ್.ಪಿ.ಆರ್. ಮತ್ತು ಎನ್.ಆರ್.ಸಿ ನಡುವಿನ ಸಂಬಂಧದ ಬಗ್ಗೆ ಕೇಂದ್ರ ಗೃಹ ರಾಜ್ಯ ಮಂತ್ರಿ ಜುಲೈ 23, 2014ರಲ್ಲಿ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಎನ್.ಪಿ.ಆರ್. ಪ್ರಕ್ರಿಯೆ ಆರಂಭಿಸಲು ಜುಲೈ 31, 2019ರಂದು ಅಧಿಸೂಚನೆ ಹೊರಡಿಸಲಾಗಿದೆ.
ಮಹಾಸುಳ್ಳು 7 : ಎನ್.ಆರ್.ಸಿ. (ಪೌರತ್ವ ರಿಜಿಸ್ಟರ್)ಗೂ ಎನ್.ಪಿ.ಆರ್. (ಜನಸಂಖ್ಯಾ ರಿಜಿಸ್ಟರ್)ಗೂ ಏನೂ ಸಂಬಂಧವಿಲ್ಲ ಎಂದು ಗೃಹ ಮಂತ್ರಿ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಎನ್.ಪಿ.ಆರ್ ಹೆಚ್ಚಿನ ಪ್ರಶ್ನೆಗಳೊಂದಿಗೆ ಸಮಕಾಲೀನಗೊಳಿಸುವ ಕೇಂದ್ರ ಸಂಪುಟದ ನಿರ್ಧಾರದ ಸಂದರ್ಭದಲ್ಲಿ ಈ ಹೇಳಿಕೆ ಕೊಟ್ಟಿದ್ದಾರೆ. ಎನ್.ಪಿ.ಆರ್. ಜನಗಣತಿಯ ಉದ್ದೇಶಕ್ಕೆ ಮಾತ್ರವಿದೆ. ಎನ್.ಆರ್.ಸಿ. ಅಥವಾ ಪೌರತ್ವಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಭಾರತೀಯ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ವಿರೋಧ ಪಕ್ಷಗಳು ಯಾಕೆ ಹೇಳುತ್ತಿವೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಹೇಳಿದ್ದಾರೆ.
ಸತ್ಯ ಸಂಗತಿ : ಗೃಹ ಸಚಿವಾಲಯದ 2018-19 ವಾರ್ಷಿಕ ವರದಿಯ ಅಧ್ಯಾಯ 15 ಪಾರಾ 15.40 ಎನ್.ಪಿ.ಆರ್ ಮತ್ತು ಎನ್.ಆರ್.ಸಿ. (ಅಂದರೆ ಪೌರತ್ವದ) ಗಳ ಸಂಬಂಧದ ಬಗೆಗ ಸ್ಪಷ್ಟವಿದೆ. ಎನ್.ಪಿ.ಆರ್ ಮತ್ತು ಜನಗಣತಿಯನ್ನು ಜನಗಣತಿ ಅಧಿಕಾರಿಗಳು ನಡೆಸುತ್ತಾರೆ ಎಂದು ಬಿಟ್ಟರೆ ಅವೆರಡಕ್ಕೆ ಸಂಬಂಧವಿಲ್ಲ. ಎನ್.ಪಿ.ಆರ್. ಪ್ರಶ್ನಾವಳಿಯಲ್ಲಿ ಹಿಂದಿನ 15 ಪ್ರಶ್ನೆಗಳಿಗೆ ಆರು ಹೊಸ ಪ್ರಶ್ನೆಗಳನ್ನು ಸೇರಿಸಲಾಗಿದೆ. ತಂದೆ, ತಾಯಿ ಹುಟ್ಟಿದ ತಾರೀಕು, ಸ್ಥಳಗಳ ಮತ್ತು ಆಧಾರ್ ಬಗ್ಗೆ ಬಗ್ಗೆ ಕೇಳಲಾಗಿದ್ದು, ಇವನ್ನು ಎನ್.ಆರ್.ಸಿ. ಮತ್ತು ಪೌರತ್ವಕ್ಕೆ ಸಂಬಂಧಿಸಿ ಕೇಳಲಾಗುತ್ತಿದೆ.
ಮಹಾಸುಳ್ಳು 8 : ಯಾವುದೇ ಭಾರತೀಯ ಭಯಪಡುವಂಥದ್ದೇನಿಲ್ಲ.
ಸತ್ಯ ಸಂಗತಿ : ಎಲ್ಲಾ ಸಮುದಾಯಗಳ ಬಡವರು ಮತ್ತು ಅಂಚಿಗೆ ತಳ್ಳಲ್ಲಪಟ್ಟವರು ಭಯ ಪಡುವಂಥದ್ದು ಖಂಡಿತ ಇದೆ. ತಂದೆ, ತಾಯಿ ಹುಟ್ಟಿದ ತಾರೀಕು, ಸ್ಥಳಗಳ ಮಾಹಿತಿ ಒದಗಿಸುವುದು ಹೆಚ್ಚಿನ ಶಾಶ್ವತ ಸೂರು ಇಲ್ಲದ, ನೆರೆ ಬರ ಮುಂತಾದ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುವ, ಆಗಾಗ ವಲಸೆ ಹೋಗುವ ಅನಕ್ಷರಸ್ಥ ಬಡವರಿಗೆ ಕಷ್ಟಕರ ವಿಷಯ. ಇದು ಆಸ್ಸಾಂನಲ್ಲಿ ನಡೆದ ಎನ್.ಆರ್.ಸಿ. ಪ್ರಕ್ರಿಯೆಯ ಅನುಭವ ಕೂಡಾ. ಸಾಲದ್ದಕ್ಕೆ ಬಯೋಮೆಟ್ರಿಕ್ ಕೊಡಬೇಕಾಗಿದೆ. ಬಯೋಮೆಟ್ರಿಕ್ ಮತ್ತು ಆಧಾರ್ ಮ್ಯಾಚಿಂಗ್ ಹಲವು ಕಾರಣಗಳಿಗೆ ವಿಫಲವಾಗುವುದು ಸಹ ವ್ಯಾಪಕವಾದ ಬಡವರ ಅನುಭವ. ಇದರಿಂದಾಗಿ ರೇಶನ್, ರೇಗಾ ಕೂಲಿ ಕಳೆದುಕೊಂಡ ಲಕ್ಷಾಂತರ ಬಡವರ ದೃಷ್ಟಾಂತಗಳಿವೆ. ಮುಂದಿನ ಹಂತದಲ್ಲಿ ಅಧಿಕಾರಿಗಳು ಕೇಳಿದರೆ ತಂದೆ-ತಾಯಿಗಳ ಸೇರಿದಂತೆ ಹಲವು ದಾಖಲೆಗಳನ್ನು ಒದಗಿಸಬೇಕು. ಆಸ್ಸಾಂ ಎನ್.ಆರ್.ಸಿ ಪ್ರಕ್ರಿಯೆ ಸ್ಪಷ್ಟ ಪಡಿಸಿದಂತೆ ಸಾಮಾನ್ಯ ಗುರುತಿನ ದಾಖಲೆ (ಜನ್ಮಪತ್ರ, ಆಧಾರ್, ವೋಟರ್ ಐಡಿ, ಪಾನ್ ಕಾರ್ಡ್, ಪಾಸ್ ಪೋರ್ಟ್) ಸಾಕಾಗುವುದಿಲ್ಲ. ತಂದೆ ತಾಯಿ ಇಬ್ಬರ ದಾಖಲೆ ಬೇಕಾಗುತ್ತದೆ. ಆದ್ದರಿಂದಲೇ ಎನ್.ಪಿ.ಆರ್-ಎನ್.ಆರ್.ಸಿ. ಪ್ರಕ್ರಿಯೆ ಬಗ್ಗೆ ವ್ಯಾಪಕ ಭಯ ಉಂಟಾಗಿದೆ. ಇದು ಬಿಜೆಪಿ ಸರಕಾರದ ನೋಟು ನಿಷೇಧ ಮುಂತಾದ ಕ್ರೂರ ಕ್ರಮಗಳ ಹಿಂದಿನ ರೆಕಾರ್ಡಿನಿಂದ ಬಂದ ಸಹಜ ವಾಸ್ತವಿಕ ಭಯ.
ಇನ್ನೊಂದು ಕಾರಣಕ್ಕಾಗಿ ಮೋದಿ ಸರಕಾರ ಝಳಪಿಸುತ್ತಿರುವ ಸಿಎಎ-ಎನ್.ಪಿ.ಆರ್-ಎನ್.ಸಿ.ಆರ್ ಎಂಬ ಮೂರು ಅಲಗುಗಳ ತ್ರಿಶೂಲದ ಬಗ್ಗೆ ಚರಿತ್ತೆಯಿಂದ ಪಾಠ ಕಲಿತ ಎಲ್ಲಾ ಪ್ರಜ್ಞಾವಂತ ನಾಗರಿಕರು ಭಯ ಪಡಬೇಕಾಗಿದೆ. ನಾಜಿವಾದಿ ಮಾದರಿಯನ್ನು ಹಂತ ಹಂತವಾಗಿ ಕಾಪಿ ಹೊಡೆದು ಸಾಗಿರುವ ಸಂಘ ಪರಿವಾರದ ‘ಹಿಂದೂ ರಾಷ್ಟ್ರ’ದ ಯೋಜನೆಯಲ್ಲಿ ಈ ಕಾನೂನುಗಳ ತ್ರಿಶೂಲ ವಹಿಸಬಹುದಾದ ಪಾತ್ರದ ಬಗ್ಗೆ ಭಯ ಪಡಬೇಕಾಗಿದೆ. 1935ರಲ್ಲಿ ನಾಜಿಗಳು ತಂದ ಕುಪ್ರಸಿದ್ಧ ‘ನ್ಯುರೆಂಬರ್ಗ್ ಕಾನೂನುಗಳು’ ಒಂದೇ ಏಟಿಗೆ ಯೆಹೂದಿಯರ ಪೌರತ್ವ ಕಸಿದುಕೊಂಡು ಅವರನ್ನು ಯಾವುದೇ ಹಕ್ಕುಗಳಿಲ್ಲದ ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಿದ್ದವು. ಕೊನೆಗೆ ಇದು 60 ಲಕ್ಷ ಯೆಹೂದಿಯರ ಸಾಮೂಹಿಕ ಬಂಧನ, ಯಾತನಾ ಶಿಬಿರಗಳಲ್ಲಿ ದೌರ್ಜನ್ಯ ಮತ್ತು ಅವರ ನರಮೇಧದಲ್ಲಿ ಕೊನೆಗೊಂಡಿತ್ತು. ಇದು ಇಡೀ ಜರ್ಮನ್ ದೇಶದಲ್ಲಿ ಫ್ಯಾಸಿಸ್ಟ್ ಆಡಳಿತ ಸ್ಥಾಪಿಸುವಲ್ಲಿ, ಜನತೆಯನ್ನು ಫ್ಯಾಸಿಸ್ಟ್ ಕ್ರೌರ್ಯದ ಮತ್ತು ಯುದ್ಧದ ಉನ್ಮಾದದಲ್ಲಿ ಮುಳುಗಿಸಿ, ಎರಡನೇ ಮಹಾಯುದ್ಧಕ್ಕೆ ಮತ್ತು ಜರ್ಮನರು ಸೇರಿದಂತೆ ಜಗತ್ತಿನಾದ್ಯಂತ ವ್ಯಾಪಕ ವಿನಾಶ ನರಮೇಧಗಳಿಗೆ ಕಾರಣವಾಗುವುದರಲ್ಲಿ ತನ್ನದೇ ಪಾತ್ರ ವಹಿಸಿತ್ತು. ನಾಜಿಗಳು ಒಂದೇ ಏಟಿಗೆ ತಂದ ಕುಪ್ರಸಿದ್ಧ ‘ನ್ಯುರೆಂಬರ್ಗ್ ಕಾನೂನುಗಳು’ ಮಾಡಿದ ಪರಿಣಾಮವನ್ನು ಮೋದಿ ಸರಕಾರ ಹಂತ ಹಂತವಾಗಿ ಈ ಕಾನೂನುಗಳ ತ್ರಿಶೂಲದಿಂದ ಸಾಧಿಸುವ ಹಠ ತೊಟ್ಟಿರುವಂತೆ ಕಾಣುತ್ತದೆ ಎನ್ನುವ ಭಯ ಸಹಜವಾಗಿಯೇ ಉಂಟಾಗುತ್ತಿದೆ.
ಮಹಾಸುಳ್ಳು 9 : ದೇಶದ ಎಲ್ಲೂ ಬಂಧನ ಕೇಂದ್ರಗಳು ಇಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.
ಸತ್ಯ ಸಂಗತಿ : ಕಾನೂನುಬಾಹಿರ ವಲಸೆಗಾರರು ಮತ್ತು ವಿದೇಶಿ ಅಪರಾಧಿಗಳನ್ನು ಇಡಲು ಬಂಧನ ಕೇಂದ್ರಗಳನ್ನು ಕಟ್ಟುವಂತೆ ಜನವರಿ 9, 2019ರಂದು ಕೇಂದ್ರ ಸರಕಾರ ಸರಕಾರ ನಿರ್ದೇಶನ ನೀಡಿದೆ (ಮಾಹಿತಿ ಮೂಲ : ಡಿಸೆಂಬರ್ 11, 2019 ರಾಜ್ಯ ಸಭೆಯಲ್ಲಿ ಗೃಹ ರಾಜ್ಯ ಸಚಿವರ ಉತ್ತರ). ಆಸ್ಸಾಂ ನಲ್ಲಿ 6 ಬಂಧನ ಕೇಂದ್ರಗಳಿವೆ. ಅದರಲ್ಲಿ 988 “ವಿಧೇಶಿಯರು” ಇದ್ದು 28 ಬಂಧಿತರು ಸತ್ತಿದ್ದಾರೆ ಎಂದು ನವೆಂಬರ್ 2019ರಲ್ಲಿ ಪ್ರಶ್ನೋತ್ತರದಲ್ಲಿ ಗೃಹ ರಾಜ್ಯ ಸಚಿವರ ಹೇಳಿದ್ದಾರೆ. ಮಹಾರಾಷ್ಟ್ರ ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಬಂಧನ ಕೇಂದ್ರ ಕಟ್ಟುವ ಕೆಲಸ ಆರಂಭವಾಗಿದೆ.
ಮಹಾಸುಳ್ಳು 10 : ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ಮಾಡಲಾಗಿಲ್ಲ. ವ್ಯಾಪಕ ಪ್ರತಿಭಟನೆ ನಡೆದಿರುವ ದೆಹಲಿ, ಯುಪಿ ಮತ್ತು ಇತರ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪೋಲಿಸರು ಗೋಲಿಬಾರು ಮಾಡಿಲ್ಲ.
ಸತ್ಯ ಸಂಗತಿ : ಬಹುಪಾಲು ಭಾರೀ ಪ್ರತಿಭಟನಾ ಪ್ರದರ್ಶನಗಳು ಶಾಂತಿಯುತವಾಗಿ ನಡೆದಿವೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಾತ್ರ ಪೋಲಿಸರ ದಮನ ಕ್ರಮಗಳಿಂದ ಕೆಲವು ಹಿಂಸಾಕೃತ್ಯಗಳು ಜರುಗಿವೆ. ಜಾಮಿಯಾ ಮಿಲಿಯ, ಅಲಿಘರ್, ದೆಹಲಿ ವಿವಿ ಗಳಲ್ಲಿ ಪೋಲಿಸರ ದೌರ್ಜನ್ಯಗಳು ಮುಗಿಲು ಮುಟ್ಟಿವೆ. ಯು.ಪಿ. ಒಂದೇ ರಾಜ್ಯದಲ್ಲಿ ಈವರೆಗೆ 21 ಜನ ಗೋಲಿಬಾರಿನಲ್ಲಿ ಸತ್ತಿದ್ದಾರೆ. ದಿನೇ ಈ ಸಂಖ್ಯೆ ಹೆಚ್ಚುತ್ತಿದೆ. ಆದರೆ ಪೋಲಿಸ್ ಗೋಲಿಬಾರು ಮಾಡಿರುವುದನ್ನೇ ನಿರಾಕರಿಸಿದ್ದಾರೆ. ಪೋಲಿಸರು ಪ್ರತಿಭನಾಕಾರರು ಮತ್ತು ಅಮಾಯಕ ನಾಗರಿಕರ ಮೇಲೆ ಗೋಲಿಬಾರು ಮಾಡಿರುವುದು, ಬೇಕಾಬಿಟ್ಟಿ ದೌರ್ಜನ್ಯಗಳನ್ನು ಎಸಗಿರುವುದು, ತಾವೇ ವಿಧ್ವಂಸಕ ಕೃತ್ಯಗಳಲಿ ತೊಡಗಿರುವುದು – ದಿನೇ ಈ ಬಗ್ಗೆ ವಿಡಿಯೋ ಪುರಾವೆಗಳು ಹೊರ ಬರುತ್ತಿವೆ. ಆಸ್ಸಾಂನಲ್ಲಿ 5, ಕರ್ನಾಟಕದಲ್ಲಿ ಇಬ್ಬರು ಗೋಲಿಬಾರಿನಲ್ಲಿ ಸತ್ತಿದ್ದಾರೆ. ಯುಪಿ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ಕಲಮು 144 ಹೇರುವ ಮೂಲಕ ನಿಷೇಧಿಸಿದ್ದು ಮತ್ತು ಪ್ರತಿಭಟನಾಕಾರರನ್ನು ಉದ್ರೇಕಿಸಿದ್ದು ಈಗ ನಡೆದಿರುವ ಸೀಮಿತ ಹಿಂಸಾಚಾರಕ್ಕೆ ಕಾರಣ.
ಕೃಪೆ: ಜನಶಕ್ತಿ ವಾರಪತ್ರಿಕೆ


