Homeಮುಖಪುಟಇಂದು ತುಮಕೂರಿಗೆ ಮೋದಿ: ಗಾಡಿ ನಿಲ್ಸಬೇಡಿ ಅನ್ನೋ ಬದಲುಬಾಗಿಲು ಹಾಕಿ ಅಂದಿದ್ರೆ ಆಗಿತ್ತು...

ಇಂದು ತುಮಕೂರಿಗೆ ಮೋದಿ: ಗಾಡಿ ನಿಲ್ಸಬೇಡಿ ಅನ್ನೋ ಬದಲುಬಾಗಿಲು ಹಾಕಿ ಅಂದಿದ್ರೆ ಆಗಿತ್ತು…

- Advertisement -
- Advertisement -

ತುಮಕೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ಎಲ್ಲೆಡೆ ವ್ಯಾಪಕ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಕಾರ್ಯಕ್ರಮ ನಡೆಯುವ ಸರ್ಕಾರಿ ಪದವಿಪೂರ್ವ ಕಾಲೇಜು ಸುತ್ತಲಿನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ. ಇದು ವ್ಯಾಪಾರಿಗಳು ಮತ್ತು ಸಾರ್ವಜನಿಕರು ಕೆರಳುವಂತೆ ಮಾಡಿದೆ. ವ್ಯಾಪಾರಕ್ಕೂ ಸಾರ್ವಜನಿಕರು ವಾಹನ ನಿಲ್ಲಿಸುವುದಕ್ಕೂ ತೊಂದರೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು ಹೊನ್ನಾವರ ರಸ್ತೆ ಜನರಿಲ್ಲದೆ ಬಿಕೋ ಎನ್ನುತ್ತಿದೆ. ಸಿದ್ದಗಂಗಾ ಮಠದಿಂದ ರಸ್ತೆಯ ಎರಡೂ ಬದಿಗೆ ಕಬ್ಬಿಣದ ಸಲಾಕೆಗಳನ್ನು ಕಟ್ಟಿ ಸಾರ್ವಜನಿಕರು ರಸ್ತೆಗೆ ಇಳಿಯದಂತೆ ಕ್ರಮ ವಹಿಸಿದ್ದು ವಾಹನ ಮತ್ತು ಜನ ಸಂದಣಿ ಇಲ್ಲದೆ ಅಘೋಷಿತ ಬಂದ್ ಆಚರಣೆಯಲ್ಲಿದೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಬಿ.ಎಚ್.ರಸ್ತೆಯಲ್ಲಿನ ವ್ಯಾಪಾರ ವಹಿವಾಟು ಸ್ಥಬ್ದವಾಗಿದೆ.

ಬಿ.ಎಚ್.ರಸ್ತೆಯಲ್ಲೂ ವಾಹನ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ. ಟೌನ್ ಹಾಲ್, ಆಶೋಕ ರಸ್ತೆ, ಸೋಮೇಶ್ವರಪುರಂ, ಎಸ್.ಐ.ಟಿ ಮುಖ್ಯರಸ್ತೆ, ಜನರಲ್ ಕಾರಿಯಪ್ಪ ರಸ್ತೆ, ಉಪ್ಪಾರಹಳ್ಳಿ ರಸ್ತೆ ಹೀಗೆ ಪ್ರಮುಖ ವ್ಯಾಪಾರ ನಡೆಯುವ ಜಾಗಗಳಲ್ಲೇ ವಾಹನ ನಿಲುಗಡೆಗೆ ನಿರ್ಬಂಧ ಹಾಕಿರುವುದರಿಂದ ವ್ಯಾಪಾರದ ಮೇಲೆ ಭಾರಿ ಹೊಡೆತ ಬೀಳಲಿದೆ ಎಂಬುದು ವ್ಯಾಪಾರಿಗಳು ಅಳಲು. ಅದೇ ಕಾರಣಕ್ಕೆ ವಾಹನ ನಿಲ್ಲಿಸಬೇಡಿ ಎನ್ನುವ ಬದಲು ಅಂಗಡಿ ಬಾಗಿಲು ಹಾಕಿ ಅಂದ್ರೆ ಆಗಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ಕಾರ್ಯಕ್ರಮ ನಡೆಯೋದು ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ. ಇಲ್ಲಿಗೆ ಒಂದು ಕಿಲೋಮೀಟರ್ ದೂರವಾಗುತ್ತೆ. ಅಲ್ಲಿ ನಡೆಯೋ ಕಾರ್ಯಕ್ರಮಕ್ಕೆ ಇಲ್ಲೇಕೆ ವಾಹನ ನಿಲ್ಸಬಾರ್ದು. ಗ್ರಾಹಕರು ವಾಹನಗಳಲ್ಲಿ ಬರುತ್ತಾರೆ. ಅವರೆಲ್ಲಿ ನಿಲ್ಲಿಸಬೇಕು ಹೇಳಿ ಎಂದು ಪ್ರಶ್ನಿಸುತ್ತಿದ್ದಾರೆ. ಇದರ ಜೊತೆಗೆ ಬಿ.ಎಚ್. ರಸ್ತೆಯ ಸಿದ್ದಗಂಗಾ ಆಸ್ಪತ್ರೆಗೆ ಯಾರೂ ಹೋಗಲು ಸಾಧ್ಯವಾಗುತ್ತಿಲ್ಲ. ಬಿ.ಎಚ್.ರಸ್ತೆಗೆ ಹೊಂದಿಕೊಂಡಂತೆ ಆಸ್ಪತ್ರೆ ಇರುವುದರಿಂದ ರೋಗಿಗಳನ್ನು ಕರೆತರುವ ವಾಹನಗಳು ಅಲ್ಲಿಗೆ ಪ್ರವೇಶಿಸಲು ಸಾಧ್ಯವಿಲ್ಲ.

ಸಂಚಾರಿ ಪೊಲೀಸ್ ವಾಹನಗಳು ರಸ್ತೆಗಳಲ್ಲಿ ಗಸ್ತುತಿರುಗುತ್ತ ವಾಹನಗಳನ್ನು ನಿಲ್ಲಿಸದಂತೆ ಮೈಕ್ ಮೂಲಕ ಹೇಳುತ್ತಿದ್ದಾರೆ. ರಸ್ತೆಯಲ್ಲಿ ಕಾವಲು ಕಾಯುತ್ತಿರುವ ಸಂಚಾರಿ ಪೊಲೀಸರು ಸಾರ್ವಜನಿಕರ ಬೈಗುಳ, ಪ್ರಶ್ನೆಗಳನ್ನು ಎದುರಿಸಬೇಕಾಗಿ ಬಂದಿದೆ. ‘ಅಲ್ಲಾ ಸಾ ಅಲ್ಲೆಲ್ಲೋ ನಡೆಯೋ ಕಾರ್ಯಕ್ರಮಕ್ಕೆ ಇಲ್ಲ್ಯಾಕೆ ತೊಂದರೆ ಕೊಡ್ತೀರಾ, ಜನ ಎಲ್ಲಿ ನಿಲ್ಸಿಬೇಕು ಹೇಳಿ ಎಂದು ಜಗಳಕ್ಕೆ ಬೀಳುತ್ತಿದ್ದಾರೆ. ‘ಭದ್ರತೆಗಾಗಿ 3 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಎಸ್‌ಪಿಜಿ ಕಮಾಂಡೋಗಳು ಕೂಡ ಕಾವಲಿಗೆ ಸಜ್ಜಾಗಿ ನಿಂತಿದ್ದಾರೆ.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಖಾಸಗಿ ಬಸ್ ನಿಲ್ದಾಣವೂ ಇದಕ್ಕೆ ಭಿನ್ನವಾಗೇನೂ ಇಲ್ಲ. ಆಟೋ ಸಂಚಾರವೂ ಇಲ್ಲದಂತಾಗಿ ಜನರು ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ. ಎಲ್ಲಿಗೆ ಹೋಗಬೇಕೆಂದರೂ ಸುತ್ತಿಬಳಸಿ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಬಟವಾಡಿಯಿಂದ ಟೌನ್ ಹಾಲ್ ವರೆಗೆ ಜಿರೋ ಟ್ರಾಫಿಕ್ ಇದೆ.

ರೈತ ಸಮಾವೇಶ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜೂನಿಯರ್ ಕಾಲೇಜು, ತುಮಕೂರು ವಿಶ್ವವಿದ್ಯಾಲಯ ಮತ್ತು ಸಂಯೋಜಿತ ಸೈನ್ಸ್ ಮತ್ತು ಆರ್ಟ್ಸ್ ಕಾಲೇಜು, ಸಿದ್ದಗಂಗಾ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸಿದ್ದಗಂಗಾ ಪುರಷರ ಮತ್ತು ಮಹಿಳೆಯರ ಪದವಿ ಕಾಲೇಜು, ವಿದ್ಯಾನಿಕೇತನ,ಮಾರುತಿ ವಿದ್ಯಾ ಕೇಂದ್ರ ಹೀಗೆ ಎಲ್ಲಾ ಶಾಲಾ-ಕಾಲೇಜುಗಳಿಗೂ ರಜೆಯನ್ನು ಘೋಷಿಸಿದೆ.

ಒಂದಂತೂ ಸತ್ಯ ನಗರ ಸ್ಥಬ್ದವಾಗಿದೆ. ಅಘೋಷಿತ ಬಂದ್ ಆಚರಣೆಯಲ್ಲಿದೆ. ಜನ ಕಿರಿಕಿರಿ ಅನುಭವಿಸುವಂತೆ ಆಗಿದೆ. ತುಮಕೂರಿನ ಮೇಲೆ ಪೊಲೀಸರು, ಎಸ್ಪಿಜಿ ಪಡೆ ಹದ್ದಿನ ಕಣ್ಣಿಟ್ಟಿದೆ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...