Homeಮುಖಪುಟಸಂವಾದದಿಂದ ವಿಶ್ವೇಶತೀರ್ಥ ಸ್ವಾಮೀಜಿಗಳು ಕಿಂಚಿತ್ತಾದರೂ ಬದಲಾಗಿದ್ದರೆ??

ಸಂವಾದದಿಂದ ವಿಶ್ವೇಶತೀರ್ಥ ಸ್ವಾಮೀಜಿಗಳು ಕಿಂಚಿತ್ತಾದರೂ ಬದಲಾಗಿದ್ದರೆ??

- Advertisement -
- Advertisement -

ಬಾಬ್ರಿ ಮಸೀದಿ ಧ್ವಂಸ, ಇಡೀ ದೇಶದಲ್ಲಿ ಒಂದು ಮಟ್ಟಕ್ಕೆ ನೆಲೆಸಿದ್ದ ಸಾಮಾಜಿಕ ಸಾಮರಸ್ಯವನ್ನು ಹೇಗೆ ಕದಡಿತು ಎಂಬ ಅಂಶ ಸ್ವಾಮಿಗಳಿಗೆ ಅರ್ಥವಾಗಿತ್ತೆ? ಅವರು ಸದಾ ಬೆಂಬಲಿಸುತ್ತಿದ್ದ ಮತ್ತು ಮಾರ್ಗದರ್ಶಕರಾಗಿದ್ದ ಪಕ್ಷ ಮತ್ತು ರಾಜಕೀಯ ಮುಖಂಡರು ಇಂತಹ ಕೃತ್ಯ ಎಸಗಿದ್ದಕ್ಕೆ ಅವರು ಮರುಗಿದ್ದರೆ? ಅಂತಹವರಿಗೆ ಬುದ್ಧಿ ಹೇಳಿದ್ದರೆ? ಲೇಖಕ-ಪತ್ರಕರ್ತ ಪಿ. ಲಂಕೇಶ್ ಅವರು ‘ಟೀಕೆ-ಟಿಪ್ಪಣಿಯ’ ಒಂದು ಲೇಖನದಲ್ಲಿ ಬರೆದಂತೆ “ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ” ಎಂಬ ಸಾಲಿನ ಅರ್ಥ ಸ್ವಾಮಿಗಳಿಗೆ ತಾವು ನಡೆಸಿದ ಸಂವಾದದಿಂದ ತಿಳಿಯಿತೆ?

ಉಡುಪಿ ಅಷ್ಟ ಮಠಾಧೀಶರಲ್ಲಿ ಒಬ್ಬರಾದ ವಿಶ್ವೇಶತೀರ್ಥ ಸ್ವಾಮೀಜಿಗಳು ನಿಧನರಾಗುವುದಕ್ಕೂ ಮೂರು ದಿನ ಮುಂಚಿತವಾಗಿ ತಮಿಳುನಾಡಿನ ಕೊಯಂಬತ್ತೂರಿನ ಹತ್ತಿರದ ಒಂದು ಹಳ್ಳಿಯ ಸುಮಾರು ಹದಿನೇಳು ಕುಟುಂಬಗಳ ಜನರು ಜನವರಿ 5 ರಂದು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವುದಾಗಿ ಘೋಷಣೆ ಮಾಡಿದ್ದರು. ಜ್ಯೋತಿಭಾ ಫುಲೆ, ಅಂಬೇಡ್ಕರ್ ಅಂತಹ ಚೈತನ್ಯಗಳ ಸುಧಾರಕ ಕೆಲಸಗಳಿಂದಾಗಿ, ಸ್ವಾತಂತ್ರೋತ್ತರ ವರ್ಷಗಳಲ್ಲಿ ಆಗಿರುವ ಕಿಂಚಿತ್ತು ಶೈಕ್ಷಣಿಕ ಸುಧಾರಣೆಯಿಂದಾಗಿ ಮನುಷ್ಯನ ಘನತೆಯ ಬಗೆಗೆ ತಿಳಿವು ಮೂಡಿ, ಸಮಾಜದಲ್ಲಿ ಕಡೆಗಣನೆಗೆ ಒಳಗಾಗಿದ್ದ ಜನ ಕೂಡ ತಮ್ಮ ಹಕ್ಕುಗಳ ಬಗ್ಗೆ ಸ್ವಲ್ಪ ತಿಳಿಯಲು ಸಾಧ್ಯವಾಗಿದೆ. ಒಂದು ಪಕ್ಷ ಆ ಘನತೆಯ ಬಗ್ಗೆ ತಿಳಿವು ಮೂಡದೆ, ಹಿಂದೂ ಧರ್ಮದಲ್ಲಿ ಬೇರ್ಪಡಿಸಲಾಗದೆ ಇದ್ದಂತಹ ಶ್ರೇಣೀಕೃತ ಜಾತಿ ದೌರ್ಜನ್ಯವನ್ನು ಸಹಜವಾಗಿ ಒಪ್ಪಿ ಹಿಂದುಳಿದವರು, ದಲಿತರು ನರಕಸದೃಶ ಬದುಕನ್ನು ಬದುಕುತ್ತಾ ಯಾವುದನ್ನೂ ಪ್ರಶ್ನಿಸದೆ ನಡೆದಿದ್ದರೆ, ವಿಶ್ವೇಶತೀರ್ಥ ಸ್ವಾಮಿಗಳು ಮತ್ತು ದೌರ್ಜನ್ಯ ಎಸಗಿದ ಜಾತಿಯಿಂದ ಬಂದ, ಕನಿಷ್ಟ ಎಂದರೆ ತಮ್ಮ ಜಾತಿಯ ಕುರುಹನ್ನು ಮರೆಮಾಚಲೂ ಪ್ರಯತ್ನಿಸದ, ತಮ್ಮ ಜನಾಂಗದ ಗುರುತನ್ನು ಬಿಡಲೊಪ್ಪದ ಅಂತಹ ಜನರು ದಲಿತ ಕೇರಿಗೆ ಭೇಟಿ ಕೊಡುವ ಸುಧಾರಣೆಯ ಸೋಗನ್ನು ತಮ್ಮ ಮೇಲೆ ಆಪಾದಿಸಿಕೊಳ್ಳುತ್ತಿದ್ದರೆ ಎಂಬ ಪ್ರಶ್ನೆಯನ್ನು, 80ರ ದಶಕದಲ್ಲಿ ಹುಟ್ಟಿರುವ ನಾನು ಇಂದು ಹಾಕಿಕೊಂಡರೆ ಧನಾತ್ಮಕ ಉತ್ತರವೇನೂ ನನಗೆ ಕಾಣುವುದಿಲ್ಲ. ಈ ಸಮಯದಲ್ಲಿ ಪ್ರಖರ ದಲಿತ ಚಿಂತಕ ಬಿ ಕೃಷ್ಣಪ್ಪನವರು ‘ದಲಿತರು ಮತ್ತು ಮತಾಂತರ’ ಎಂಬ ಲೇಖನದಲ್ಲಿ ಹೇಳಿರುವ ಈ ಮಾತುಗಳನ್ನು ನೆನಪಿಸಿಕೊಳ್ಳುವುದು ಉಚಿತ ಎನಿಸುತ್ತದೆ – “ಇಷ್ಟಾದರೂ ದಲಿತರು ಹಿಂದೂ ಧರ್ಮದಲ್ಲಿ ಉಳಿದಿರಲು ಕಾರಣ ಅವರಲ್ಲಿ ಮೌಢ್ಯ ಅಜ್ಞಾನ ನಿರಕ್ಷರತೆಗಳನ್ನು ಪೋಷಿಸಿಕೊಂಡು ಬಂದಿರುವ ಹಿಂದೂ ಪರಿಸರ ಕಾರಣವಾಗಿದೆ. ಯಾವ ವಿದ್ಯಾವಂತ ದಲಿತನೇ ಆಗಲಿ, ಯಾವೊಬ್ಬ ಮಾನವತಾವಾದಿಯೇ ಆಗಲಿ ತನ್ನನ್ನು ಕೀಳಾಗಿ ಕಾಣುವ ಯಾವ ಧರ್ಮವನ್ನೂ ಗೌರವಿಸಲಾರ, ಗೌರವಿಸುವುದಿಲ್ಲ. ದಲಿತರು ವಿದ್ಯಾವಂತರಾಗುತ್ತಿರುವುದರಿಂದಲೇ ಮತಾಂತರ ಹೆಚ್ಚುತ್ತಿರುವುದು. ಆದ್ದರಿಂದಲೇ ಹಿಂದೂ ರಾಷ್ಟ್ರದ ಕನಸು ಕಾಣುತ್ತಿರುವ ಜಾತಿವಾದಿಗಳು ಮತಾಂತರ ನಿಷೇಧ ಮಸೂದೆಯನ್ನು ತರಲು ಶತಪ್ರಯತ್ನ ನಡೆಸಿದ್ದಾರೆ.”

ವಿಶ್ವೇಶತೀರ್ಥ ಸ್ವಾಮೀಜಿಗಳು ನಿಧನರಾಗಿದ್ದು ಕರ್ನಾಟಕದ ಅಗ್ರಗಣ್ಯ ಲೇಖಕರಲ್ಲಿ ಒಬ್ಬರಾದ, ವಿಶ್ವಮಾನವ ಸಂದೇಶವನ್ನು ಕನ್ನಡಿಗರಿಗೆ ಮನವರಿಸಲು ಪ್ರಯತ್ನಿಸಿದ, ಕರ್ನಾಟಕದ ಪ್ರಮುಖ ಶೈಕ್ಷಣಿಕ ಸಂಸ್ಥೆಯಾದ ಮೈಸೂರು ವಿಶ್ವವಿದ್ಯಾಲಯದ ಪ್ರಮುಖ ಘಟ್ಟದಲ್ಲಿ ಉಪಕುಲಪತಿಗಳಾಗಿ ಸಂಸ್ಥೆಯನ್ನು ಮುನ್ನಡೆಸಿದ-ಬೆಳೆಸಿದ, ಪುರೋಹಿತಶಾಹಿಯ ವಿರುದ್ಧ ಸಮರ ಸಾರಿದ್ದ, ಸದಾ ಅಧಿಕಾರ ಕೇಂದ್ರಗಳನ್ನು ತಮ್ಮದೇ ನೆಲೆಯಲ್ಲಿ ಪ್ರಶ್ನಿಸುತ್ತಿದ್ದ ಮಹಾನ್ ಮಾನವತಾವಾದಿ ಕುವೆಂಪು ಅವರು ಜನಿಸಿದ ದಿನದಂದು. ಅದಕ್ಕೂ ಮುನ್ನಾದಿನ ಕುವೆಂಪು ಅವರ ಒಂದು ಹಳೆಯ ಭಾಷಣವನ್ನು ಮತ್ತೆ ಓದುತ್ತಿದ್ದೆ. ವಿಶ್ವೇಶತೀರ್ಥರು ಪ್ರತಿನಿಧಿಸುವ ಪರಂಪರೆಯ ಮಧ್ವಾಚಾರ್ಯರ ತತ್ವವನ್ನು ತೀಕ್ಷ್ಣವಾಗಿ ಟೀಕಿಸಿ ಬರೆದಿರುವ ಮತ್ತು ಯುವಜನತೆಯನ್ನು ಇಂತಹ ಅಪಾಯಗಳಿಂದ ಎಚ್ಚರಿಸಿರುವ ಲೇಖನ ಅದು. ಒಂದು ಸಣ್ಣ ತುಣುಕನ್ನು ಇಲ್ಲಿ ಉದಾಹರಿಸಬಹುದಾದರೆ, “…..ಅದಕ್ಕೆ ನಮ್ಮ ದೊಡ್ಡ ದೊಡ್ಡ ಆಚಾರ್ಯವರ್ಗದವರು, ಹಿಂದಿನವರು ಮಾತ್ರವಲ್ಲ ಇಪ್ಪತ್ತನೆಯ ಶತಮಾನದ ಇಂದಿನವರೂ, ಸ್ವಜಾತಿ ಸ್ವಾರ್ಥದೃಷ್ಟಿಯಿಂದ ತಪ್ಪು ತಪ್ಪು ವ್ಯಾಖ್ಯಾನಗಳನ್ನೆಲ್ಲ ಮಾಡಿ, ತಮ್ಮ ಜಾತಿಶ್ರೇಷ್ಠತೆಯನ್ನು ರಕ್ಷಿಸಿಕೊಂಡು ಬಾಕಿಯವರನ್ನೆಲ್ಲ ಊಳಿಗದವರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಆ ರೀತಿ ಮಾಡಿಕೊಂಡು ಹೋಗಿದ್ದಾರೆ. ಒಬ್ಬ ಆಚಾರ್ಯರಂತೂ ಎಲ್ಲಿಯವರೆಗೆ ಹೋಗಿದ್ದಾರೆಂದರೆ, ಈಗಾಗಲೆ ಇರುವ ಜಾತಿಭೇದ ವರ್ಣಭೇದಗಳು ಸಾಲದೆಂದು ಅವರು ಜೀವಗಳನ್ನೆಲ್ಲ ಮುಕ್ತಿಯೋಗ್ಯರು, ನಿತ್ಯಸಂಸಾರಿಗಳು, ತಮೋಯೋಗ್ಯರು ಅಥವಾ ನಿತ್ಯನಾರಕಿಗಳು ಅಂತ ವಿಭಜಿಸಿ ಬಿಟ್ಟಿದ್ದಾರೆ…..”. ಇಂತಹ ಔಚಿತ್ಯಪೂರ್ಣ ಮತ್ತು ತರ್ಕಬದ್ಧ ಟೀಕೆ ಮಧ್ವ ಸಂಪ್ರದಾಯದಿಂದ ಬಂದಂತಹ ಯತಿಗಳನ್ನು ಅನ್‍ಸೆಟಲ್ ಮಾಡಿತ್ತೆ? ತಿಳಿವು ಮೂಡುತ್ತಿದ್ದ ಸಮಾಜದಲ್ಲಿ, ಕುವೆಂಪು ಜನಪ್ರಿಯರಾಗಿ, ಅವರ ಮತ್ತು ಇತರ ಪ್ರಬುದ್ಧ ಚಿಂತಕರ ಇಂತಹ ಟೀಕೆಗಳನ್ನು ಜನ ಸ್ವೀಕರಿಸುತ್ತಿದ್ದ ಕಾಲಘಟ್ಟದಲ್ಲಿ ಕೇವಲ ಮಾಧ್ವ ತತ್ವಗಳನ್ನು ಜಗತ್ತಿಗೆ ಸಾರುತ್ತಾ ಮುಂದುವರೆಯುವುದು ಅಂತಹ ತೃಪ್ತಿಕರವಾದ ಕೆಲಸ ಅಲ್ಲ ಎಂದು ವಿಶ್ವೇಶತೀರ್ಥ ಸ್ವಾಮಿಗಳಿಗೆ ಅನ್ನಿಸಿರಬಹುದೇ? ಆದುದರಿಂದ ಹಿಂದುತ್ವ ರಾಜಕೀಯ ಸಿದ್ಧಾಂತವನ್ನು ಪ್ರಚಾರ ಮಾಡಲು ಸ್ವಾಮಿಗಳು ಮುಂದಾದರೆ? ರಾಮಜನ್ಮಭೂಮಿ ವಿವಾದದಲ್ಲಿ ಪ್ರಮುಖ ಪಾತ್ರ ವಹಿಸಲು ಇದೇ ಮುಖ್ಯ ಕಾರಣ ಇರಬಹುದೇ?

ಸ್ವಾಮಿಗಳು ಅಗಲಿದ ದಿನ ಮತ್ತು ನಂತರ ಹಲವರು ಹೇಗೆ ವಿಶ್ವೇಶತೀರ್ಥರು ಯಾವುದೇ ಸಿದ್ಧಾಂತಕ್ಕೆ ಜೋತು ಬಿದ್ದಿದ್ದರೂ ಸಂವಾದಕ್ಕೆ ಮಾತ್ರ ಸದಾ ತೆರೆದುಕೊಳ್ಳುತ್ತಿದ್ದರು ಎಂಬುದನ್ನು ಯಥೇಚ್ಛವಾಗಿ ನೆನೆಸಿಕೊಂಡಿದ್ದಾರೆ. ಸಂವಾದ ಎಂದರೆ, ನೀನು ಹೇಳುತ್ತಿರುವುದನ್ನು ಹೇಳುತ್ತಾ ಇರು, ಅದನ್ನು ನಾನು ಕೇಳಿಸಿಕೊಳ್ಳುತ್ತೇನೆ, ಆದರೆ ನನ್ನ ನಿಲುವಿನಲ್ಲಿ ಅಥವಾ ನನ್ನ ಧೋರಣೆಯಲ್ಲಿ ಯಾವ ಸಣ್ಣ ಬದಲಾವಣೆಯನ್ನೂ ಮಾಡಿಕೊಳ್ಳದೆ, ನಾನು ಮಾಡುವುದನ್ನು ಮಾಡುತ್ತಾ ಹೋಗುತ್ತೇನೆ ಎಂಬ ಅರ್ಥವೇ? ಇಷ್ಟೆಲ್ಲಾ ಸಂವಾದ ಮಾಡಿದ ಅವರಿಗೆ ಬಾಬ್ರಿ ಮಸೀದಿ ಧ್ವಂಸ, ಇಡೀ ದೇಶದಲ್ಲಿ ಒಂದು ಮಟ್ಟಕ್ಕೆ ನೆಲೆಸಿದ್ದ ಸಾಮಾಜಿಕ ಸಾಮರಸ್ಯವನ್ನು ಹೇಗೆ ಕದಡಿತು ಎಂಬ ಅಂಶ ಅರ್ಥವಾಗಿತ್ತೆ? ಅವರು ಸದಾ ಬೆಂಬಲಿಸುತ್ತಿದ್ದ ಮತ್ತು ಮಾರ್ಗದರ್ಶಕರಾಗಿದ್ದ ಪಕ್ಷ ಮತ್ತು ರಾಜಕೀಯ ಮುಖಂಡರು ಇಂತಹ ಕೃತ್ಯ ಎಸಗಿದ್ದಕ್ಕೆ ಅವರು ಮರುಗಿದ್ದರೆ? ಅಂತಹವರಿಗೆ ಬುದ್ಧಿ ಹೇಳಿದ್ದರೆ? ಲೇಖಕ-ಪತ್ರಕರ್ತ ಪಿ ಲಂಕೇಶ್ ಅವರು ‘ಟೀಕೆ-ಟಿಪ್ಪಣಿಯ’ ಒಂದು ಲೇಖನದಲ್ಲಿ ಬರೆದಂತೆ “ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ” ಎಂಬ ಸಾಲಿನ ಅರ್ಥ ಸ್ವಾಮಿಗಳಿಗೆ ತಾವು ನಡೆಸಿದ ಸಂವಾದದಿಂದ ತಿಳಿಯಿತೆ? ಇಂತಹ ಪ್ರಶ್ನೆಗಳನ್ನು ಅವರ ಜೊತೆಗೆ ಒಡನಾಡಿದ ಕೆಲವರಿಗೆ ಕೇಳಿದರೆ ಪೆಚ್ಚಾಗಿ ಹೋಗುತ್ತಾರೆ. ಅವರು ನಡೆಸಿದ ಇಂತಹ ಸಂವಾದಗಳಿಂದ ಅವರ ನಿಲುವುಗಳಲ್ಲಿ ಇಂತಹ ಸಣ್ಣ ಬದಲಾವಣೆಯೂ ಆಗಿರಲಿಲ್ಲ ಎಂದರೆ ಇಂತಹ ಸಂವಾದಗಳ ಬಗ್ಗೆ ಕನ್ನಡದ ಬಹುತೇಕ ಪತ್ರಿಕೆಗಳು ಊದುತ್ತಿರುವ ತುತ್ತೂರಿಗೆ ಮಹತ್ವವನ್ನು ಕೊಡಬಹುದೇ?

ಸ್ವಾಮಿಗಳ ಬಂಧುಗಳಲ್ಲೊಬ್ಬರು ಇತ್ತೀಚಿಗೆ ನನ್ನ ಜೊತೆ ಮಾತಾಡಿದಾಗ ಹೇಳಿದ ಕೆಲವು ಅಂಶಗಳು ಮಾತ್ರ, ಅವರ ವ್ಯಕ್ತಿವಿಶಿಷ್ಟ ನೆಲೆಯಲ್ಲಿ, ಇತರರು ಅನುಸರಿಸಬಹುದೇನೋ ಅನ್ನಿಸಿತು. ವಿಶ್ವೇಶತೀರ್ಥರು ಮಠದ ಆಡಳಿತ ಮತ್ತು ಹಣಕಾಸು ವಿಷಯಗಳಲ್ಲಿ ಬಹಳ ಪ್ರಾಮಾಣಿಕರಾಗಿದ್ದರು ಎಂಬ ಅಂಶ ಅದರಲ್ಲಿ ಒಂದು. ಸಾರ್ವಜನಿಕ ವ್ಯಕ್ತಿಗೆ ವೈಯಕ್ತಿಕ ನೈತಿಕ ಮೌಲ್ಯ ಅವನನ್ನು ನಂಬಲಾರ್ಹನನ್ನಾಗಿ ಮಾಡುತ್ತದೆ. ಆತನ ಇತರ ಕೆಲಸಗಳಿಗೆ ಆ ಪ್ರಾಮಾಣಿಕತೆ, ಅಧಿಕೃತತೆಯ ಮುದ್ರೆಯನ್ನು ಒತ್ತುತ್ತದೆ. ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ರೂಪಿಸಲು ಮುಂದಾಗುವ ಮುಂದಾಳುಗಳು ವೈಯಕ್ತಿಕ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಇಂತಹ ಸನ್ನಡತೆಗಳಿಂದ ಕಂಡುಕೊಳ್ಳಬಹುದೇನೋ.

ವಿಶ್ವೇಶತೀರ್ಥರ ವಿಚಾರದಲ್ಲಿ ರ್ಯಾಡಿಕಲ್ ಎಂಬುವಂತೆ ಹಲವರು ಹೇಳುವ ಕೆಲವು ಮಾತುಗಳನ್ನು ನಾನು ಒಂದು ಮಟ್ಟದ ಸಂದೇಹದಿಂದಲೇ ಸ್ವೀಕರಿಸುತ್ತೇನೆ. ಹಿಂದೂ ಸಂಸ್ಕೃತಿಯ ಮೌಢ್ಯ ಮತ್ತು ಶ್ರೇಣೀಕೃತ ತಾರತಮ್ಯವನ್ನು ಆಚರಿಸುವುದರಲ್ಲಿ ಮಾಧ್ವ ಸಮುದಾಯದವರು ತೀವ್ರ ಸಂಪ್ರದಾಯವಾದಿಗಳು ಎಂಬ ಮಾತಿದೆ. ಇಂತಹ ಸಮಾಜದಲ್ಲಿ ದೊಡ್ಡ ನಾಯಕರಾಗಿ ಬೆಳೆದ ವಿಶ್ವೇಶತೀರ್ಥರು ಕೈಗೊಂಡ ಸಾಂಕೇತಿಕ ಸುಧಾರಣಾ ಕಾರ್ಯಗಳಲ್ಲಿ ಕೆಲವಾದರೂ ಆ ಸಮಾಜದ ಯುವಜನತೆಗೆ ತಮ್ಮ ತೀವ್ರ ಮೌಢ್ಯವನ್ನು, ತಾರತಮ್ಯವನ್ನು ಕೈಬಿಡಲು ಅಥವಾ ಕನಿಷ್ಟ ಆ ತಪ್ಪುಗಳ ಬಗ್ಗೆ ಚಿಂತಿಸಲು ಅನುವು ಮಾಡಿಕೊಟ್ಟಿದೆ ಎಂಬ ವಾದ ಪ್ರಚಲಿತದಲ್ಲಿದೆ. ಪ್ರತ್ಯಕ್ಷವಾಗಿ ಅಂತಹ ಯುವಜನತೆಯನ್ನು ನಾನು ಕಂಡಿಲ್ಲವಾದರೂ, ನನ್ನ ಮಿತಿಗೆ ಕಾಣದೆ ಇರುವ ಹಲವರು ಇರಬಹುದು. ಅವರ ಉತ್ತರಾಧಿಕಾರಿಗಳಿಗೂ ಸಾಮಾಜಿಕ ಸಮಾನತೆಯ ಅರಿವು ಮೂಡಿರಬಹುದು. ವಿಶ್ವೇಶತೀರ್ಥರು ನಡೆಸಿದರು ಎನ್ನಲಾದ ಸಂವಾದಗಳನ್ನು ಅವರ ಉತ್ತರಾಧಿಕಾರಿಗಳು ಗಂಭೀರವಾಗಿ ತಿದ್ದುಕೊಳ್ಳುವ ಮನಸ್ಸಿನಿಂದ ನಡೆಸಲಿ. ತಮ್ಮ ಮತದ ಅಧ್ಯಾತ್ಮವನ್ನು ಮಾನವೀಯಗೊಳಿಸುವ ಹೆಜ್ಜೆಯನ್ನು ಅವರು ಇಡಲಿ. ಸಮಾಜದ ಸಾಮರಸ್ಯಕ್ಕೆ ನಿಜವಾದ ದಾರಿದೀಪವಾಗಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. neevu heliddu akasharashaha nija ..haage nodidare madvaralli hindinavare indina yuva janatheginta eshto yogyaragiddaru ..avara madi , mailige jothege dushchatagalindalu doora iddaru and nau kandiruvante iginavariginta hecchina manaviyathe ittu ..indina madvaru kevala cigarette , bar vishayadalli munduvarediddare horathu hindinavariginta hecchu jaathi bagge kocchikollo edabidangitana

LEAVE A REPLY

Please enter your comment!
Please enter your name here

- Advertisment -

Must Read