Homeಮುಖಪುಟಫೇಸ್‌ಬುಕ್‌ನ "ಹೇಟ್‌ಸ್ಪೀಚ್" ನಿಯಮಗಳು ಮತ್ತು ಭಾರತದ ರಾಜಕೀಯ: ವಾಲ್‌ಸ್ಟ್ರೀಟ್‌ ಜರ್ನಲ್ ಲೇಖನದ ಅನುವಾದ

ಫೇಸ್‌ಬುಕ್‌ನ “ಹೇಟ್‌ಸ್ಪೀಚ್” ನಿಯಮಗಳು ಮತ್ತು ಭಾರತದ ರಾಜಕೀಯ: ವಾಲ್‌ಸ್ಟ್ರೀಟ್‌ ಜರ್ನಲ್ ಲೇಖನದ ಅನುವಾದ

2017ರಲ್ಲಿ ಅಂಕಿ ದಾಸ್ ಅವರು ಫೇಸ್‌ಬುಕ್‌ನ ಥಂಬ್ಸ್ ಅಪ್ ಚಿಹ್ನೆಯನ್ನು ಬಳಸಿ ಮೋದಿಯವರನ್ನು ಹೊಗಳಿ ಪ್ರಬಂಧವನ್ನು ಬರೆದಿದ್ದರು. ಅದು ಮೋದಿ ಅವರ ವೆಬ್‌ಸೈಟ್‌ ಮತ್ತು ಮೊಬೈಲ್ ಆಪ್‌ಗಳಲ್ಲಿ ಪ್ರಕಟವಾಗಿತ್ತು.

- Advertisement -
- Advertisement -

ಕೃಪೆ: ನ್ಯೂಲಿ ಪರ್ನೆಲ್ ಮತ್ತು ಜೆಫ್ ಹೋರ್ವಿಝ್, ವಾಲ್‌ಸ್ಟ್ರೀಟ್‌ ಜರ್ನಲ್

ಅನುವಾದ: ನಿಖಿಲ್ ಕೋಲ್ಪೆ

ಫೇಸ್‌ಬುಕ್ ಪೋಸ್ಟ್‌ ಗಳಲ್ಲಿ ಮತ್ತು ಸಾರ್ವಜನಿಕವಾಗಿಯೂ ಭಾರತೀಯ ರಾಜಕಾರಣಿ  ಟಿ. ರಾಜಾ ಸಿಂಗ್ ಹೇಳಿದ್ದರು- ರೋಹಿಂಗ್ಯ ಮುಸ್ಲಿಮ್ ವಲಸಿಗರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು. ಮಸ್ಲಿಮರನ್ನು ದ್ರೋಹಿಗಳು ಎಂದು ಕರೆದು ಮಸೀದಿಗಳನ್ನು ನೆಲಸಮ ಮಾಡುವ ಬೆದರಿಕೆ ಕೂಡಾ ಹಾಕಿದ್ದರು.

ಫೇಸ್‌ಬುಕ್ Inc.ನಲ್ಲಿ ಪೊಲೀಸ್‌ಗಿರಿ ಮಾಡಲು ನಿಯುಕ್ತರಾದ ನೌಕರರು ಅದನ್ನೆಲ್ಲ ನೋಡುತ್ತಲೇ ಇದ್ದರು. ಸಿಂಗ್ ಅವರು ಸಂಸ್ಥೆಯ ದ್ವೇಷಪೂರಿತ ಮಾತುಗಳ ನಿಯಮ ಉಲ್ಲಂಘನೆ ಮಾತ್ರವಲ್ಲ, ಅಪಾಯಕಾರಕ ಎಂದೂ ಈ ವರ್ಷದ ಮಾರ್ಚ್ ಹೊತ್ತಿಗೆ ಅವರು ನಿರ್ಧರಿಸಿದ್ದರು. ಈ ವಿಷಯದ ಬಗ್ಗೆ ಚೆನ್ನಾಗಿ ಪರಿಚಯ ಇರುವ ಹಾಲಿ ಮತ್ತು ಮಾಜಿ ಫೇಸ್‌ಬುಕ್ ನೌಕರರ ಪ್ರಕಾರ, ಒಬ ವ್ಯಕ್ತಿಯು ‘ಅಪಾಯಕಾರಕ’ ಎಂದು ಫೇಸ್ಬುಕ್ ಪರಿಗಣಿಸಿದ ಮೇಲೆ, ಆ ವ್ಯಕ್ತಿಯ ಫೇಸ್ಬುಕ್ ವೇದಿಕೆಯ ಹೊರಗಿನ ಸಾಮಾಜಿಕ ಚಟುವಟಿಕೆಗಳನ್ನೂ ಪರಿಗಣಿಸುತ್ತದೆ.

ಭಾರತದ ಕೋಮುಗಲಭೆಗಳ ಇತಿಹಾಸ ಮತ್ತು ಇತ್ತೀಚಿನ ಧಾರ್ಮಿಕ ಉದ್ವಿಗ್ನತೆಯನ್ನು ಗಮನಿಸಿದರೆ, ಆತನ ಮಾತುಗಳು ಹೊರ ಜಗತ್ತಿನಲ್ಲಿ ನಿಜವಾಗಿಯು ಹಿಂಸಾಚಾರಕ್ಕೆ ಕಾರಣವಾಗಬಹುದು ಮತ್ತು ಆತನನ್ನು ಜಗತ್ತಿನಾದ್ಯಂಥ ಸಂಸ್ಥೆಯ ಎಲ್ಲ ವೇದಿಕೆಗಳಿಂದ ನಿಷೇಧಿಸಬೇಕು ಎಂಬುದು ಅವರ ವಾದವಾಗಿತ್ತು. ಇದು ಅಮೆರಿಕಾದಲ್ಲಿ ರೇಡಿಯೋ ನಿರೂಪಕ ಅಲೆಕ್ಸ್ ಜೋನ್ಸ್, “ನೇಷನ್ ಆಫ್ ಇಸ್ಲಾಂ” ಸಂಘಟನೆಯ ಮುಖಂಡ ಲೂಯಿಸ್ ಫರಾಖಾನ್ ಮತ್ತು ಹಲವಾರು ಬಿಳಿಯ “ಜನಾಂಗೀಯ ಶ್ರೇಷ್ಟತಾ ವ್ಯಸನಿ”ಗಳ (supremacist) ಸಂಘಟನೆಗಳಿಗೆ ನೀಡಿದ ಶಿಕ್ಷೆಯಾಗಿತ್ತು ಎಂದು ಸಂಸ್ಥೆಯ ಹಾಲಿ ಮತ್ತು ಮಾಜಿ ನೌಕರರು ಹೇಳುತ್ತಾರೆ.

ಆದರೂ, ಪ್ರಧಾನಿ ನರೇಂದ್ರ ಮೋದಿಯ ಹಿಂದೂ ರಾಷ್ಟ್ರೀಯವಾದಿ ಪಕ್ಷಕ್ಕೆ ಸದಸ್ಯರಾಗಿರುವ ಸಿಂಗ್ ಇನ್ನೂ ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲಿ ಅವರಿಗೆ ಸಾವಿರಾರು ಬೆಂಬಲಿಗರಿದ್ದಾರೆ. ಭಾರತದಲ್ಲಿ ಸಂಸ್ಥೆಯ ಸಾರ್ವಜನಿಕ-ನೀತಿಯ ಅಧಿಕಾರಿಯಾಗಿರುವ ಅಂಖಿ ದಾಸ್ ಅವರು ಸಿಂಗ್ ಮೇಲೆ ದ್ವೇಷಪೂರಿತ ಭಾಷಣದ ನಿಯಮಗಳನ್ನು ಆರೋಪಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಹಿಂಸಾಚಾರದಲ್ಲಿ ಸ್ವತಃ ಭಾಗವಹಿಸಿದ್ದಕ್ಕಾಗಿ ಅಥವಾ ಪ್ರಚೋದಿಸಿದ್ದಕ್ಕಾಗಿ ಆಂತರಿಕವಾಗಿ ಗುರುತಿಸಲಾಗಿದ್ದ ಕನಿಷ್ಟ ಮೂರು ವ್ಯಕ್ತಿಗಳು ಮತ್ತು ಸಂಘಟನೆಗಳನ್ನು  ಇವರು ಸಮರ್ಥಿಸಿಕೊಂಡಿದ್ದರು ಎಂದು ಸಂಸ್ಥೆಯ ಹಾಲಿ ಮತ್ತು ಮಾಜಿ ನೌಕರರು ಹೇಳುತ್ತಾರೆ.

ಬಿಜೆಪಿ ಶಾಸಕ ರಾಜಾ ಸಿಂಗ್: Courtesy: DNA India

ಬಳಗೆದಾರರ ಸಂಖ್ಯೆಯ ಆಧಾರದಲ್ಲಿ ಜಾಗತಿಕವಾಗಿ ಭಾರತವನ್ನು ದೊಡ್ಡ ಮಾರುಕಟ್ಟೆ ಮಾಡಿಕೊಂಡಿರುವ ಫೇಸ್‌ಬುಕ್ ಪರವಾಗಿ ಭಾರತ ಸರಕಾರದ ಜೊತೆ ಲಾಬಿ ಮಾಡುವ ಜವಾಬ್ದಾರಿ ಕೂಡಾ ಹೊಂದಿರುವ ಈ ದಾಸ್, ಮೋದಿಯ ಪಕ್ಷದ ರಾಜಕಾರಣಿಗಳಿಗೆ ನಿಯಮ ಉಲ್ಲಂಘನೆಗೆ “ಶಿಕ್ಷೆ” ವಿಧಿಸುವುದರಿಂದ ಭಾರತದಲ್ಲಿ ಸಂಸ್ಥೆಯ ವ್ಯಾಪಾರ ವಹಿವಾಟುಗಳಿಗೆ ತೊಂದರೆಯಾಗುತ್ತದೆ ಎಂದು ತನ್ನ ನೌಕರರಿಗೆ ಹೇಳಿದ್ದರು ಎಂದು ಸಂಸ್ಥೆಯ ಹಾಲಿ, ಮಾಜಿ ನೌಕರರು ಹೇಳುತ್ತಾರೆ.

ಪ್ರಪಂಚದಾದ್ಯಂತ ಜನರು ಫೇಸ್‌ಬುಕ್ ಮತ್ತದರ ಇತರೆ ವೇದಿಕೆಗಳಲ್ಲಿ ಪೋಸ್ಟ್ ಮಾಡುವ ವಿಷಯಗಳು ಅಗಾಧ ಪ್ರಮಾಣದಲ್ಲಿರುವಾಗ ದ್ವೇಷ ಪ್ರಚೋದನೆಯ ಮಾತುಗಳನ್ನು ಕಂಡಹಿಡಿಯುವುದು ನಿಯಂತ್ರಿಸುವುದು ಬೆಟ್ಟ ಅಗೆಯುವ ಕೆಲಸವಾಗಿದೆ. ಅದು ಈ “ಹೇಟ್ ಸ್ಪೀಚ್” ಅಥವಾ ದ್ವೇಷ ಪ್ರಚೋದನಕಾರಿ ಮಾತುಗಳ ನಿಯಮಗಳನ್ನು ಹಿಂದೂ ರಾಷ್ಟ್ರೀಯವಾದಿ ಸಂಘಟನೆಗಳಿಗೆ ಅನ್ವಯಿಸುತ್ತಿರುವ ರೀತಿಯು ರಾಜಕೀಯ ಲೆಕ್ಕಾಚಾರ ಸಂಸ್ಥೆಯ ಲೆಕ್ಕಾಚಾರಗಳೊಂದಿಗೆ ನುಸುಳಿರುವುದು ಸ್ಪಷ್ಟವಾಗಿ ಸೂಚಿಸುತ್ತದೆ.

“ಫೇಸ್‌ಬುಕ್‌ನ ದೊಡ್ಡ ಸಮಸ್ಯೆಯೆಂದರೆ, ಒಂದೇ ನೀತಿ ಸಂಸ್ಥೆಯು ವೇದಿಕೆಯ ನಿಯಮಗಳನ್ನು ರೂಪಿಸುವ ಮತ್ತು ಸರಕಾರವನ್ನು ಖುಶಿಯಲ್ಲಿ ಇಟ್ಟಿರುವ ಜವಾಬ್ದಾರಿಯನ್ನು ಹೊಂದಿರುವುದು” ಎಂದು ಈಗ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಇಂಟರ್ನೆಟ್ ವೀಕ್ಷಣಾಲಯದ ಹೊಸ ನಿರ್ದೇಶಕರಾಗಿರುವ ಮತ್ತು ಹಿಂದೆ ಫೇಸ್‌ಬುಕ್‌ನ ಭದ್ರತಾ ಮುಖ್ಯಸ್ಥರಾಗಿದ್ದ ಅಲೆಕ್ಸ್ ಸ್ಟೆಮೋಸ್ ಕಳೆದ ಮೆ ತಿಂಗಳಲ್ಲಿ ಟ್ವಿಟ್ಟರ್‌ನಲ್ಲಿ ಬರೆದಿದ್ದರು.  ಅಮೆರಿಕದಲ್ಲಿ ಫೇಸ್‌ಬುಕ್ಕನ್ನು ವಿಭಜಕ ಪ್ರವೃತ್ತಿಯಿಂದ ಮಾಡುವ ಆಂತರಿಕ ಪ್ರಯತ್ನಗಳ ಬದಲಾವಣೆಗಳನ್ನು ಪಕ್ಷಪಾತಿ ಧೋರಣೆ ಎಂದು ಪರಿಗಣಿಸುವ ಸಾಧ್ಯತೆ ಇದೆಯೆಂದು ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಗಳು ತಡೆಯೊಡ್ಡಿದ್ದನ್ನು ಕುರಿತು ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾದ ಲೇಖನವೊಂದನ್ನು ಅವರು ಉಲ್ಲೇಖಿಸಿದ್ದರು. ಸ್ಟೆಮೋಸ್ ಅವರ ಅಭಿಪ್ರಾಯಗಳನ್ನು ತಾವು ಒಪ್ಪುವುದಾಗಿ ಫೇಸ್‌ಬುಕ್‌ನ ಸಾರ್ವಜನಿಕ ನೀತಿ ವಿಭಾಗದಲ್ಲಿ ಹಿಂದೆ ಕೆಲಸ ಮಾಡುತ್ತಿದ್ದವರು ಹೇಳುತ್ತಾರೆ.

ಈಗ ರಾಜಕೀಯ ಪಕ್ಷವಾತದ ಆರೋಪಗಳನ್ನು ಫೇಸ್‌ಬುಕ್ ಆಗಾಗ ಎದುರಿಸುತ್ತಿರುವುದರಿಂದ ಅಮೆರಿಕದಲ್ಲಿ ಅದರ ನೀತಿಯ ವಿಷಯ ಒಂದು ಪ್ರಮುಖ ಪ್ರಶ್ನೆಯಾಗಿ ಹೊರಹೊಮ್ಮಿದೆ. ಅದರ ದ್ವೇಷ ಕಾರುವ ವಿಷಯಗಳನ್ನು ನಿರ್ವಹಣೆಯನ್ನು ವಿರೋಧಿಸಿ ಕೆಲವು ಪ್ರತಿಷ್ಟಿತ ಜಾಹೀರಾತುದಾರರು ಫೇಸ್‌ಬುಕ್‌ಗೆ ಬಹಿಷ್ಕಾರ ಹಾಕಿದ್ದರು. ಪ್ರಪಂಚದ ಎಲ್ಲೆಡೆಯಲ್ಲಿ ತನ್ನ ವೇದಿಕೆಯಲ್ಲಿ ದ್ವೇಷ ಹರಡಲು ಬಳಸುವ ಪ್ರಯತ್ನಗಳನ್ನು ತಾನು ಸಹಿಸುವುದಿಲ್ಲ ಎಂದು ಫೇಸ್‌ಬುಕ್ ಹೇಳುತ್ತದೆ. ತನ್ನ ಸಂಸ್ಥೆಯ ವೇದಿಕೆಯನ್ನು ಹಿಂಸೆಯನ್ನು ಪ್ರಚೋದಿಸಲು ಅಥವಾ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪಮಾಡಲು ಬಳಸಿಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಝಕರ್‌ಬರ್ಗ್ ಮತ್ತೆ ಮತ್ತೆ ತನ್ನ ನೌಕರರು ಮತ್ತು ಜಾಹೀರಾತುದಾರರಿಗೆ ಅಭಯ ನೀಡಲು ಪ್ರಯತ್ನಿಸುತ್ತಲೇ ಇದ್ದಾರೆ.

“ರಾಜಕಾರಣಿಗಳು ಏನನ್ನು ಹೇಳುತ್ತಾರೆ ಎಂಬುದು ಜನರಿಗೆ ಗೊತ್ತಾಗಬೇಕು, ಆದರೆ, ಅದಕ್ಕೆ ಸೀಮಾರೇಖೆಗಳಿವೆ. ಅವನ್ನು ನಾವು ಅನುಷ್ಟಾನಗೊಳಿಸುತ್ತೇವೆ” ಎಂದು ಕಳೆದ ಮೇನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆನ್ಲೈನ್ ಚಟುವಟಿಕೆಗಳ ಬಗ್ಗೆ ಕೇಳಿದಾಗ ಝಕರ್‌ಬರ್ಗ್ ಹೇಳಿದ್ದರು.

ಇದಕ್ಕೆ ಹೊರತಾಗಿಯೂ ದಾಸ್ ಅವರು ಸಿಂಗ್ ಪರವಾಗಿ ಮಧ್ಯಪ್ರವೇಶ ಮಾಡಿರುವುದು ಫೇಸ್‌ಬುಕ್ ಮೋದಿಯವರ ಭಾರತೀಯ ಜನತಾ ಪಕ್ಷ ಮತ್ತು ಹಿಂದೂ ತೀವ್ರಗಾಮಿಗಳ ಪರವಾಗಿ ತಾರತಮ್ಯ ಮಾಡುತ್ತಿರುವ ವಿಸ್ತಾರವಾದ ವಿನ್ಯಾಸವನ್ನು ಸೂಚಿಸುತ್ತದೆ ಎಂದು ಸಂಸ್ಥೆಯ ಮಾಜಿ ಮತ್ತು ಹಾಲಿ ನೌಕರರು ಹೇಳುತ್ತಾರೆ.

ಅಂಕಿ ದಾಸ್ ಮತ್ತು ಮಾರ್ಕ್ ಝುಗರ್‌ಬರ್ಗ್. Courtesy: The Indian Express

ಸಿಂಗ್ ಅವರನ್ನು ಅಪಾಯಕಾರಿ ವ್ಯಕ್ತಿ ಎಂದು ಘೋಷಿಸುವುದರ ರಾಜಕೀಯ ಪರಿಣಾಮಗಳ ವಿಷಯವನ್ನು ಅಂಕಿ ದಾಸ್ ಎತ್ತಿರುವುದನ್ನು ಫೇಸ್‌ಬುಕ್ ವಕ್ತಾರ ಏಂಡಿ ಸ್ಟೋನ್ ಒಪ್ಪಿಕೊಂಡರೂ,ಆತನನ್ನು ಫೇಸ್‌ಬುಕ್‌ನಲ್ಲಿ ಮುಂದುವರಿಸುವ ನಿರ್ಧಾರಕ್ಕೆ ಕಾರಣವಾದ ಅಂಶ ಅದೊಂದೇ ಅಲ್ಲ ಎಂದು ಹೇಳಿದ್ದಾರೆ. ಆತನ ನಿಷೇಧ ಮಾಡಬೇಕೇ ಬೇಡವೇ ಎಂಬುದು ಇನ್ನೂ ಸಂಸ್ಥೆಯ ಪರಿಶೀಲನೆಯಲ್ಲಿದೆ ಎಂದು ವಕ್ತಾರರು ಹೇಳಿದ್ದಾರೆ.

“ಯಾರದ್ದೇ ರಾಜಕೀಯ ಸ್ಥಾನಮಾನ ಅಥವಾ ಪಕ್ಷನಿಷ್ಟೆಯನ್ನು ಪರಿಗಣಿಸದೆ” ದ್ವೇಷ ಮತ್ತು ಹಿಂಸೆ ಕೆರಳಿಸುವ ಮಾತು – ಬರಹಗಳನ್ನು ಫೇಸ್‌ಬುಕ್ ಜಾಗತಿಕವಾಗಿ ನಿಷೇಧಿಸುತ್ತದೆ ಎಂದಿರುವ ವಕ್ತಾರರು ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಹಿಂಸಾಚಾರವನ್ನು ಹೊಗಳುವ ಪೋಸ್ಟ್ ಗಳನ್ನು ಫೇಸ್‌ಬುಕ್ ಕಿತ್ತು ಹಾಕಿದೆ ಎಂದೂ ಹೇಳಿದ್ದಾರೆ.

ಈ ಕುರಿತು ದಾಸ್ ಅವರಾಗಲೀ, ಸಿಂಗ್ ಅವರಾಗಲೀ ಅಥವಾ ಅವರ ಪಕ್ಷದ ವಕ್ತಾರರು ನಮ್ಮ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಧಾನಿ ಕಚೇರಿಯ ವಕ್ತಾರರೊಬ್ಬರೂ ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಕೆಲವು ಸಲ ತನ್ನ ಪ್ರಮುಖ ಮಾರುಕಟ್ಟೆಯಲ್ಲಿ  ರಾಜಕೀಯ ವಾಸ್ತವತೆಗೆ ಹೊಂದಿಕೊಳ್ಳುವಂತೆ ಫೇಸ್‌ಬುಕ್ ತನ್ನ ಧೋರಣೆಗಳನ್ನು ಬದಲಾಯಿಸುತ್ತದೆ. ಜರ್ಮನಿಯಲ್ಲಿ ಅದು ಅಮೆರಿಕ ಮತ್ತಿತರ ಕಡೆಗಳಿಗಂತ ಹೆಚ್ಚು ಬಿಗಿಯಾದ ಧ್ವೇಷ ಭಾಷಣ ನಿಯಮಗಳನ್ನು ಅನುಸರಿಸಲು ಒಪ್ಪಿಕೊಂಡಿದೆ. ತನ್ನ ಏಷ್ಯಾ ಚಟುವಟಿಕೆಗಳ ಕೇಂದ್ರವಾದ ಸಿಂಗಾಪುರದಲ್ಲಿ ಅದು ಸರಕಾರವು ಸುಳ್ಳೆಂದು ಪರಿಗಣಿಸುವ ಸುದ್ದಿ ವರದಿಗಳಿಗೆ “ತಿದ್ದುಪಡಿ ನೋಟೀಸು” ಸೇರಿಸಿ ಪ್ರಕಟಿಸಲು ಒಪ್ಪಿಕೊಂಡಿದೆ. ವಿಯೆಟ್ನಾಂನಲ್ಲಿ ಸರಕಾರ ಫೇಸ್‌ಬುಕ್‌ನ ಪ್ರಾದೇಶಿಕ ಸರ್ವರ್‌ಗಳಲ್ಲಿ ಮಧ್ಯಪ್ರವೇಶ ಮಾಡಿ,  ವೇದಿಕೆಯನ್ನು ನಿಧಾನಕ್ಕೆ ತೆವಳುವಂತೆ ಮಾಡುತ್ತಿದ್ದ ಪ್ರಕ್ರಿಯೆಯನ್ನು ಕೈಬಿಡಲು ಒಪ್ಪಿದ್ದಕ್ಕೆ ಪ್ರತಿಯಾಗಿ ಅದು ಭಿನ್ನಮತೀಯ ರಾಜಕೀಯ ವಿಷಯ ಮತ್ತು ಸುದ್ದಿಗಳನ್ನು ಸೀಮಿತಗೊಳಿಸಲು ಒಪ್ಪಿಕೊಂಡಿದೆ.

ಭಾರತವು ಫೇಸ್‌ಬುಕ್‌ಗೆ ಒಂದು ನಿರ್ಣಾಯಕ ಮತ್ತು ಅತೀ ದೊಡ್ಡ ಮಾರುಕಟ್ಟೆಯಾಗಿದೆ. 100 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಇನ್ನೊಂದು ದೇಶವಾಗಿರುವ ಚೀನಾ ಫೇಸ್‌ಬುಕ್ ವೇದಿಕೆಯನ್ನು ನಿಷೇಧಿಸಿದೆ. ಭಾರತವು ಯಾವುದೇ ಇತರ ದೇಶಗಳಿಗಿಂತ ಹೆಚ್ಚು ಫೇಸ್‌ಬುಕ್ ಮತ್ತು ವಾಟ್ಸಪ್ ಬಳಕೆದಾರರನ್ನು ಹೊಂದಿದೆ. ಅದು ಇತ್ತೀಚೆಗೆ ಪಾವತಿ, ಎನ್‌ಕ್ರಿಪ್ಷನ್ ಇತ್ಯಾದಿ ವಾಣಿಜ್ಯ ಚಟುವಟಿಕೆಗಳನ್ನು ಪರಿಚಯಿಸಲು ಭಾರತವನ್ನು ಒಂದು ಮಾರುಕಟ್ಟೆಯಾಗಿ ಆಯ್ದುಕೊಂಡಿದೆ. ಅದು ತನ್ನ ಜಾಲವನ್ನು ವಿಸ್ತರಿಸಲು ಏಪ್ರಿಲ್ ನಲ್ಲಿ ಭಾರತೀಯ ಟೆಲಿಕಾಂ ಸಂಸ್ಥೆಯೊಂದರ ಜೊತೆ 5.7 ಬಿಲಿಯನ್ ಡಾಲರುಗಳ ಒಪ್ಪಂದವನ್ನು ಮಾಡಿಕೊಂಡಿದ್ದು, ಇದು ಸಂಸ್ಥೆಯ ಅತೀದೊಡ್ಡ ವಿದೇಶಿ ಹೂಡಿಕೆಯಾಗಿದೆ.

ಕಳೆದ ಜೂನ್‌ನಲ್ಲಿ ಚೀನಾದೊಂದಿಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತವು ಟಿಕ್‌ಟಾಕ್‌  ಆಪ್‌ನ್ನು ನಿಷೇಧಿಸಿತ್ತು. ಅಂತೆಯೇ ಫೇಸ್‌ಬುಕ್ ಕೂಡಾ ಭಾರತೀಯ ನಿಯಂತ್ರಕರಿಂದ ಪ್ರತಿರೋಧ ಎದುರಿಸಿದೆ.

“ಫ್ರೀ ಬೇಸಿಕ್ಸ್” ಎಂದು ಕರೆಯಲ್ಪಡುವ ಫೇಸ್‌ಬುಕ್ ಕೇಂದ್ರಿತ ಕೆಲವು ಉಚಿತ ಸೇವೆಗಳನ್ನು ಪರಿಚಯಿಸುವುದು ಅಂತರ್ಜಾಲ ತಟಸ್ಥತೆಗೆ (ಅಂತರ್ಜಾಲದಲ್ಲಿ ಬರುವ ಎಲ್ಲ ಸೇವೆಗಳು ಸಮ ಎನ್ನುವ ಕಲ್ಪನೆ) ವಿರುದ್ಧವಾಗಿದೆ ಎಂದು ಬಗೆದು ಭಾರತ 2016ರಲ್ಲಿಯೇ ಅದಕ್ಕೆ ತಡೆ ಒಡ್ಡಿತ್ತು. ಅದೇ ರೀತಿ ವಾಟ್ಸಪ್‌ನಲ್ಲಿ ಪಾವತಿ ಸೌಲಭ್ಯ ಚದಗಿಸುವ ಅದರ ಪ್ರಸ್ತಾವವೂ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದು, ಅದು  ಸರಕಾರದ ಅಂಗೀಕಾರಕ್ಕಾಗಿ ಕಾಯುತ್ತಿದೆ.

ದಾಸ್ ಅವರು 2011ರಲ್ಲಿ ಫೇಸ್‌ಬುಕ್ ಸೇರಿದ್ದು, ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥರಾಗಿ ಅವರು ಫೇಸ್‌ಬುಕ್‌ನಲ್ಲಿ ಯಾವ ವಿಷಯಗಳು ಇರಬೇಕು ಅಥವಾ ಇರಬಾರದು ಎಂಬುದನ್ನು ನಿರ್ಧರಿಸುವ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ.

ಬಿಜೆಪಿ ನಾಯಕರು  ಮುಸ್ಲಿಮರು ಉದ್ದೇಶಪೂರ್ವಕವಾಗಿ ಕೊರೊನಾ ಹರಡಿ ಭಾರತದ ವಿರುದ್ಧ ಸಂಚು ಹೂಡುತ್ತಿದ್ದಾರೆ; ಹಿಂದೂ ಮಹಿಳೆಯರನ್ನು ಮದುವೆಯಾಗಿ “ಲವ್ ಜೆಹಾದ್” ಮಾಡುತ್ತಿದ್ದಾರೆ ಎಂದು ಆರೋಪಿಸುವ ಪೋಸ್ಟ್‌ ಗಳನ್ನು ಹಾಕಿದಾಗಲೂ ಈ ತಂಡವು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮಾಜಿ ನೌಕರರೊಬ್ಬರು ಹೇಳುತ್ತಾರೆ.

ಹಾಗೆಯೇ, ದಾಸ್ ಅವರು ಚುನಾವಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಬಿಜೆಪಿ ಪರವಾಗಿ ಒಲವು ತೋರಿಸಿದ್ದಾರೆ ಎಂದು ಹಾಲಿ ಮತ್ತು ಮಾಜಿ ನೌಕಕರು ಹೇಳುತ್ತಾರೆ.

ಕಳೆದ ವರ್ಷ ಏಪ್ರಿಲ್ ನಲ್ಲಿ, ಸಾರ್ವತ್ರಿಕ ಚುನಾಣೆಯ ಮತದಾನ ಆರಂಭವಾಗುವುದಕ್ಕೂ ಕೆಲವು ದಿನಗಳ ಮೊದಲು,  ಫೇಸ್‌ಬುಕ್ ಪಾಕಿಸ್ತಾನ ಸೇನೆ ಮತ್ತು ಕಾಂಗ್ರೆಸ್ ಪಕ್ಷಗಳ ಜೊತೆ ಸಂಬಂಧ ಹೊಂದಿರುವ ಅನಧಿಕೃತ ಪುಟಗಳನ್ನು ಕಿತ್ತುಹಾಕಿರುವುದಾಗಿ ಘೋಷಿಸಿತು. ಆದರೆ, ಸುಳ್ಳು ಸುದ್ದಿ ಹರಡುತ್ತಿದ್ದ ಬೆಜೆಪಿ ಜೊತೆ ಸಂಬಂಧ ಹೊಂದಿರುವ ಪುಟಗಳನ್ನು ಕಿತ್ತು ಹಾಕಿರುವುದನ್ನು ಅದು ಬಹಿರಂಗಪಡಿಸಲಿಲ್ಲ ಏಕೆಂದರೆ ದಾಸ್ ಅವರ ಮಧ್ಯಪ್ರವೇಶದ ಕಾರಣದಿಂದ ಎಂದು ಸಂಸ್ಥೆಯ ಮಾಜಿ ನೌಕರರು ಹೇಳುತ್ತಾರೆ.

2017ರಲ್ಲಿ ದಾಸ್ ಅವರು ಫೇಸ್‌ಬುಕ್‌ನ ಥಂಬ್ಸ್ ಅಪ್ ಚಿಹ್ನೆಯನ್ನು ಬಳಸಿ ಮೋದಿಯವರನ್ನು ಹೊಗಳಿ ಪ್ರಬಂಧವನ್ನು ಬರೆದಿದ್ದರು. ಅದು ಮೋದಿ ಅವರ ವೆಬ್‌ಸೈಟ್‌ ಮತ್ತು ಮೊಬೈಲ್ ಆಪ್‌ಗಳಲ್ಲಿ ಪ್ರಕಟವಾಗಿತ್ತು.

ತನ್ನ ಸ್ವಂತ ಫೇಸ್‌ಬುಕ್ ಪುಟದಲ್ಲಿ ದಾಸ್‌ ಅವರು, ತಾನೊಬ್ಬ ಮುಸ್ಲಿಂ ಎಂದು ಹೇಳಿ, ಮುಸ್ಲಿಮರು ಒಂದು “ಅನೈತಿಕ ಸಮುದಾಯ”ವಾಗಿದ್ದು, ಅವರಿಗೆ “ತಮ್ಮ ಧರ್ಮದ ಶುದ್ಧತೆ ಮತ್ತು ಶೆರಿಯಾದ ಜಾರಿಯ ಹೊರತು ಬೇರೇನೂ ಪರಿಗಣನೆಗೆ ಬರುವುದಿಲ್ಲ” ಎಂದು ಹೇಳಿದ ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ಪೋಸ್ಟ್ ಅನ್ನು ಹಂಚಿಕೊಂಡಿದ್ದರು.

ಈ ಪೋಸ್ಟ್ “ಕಳೆದ ರಾತ್ರಿ ನನ್ನ ಜೊತೆ ಮಾತಾಡಿತು” ಎಂದು ಬರೆದಿದ್ದ ದಾಸ್ “ಉಳಿದ ಭಾರತದ ಜೊತೆಗೂ ಇದಾಗಬೇಕು” ಎಂದಿದ್ದರು.

ಸಿಂಗ್ ಒಬ್ಬ ಬಿಜೆಪಿ ಜನಪ್ರತಿನಿಧಿಯಾಗಿದ್ದು, ಮುಸ್ಲಿಮ್ ವಿರೋಧಿ ದ್ವೇಷ ಕೆರಳಿಸುವ ಮಾತು –ಬರಹಗಳಿಂದ ಮತ್ತು “ದೇಶದ್ರೋಹಿಗಳ” ವಿರುದ್ಧ ಸೇನೆಯೊಂದನ್ನು ಕಟ್ಟುತ್ತಿರುವುದಾಗಿ ಹೇಳುವುದರ ಮೂಲಕ ರಾಷ್ಟ್ರವಾಪಿ ಗಮನ ಸೆಳೆದಿದ್ದರು.

ಫೇಸ್‌ಬುಕ್‌ನ ತಮ್ಮ ಪುಟಕ್ಕೆ ನಾಲ್ಕು ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಅವರು, ಹಿಂದೂಗಳಿಗೆ ಪವಿತ್ರವಾದ ಗೋವುಗಳನ್ನು ಕೊಲ್ಲುವವರನ್ನು ಅದೇ ರೀತಿ ಕೊಲ್ಲಬೇಕೆಂದು ಕರೆ ನೀಡಿದ್ದರು. ಕತ್ತಿ ಎಳೆದಿಡಿಡು ನಿಂತ ಫೋಟೋದೊಂದಿಗೆ ಮುಸ್ಲಿಮರ ವಿರುದ್ಧ ಕಾನುಬಾಹಿರವಾಗಿ ಕ್ರಮ ತೆಗೆದುಕೊಳ್ಳುವುದರಿಂದಲೇ ಹಿಂದೂಗಳ ಅಸ್ಥಿತ್ವ ಸಾಧ್ಯ ಎಂದು ಬರೆದಿದ್ದರು.

ಈ ರೀತಿಯ ದ್ವೇಷ ಕಾರಿ ಪುನರುಚ್ಚರಿಸುವ ಅವರ ಮಾತುಗಳಿಗಾಗಿ ಅವರನ್ನು “ಅಪಾಯಕಾರಿ ವ್ಯಕ್ತಿಗಳು ಮತ್ತು ಸಂಘಟನೆಗಳು”  ನೀತಿಯ ಅನ್ವಯ ಶಾಶ್ವತವಾಗಿ ನಿಷೇಧಿಸಬೇಕು ಎಂದು ಫೇಸ್‌ಬುಕ್‌ನ ಸುರಕ್ಷತಾ ಸಿಬ್ಬಂದಿ ತೀರ್ಮಾನಿಸಿದ್ದರು ಎನ್ನುತ್ತಾರೆ ಸಂಸ್ಥೆಯ ಹಾಲಿ ಮತ್ತು ಮಾಜಿ ನೌಕರರು. ಬಿಳಿ ಜನಾಂಗದ ಶ್ರೇಷ್ಟತೆಯ ಪ್ರದಿಪಾದಕರಲ್ಲಿ ಒಬ್ಬರಾದ ಅಮೆರಿಕದ ರಿಚರ್ಡ್ ಸ್ಪೆನ್ಸರ್ ಅವರನ್ನು ವೇದಿಕೆಯಿಂದ ಕಿತ್ತು ಹಾಕಿದ ಸಂಸ್ಥೆಯ ಕಠಿಣ ಶಿಕ್ಷೆ ಇವರಿಗೂ ನೀಡಬೇಕಿತ್ತು.

ವಾಲ್ ಸ್ಟ್ರೀಟ್ ಜರ್ನಲ್ ಸಿಂಗ್ ಅವರ ಪೋಸ್ಟ್ ಗಳ ಬಗ್ಗೆ ಚರ್ಚೆ ಎತ್ತಿದ ಮೇಲೆ ಫೇಸ್‌ಬುಕ್ ಅವರ ಕೆಲವು ಪೋಸ್ಟ್ ಗಳನ್ನು ತೆಗೆದುಹಾಕಿದೆ. ನೀಲಿ ಗುರುತಿನ ಬ್ಯಾಡ್ಜ್ ನೊಂದಿಗೆ ಅಧಿಕೃತ ಖಾತೆಯನ್ನು ಈಗ ಸಿಂಗ್ ಅವರು ಹೊಂದುವಂತಿಲ್ಲ.

ಮತ್ತೊಬ್ಬ ಬಿಜೆಪಿ ಸದಸ್ಯ ಮತ್ತು ಸಂಸದ ಅನಂತ ಕುಮಾರ್ ಹೆಗಡೆ ಕೂಡಾ ತನ್ನ ಫೇಸ್‌ಬುಕ್ ಪುಟದಲ್ಲಿ ಪ್ರಚೋದನಕಾರಿ ಬರಹ ಮತ್ತು ವ್ಯಂಗ್ಯಚಿತ್ರಗಳನ್ನು ಪೋಸ್ಟ್ ಮಾಡಿ ಮುಸ್ಲಿಮರ ವಿರುದ್ಧ ಕೋವಿಡ್ ಹರಡುತ್ತಿರುವ ಅರೋಪ ಮಾಡಿ “ಕೊರೊನಾ ಜಿಹಾದ್” ಸಂಚನ್ನು ಹೂಡಿದ್ದಾರೆ ಎಂದಿದ್ದರು. ಮತದಂತಹ “ರಕ್ಷಿತ ಲಕ್ಷಣಗಳ” ಮೂಲದ ಜನರ ಮೇಲೆ ನಡೆಸುವ ನೇರ ದಾಳಿಗಳನ್ನು ಹೊರತುಪಡಿಸಿ, ಫೇಸ್‌ಬುಕ್ ದ್ವೇಷ ನಿಯಮಗಳನ್ನು ಉಲ್ಲಂಘಿಸುವ ಇಂತಹ “ಹುರುಳಿಲ್ಲದ ಆರೋಪಗಳ” ಸಾಮಾನ್ಯವಾಗಿ ಭಾರತದ ಮುಸ್ಲಿಮರ ವಿರುದ್ಧ ಬೆಸೆದುಕೊಂಡಿರುತ್ತವೆ ಮತ್ತು ಅವುಗಳನ್ನು ಟ್ವಿಟ್ಟರ್ ಸಂಸ್ಥೆ ದ್ವೇಷ ಭಾಷಣ ಎಂದು ನಿಯಮಿಸಿದೆ ಎನ್ನುತ್ತವೆ ಹಲವು ಮಾನವ ಹಕ್ಕುಗಳ ಹೋರಾಟಗಾರ ಗುಂಪುಗಳು.

ಅನಂತ್ ಕುಮಾರ್ ಹೆಗ್ಡೆ Image Courtesy: Facebook

ಅಂತಹ ಪೋಸ್ಟ್ ಗಳಿಗಾಗಿ ಟ್ವಿಟ್ಟರ್ ಹೆಗ್ಡೆ ಅವರ ಖಾತೆಯನ್ನು ಅಮಾನತಿನಲ್ಲಿ ಇರಿಸಿದೆ. ಅದಕ್ಕೆ ವಿರುದ್ಧವಾಗಿ ಹೆಗ್ಡೆ ಟ್ವಿಟ್ಟರ್ ಸಂಸ್ಥೆಯ ವಿರುದ್ಧ ತನಿಖೆ ನಡೆಸಬೇಕಾಗಿ ಕರೆಕೊಟ್ಟಿದ್ದರು. ಆದರೆ ವಾಲ್ ಸ್ಟ್ರೀಟ್ ಜರ್ನಲ್  “ಕೊರೊನಾ ಜಿಹಾದ್” ಪೋಸ್ಟ್ ಗಳ ಬಗ್ಗೆ ಪ್ರತಿಕ್ರಿಯೆ ಕೇಳುವವರೆಗೂ  ಫೇಸ್‌ಬುಕ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದಾದ ನಂತರ ಗುರುವಾರ ಅವುಗಳಲ್ಲಿ ಕೆಲವು  ಫೋಸ್ಟ್‌ ಗಳನ್ನು ಫೇಸ್‌ಬುಕ್ ತೆಗೆದುಹಾಕಿದೆ. ಹೆಗೆಡೆ ಪ್ರತಿಕ್ರಿಯಿಸಲು ಕೋರಿದ ಪ್ರಶ್ನೆಗೆ ಉತ್ತರಿಸಿಲ್ಲ.

ಫೆಬ್ರವರಿಯಲ್ಲಿ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಪೌರತ್ವ ಮಸೂದೆ ವಿರುದ್ಧ ಪ್ರತಿಭಟಿಸುತ್ತಿರುವವರನ್ನು ಪೊಲೀಸರು ತೆರವುಗೊಳಿಸದೆ ಇದ್ದರೆ ಅವರ ಬೆಂಗಲಿಗರೇ ಆ ಕೆಲಸವನ್ನು ಮಾಡುವುದಾಗಿ ಎಚ್ಚರಿಸಿ ಭಾಷಣ ಮಾಡಿದ್ದರು.

ಈ ವಿಡಿಯೋ ಸಂದೇಶ ಫೇಸ್‌ಬುಕ್‌ನಲ್ಲಿ ಮೂಡಿದ ಕೆಲವೇ ಘಂಟೆಗಳ ನಂತರ ಈಶಾನ್ಯ ದಿಲ್ಲಿಯಲ್ಲಿ ಗಲಭೆಗಳು ಭುಗಿಲೆದ್ದು ಹಲವಾರು ಮಂದಿ ಸಾವಿಗೀಡಾಗಿದ್ದರು ಮತ್ತು ಅವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು. ಭಾರತೀಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದಂತೆ ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ಕೆಲವು ಕೊಲೆಗಳನ್ನು ಫೇಸ್‌ಬುಕ್‌ನ ವಾಟ್ಸಪ್ ಮೂಲಕ ಸಂಘಟಿಸಲಾಗಿತ್ತು.

ಇಷ್ಟಾದರೂ ಝುಕರ್‌ಬರ್ಗಗ್ ಕಪಿಲ್ ಮಿಶ್ರಾ ಹೆಸರೆತ್ತದೆಯೇ ಈ ಪೋಸ್ಟ್ ಗಳನ್ನು ಉದಾಹರಿಸಿ ರಾಜಕಾರಣಿಯೊಬ್ಬರಿಂದ ಈ ರೀತಿಯ ನಡವಳಿಕೆಯನ್ನು ತಮ್ಮ ವೇದಿಕೆಯಲ್ಲಿ ಸಹಿಸಲಾಗುವುದಿಲ್ಲ ಎಂದು ಜೂನ್ ನಲ್ಲಿ ಉದ್ಯೋಗಿಗಳ ಟೌನ್ ಹಾಲ್ ಸಭೆಯಲ್ಲಿ ಹೇಳಿದ್ದರು. ಫೇಸ್‌ಬುಕ್ ನಂತರದಲ್ಲಿ ಈ ವಿಡಿಯೋಗಳನ್ನು ಕಿತ್ತು ಹಾಕಿತ್ತು.

ಕಪಿಲ್ ಮಿಶ್ರಾ Image Cortesy: Amar Ujala

ಫೇಸ್‌ಬುಕ್ ವಿಡಿಯೋಗಳನ್ನು ತೆಗೆದುಹಾಕಿದ್ದನ್ನು ಮಿಶ್ರಾ ಒಪ್ಪಿಕೊಳ್ಳುತ್ತಾರಾದರೂ, ಅವುಗಳು ಹಿಂಸೆಯನ್ನು ಪ್ರಚೋದಿಸಿರಲಿಲ್ಲ ಎನ್ನುತ್ತಾರೆ. ತಮ್ಮ ಪೋಸ್ಟ್ ಗಳು ದ್ವೇಶಪೂರಿತ ಭಾಷಣಗಳಲ್ಲ ಎನ್ನುವ ಅವರು ಫೇಸ್‌ಬುಕ್ ತಮಗಾಗಲೀ ಬಿಜೆಪಿಗಾಗಲೀ ಪಕ್ಷಪಾತಿಯಾಗಿ ವರ್ತಿಸಿಲ್ಲ ಎಂಬ ತಂಬ ನಂಬಿಕೆಯನ್ನು ತಿಳಿಸುತ್ತಾರೆ.

ವಾಲ್ ಸ್ಟ್ರೀಟ್ ಜರ್ನಲ್ ಪ್ರತಿಕ್ರಿಯೆಗಾಗಿ ಕೇಳಿದಾಗ ಫೇಸ್‌ಬುಕ್ ಗುರುವಾರ ಮಿಶ್ರಾ ಅವರ ಕೆಲವು ಪೋಸ್ಟ್ ಗಳನ್ನು ತೆಗೆದುಹಾಕಿದೆ.

ಈ ಪ್ರಚೋದನಕಾರಿ ವಿಡಿಯೋ ಪೋಸ್ಟ್ ಗಳನ್ನು ಹಾಕಿದ ಬಳಿಕದ ಒಂದು ತಿಂಗಳಲ್ಲೇ ಎರಡು ಲಕ್ಷದ ಆಸುಪಾಸಿನಲ್ಲಿ ಇದ್ದ ಕಪಿಲ್ ಮಿಶ್ರಾ ಫೇಸ್‌ಬುಕ್ ಪುಟದ ಇಂಟರಾಕ್ಷನ್ ಗಳ ಸಂಖ್ಯೆ 25 ಲಕ್ಷಕ್ಕೆ ಏರಿದೆ ಎಂದು ಫೇಸ್‌ಬುಕ್‌ನ ಒಡೆತನದ ಅನಲಿಟಿಕ್ಸ್ ಟೂಲ್ ಕ್ರೌಡ್ ಟ್ಯಾಂಗಲ್‌ನ ಅಂಕಿಅಂಶಗಳು  ಹೇಳುತ್ತವೆ.


ಇದನ್ನೂ ಓದಿ: ಫೇಸ್‌ಬುಕ್‌ ಇಂಡಿಯಾ ಸಿಇಓ ಅಂಖಿ ದಾಸ್ ವಿರುದ್ದ ಸಿಡಿದೆದ್ದ ಸಹೋದ್ಯೋಗಿಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...