ಕರೀಂ ಯಾರಿಗೆ ಏನೇ ಸಹಾಯ ಮಾಡಲಿ, ಕೊನೆಗದು ಉಪದ್ರವಾಗಿಯೇ ಕೊನೆಯಾಗುವುದು.

ಕರೀಮನ ಬಗ್ಗೆ ಊರಿನ ಜನರು ಹೇಳುವ ಈ ದೂರಿನಲ್ಲಿ ಯಾವ ಸತ್ಯವೂ ಇಲ್ಲ ಎಂದು ನನ್ನ ಅನುಭವ. ಕರೀಂ ಒಬ್ಬರಿಗೆ ಸಹಾಯ ಮಾಡುತ್ತಾನೆ. ಸಹಾಯ ಪಡೆದುಕೊಂಡ ವ್ಯಕ್ತಿ ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಾನೆ. ಕೊನೆಗೆ ಅದೇ ವ್ಯಕ್ತಿ ಯಾವುದಾದರೂ ಗಂಡಾಂತರಕ್ಕೆ ಸಿಕ್ಕಿಕೊಳ್ಳುತ್ತಾನೆ. ವಿವೇಚನೆ ಉಪಯೋಗಿಸಿ ನೋಡಿದರೆ ಸಂಗತಿ ಇಷ್ಟೇ. ಆದರೆ, ಜನರು ಹಾಗೆಲ್ಲ ಯೋಚಿಸುತ್ತಾರೆಯೇ? ಏನು ಮಾಡುವುದಕ್ಕಾಗುತ್ತದೆ ಹೇಳಿ?

ಊರಿನಲ್ಲಿ ಯಾರಿಗಾದರೂ ಅನಾರೋಗ್ಯವಾದರೆ ಕರೀಂ ಓಡೋಡಿ ಬರುತ್ತಾನೆ. ತನ್ನಿಂದಾಗುವಷ್ಟು ಸಹಾಯ ಮಾಡುತ್ತಾನೆ. ಅದರಲ್ಲಿ ಪ್ರಮುಖವಾದ ಕೆಲಸ ಆ ರೋಗಕ್ಕೆ ಸರಿಯಾದ ಡಾಕ್ಟರ್ ಅಥವಾ ನಾಟಿ ವೈದ್ಯರನ್ನು ಸೂಚಿಸುವುದು. ಸೂಚಿಸುವುದು ಎಂದು ಹೇಳುವುದಕ್ಕಿಂತಲೂ ಒತ್ತಾಯಿಸುವುದು ಎಂದರೆ ಸರಿಯಾಗಬಹುದು. ಆ ಡಾಕ್ಟರ್ ಕೊಟ್ಟ ಮಾತ್ರೆಗಳಿಂದಾಗಿ ರೋಗಿ ಹುಷಾರಾಗುವ ಬದಲು ಸಾವಿನ ಬಾಗಿಲು ತನಕ ಹೋಗಿ ಬಂದ ಅಂತ ಹೇಳಿದರೆ ನಾನು ಒಪ್ಪುವುದಿಲ್ಲ. ಡಾಕ್ಟರ್ ಬಹಳ ಅನುಭವಿ. ಆದರೆ, ರೋಗಿ ಮತ್ತು ರೋಗಿಯ ಜೊತೆಗೆ ಹೋದವರು ದಡ್ಡ ಶಿಖಾಮಣಿಗಳು. ಇದರಲ್ಲಿ ಕರೀಮನ ತಪ್ಪಾದರೂ ಏನು?

ಉದಾಹರಣೆಗೆ, ಒಬ್ಬ ಏನೇ ತಿಂದರೂ ಅದನ್ನು ವಾಂತಿ ಮಾಡುತ್ತಾನೆ ಎಂದಿಟ್ಟುಕೊಳ್ಳಿ. ಎಲ್ಲ ನಾಟಿ ಮದ್ದುಗಳ ಪ್ರಯೋಗಗಳು ವಿಫಲವಾಗಿ ಕೈಚೆಲ್ಲಿ ಕೂತಿರುವ ಹೊತ್ತಲ್ಲಿ ಕರೀಂ ರಂಗ ಪ್ರವೇಶ ಮಾಡುತ್ತಾನೆ. ಪಟ್ಟಣದ ಅತಿ ದೊಡ್ಡ ಡಾಕ್ಟರ್ ಒಬ್ಬರು ತಕ್ಷಣ ಆತನಿಗೆ ನೆನಪಾಗುತ್ತಾನೆ. ಆ ಡಾಕ್ಟರ್ ಬಳಿಗೆ ಹೋದರೆ ಸಾಕು, ವಾಂತಿ ಏರ್‍ಬ್ರೇಕ್ ಹಾಕಿದ ಹಾಗೆ ಆ ಕ್ಷಣವೇ ನಿಲ್ಲುತ್ತದೆ. ಸರಿ, ನೋಡೋಣ ಎಂದು ಹೇಳಿ ಜಾರಿಕೊಳ್ಳಲು ನಿಮ್ಮಿಂದ ಸಾಧ್ಯವಿಲ್ಲ. ಹೋಗಲು ಬೇಕಾದ ಗಾಡಿಯ ವ್ಯವಸ್ಥೆ ಮಾಡಿ ಅದಕ್ಕೆ ಬಂಧು ಮಿತ್ರಾದಿಗಳನ್ನೆಲ್ಲ ತುರುಕಿಸಿ ಕೈ ಬೀಸಿ ಟಾಟಾ ಮಾಡಿಯೇ ಕರೀಂ ಅಲ್ಲಿಂದ ಕಾಲು ಕೀಳುವುದು. ಅದು ನಮ್ಮ ಕರೀಂ. ಆದರೆ, ಡಾಕ್ಟರನ್ನು ಕಂಡು ಮರಳುವಾಗ ರೋಗಿಯ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದ್ದರೆ ಅದಕ್ಕೆ ಕಾರಣ ಕರೀಂ ಅಲ್ಲವೇ ಅಲ್ಲ ಎಂಬುದು ವಾಸ್ತವ.

ಈ ಕೇಸಿನಲ್ಲಿ ಹೀಗೆ ನಡೆದಿರಬಹುದು. ವಾಂತಿಯಿಂದ ದಣಿದಿದ್ದ ರೋಗಿಗೆ ಸೋಡ ಕುಡಿಯಲು ಹೇಳಿ ಒತ್ತಾಯ ಮಾಡುವ ಆಪ್ತಬಂಧುವೊಬ್ಬ ಆ ಗಾಡಿಯಲ್ಲಿ ಇದ್ದಿರಬಹುದು. ದಾರಿಮಧ್ಯೆ ಅದೆಷ್ಟು ಸಲ ಗಾಡಿ ನಿಲ್ಲಿಸಿ ಸೋಡಾ ಕುಡಿಸಿದನೋ ಏನೋ. ರೋಗಿಯನ್ನು ಪರೀಕ್ಷಿಸುತ್ತಾ ಡಾಕ್ಟರ್ ಕೇಳುತ್ತಾರೆ: “ಕಕ್ಕಸಿಗೆ ಹೋಗುವುದು ಹೇಗಿದೆ?” ಸುಸ್ತಾಗಿ ಬಿದ್ದಿರುವ ರೋಗಿ ನೆನಪಿಸಲು ಪ್ರಯತ್ನಿಸುತ್ತಾ ಕಣ್ಣುಗಳನ್ನು ಎಡಕ್ಕೂ ಬಲಕ್ಕೂ ಹೊರಳಿಸುತ್ತಿರುವಾಗ, ಮುಖ್ಯನೆಂಟನೊಬ್ಬ ನಡುವೆ ಬಾಯಿ ಹಾಕಿರುತ್ತಾನೆ. “ಒಂದು ವಾರದಿಂದ ಹೊರಗೆ ಹೋಗಿಲ್ಲ ಅಂತ ಹೆಂಡತಿ ಗಿರಿಜಾ ಹೇಳಿದ್ದಳು.” ಆತ ಈ ರೋಗಿಯನ್ನು ಕಂಡು ಏನಿಲ್ಲವೆಂದರೂ ಒಂದೂವರೆ ವರ್ಷಗಳೇ ಕಳೆದಿರಬಹುದು. ಆದರೆ ಏನು ಮಾಡುವುದು. ಹತ್ತಿರದ ಸಂಬಂಧಿ! ಅಧಿಕಾರಯುತ ಸ್ವರ! ಹಿರಿ ಮಗಳ ಮದುವೆಗೆ ಕರೆಯಲು ಬಂದಿದ್ದವ, ಈಗ ಎರಡನೇ ಮಗಳ ಮದುವೆಗೆ ಕರೆಯಲು ಮತ್ತೆ ಈ ಕಡೆ ಬಂದಿದ್ದಾನೆ. ಮದುವೆ ಇದೇ 24ಕ್ಕೆ. ಬಂದು ನೋಡಿದರೆ ಇಲ್ಲಿ ತನ್ನ ನೆಂಟ ವಾಂತಿಯಿಂದ ನರಳುತ್ತಿದ್ದಾನೆ. ವಾಂತಿ ನಡುವೆಯೂ ಕುಳಿತುಕೊಳ್ಳಿ ಎಂದು ಕೈ ತೋರಿಸುತ್ತಾ, ನಿತ್ರಾಣದಿಂದ ಮಂಚಕ್ಕೆ ಉರುಳುತ್ತಾನೆ. ಇಲ್ಲಿಂದ ಮುಂದಕ್ಕೆ ಆತ ರೋಗಿಯ ಅತ್ಯಂತ ಹತ್ತಿರದ ಸಂಬಂಧಿಯಾಗುತ್ತಾನೆ ಎಂದು ಯಾರಿಗೆ ಗೊತ್ತಿತ್ತು. ಪರೀಕ್ಷೆಯಲ್ಲಿ ದಾರಿ ತಪ್ಪಿದ ಡಾಕ್ಟರ್ ಹೊಸ ಪರೀಕ್ಷೆಗಳ ಕಡೆಗೆ ತಿರುಗುತ್ತಾನೆ. ಆ ಆಸ್ಪತ್ರೆಯಲ್ಲಿರುವ ಎಲ್ಲ ಯಂತ್ರಗಳ ಒಳಗೂ ರೋಗಿ ಹೊಕ್ಕು ಬರುತ್ತಾನೆ. ಔಷಧಿಗಳ ದೊಡ್ಡ ಪಟ್ಟಿಯನ್ನೇ ಬರೆಯುತ್ತಾನೆ. ಎಲ್ಲವೂ ‘ವಿರುದ್ಧ ದಿಕ್ಕಿಗೆ’ ಅಂತ ಮಾತ್ರ.

ಇದರಲ್ಲಿ ಕರೀಂನನ್ನು ದೂರಿ ಏನು ಪ್ರಯೋಜನ? ಎಲ್ಲದಕ್ಕು ಕಾರಣ ಆ ದರಿದ್ರ ಕರೀಂ ಅಂತ ಹೇಳಿದರೆ ಸಹಿಸುವುದು ಹೇಗೆ? ಕರೀಮನಾದರೂ ಏನು ಮಾಡುವುದು?

ಇನ್ನೂ ಸ್ವಲ್ಪ ವಿವರಿಸಿ ಹೇಳಲು ಇನ್ನೊಂದು ಉದಾಹರಣೆ ಇದೆ.

ಗಲ್ಫಿನಲ್ಲಿ ಹತ್ತಿಪ್ಪತ್ತು ವರ್ಷಗಳ ಕಾಲ ದುಡಿದು ಸಂಪಾದಿಸಿದ ಚಿಲ್ಲರೆ ದುಡ್ಡಿನೊಂದಿಗೆ ಒಬ್ಬ ಊರಿಗೆ ಮರಳುತ್ತಾನೆ ಎಂದಿಟ್ಟುಕೊಳ್ಳಿ. ಇದು ಗೊತ್ತಾದ ಕೂಡಲೇ ಕರೀಮನಿಗೆ ಒಂದೊಳ್ಳೆ ಐಡಿಯಾ ಹೊಳೆಯುತ್ತದೆ.

“ಸಾರ್, ಈ ದುಡ್ಡು ಮತ್ತು ಐಸ್‍ಕ್ಯಾಂಡಿ ಎರಡೂ ಒಂದೆ. ಕೈಯಲ್ಲಿದ್ದರೆ ಕರಗಿ ಹೋಗುತ್ತದೆ. ಬ್ಯಾಂಕ್ ಬಡ್ಡಿಯೆಲ್ಲ ಈ ಕಾಲದಲ್ಲಿ ಅಷ್ಟಕ್ಕಷ್ಟೆ. ನೋಡಿ, ಈಗ ಚುನಾವಣೆ ಬರ್ತಾ ಉಂಟು. ಸರಕಾರ ಬದಲಾಗುತ್ತದೆ. ಶೇರು ಮಾರುಕಟ್ಟೆಯಲ್ಲಿ ದುಡ್ಡು ಹಾಕಿದರೆ ಫಲಿತಾಂಶ ಬರುವಾಗ ದುಡ್ಡು ಎರಡು ಪಟ್ಟಾಗುತ್ತದೆ.”

ಆ ಬಡಪಾಯಿ ಇದ್ದ ದುಡ್ಡನ್ನು ಕೊಂಡು ಹೋಗಿ ಶೇರು ಮಾರುಕಟ್ಟೆಯಲ್ಲಿ ಸುರಿಯುತ್ತಾನೆ.

ಫಲಿತಾಂಶ ಬಂತು. ಸರಕಾರವೂ ಬದಲಾಯಿತು. ಢಿಂ! ಶೇರು ಮಾರುಕಟ್ಟೆ ಹೂಡಿದ್ದ ಬೆಲೆಗಿಂತ ಅರವತ್ತು ಶೇಕಡಾ ಕೆಳಗಿಳಿದಿದೆ!
ಕರೀಮನಿಗೆ ಇದರಲ್ಲಿ ಮಾಡುವಂತದ್ದು ಏನೂ ಇಲ್ಲ. ಹಿಂದಿನ ಚುನಾವಣೆಗಳಲ್ಲಿ ಲಾಭದ ಮಳೆ ಸುರಿದಿತ್ತು. ಅದನ್ನು ಕರೀಂ ಕೂಲಂಕುಷವಾಗಿ ಗಮನಿಸಿದ್ದ ಕೂಡ.

ಇದು ನಮ್ಮ ಕರೀಂ.

ಕರೀಂ ಯಾರಿಗಾದರೂ ಸಹಾಯ ಮಾಡಿದರೆ ಅದು ಉಪದ್ರವಾಗಿಯೇ ಕೊನೆಯಾಗುವುದು – ಊರಿನಲ್ಲಿ ವ್ಯಾಪಕವಾಗಿ ಹರಡಿದ್ದ ಈ ಮಾತಿನಲ್ಲಿ ಹುರುಳಿಲ್ಲ ಎಂದೇ ನನ್ನ ಅಭಿಪ್ರಾಯ. ಇದಕ್ಕೆ ಪುಷ್ಠಿ ನೀಡುವ ಘಟನೆಯೊಂದು ಹಿಂದೊಮ್ಮೆ ನಡೆದಿತ್ತು. ಕರೀಂ ಕೈ ಹಾಕಿದ ಕೇಸುಗಳೆಲ್ಲ ಹಾಗೆ ಹಾಳಾಗಿ ಹೋಗಿಲ್ಲ.

ಆ ಗುಂಪು ಹೊಡೆದಾಟ ಈಗಲೂ ನೆನಪಿದೆ. ಭಗವಂತಾ!

ವರ್ಷಗಳು ಅದೆಷ್ಟು ಉರುಳಿ ಹೋದರೂ ಆ ಘಟನೆ ಮಾತ್ರ ನಿನ್ನೆ ಮೊನ್ನೆ ನಡೆದ ಹಾಗಿದೆ. ಅದು ಹೇಗೆ ತಾನೆ ಮನಸಿನಿಂದ ಅಳಿಸಲು ಸಾದ್ಯ! ಸಂಗತಿ ಗುಂಪುಹಲ್ಲೆ.

ಇದು ಓದುತ್ತಿರುವ ಯಾರಿಗಾದರೂ ಗುಂಪು ಹೊಡೆದಾಟ ಅಥವಾ ಗುಂಪುಹಲ್ಲೆ ಎಂದರೆ ಏನೆಂದು ಗೊತ್ತಾ? ಪೆಟ್ಟು ತಿನ್ನುವುದೆಂದರೆ ಗುಂಪುಹಲ್ಲೆಯೇ ಸರಿ. ಉಳಿದೆಲ್ಲ ಪೆಟ್ಟುಗಳು ಏನೇನೂ ಅಲ್ಲ. ಗುಂಪು ದಾಳಿಗೆ ಒಳಗಾದ ವ್ಯಕ್ತಿ ಇನ್ನೊಬ್ಬನನ್ನು ನೋಡುವಾಗ ಆತನಿಗೆ ಕಿವಿಯ ಜಾಗದಲ್ಲಿ ಮೂಗು, ಮೂಗಿನ ಜಾಗದಲ್ಲಿ ಕಣ್ಣು ಕಾಣುತ್ತದೆ ಎಂದು ನನ್ನ ಅನುಭವದ ಮೂಸೆಯಿಂದ ಹೆಕ್ಕಿ ನಾನು ಹೇಳಬಲ್ಲೆ.

ಆ ದಾಳಿಗೆ ಕಾರಣರಾದ ಮಿಲಿಟ್ರಿ ಕಣಾರೇಟ್ಟನಿಗೆ ಮೊದಲಿಗೆ ನಮಸ್ಕಾರ ಹೇಳಿಬಿಡುತ್ತೇನೆ.

ಸಂಗತಿ ಎಂತದಿಲ್ಲ. ಆ ಕಾಲದಲ್ಲಿ ಮನೆಗೆ ರಸ್ತೆ ಸಂಪರ್ಕ ಇರಲಿಲ್ಲ. ಗದ್ದೆಬದುವನ್ನೇ ಚೂರು ಅಗಲ ಮಾಡಿದ ಕಾಲುದಾರಿ. ಮಳೆಗಾಲದಲ್ಲಿ ಭಾರೀ ಕಷ್ಟ. ರೋಗಿಗಳನ್ನು ಮತ್ತು ಸತ್ತವರನ್ನು ಪಂಚಾಯತ್ ರಸ್ತೆಯ ತನಕ ತಲುಪಿಸುವುದೆಂದರೆ ಸುತ್ತಲ ಹತ್ತು ಹನ್ನೆರಡು ಮನೆಗಳಲ್ಲಿ ವಾಸಿಸುವ ನಮಗೆಲ್ಲ ಧರ್ಮಸಂಕಟವೇ ಸರಿ. ಈ ಧರ್ಮಸಂಕಟದ ಕಾರಣದಿಂದ ನಾವೆಲ್ಲ ಐಕ್ಯ ಕೇರಳ ಕಟ್ಟಿದೆವು ಎಂದೆಲ್ಲ ಯೋಚಿಸಬೇಡಿ. ಅದೆಲ್ಲ ದೂರದ ಮಾತು. ಅಲ್ಲಿ ಒಂದೊಂದು ಮನೆಯೂ ಒಂದೊಂದು ದೇಶ. ಅದರ ಗಡಿಗಳು ಲೋಕದ ಕೊನೆ. ಇಂಡಿಯಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಸಾಧು ಸ್ವಭಾವದ ಭೂತಾನ್, ನೇಪಾಳ… ಅಕ್ಕಪಕ್ಕದಲ್ಲಿ ನಾವು ಬದುಕುತ್ತಿದ್ದದ್ದು ಹೀಗೆ. ಹಾಂ, ಚೀನಾವನ್ನು ಇಲ್ಲಿ ಉದ್ದೇಶಪೂರ್ವಕವಾಗಿ ಕೈ ಬಿಡಲಾಗಿದೆ. ನಮ್ಮ ಪ್ರಕಾರ ಚೀನಾವೆಂದರೆ ಮಹಾಗೋಡೆ. ಮನೆಯ ಹಿಂದಿನ ಆ ದೊಡ್ಡ ಬೆಟ್ಟವೇ ನಮ್ಮ ಚೀನಾ.

ಮಿಲಿಟ್ರಿ ಕಣಾರನ್ ನಿವೃತ್ತಿಯಾಗಿ ಬಂದ ಮೇಲೆಯೇ ನಮ್ಮ ಶೀತಲ ಸಮರಕ್ಕೆ ಒಂದು ಭಾಷೆ (ಬೈಗುಳ) ಮತ್ತು ಗಾಂಭೀರ್ಯ (ಕೈ ಮಿಲಾಯಿಸುವುದು) ಸಿಕ್ಕಿದ್ದು.

ಮಿಲಿಟ್ರಿ ಕಣಾರನ್ ಆರಡಿ ಎತ್ತರ, ದಪ್ಪ ಮೀಸೆ, ಪಾಕಿಸ್ತಾನದೊಂದಿಗೆ ಎಷ್ಟೇ ಗುದ್ದಾಡಿದರೂ ಇನ್ನೂ ಇಳಿಯದ ಡೊಳ್ಳು ಹೊಟ್ಟೆ, ಬಾಂಗ್ಲಾ ಗಡಿಗೆ ನಿರಂತರ ಕದ್ದು ನೋಡುವ ಕೆಂಪು ಕಣ್ಣುಗಳು. ಸೇನೆ ಬಿಟ್ಟು ಬರುವಾಗ ತನ್ನ ದೇಶದ ಮೇಲಿನ ಅದಮ್ಯ ಪ್ರೀತಿಯಂದ ಯಾವುದೇ ಅನುಕೂಲತೆಗಳನ್ನು ಪಡೆಯಲಿಲ್ಲ. ಬರೀ ಒಂದು ಏಕೆ 47 ಮಾತ್ರ ಅಂಗಲಾಚಿ ಬೇಡಿ ತನ್ನ ಊರಾದ ಪಶುಪತಿಪುರಕ್ಕೆ ಮರಳಿದ್ದರು.

ಗಡಿಯಿಂದ ನಿವೃತ್ತಿಯಾಗಿ ಬಂದಿದ್ದರೂ ಏಕೆ 47 ಉಪಯೋಗಿಸದೆ ಇರಲು ಆತನಿಂದ ಸಾದ್ಯವಿರಲಿಲ್ಲ. ಅದು ಆತನ ವೀಕ್ನೆಸ್. ಒಮ್ಮೊಮ್ಮೆ ವ್ಯಾಯಾಮ ಮುಗಿಸಿದ ಮೇಲೆ ಪಕ್ಕದ ಪಾಕಿಸ್ತಾನದ ಬೇಲಿಗೆ ಗುಂಡು ಹೊಡೆಯುತ್ತಿದ್ದ. ಸತ್ಯದಲ್ಲಿ ಆ ಗುಂಡಿನ ದಾಳಿ ಊರ ದಣಿಗಳಂತಿದ್ದ ಕುರುಮಾನ್‍ಕಂಡಿಯವರ ಜೊತೆಗಿನ ಪಂಥಾಹ್ವಾನ.

ಮಿಲಿಟ್ರಿ ಕಣಾರನ್ ರಜೆಯಲ್ಲಿ ಬರುವಾಗ ಕುರುಮಾನ್‍ಕಂಡಿಯವರ ಮೇಲಿನ ದಾಳಿಗೆ ಹೊಸ ವಿಧಾನಗಳು ಸಿಗುತ್ತಿದ್ದವು. ಅದರೊಂದಿಗೆ ಕಣಾರನ್ ಮನೆಯವರಾದ ಪೂತ್ತೆರಿ ತರವಾಡಿನವರು ಮತ್ತಷ್ಟು ಜಾಗೃತರಾಗುತ್ತಿದ್ದರು. ಇಂಡಿಯನ್ ಮಿಲಿಟ್ರಿಯಲ್ಲಿರುವ ವ್ಯಕ್ತಿ ಯಾರ ಕಪಾಲಕ್ಕೂ ಬಾರಿಸಬಹುದು ಎಂದು ಪೂತ್ತೆರಿ ತರವಾಡಿನವರು ನಂಬಿದ್ದರು. ಜೊತೆಗೆ ಬೈಗುಳವೇ ಸಂವಹನದ ಅತ್ಯಂತ ಉದಾತ್ತ ರೂಪವೆಂದು ನಂಬಿದ್ದವರು. ಈಗ ಕಣಾರನ್ ಮಿಲಿಟ್ರಿಯಿಂದ ನಿವೃತ್ತಿ ಹೊಂದಿ ಬಂದಿರುವುದರಿಂದ ಅತ್ಯಂತ ಸಹಜವಾಗಿ ಗಡಿ ತಗಾದೆಗಳು ತಾರಕಕ್ಕೇರಿದವು.

“ನಮಗೆ ನಾಯಕತ್ವದ ಕೊರತೆ ಇತ್ತು. ಕಣಾರೇಟ್ಟ, ನೀವು ನಿವೃತ್ತಿ ಹೊಂದಿ ಮರಳಿದ್ದು ಒಳ್ಳೆಯದೇ ಆಯಿತು. ರಸ್ತೆಗೆ ಜಾಗ ಬೇಕು. ಎಲ್ಲ ಮನೆಯವರೂ ಒಪ್ಪಿದ್ದಾರೆ. ಆದರೆ ಆ ದಣಿಗಳ ಮನೆಯವರು ಮಾತ್ರ ಜಾಗ ಕೊಡುತ್ತಿಲ್ಲ. ಕುರುಮಾನ್‍ಕಂಡಿಗಳ ವಿರುದ್ಧ ಸೇನಾಕಾರ್ಯಾಚರಣೆ ಬೇಕಾಗಿಬರಬಹುದು. ಅತ್ಯಂತ ಅಗತ್ಯವಾಗಿ ರಸ್ತೆ ಬೇಕಾಗಿರುವ ಪೂತ್ತೆರಿ ತರವಾಡಿನ ಕಮಾಂಡರ್ ಆಗಿ ನೀವೇ ಮುಂದೆ ನಿಲ್ಲಬೇಕು.”

ಕರೀಂ ನನ್ನನ್ನೂ ಕಂಡು ಈ ವಿಷಯದ ಬಗ್ಗೆ ಮಾತನಾಡಿದ.

“ಊರಿನ ಒಬ್ಬ ಪ್ರಮುಖ ಸಾಹಿತಿ ಎಂಬ ನೆಲೆಯಲ್ಲಿ ನೀವೂ ನಮ್ಮ ಜೊತೆಗಿರಬೇಕು. ಮಿಲಿಟ್ರಿ ಕಣಾರೇಟ್ಟ ಮುಂದೆ ನಿಲ್ಲುತ್ತಾರೆ. ಕುರುಮಾನ್‍ಕಂಡಿಯವರಿಗೆ ದುಡ್ಡಿನ ಅಹಂಕಾರ. ನಿಮಗೂ ರಸ್ತೆ ಬೇಕು ತಾನೇ. ನಮ್ಮ ಜೊತೆಗಿರಿ. ಸಾಕು.”

“ನಾನು ಯಾವಾಗಲಾದರೊಮ್ಮೆ ಊರಿಗೆ ಬರುವ ಒಬ್ಬ ವಿದೇಶಿ. ನಾನು ಯಾಕೆ ಸುಮ್ಮನೆ ಇದರಲ್ಲಿ?”

“ವಿದೇಶಿ ಸಾಹಿತ್ಯ ಓದಿ ತಾನೇ ನೀವು ಇಷ್ಟು ದೊಡ್ಡ ಜನ ಆಗಿದ್ದು? ಬಂದ ದಾರಿ ಮರೆಯಬೇಡಿ ಆಯ್ತಾ.”

ನಾನು ಹೇಳಿದೆ:

“ಈ ಜಗಳ, ಬೈಗುಳಗಳೆಲ್ಲ ನನಗೆ ಸರಿ ಬರುವುದಿಲ್ಲ ಕರೀಂ. ಅದಕ್ಕೆಲ್ಲ ಪೂತ್ತೆರಿ ಮನೆಯ ಕಣಾರನ್ ತರದವರು ಇದ್ದಾರಲ್ವಾ?”

ಕರೀಮನಿಗೆ ಅದು ಇಷ್ಟ ಆಗಲಿಲ್ಲ.

“ಹಾಗಾದರೆ ನಿಮ್ಮ ಸಮಾಜದ ಬಗೆಗಿನ ಕಾಳಜಿ ಸಾಹಿತ್ಯದಲ್ಲಿ ಮಾತ್ರ ಅಂತಾಯ್ತು. ಸಹ ಜೀವಿಗಳ ಬಗ್ಗೆ ಚೂರೂ ಪ್ರೀತಿಯಿಲ್ಲ ನಿಮಗೆ.”

ನಾನು ಬೆಚ್ಚಿದೆ.

‘ಸಾಹಿತಿಗಳ ಸಾಮಾಜಿಕ ಬದ್ಧತೆ’ ಎಂಬ ನನ್ನ ಲೇಖನವನ್ನು ಇವನು ಯಾವಾಗ ಓದಿದ್ದು?

ಆಮೇಲೆ ಅವನು ಮಾತಾಡಿದ್ದೆಲ್ಲ ನನ್ನ ಲೇಖನದ ಮಾತುಗಳ ಮೂಲಕವೇ. ಅದು ಕೂಡ ಮೊನೆಯುಳ್ಳ ಚುಚ್ಚು ಮಾತುಗಳು.

“ಪೂರ್ತಿ ಕೇರಳಕ್ಕೆ ಕಾಳಜಿ ಸುರಿಯುವಾಗ ಹುಟ್ಟಿದ ನಾಡಿಗೂ ಚೂರು ಬಾಕಿ ಉಳಿಸಬೇಕು.”

ಕರೀಂ ಕೋಪಗೊಂಡಿದ್ದ. ಅವನು ಹೇಳಿದ್ದರಲ್ಲೂ ಸತ್ಯವಿದೆ.

ಅವನ ಪ್ರಾಮಾಣಿಕ ಕಾಳಜಿಯ ಮುಂದೆ ನಾನು ತಲೆ ಬಾಗಿ ನಮಿಸಿದೆ.

ಹೀಗಿರುವಾಗ ಒಂದು ದಿನ ಗಡಿಯಲ್ಲಿ ಪೂತ್ತೆರಿಯವರ ನೇತೃತ್ವದಲ್ಲಿ ಕುರುಮಾನ್‍ಕಂಡಿಯವರ ಮೇಲೆ ದಾಳಿ ಶುರುವಾಯಿತು.

ಕುಡಿದು ಬಂದು ಕೆಟ್ಟ ಬೈಗುಳಗಳ ಸುರಿಮಳೆ ಸುರಿಸೋದು, ರಾತ್ರಿಯಲ್ಲಿ ಏಕೆ 47 ಹಿಡಿದು ಕುರುಮಾನ್‍ಕಂಡಿಯವರ ಕಿಟಕಿಗೆ ಕಲ್ಲೆಸೆಯುವುದು, ಬೆದರಿಕೆ ಹಾಕುವುದು ಮೊದಲಾದ ಕೃತ್ಯಗಳು ದಾಳಿಯ ಪ್ರಮುಖ ಐಟಂಗಳು. ಇದನ್ನೆಲ್ಲ ನೋಡುತ್ತಾ ಪೂತ್ತೆರಿ ಕುಟುಂಬದ ಹೆಣ್ಣು ಗಂಡು ಸಂತಾನಗಳು ಸಂತೋಷದಿಂದ ನಗುತ್ತಾ ಆಸ್ವಾದಿಸುವುದು. ಜಗುಲಿಯಲ್ಲಿ ಕೂತಿದ್ದ ಹೆಂಗಸರು ತೊಡೆ ತುರಿಸುತ್ತಾ ನಕ್ಕು ಸುಸ್ತಾದರು. ಕುರುಮಾನ್‍ಕಂಡಿಗಳು ದೊಡ್ಡ ಜನರೇ ಆಗಿದ್ದರೂ ಮನೆಯಲ್ಲಿ ಹೆಚ್ಚಾಗಿ ಇರುವುದು ಹೆಂಗಸರು ಮಾತ್ರ. ಅವರು ಅಸಹಾಯಕರಾಗಿದ್ದರಿಂದ ಮನೆಯಿಂದ ಹೊರಗಿಳಿಯಲಿಲ್ಲ.

ಕರೀಂ ಕಾಲ ಕಾಲಕ್ಕೆ ನನಗೆ ಸುದ್ದಿ ತಲುಪಿಸುತ್ತಿದ್ದ.

ರಸ್ತೆಗೆ ಜಾಗ ಕೊಡದೆ ಸತಾಯಿಸುವುದು ಅನ್ಯಾಯವಲ್ಲದೆ ಬೇರೇನಲ್ಲ. ಆದರೆ, ಅವರನ್ನು ಗಡಿಯಲ್ಲಿರುವ ಶತ್ರು ದೇಶದಂತೆ ಕಾಣುವುದು ಸರಿಯಲ್ಲವೆಂದು ಅವನಿಗೆ ನೆನಪಿಸುತ್ತಲೇ ಇದ್ದೆ.

ಕರೀಂ ಒಮ್ಮೆ ಹೇಳಿದ: “ಯುದ್ಧ ನೀತಿಗಳು ಬೇರೆ ಇಕ್ಕಾ. ಇದು ನಿಮ್ಮ ಸಾಹಿತ್ಯದ ಹಾಗೆ ಅಲ್ಲ. ಸಾಹಿತಿಯೊಬ್ಬನ ಸಾಮಾಜಿಕ ಕಾಳಜಿಯಂತೆ ಅಲ್ಲವೇ ಅಲ್ಲ.” ಫೋನಿನ ಆ ಕಡೆಯಲ್ಲಿ ತನ್ನ ಮಾತುಗಳನ್ನೇ ಆಸ್ವಾದಿಸುತ್ತಾ ಅವನು ಜೋರಾಗಿ ನಕ್ಕ.

“ಈ ಆಟ ಬೇರೆ. ಮಿಲಿಟ್ರಿಯನ್ನೇ ಇಳಿಸಿದ್ದೇವೆ, ಮಿಲಿಟ್ರಿ! ರೋಡಿಗೆ ಬೇಕಾದ ಜಾಗ ತನ್ನಷ್ಟಕ್ಕೇ ಬರುತ್ತದೆ. ನೋಡ್ತಾ ಇರಿ.”
ಹೀಗಿರುವಾಗ ಒಂದು ದಿನ ಸಿಡಿಲು ಬಡಿದಂತೆ ಒಂದು ಘಟನೆ ನಡೆಯಿತು.

ಒಂದು ದಿನ ಮಿಲಿಟ್ರಿಯ ವಿವಿಐಪಿ ವಾಹನವೊಂದು ಅರಮನೆಯಂತಾ ಕುರುಮಾನ್‍ಕಂಡಿ ಮನೆಯ ಮುಂದೆ ಬಂದು ನಿಂತಿತು. ನಂಬರ್ ಪ್ಲೇಟಿನಲ್ಲಿ ಕೆಂಪು ನಕ್ಷತ್ರ. ಅಧಿಕಾರಿಯ ವೇಷದಲ್ಲಿ ಒಬ್ಬ ಅದರಿಂದ ಇಳಿದ. ಇಳಿಯುವಾಗ ಕೆಳಗಿನ ಅಧಿಕಾರಿಯೊಬ್ಬ ನೆಲಕ್ಕೆ ಕಾಲು ಬಡಿದು ಸೆಲ್ಯೂಟ್ ಹೊಡೆದು ಬಿಗುವಿನ ವಾತಾವರಣ ಸೃಷ್ಟಿಸಿದ.

ಕುರುಮಾನ್‍ಕಂಡಿಯ ಹಿರಿಯರೊಬ್ಬರು ಆತನನ್ನು ಸ್ವಾಗತಿಸಿ ಕರೆದುಕೊಂಡು ಹೋದರು.

ನಿಮಿಷಗಳಲ್ಲಿ ಆ ಸುದ್ದಿ ಊರಿಡೀ ಹಬ್ಬಿತು.

ಬಂದದ್ದು ಮಿಲಿಟ್ರಿ ಗಾಡಿ.

ವಿಷಯ ಮಿಲಿಟ್ರಿ ಕಣಾರನ ಕಿವಿಗೂ ಬಿತ್ತು.

“ಅದ್ಯಾರಪ್ಪಾ ನನಗೆ ಗೊತ್ತಿಲ್ಲದಿರೋ ಮಿಲಿಟ್ರಿ?”

ಕಣಾರನ್ ತನ್ನ ಕೋಣೆಯ ಹ್ಯಾಂಗರಿನಲ್ಲಿದ್ದ ಕಡು ಹಸಿರು ಬಣ್ಣದ ಯೂನಿಫಾರ್ಮ್ ಧರಿಸಿದ.

ಸುತ್ತ ನೆರೆದಿದ್ದ ಜನರ ನಡುವಿನಿಂದ ನುಸುಳಿಕೊಂಡು ಅಧಿಕಾರಯುತವಾಗಿ ಕಣಾರನ್ ಕುರುಮಾನ್‍ಕಂಡಿ ಗಡಿ ದಾಟಿ ಹೋದ.

ಆತ ಅಂಗಳ ತಲುಪಿದ್ದೂ ಮನೆಯಿಂದ ಆ ಅಧಿಕಾರಿ ಹೊರಗೆ ಬಂದದ್ದೂ ಒಟ್ಟಿಗೆ ಆಗಿತ್ತು. ಅಧಿಕಾರಿಯನ್ನು ಕಂಡದ್ದೇ ತಡ ಕಣಾರನ್ ಹೆದರಿ ನಡುಗತೊಡಗಿದ. ಚೂರು ಚಡ್ಡಿ ಒದ್ದೆಯಾಗಿದ್ದರೂ ಇರಬಹುದು.

ಮೇಜರ್ ಜನರಲ್ ತೂಯಿಂಗನ್!

ಕಣಾರನ ಕಡೆಗೆ ಬೆರಳು ತೋರಿಸಿ ಕುರುಮಾನ್‍ಕಂಡಿಯ ಹಿರಿಯ ವ್ಯಕ್ತಿ ನಗುತ್ತಲೇ ಹಿಂದಿಯಲ್ಲಿ ಏನೋ ಹೇಳಿದರು. ಮೇಜರ್ ಜನರಲ್ ತೂಯಿಂಗನ ಮುಖ ಕಪ್ಪಿಟ್ಟಿತು. ಕಣಾರನ್ ಮೆಲ್ಲ ಹಿಂದಕ್ಕೆ ತಿರುಗಲು ನೋಡಿದಾಗ ಗುಡುಗಿನಂತ ಸದ್ದು ಕೇಳಿಸಿತು.

“ಕಣಾರ್!”

ಮಿಲಿಟ್ರಿ ಕಣಾರನ್ ಬೆಚ್ಚಿ ತಿರುಗಿ ನೋಡಿದ.

ಹೌದು, ತೂಯಿಂಗನ್.

ತೂಯಿಂಗನ್ ಹಿಂದಿಯಲ್ಲಿ ಗರ್ಜಿಸಿದ:

“ಸಾರಾಯಿ ಕುಡೀತೀಯಾ ನೀನು?”

ಕಣಾರನ್ ಕೈ ಜೋಡಿಸಿ ನಿಂತ: “ಇಲ್ಲ ಸಾರ್.”

“ಇನ್ನೊಂದು ಸಲ ಇಲ್ಲಿ ತಗಾದೆ ತೆಗೆದೆ ಅಂತ ಗೊತ್ತಾದ್ರೆ…”

“ಇಲ್ಲಸಾರ್.”

“ಗೊತ್ತಲ್ಲ ನಿಂಗೆ. ಯಾವಾಗ ಬೇಕಾದರೂ ನಿನ್ನನ್ನು ಮತ್ತೆ ಮಿಲಿಟ್ರಿಗೆ ಸೇರಿಸ್ಕೊಂಡು ಬಿಡ್ತೀನಿ. ಅದಕ್ಕೆ ಬೇಕಾದ ಅಧಿಕಾರ ನಂಗಿದೆ ಅಂತ ಗೊತ್ತಲ್ಲ?”

“ಗೊತ್ತು ಸಾರ್.”

“ಸೆಲ್ಯೂಟ್ ಯಾಕ್ ಹೊಡಿಲಿಲ್ಲ ನೀನು?”

ಆಗಲೇ ಕಣಾರನಿಗೆ ಅದು ನೆನಪಾದದ್ದು.

“ಸಾರಿ ಸಾರ್.”

ಅದರ ಬೆನ್ನಿಗೆ ಒಂದು ಘನ ಗಂಭೀರ ಸೆಲ್ಯೂಟ್.

ಊರ ಜನ ಅಂದು ಮೊತ್ತ ಮೊದಲ ಬಾರಿಗೆ ಮಿಲಿಟ್ರಿ ಕಣಾರನ ಸೆಲ್ಯೂಟ್ ಕಂಡರು.

ಜನರಲ್ ತೂಯಿಂಗನ್ ಹೇಳಿದ:

“ನಿನ್ನ ಏಕೆ 47 ಕ್ಯಾನ್ಸಲ್ ಮಾಡಿದ್ದೇನೆ. ಕೂಡಲೇ ಕೊಂಡು ಹೋಗಿ ಸರೆಂಡರ್ ಮಾಡ್ಬೇಕು. ತಿಳೀತಾ?”

“ಆಗಲಿ ಸಾರ್.”

“ಇದು ನನ್ನ ಗೆಳೆಯನ ಮನೆ. ಇಲ್ಲಿ ಏನಾದ್ರು ರಗಳೆ ಮಾಡಿದ್ದು ನನಗೆ ಗೊತ್ತಾದರೆ ನಿನ್ನನ್ನು ಮತ್ತೆ ಮಿಲಿಟ್ರಿಗೆ ಕರೆಸ್ಕೊಳ್ತೀನಿ. ಸೀದಾ ಮೈನಸ್ ಐವತ್ತು ಡಿಗ್ರಿಯ ಸಿಯಾಚಿನ್‍ಗೆ ಕಳಿಸಿಬಿಡ್ತೀನಿ. ಕೇಳಿಸ್ತಾ?”

“ಕೇಳಿಸ್ತು ಸಾರ್.”

“ಹುಂ, ಹೋಗು, ಇನ್ನುಮುಂದೆ ಈ ಊರಲ್ಲಿ ನಿನ್ನ ತಲೆ ಕಾಣಬಾರದು. ಕೇಳಿಸ್ತಾ?”

“ಕೇಳಿಸ್ತು ಸಾರ್.”

ಮಿಲಿಟ್ರಿ ಕಣಾರೇಟ್ಟನ ಈ ದಯನೀಯ ಅವಸ್ಥೆ ಕಂಡು ಕರೀಮನಿಗೆ ಸಹಿಸಲಾಗಲಿಲ್ಲ. ಅವನು ನಾಲ್ಕನೇ ನಂಬರ್ ತೆಂಗಿನ ಮರೆಯಲ್ಲಿ ನಿಂತು ಬಿಕ್ಕಳಿಸಿದ.

ಅಲ್ಲಿಗೆ ರಸ್ತೆಯ ಮಾತು ಮುಗಿಯಿತು. ರಣರಂಗದಲ್ಲಿ ನಾಯಕ ಸೋತಿದ್ದಾನೆ!

ಅಳುತ್ತಾ ಕರೀಂ ಈ ವಿಷಯವನ್ನೆಲ್ಲ ಫೋನಲ್ಲಿ ವಿವರಿಸಿದ.

ನಾನು ಹೇಳಿದೆ: “ಕಾನೂನನ್ನು ನಾವು ಗೌರವಿಸಬೇಕು. ನ್ಯಾಯಯುತವಾಗಿ ಮೇಜರ್ ಜನರಲ್ ತೂಯಿಂಗನಿಗೆ ವಿಷಯ ಮನದಟ್ಟು ಮಾಡಿಕೊಡುವಲ್ಲಿ ಕಣಾರನ್ ಯಾಕೆ ಸೋತರು?”

ಕರೀಂ ಹೇಳಿದ: “ತೂಯಿಂಗ ಅಲ್ಲ ಅವನ ಅಪ್ಪ ಬಂದರೂ ಸರಿ, ನಾವು ರೋಡಿಗಾಗಿ ಹೋರಾಟ ಮುಂದುವರಿಸುತ್ತೇವೆ. ತೂಯಿಂಗ ಇಲ್ಲಿ ಕಾವಲು ಕೂರುವುದಕ್ಕೆ ಬಂದಿಲ್ಲ ಅಲ್ವಾ.”

“ಮತ್ತೆ ರಾಂಗ್ ಸೈಡಲ್ಲಿ ಹೋಗುತ್ತಿದ್ದೀರಿ. ಗಂಡಸರಿಲ್ಲದ ಹೊತ್ತಲ್ಲಿ ಗಂಟಲು ಮಟ್ಟ ಕುಡಿದು ಬಂದು ಕೆಟ್ಟದಾಗಿ ಬೈಯ್ಯುವುದು ಮತ್ತು ಕಿಟಕಿಗೆ ಕಲ್ಲೆಸೆಯುವುದು ನಿಮ್ಮ ಪ್ರಕಾರ ಕ್ರಾಂತಿಯಾ ಕರೀಂ?”

ಆ ಮಾತು ಅವನಿಗೆ ಹಿಡಿಸಲಿಲ್ಲ.

“ನಿಮಗೆ ಮೊದಲಿನಿಂದಲೂ ಆ ಕುರುಮಾನ್‍ಕಂಡಿಗಳ ಮೇಲೆ ಪ್ರೀತಿ ಜಾಸ್ತಿ. ಅವರು ದೊಡ್ಡ ಜನರಲ್ಲವಾ? ನೀವು ಶಾಂತಿ ಶಾಂತಿ ಅಂತ ಮಂತ್ರ ಪಠಿಸುತ್ತಾ ಇರಿ.” ಇಷ್ಟು ಹೇಳಿ ಅವನು ದಢಾರ್ ಅಂತ ಫೋನ್ ಇಟ್ಟ.

ಮಿಲಿಟ್ರಿ ಕಣಾರನ್ ಊರು ಬಿಟ್ಟ. ಯಾವಾಗಲಾದರೊಮ್ಮೆ ಊರಿಗೆ ಬಂದು ಹೋಗುವುದು ಮಾಡುತ್ತಿದ್ದ. ಯಾವುದೋ ಎಟಿಎಮ್ಮಿನಲ್ಲಿ ದುಡ್ಡು ತೆಗೆಯಲು ಹೋದಾಗ ಅಲ್ಲಿ ಸೆಕ್ಯೂರಿಟಿಯಾಗಿದ್ದ ಕಣಾರನನ್ನು ಕಂಡವರಿದ್ದಾರೆ. ಮಿಲಿಟ್ರಿ ಕಣಾರನ ಗೈರು ಹಾಜರಿಯಲ್ಲಿ ಸಂಘಟನೆ ಚೂರು ಶಕ್ತಿ ಕಳೆದುಕೊಂಡಿದ್ದರೂ ರೋಡಿಗಾಗಿ ಗಲಾಟೆಗಳು ನಡೆಯುತ್ತಲೇ ಇದ್ದವು. ಕುರುಮಾನ್‍ಕಂಡಿಯವರ ಕಿಟಕಿ ಹಲವು ಸಲ ರಾತ್ರಿಯ ಕಲ್ಲೇಟಿಗೆ ಪುಡಿಯಾಯಿತು. ಕೇಸು, ಪಂಚಾಯ್ತಿ, ಪಂಚಾಯ್ತಿ, ಕೇಸು. ವಕೀಲರುಗಳು ಎರಡೂ ಕಡೆಯಿಂದ ದುಡ್ಡು ಪೀಕಿ ಕೊಬ್ಬುತ್ತಲೇ ಹೋದರು.

ಹೀಗಿರುವಾಗ, ಕುರುಮಾನ್‍ಕಂಡಿಗಳು ಪಟ್ಟಣದಿಂದ ಹತ್ತುಹನ್ನೆರಡು ಪುಡಿರೌಡಿಗಳನ್ನು ಕಲೆಹಾಕಿ ಒಟ್ಟು ಸೇರಿಸಿದರು. ಶನಿವಾರದ ಒಂದು ಸಂಜೆ. ಸರಿಯಾದ ಸಮಯ ನೋಡಿ ಪೂತ್ತೆರಿ ತರವಾಡಿನ ಯುವಕರ ಮೇಲೆ ದಾಳಿ ಮಾಡುವುದು ಅವರ ಯೋಜನೆ. ಇದೊಂದೂ ಅರಿಯದ ನಾನು ಮುನ್ನೂರು ಚಿಲ್ಲರೆ ಕಿಲೋಮೀಟರ್ ಯಾತ್ರೆಯ ದಣಿವಿನೊಂದಿಗೆ ಬಸ್ಸಿಳಿದೆ. ಗದ್ದೆಬದು ಇನ್ನೂ ರಸ್ತೆಯಾಗಿಲ್ಲವಲ್ಲ ಎಂಬ ಬೇಸರದೊಂದಿಗೆ ಕೆಸರು ತುಳಿಯುತ್ತಾ ಮನೆಯ ದಾರಿ ಹಿಡಿದೆ.

ಮನೆಗೆ ತಲುಪಿ ಬಟ್ಟೆ ಬದಲಾಯಿಸಿ ಸ್ನಾನ ಮಾಡೋಣವೆಂದು ಯೋಚಿಸುತ್ತಿದ್ದಾಗ ಕರೀಂ ಓಡಿ ಬಂದ.

“ಇಕ್ಕಾ, ಕುರುಮಾನ್‍ಕಂಡಿಯವರು ಕಳಿಸಿದ ಗೂಂಡಾಗಳು ಕಣಾರೇಟ್ಟನನ್ನು ಸುತ್ತು ಹಾಕಿ ಹೊಡೀತಿದ್ದಾರೆ. ಬಹಳ ಕಾಲದ ನಂತರ ಇವತ್ತೇ ಅವರು ಊರಿಗೆ ಬಂದದ್ದು.”

“ಆತನ ಕೈಯಲ್ಲಿ ಏಕೆ 47 ಇಲ್ವಾ?”

“ಅಯ್ಯೋ, ಅದೆಲ್ಲ ಯಾವತ್ತೋ ಆ ಮೇಜರ್ ಜನರಲ್ ತೂಯಿಂಗನ್ ಸರೆಂಡರ್ ಮಾಡಿಸಿದನಲ್ಲ? ಅಷ್ಟೆ ಅಲ್ಲ, ಮರುಮಾತಾಡದೆ ಅವರು ಪೆಟ್ಟು ತಿನ್ನುತ್ತಿದ್ದಾರೆ. ಮೇಲಿಂದ ಆರ್ಡರ್ ಇದೆಯಂತೆ. ಇನ್ನು ತೂಯಿಂಗನ್ ಹೇಳಿದರೆ ಮಾತ್ರ ತಿರುಗಿ ಹೊಡೆಯೋದು ಅಂತ ಕಣಾರೇಟ್ಟ ಹೇಳುತ್ತಿದ್ದಾರೆ. ಕತೆ ಹೇಳೋದಕ್ಕೆ ಈಗ ಸಮಯ ಇಲ್ಲ. ದಯವಿಟ್ಟು ನೀವೊಮ್ಮೆ ಬನ್ನಿ.”

“ನಾನಾ?”

“ಮತ್ತೆ, ನೀವಲ್ಲದೆ ಇನ್ಯಾರು? ನಮ್ಮ ಕಡೆ ನಾಲ್ಕು ಜನ, ಅವರ ಕಡೆ ಹನ್ನೆರಡು ಜನ. ಮತ್ತೆಂತ ಮಾಡುವುದು? ಕಣಾರೇಟ್ಟ ಇನ್ನು ಸ್ವಲ್ಪ ಹೊತ್ತು ಹೀಗೆ ಒದೆ ತಿಂದರೆ ಸತ್ತೇ ಹೋಗುತ್ತಾರೆ. ನೀವೊಮ್ಮೆ ಬನ್ನಿ.”

“ನಾನು ಬಂದು ಎಂತ ಮಾಡುವುದು? ನನಗೆ ಹೊಡಿ ಬಡಿ ಎಲ್ಲ ಗೊತ್ತಿಲ್ಲ. ನೀನು ಬೇರೆ ಯಾರನ್ನಾದರು ನೋಡು.”

“ನೀವೆಂತಾ ಸಾಹಿತಿ? ಸಾಹಿತಿಗಳ ಸಾಮಾಜಿಕ ಬದ್ಧತೆ ಅಂತ ಸುಮ್ಮನೆ ಡಯಲಾಗ್ ಹೊಡೆದರೆ ಮುಗೀತಾ?” ಕರೀಂ ಸಿಡಿಲಿನಂತೆ ಗುಂಡು ಹೊಡೆದ.

ಅದು ನನ್ನ ಒಳಗೆಲ್ಲೋ ತಾಗಿತು.

ನಾನು ಸೋತೆ. ಮರುಕ್ಷಣ ನನ್ನನ್ನು ನಾನೇ ವೀರ ಶೂರ ಪರಾಕ್ರಮಿಯಂತೆ ಹೊತ್ತುಕೊಂಡು ಗಲಾಟೆ ನಡೆಯುತ್ತಿದ್ದ ಜಾಗಕ್ಕೆ ಓಡಿದೆ. ಇದರ ನಡುವೆ ಕರೀಂ ಕುರುಮಾನ್‍ಕಂಡಿಗಳ ಫರ್ನಿಚರ್ ಕಂಪೆನಿಯ ಬೆಲೆಬಾಳುವ ಡೈನಿಂಗ್ ಟೇಬಲ್ ಒಂದರ ನಾಲ್ಕಡಿ ಉದ್ದ ಮತ್ತು ತಕ್ಕ ಮಟ್ಟಿಗೆ ದಪ್ಪಗಿದ್ದ ಕಾಲೊಂದನ್ನು ನನ್ನ ಕೈಗಿಟ್ಟು ಉಳಿದವರನ್ನು ಕರೆಯಲು ಓಡಿದ.

ಸಂಜೆ ಸರಿಯುವ ಹೊತ್ತು. ಗುಂಪು ದಾಳಿ. ಕತ್ತಲು. ಒಂದು ಗಂಟೆಯ ಹೋರಾಟದ ಫಲವಾಗಿ ರೌಡಿಗಳು ಓಡಿ ಹೋದರು. ಅಷ್ಟು ಹೊತ್ತಿಗೆ ನಮ್ಮ ಗುಂಪಿನ ಜನರು ವಿಷಯ ತಿಳಿದು ಬಂದಿದ್ದರಿಂದಲೇ ಅದು ಸಾಧ್ಯವಾಯಿತು. ತಿರುಗಿ ಹೊಡೆಯದ ಕಣಾರನನ್ನು ಯಾರೋ ಆಗಲೇ ಸುರಕ್ಷಿತ ಜಾಗದಲ್ಲಿ ತಂದು ಕೂರಿಸಿದ್ದರು.

ಗುಂಪು ಹಲ್ಲೆ ಎಂದರೆ ಜನರ ಗುಂಪು ಎಂಬ ಕತ್ತಲು. ಸರಿ, ತಪ್ಪು, ಗುರಿಯಿಡುವುದು, ಗುರಿ ತಪ್ಪುವುದು ಎಲ್ಲ ಸೇರಿ ಅಲ್ಲಿ ಏನು ನಡೆಯುತ್ತಿದೆ ಎಂದು ಮಾತ್ರ ಗೊತ್ತಾಗುವುದಿಲ್ಲ. ಹೊಡೆತಗಳ ನಡುವೆ ವಿರಾಮವೇ ಇರಲಿಲ್ಲ. ನಡುವೆ ಒಮ್ಮೆ ಬೀಡದಂಗಡಿಯ ಹತ್ತಿರ ಮಹೀಂದ್ರ ಜೀಪು ಬಂದು ನಿಂತಾಗ ಪೋಲೀಸು ಅಂತ ತಿಳಿದು ಸ್ವಲ್ಪ ಸುಮ್ಮನಾದೆವು. ಜೀಪು ಹೋದದ್ದೇ ತಡ ಅತ್ಯಂತ ಉತ್ಸಾಹದೊಂದಿಗೆ ಆ ಮಬ್ಬುಗತ್ತಲಲ್ಲಿ ಮತ್ತೆ ಹೊಡೆದಾಟ ಶುರು.

ಪುಣ್ಯಕ್ಕೆ ಊರ ಜನರು ನಮ್ಮ ಕಡೆ ಸೇರಿದ್ದರಿಂದ ಗೂಂಡಾಗಳು ಓಡಿದರು.

ನಾನು ಏದುಸಿರು ಬಿಡುತ್ತಾ ನಿತ್ರಾಣವಾಗಿ ಎಲ್ಲೋ ಒಂದು ಕಡೆ ಕುಕ್ಕರುಗಾಲಿನಲ್ಲಿ ಕೂತೆ. ಅಂಗಿ ಪೂರ್ತಿ ಹರಿದು ಹೋಗಿತ್ತು. ಸಾಹಿತಿಗಳ ಸಾಮಾಜಿಕ ಬದ್ಧತೆ ಎಂಬ ಲೇಖನ ಬರೆಯಬಾರದಾಗಿತ್ತು.

ನಡೆದದ್ದು ಏನು ಎಂದು ಸರಿಯಾಗಿ ನೆನಪಾಗಲೇ ಇಲ್ಲ.

ಕರೀಂ ಕೊಟ್ಟಿದ್ದ ಡೈನಿಂಗ್ ಟೇಬಲಿನ ಕಾಲಿನ ಒಂದು ತುಂಡು ಮಾತ್ರ ಈಗ ನನ್ನ ಕೈಯ್ಯಲ್ಲಿದೆ. ಸರಿಯಾದ ಸಮಯಕ್ಕೆ ಕರೀಂ ಅದನ್ನು ಕೊಟ್ಟದ್ದು ಒಳ್ಳೆಯದೇ ಆಯಿತು.

ಹೇಳಿದೆನಲ್ಲ, ಗುಂಪು ಹೊಡೆದಾಟ. ಬುದ್ಧಿ ಕಳೆದುಕೊಂಡ ಜನರ ಗುಂಪು. ದೊಣ್ಣೆ ಕೈಗೆ ಸಿಕ್ಕಿದ್ದು ನೆನಪುಂಟು. ಮತ್ತೆ ಕತ್ತಲು ಹೊಡೆತ ಮತ್ತು ಬೊಬ್ಬೆ. ನಾನು ಅಷ್ಟೇನೂ ಗಾಯಗಳಿಲ್ಲದೆ ಪಾರಾದದ್ದು ವಿಚಿತ್ರವೇ. ಎಲ್ಲವೂ ಮರದ ಕಾಲಿನ ಪವಾಡ.

ಏನು ಹೇಳುವುದು, ಬಡಪಾಯಿ ಕರೀಮನಿಗೆ ಮಾತ್ರ ಮಾರಣಾಂತಿಕ ಗಾಯಗಳಾಗಿದ್ದವು. ಮುಖ ಪೂರ್ತಿ ಬಾತುಕೊಂಡಿತ್ತು. ಒಂದು ಕಣ್ಣಿನಲ್ಲಿ ರಕ್ತ ಹೆಪ್ಪುಗಟ್ಟಿ ಕೆಂಪಾಗಿತ್ತು. ಹಣೆಯಲ್ಲಿ ದೊಡ್ಡದಾಗಿ ಊದಿಕೊಂಡಿದೆ. ತಲೆ ಒಡೆದು ರಕ್ತ ಮುಖಕ್ಕಿಳಿದು ಅದೀಗ ಹೆಪ್ಪುಗಟ್ಟಿದೆ. ನನ್ನನ್ನು ಕಂಡ ಕೂಡಲೇ ಅವನ ಮುಖದಲ್ಲಿ ಹಲವು ಭಾವಗಳು ತುಂಬಿಕೊಂಡು ಅಳುವುದಕ್ಕೆ ತಯಾರಾಗುತ್ತಿದ್ದ.

ನಾನು ಸಮಾಧಾನಿಸಿದೆ.

“ಪರವಾಗಿಲ್ಲ ಕರೀಂ, ನಾವು ಇಷ್ಟು ಕಷ್ಟ ಪಟ್ಟು ಹೋರಾಡಿದ್ದಕ್ಕೆ ರೌಡಿಗಳು ಹೆದರಿ ಓಡಿ ಹೋದರು. ಒಂದು ಖುಷಿಯ ವಿಷಯ ಇದೆ. ರೌಡಿಗಳಲ್ಲಿ ಒಬ್ಬನಿಗೆ ಚೆನ್ನಾಗಿ ಕೊಟ್ಟಿದ್ದೇನೆ.”

ನನ್ನನ್ನೇ ದಯನೀಯವಾಗಿ ನೋಡುತ್ತಾ, ಬಿಕ್ಕಳಿಸುತ್ತಾ ಅಳುವಿನೊಂದಿಗೆ ಕರೀಂ ಹೇಳಿದ:

“ಅದು ರೌಡಿಯಲ್ಲ, ನಾನು.”

“ಆಯ್ಯೋ, ಮತ್ತೆ ಯಾಕೆ ನೀನು ಹೇಳಲಿಲ್ಲ?”

“ಹೇಳಿದ ಹಾಗೆ ಜೋರಾಗಿ ಹೊಡೆಯುತ್ತಿದ್ದಿರಿ. ಆ ಡೈನಿಂಗ್ ಟೇಬಲ್ ಕಾಲಿಗೆ ನಾಳೆ ನಾನೇ ದುಡ್ಡು ಕೊಡಬೇಕು.”

“ನಿನಗೆ ಓಡಬಹುದಿತ್ತಲ್ಲ?”

“ಎಲ್ಲಿಗೆ ಅಂತ ಓಡುವುದು? ಬೆನ್ನು ಬಿದ್ದಿದ್ದಿರಿ ನೀವು.”

ಅಳುತ್ತಿದ್ದ ಅವನನ್ನು ಸಮಾಧಾನಿಸುತ್ತಾ ನಾನು ಹೇಳಿದೆ:

“ಪರವಾಗಿಲ್ಲ ಕರೀಂ, ಮುಂದಿನ ಸಲ ನಾನು ಸರಿಯಾಗಿ ನೋಡಿಕೊಳ್ಳುವೆ. ಹೊಡೆದಾಟ ಶುರುವಾದರೆ ನೀನು ನನ್ನ ಹತ್ತಿರ ಕೂಡ ಬರಬೇಡ. ಆಯುಧ ಕಲೆಯಲ್ಲಿ ಇದೆಲ್ಲ ಸಾಮಾನ್ಯ ಸಂಗತಿ.”

ರೌಡಿಗಳು ಸೋತು ಓಡಿದ ಕಾರಣ ಕುರುಮಾನ್‍ಕಂಡಿಗಳು ರಸ್ತೆಗೆ ಬೇಕಾದ ಜಾಗ ಕೊಟ್ಟರು.

ಆ ರಸ್ತೆಗೆ ನಾವು ಜವಾನ್ ರೋಡ್ ಎಂದು ಹೆಸರಿಟ್ಟಾಗ ಕಣಾರನ್ ಪಟ್ಟ ಸಂತೋಷ ಹೇಳತೀರದು.

ಕರೀಂ ಮಾಡುವ ಸಹಾಯಗಳೆಲ್ಲ ಉಪದ್ರಗಳಾಗಿ ಕೊನೆಯಾಗುತ್ತವೆ ಎಂದು ಹೇಳುವ ಮಾತಿನಲ್ಲಿ ನಿಜವಿಲ್ಲ. ಮತ್ತೆ ರೌಡಿಗಳ ಬದಲಿಗೆ ಅವನಿಗೆ ಪೆಟ್ಟು ಬಿದ್ದದ್ದು ಸಾಧಾರಣ ಸಂಗತಿ. ರಸ್ತೆ ಬಂದ ಮೇಲೆ ಪೂತ್ತೆರಿ ಮನೆಯವರ ಕಾರು ಒದುಂಗಿಪ್ಪಾರ ತರವಾಡಿನ ಹುಡುಗನಿಗೆ ಗುದ್ದಿದರಲ್ಲಿ ಕರೀಮನ ತಪ್ಪೇನಿದೆ? ಕಾರು ಗೋಡೆಗೆ ಗುದ್ದಿ ಕಂಪೌಂಡ್ ಉರುಳಿ ಬಿದ್ದಾಗಲೂ ಇದೆಲ್ಲ ಕರೀಮನಿಂದಾಗಿ ಆದದ್ದು ಎಂದು ಹೇಳಿದರೆ ನಾನು ಒಪ್ಪುವುದಿಲ್ಲ.

ಮೂಲ: ಶಿಹಾಬುದ್ದೀನ್ ಪೊಯ್ತುಂಕಡವು 

ಕನ್ನಡಕ್ಕೆ: ಸುನೈಫ್


ಇದನ್ನೂ ಓದಿ : ಎಜುಕೇಟೆಡ್ ಗರ್ಲ್ಸ್’ : ಎಡೆಯೂರು ಪಲ್ಲವಿ ಅವರ ಕಥೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here