Homeಮುಖಪುಟಮೋದಿ ಸಂಪುಟದಲ್ಲಿ ಮಹಾಬಿರುಕ

ಮೋದಿ ಸಂಪುಟದಲ್ಲಿ ಮಹಾಬಿರುಕ

- Advertisement -

2019ರ ಮಹಾಸಮರ ಹತ್ತಿರವಾದಂತೆಲ್ಲ ರಾಜಕೀಯ ಪಕ್ಷಗಳ ಲಗುಬಗೆ ಬಿರುಸಾಗುತ್ತಿದೆ. ಹೆಚ್ಚೂಕಮ್ಮಿ ಅಧಿಕಾರಶೂನ್ಯ ಪರಿಸ್ಥಿತಿ ತಲುಪಿರುವ ಕಾಂಗ್ರೆಸ್‍ಗೆ ಈಗ ಕೇಂದ್ರದ ಬಿಜೆಪಿ ಸರ್ಕಾರದ ಹುಳುಕನ್ನು ಹೊರಗೆಳೆದು ತೋರುವುದಕ್ಕಿಂತ ಮಹತ್ತರ ಹೊಣೆ ಯಾವುದೂ ಇಲ್ಲ. ಆದರೆ ಬಿಜೆಪಿ ಪರಿಸ್ಥಿತಿ ಹಾಗಿಲ್ಲ. ಭರವಸೆಗಳ ಹೊಳೆಯನ್ನೇ ಅರಿಸಿ, ಅಚ್ಚೇದಿನಗಳ ಕನಸು ಹುಟ್ಟಿಸಿ ಅಧಿಕಾರಕ್ಕೇರಿದ್ದ ಮೋದಿ ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳಿವೆ. ಕೊಟ್ಟಿದ್ದ ಆಶ್ವಾಸನೆಗಳನ್ನು ಜನ ಪ್ರಶ್ನಿಸುವ ಭೀತಿ ಅವರನ್ನು ಕಾಡುತ್ತಿದೆ. ಅದಕ್ಕೆಂದೇ ಜನರ ಗಮನವನ್ನು ಬೇರೆಡೆ ತಿರುಗಿಸುವ ಯಥಾಶೈಲಿಯ ಕಸರತ್ತುಗಳು ಬಿಜೆಪಿಯಿಂದ, ಮುಖ್ಯವಾಗಿ ಮೋದಿ-ಅಮಿತ್ ಶಾ ಜೋಡಿಯಿಂದ ಚಾಲನೆಯಲ್ಲಿವೆ. ಇಂಡಿಯಾದ ಮುಕ್ಕಾಲುಪಾಲು ಮೀಡಿಯಾಗಳನ್ನು ತಮ್ಮ ಕಣ್ಣಳತೆಯಲ್ಲಿ ಇರಿಸಿಕೊಂಡಿರುವ, ಸಾಲದ್ದಕ್ಕೆ ವ್ಯವಸ್ಥಿತ ಐಟಿ ಜಾಲವನ್ನು ನಿರ್ಮಿಸಿಕೊಂಡಿರುವ ಅವರಿಗೆ ಅದೇನು ಕಷ್ಟದ ಕೆಲಸವಲ್ಲ. ಆದರೆ ಪಕ್ಷದ ಒಳಗೇ ಸಣ್ಣ ಬಿರುಕಿನಂತೆ ಶುರುವಾಗಿ, ಎಲೆಕ್ಷನ್ ವೇಳೆಗೆ ಗಂಭೀರ ಸ್ವರೂಪಕ್ಕೆ ತಿರುಗುವ ಸೂಚನೆ ನೀಡುತ್ತಿರುವ ವಿದ್ಯಮಾನಗಳು ಬಿಜೆಪಿಯ ಈ ಟಾಪ್-ಲೆವೆಲ್ ಜೋಡಿ ತಲೆಕೆಡಿಸಿಕೊಳ್ಳುವಂತೆ ಮಾಡಿವೆ. ಮೋದಿ ಸಂಪುಟದ ಸೀನಿಯರ್ ಮೋಸ್ಟ್ ಲೀಡರ್‍ಗಳೆನಿಸಿದ ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ನಿತಿನ್ ಗಡ್ಕರಿಯಂತವರೇ ಬಂಡಾಯದ ಬಾವುಟ ಬೀಸಾಡುವ ಸುಳಿವು ನೀಡುತ್ತಿರೋದು ಗುಜರಾತಿ ಗುರು-ಶಿಷ್ಯರ ನಿದ್ದೆಗೆಡಿಸುತ್ತಿದೆ.
ಇದೆಲ್ಲಾ ಶುರುವಾದದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ಹಿಂದೂತ್ವದ ಐಟಿ ವಿಂಗುಗಳೇ ಟ್ರೋಲ್ ಆರಂಭಿಸಿದಲ್ಲಿಂದ. ಸುಷ್ಮಾರವರ ಮೇಲೆ ಮೋದಿ ಟೀಮಿಗೆ ವಿಶೇಷ ಅಕ್ಕರೆಯೇನೂ ಇರಲಿಲ್ಲ. ಯಾಕೆಂದರೆ, 2013ರ ಆಸುಪಾಸಿನಲ್ಲಿ ಮೋದಿಯವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವಾಗ ತೀವ್ರ ವಿರೋಧ ಹೊರಹಾಕಿದ್ದ ನಾಯಕರಲ್ಲಿ ಸುಷ್ಮಾ ಕೂಡಾ ಒಬ್ಬರು. ಕೊನೆಗೆ ಆರೆಸ್ಸೆಸ್ ಮಧ್ಯಸ್ಥಿಕೆಯಿಂದ ಅಡ್ವಾಣಿ ಆದಿಯಾಗಿ ಎಲ್ಲರೂ ಮೋದಿಯವರಿಗೆ ಜೈ ಅನ್ನಬೇಕಾಯ್ತು. ಆಗಲೇ ಯಾರ್ಯಾರನ್ನು ರಾಜಕೀಯವಾಗಿ ಸಮಾಧಿ ಮಾಡಬೇಕೆನ್ನುವುದನ್ನು ಮೋದಿ ಮತ್ತು ಶಾ ಜೋಡಿ ಪಕ್ಕಾ ಮಾಡಿಟ್ಟುಕೊಂಡಿತ್ತು. ಅದರಂತೆ ಅಡ್ವಾಣಿ, ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ, ಮುರುಳಿ ಮನೋಹರ್ ಜೋಷಿಯಂತವರು `ಎಬೋವ್ 75’ ಅಸ್ತ್ರಕ್ಕೆ ಆಹುತಿಯಾದರು. ಆದರೆ ಸುಷ್ಮಾಗಿದ್ದ ಮಹಿಳಾ ಕೆಟಗರಿ ಮತ್ತು `ಬಿಲೋ 75’ ಬಲಗಳೇ ಆಕೆಯನ್ನು ಬದುಕಿಸಿದ್ದವು. ಹಾಗೆ ನೋಡಿದರೆ, ಸೀರಿಯಲ್ ತಾರೆ ಸ್ಮøತಿ ಇರಾನಿಯನ್ನು ಸಂಪುಟದೊಳಗೆ ಮೋದಿ ಪ್ರತಿಷ್ಠಾಪಿಸಿದ್ದೇ ಸುಷ್ಮಾಗೆ ಪರ್ಯಾಯವಾಗಿ ಮಹಿಳಾ ಲೀಡರನ್ನು ಬೆಳೆಸಲು. ಆದರೆ ಕ್ವಾಲಿಫಿಕೇಷನ್ ಕಲ್ಲುಬಂಡೆಯನ್ನು ಮೈಮೇಲೆ ಹೇರಿಕೊಂಡ ಇರಾನಿ ಮೇಡಂ, ಅಲ್ಪಕಾಲದಲ್ಲೇ ನೇಪಥ್ಯಕ್ಕೆ ಸರಿದರು.
ಅಷ್ಟಾದರು, ಮೋದಿಯವರು ಸುಷ್ಮಾ ಮೇಲೆ ಪ್ರಭುತ್ವ ಸಾಧಿಸಲು ಯತ್ನಿಸುತ್ತಲೇ ಬಂದರು. ವಿದೇಶಾಂಗ ಖಾತೆ ಸುಷ್ಮಾ ಕೈಯಲ್ಲಿದ್ದರು ಬಹುಪಾಲು ವಿದೇಶಾಂಗ ನೀತಿ ರೂಪಿಸುವುದರಲ್ಲಿ, ವಿದೇಶಗಳಿಗೆ ಭೇಟಿ ನೀಡಿ ದ್ವಿಪಕ್ಷೀಯ ಸಂಬಂಧಗಳನ್ನು ಚರ್ಚಿಸುವುದರಲ್ಲಿ ಮೋದಿಯವರೇ ಮಿಂಚುತ್ತಾ ಬಂದರು. ಅವರ ಜೊತೆಗೆ ವಿದೇಶ ಪ್ರವಾಸಕ್ಕೆ ಅದಾನಿಯಂತಹ ಬಿಗ್ ಮ್ಯಾಗ್ನೆಟ್‍ಗಳಿಗೆ ಅವಕಾಶವಿತ್ತೇ ವಿನಾಃ ವಿದೇಶಾಂಗ ಸಚಿವೆಗಲ್ಲ! ಸುಷ್ಮಾ ಕೇವಲ ವಿದೇಶಾಂಗ ಖಾತೆಯ ಟ್ವಿಟ್ಟರ್ ನಿರ್ವಹಿಸುವುದಕ್ಕಷ್ಟೇ ಸೀಮಿತ ಅಂತ ಕಾಂಗ್ರೆಸ್ ಲೇವಡಿ ಮಾಡಿದ್ದು ಇದೇ ಕಾರಣಕ್ಕೆ.
ಮುಂದಿನ ಸಲ ಅಧಿಕಾರಕ್ಕೇರಲು ಮಿತ್ರಪಕ್ಷಗಳು ಅನಿವಾರ್ಯ ಎಂಬ ಸುಳಿವು ಸಿಗುತ್ತಿದ್ದಂತೆಯೇ ಮೋದಿಯವರು ಅದಕ್ಕೆ ಬೇಕಾದ ತಯಾರಿಗೆಲ್ಲ ಇಳಿದಿದ್ದಾರೆ. ಅಮಿತ್ ಶಾರನ್ನು ಎಲ್ಲಾ ಮಿತ್ರಪಕ್ಷಗಳ ಮನೆ ಬಾಗಿಲಿಗೆ ಕಳಿಸಿ, ಮುನಿಸಿಕೊಂಡಿರುವ ಅವರನ್ನು ಸಮಾಧಾನ ಪಡಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಮಿತ್ರಪಕ್ಷಗಳ ಒಲವು ಗಿಟ್ಟಿಸಬಲ್ಲ ಸಾಮಥ್ರ್ಯವಿರುವ ನಾಯಕರನ್ನು ಮಟ್ಟಹಾಕುವುದಕ್ಕೂ ಅವರು ತಂತ್ರ ರೂಪಿಸಿದ್ದರು. ಆ ಪಟ್ಟಿಯಲ್ಲಿ ಮೊದಲು ಇದ್ದುದ್ದೇ ಸುಷ್ಮಾ ಹೆಸರು. ಎಲೆಕ್ಷನ್ ವೇಳೆಗೆ ಆಕೆಗೆ ಬ್ಯಾಡ್ ಇಮೇಜ್ ನೇತುಹಾಕುವ ಯತ್ನದಲ್ಲಿದ್ದಾಗ ನಡೆದದ್ದೇ ಈ ಅಹಮದಾಬಾದ್ ಪಾಸ್‍ಪೋರ್ಟ್ ರಗಳೆ.
ತಾನ್ವಿ ಸೇಠ್ ಮತ್ತು ಮೊಹಮದ್ ಸಿದ್ದಿಕಿ ಎಂಬ ಅಂತರ್ಧರ್ಮೀಯ ಹಿಂದೂ-ಮುಸ್ಲಿಂ ದಂಪತಿ ಪಾಸ್‍ಪೋರ್ಟ್‍ಗಾಗಿ ಅಹಮದಾಬಾದ್ ಕಚೇರಿಗೆ ಅರ್ಜಿ ಸಲ್ಲಿಸಿತ್ತು. ಅಲ್ಲಿದ್ದ ವಿಕಾಸ್ ಮಿಶ್ರಾ ಎಂಬ ಬಲನೋಟದ ಅಧಿಕಾರಿಯೊಬ್ಬ ನಿಮ್ಮದು ಲವ್ ಜಿಹಾದಿ ಕೇಸು, ಮುಸ್ಲೀಮನನ್ನು ಮದುವೆಯಾದ ಮೇಲು ನಿನ್ನ ಹೆಸರು ಬದಲಾಗಿಲ್ಲ, ಸಿದ್ದಿಕಿ ಮೊದಲು ಹಿಂದೂ ಧರ್ಮಕ್ಕೆ ಮತಾಂತರ ಆಗಲಿ, ಮ್ಯಾರೇಜ್ ಸರ್ಟಿಫಿಕೇಟ್‍ನಲ್ಲಿ ಹೆಸರು ತಪ್ಪಾಗಿದೆ, ಅಂತೆಲ್ಲಾ ರಗಳೆ ತೆಗೆದು ಅರ್ಜಿಯನ್ನು ವಜಾ ಮಾಡಿದ್ದ. ಕೂಡಲೇ ಸುಷ್ಮಾಗೆ ಟ್ವೀಟ್ ಮಾಡಿದ ಆ ದಂಪತಿ ತಮಗಾದ ಅವಮಾನ ಹೇಳಿಕೊಂಡಿದ್ದರು. ಮಾರನೇ ದಿನವೇ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿದ್ದರಿಂದ, ದಂಪತಿಗೆ ಪಾಸ್‍ಪೋರ್ಟ್ ಸಿಕ್ಕಿತಲ್ಲದೆ, ಅನಗತ್ಯ ವರಾತ ತೆಗೆದಿದ್ದ ವಿಕಾಸ್ ಮಿಶ್ರಾನನ್ನು ಅಹಮದಾಬಾದ್‍ನಿಂದ ಗೋರಖ್‍ಪುರಕ್ಕೆ ಎತ್ತಂಗಡಿಯೂ ಆಯ್ತು.
ಮೋದಿಯವರನ್ನು ಟೀಕಿಸುವ ಎಡಪಂಥೀಯರು, ಚಿಂತಕರು, ಪತ್ರಕರ್ತರ ಮೇಲೆ ಮುಗಿಬೀಳುತ್ತಿದ್ದ ಭಕ್ತ ಗಣದ ಟ್ರೋಲಿಂಗ್ ಟೀಮು ಈ ಸಲ ಮೋದಿಯವರ ಟಾರ್ಗೆಟ್‍ಗೆ ಗುರಿಯಾಗಿದ್ದ ಸುಷ್ಮಾ ಮೇಲೆಯೇ ದಾಳಿ ಶುರು ಮಾಡಿದರು. ಸುಷ್ಮಾ ಮೇಲೆ ದೈಹಿಕ ದಾಳಿಯ ಬೆದರಿಕೆಯಿಂದ ಶುರುವಾಗಿ ಆಕೆಯನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂಬಲ್ಲಿವರೆಗೆ ಕೀಳುಮಟ್ಟದ ಸಾವಿರಾರು ಟ್ರೋಲ್‍ಗಳು ಒಬ್ಬ ಸಚಿವೆಗೇ ಮುಜುಗರ ತಂದಿಟ್ಟವು. ಒಂದು ಟ್ವೀಟ್‍ನಲ್ಲಂತು, ಸುಷ್ಮಾರ ಪತಿ ಸ್ವರಾಜ್ ಕೌಶಲ್‍ರಿಗೆ, `ರಾತ್ರಿ ಆಕೆ ಮನೆಗೆ ಬಂದಾಗ ಆಕೆಗೆ ನಾಲ್ಕು ಬಿಗಿದು, ಮುಸ್ಲೀಂ ತುಷ್ಠೀಕರಣವನ್ನು ನಿಲ್ಲಿಸುವಂತೆ ನೀನ್ಯಾಕೆ ಬುದ್ದಿ ಹೇಳಬಾರದು’ ಎಂಬ ಸಲಹೆ ನೀಡಲಾಗಿತ್ತು. ಅಂದರೆ, ಸುಷ್ಮಾಗೆ ದೈಹಿಕ ಹಲ್ಲೆಯ ಬೆದರಿಕೆಯಲ್ಲದೆ, ಆಕೆಯನ್ನು ಮುಸ್ಲೀಂ ಪರ ಎಂದು ಬಿಂಬಿಸಿ, ಹಿಂದೂತ್ವದ ಪಾಳೆಯದಲ್ಲಿ ಆಕೆಯ ವರ್ಚಸ್ಸು ಕೆಡುವಂತೆ ಮಾಡುವುದು ಒಟ್ಟಾರೆ ಈ ಟ್ರೋಲ್‍ನ ಹಿಂದಿರುವ ಉದ್ದೇಶ ಎನ್ನುವುದರಲ್ಲಿ ಅನುಮಾನವಿಲ್ಲ.
`ಭೇಟಿ ಬಚಾವೊ’ ಎಂಬ ಘೋಷಣೆ ಕೂಗಿದ್ದ ಮೋದಿಯವರು, ತಮ್ಮ ಸಂಪುಟದ ಒಬ್ಬ ಮಹಿಳಾ ಸಚಿವೆಗೇ ಈ ರೀತಿ ಅವಮಾನ ಆಗುತ್ತಿದ್ದರೂ ಅದರ ವಿರುದ್ಧ ತುಟಿ ಬಿಚ್ಚಲಿಲ್ಲ. ಇದು ಟ್ರೋಲಿಗರನ್ನು ಮತ್ತಷ್ಟು ಉತ್ತೇಜಿಸಿತು. ಯಾವಾಗ ಸ್ವತಃ ಪ್ರಧಾನಿಯೇ ಮೌನಕ್ಕೆ ಶರಣಾದರೊ, ಉಳಿದ ಸಂಪುಟ ಸಹೋದ್ಯೋಗಿಗಳೂ ಸುಷ್ಮಾ ಪರ ಮಾತಾಡುವ ಧೈರ್ಯ ತೋರಲಿಲ್ಲ. ಇದು ಸುಷ್ಮಾಗಾಗಿ ಮೋದಿಯವರೇ ತೋಡಿರುವ ಖೆಡ್ಡಾ ಎಂಬುದನ್ನು ಅರ್ಥ ಮಾಡಿಕೊಂಡು ತೆಪ್ಪಗಾದರು.
ಮೊದಮೊದಲು ಈ ಘಟನೆ ನಡೆದ ಅವಧಿಯಲ್ಲಿ ತಾನು ಭಾರತದಲ್ಲಿ ಇರಲೇ ಇಲ್ಲ, ಇಲಾಖೆಯ ಅಧಿಕಾರಿಗಳ ನಿರ್ಧಾರ ಅಂತೆಲ್ಲ ಟ್ರೋಲಿಗರನ್ನು ಸಂತುಷ್ಟಪಡಿಸಲು ಯತ್ನಿಸಿದ ಸುಷ್ಮಾಗೆ ಯಾವಾಗ ಇದು ರಾಜಕೀಯ ದುರುದ್ದೇಶದ ದಾಳಿ ಎಂಬುದು ಅರ್ಥವಾಯಿತೊ ಆಗ ಅಚ್ಚರಿಯ ರೀತಿಯಲ್ಲಿ ತಿರುಗಿ ಬಿದ್ದಿದ್ದಾರೆ. ಇದು ಅವರಿಗೆ ಅನಿವಾರ್ಯವೂ ಆಗಿತ್ತು. ಇಲಾಖೆಯಿಂದ ಅಧಿಕೃತ ಸ್ಪಷ್ಟೀಕರಣವನ್ನು ಕೊಟ್ಟು, 2018ರ ಜೂನ್ 1ರಿಂದ ಜಾರಿಗೆ ಬಂದಿರುವ ಹೊಸ ನಿಯಮಗಳ ಪ್ರಕಾರ ಪಾಸ್‍ಪೋರ್ಟ್ ನೀಡಲು ಮ್ಯಾರೇಜ್ ಸರ್ಟಿಫಿಕೇಟ್ ಅಗತ್ಯವೇ ಇಲ್ಲ. ಭಾರತೀಯ ನಾಗರಿಕ ಅನ್ನುವುದಕ್ಕೆ ಆಧಾರ್ ಕಾರ್ಡ್ ಮತ್ತು ಪೊಲೀಸ್ ಕೇಸುಗಳಿಲ್ಲ ಎನ್ನುವುದಕ್ಕೆ ಪೊಲೀಸ್ ವೆರಿಫಿಕೇಷನ್ ಇದ್ದರೆ ಸಾಕು. ಅವುಗಳನ್ನು ಪರಿಗಣಿಸಿಯೇ ಆ ದಂಪತಿಗೆ ಪಾಸ್‍ಪೋರ್ಟ್ ನೀಡಿದ್ದೇವೆ ಅಂತ ಓಪನ್ ಚಾಲೆಂಜ್ ಎಸೆಯುವ ಮೂಲಕ ಮೋದಿ ವಿರುದ್ಧ ಸಮರಕ್ಕೆ ಸಜ್ಜು ಎಂಬ ಸಂದೇಶ ರವಾನಿಸಿದ್ದಾರೆ. ಆ ಟ್ರೋಲ್‍ಗಳಿಗೆ ಸುಷ್ಮಾ ಉತ್ತರಿಸುತ್ತಿರುವ ಪರಿಯೂ ಆಕೆಯ ಬಂಡಾಯವನ್ನು ಪುಷ್ಠೀಕರಿಸುತ್ತಿವೆ.
ಮೊನ್ನೆ ಜೂನ್ 30ರಂದು ಸೋಷಿಯಲ್ ಮೀಡಿಯಾ ದಿನ ನೆಪ ಮಾಡಿಕೊಂಡು ಮೋದಿ ಒಂದು ಟ್ವೀಟ್ ಮಾಡಿದ್ದರು, ಅದರಲ್ಲಿ ಅಪ್ಪಿತಪ್ಪಿಯೂ ತಮ್ಮ ಸಹೋದ್ಯೋಗಿ ಸಚಿವೆ ಮೇಲಾಗುತ್ತಿರುವ ಸೋಷಿಯಲ್ ಮೀಡಿಯಾ ದಾಳಿಯನ್ನು ಖಂಡಿಸದೆ, ಅದನ್ನು ಮತ್ತಷ್ಟು ಉತ್ತೇಜಿಸುವಂತೆ, `ಸೋಷಿಯಲ್ ಮೀಡಿಯಾವನ್ನು ಕ್ರಿಯಾತ್ಮಕವಾಗಿ ಬಳಸಿಕೊಳ್ಳುತ್ತಿರುವ ನನ್ನ ಯುವಮಿತ್ರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ತಮ್ಮ ಅಭಿಪ್ರಾಯಗಳನ್ನು ಯಾವ ಮುಲಾಜೂ ಇಲ್ಲದೆ ಹೇಳಿಕೊಳ್ಳುತ್ತಿರುವ ಅವರ ನಿಷ್ಠುರತೆ ನನಗೆ ತುಂಬಾ ಇಷ್ಟವಾಗಿದೆ. ಯುವಕರು ಈ ರೀತಿ ನಿರಂತರವಾಗಿ ಮತ್ತು ಮುಕ್ತವಾಗಿ ತಮ್ಮ ಅಭಿಪ್ರಾಯ ಹೊರಹಾಕುತ್ತಿರಲಿ’ ಎಂದಿದ್ದರು. ವರ್ತಮಾನದ ಸನ್ನಿವೇಶ ಅರಿವಿರುವ ಎಂತವರಿಗೇ ಆದರು, ಆ ಟ್ವೀಟ್ ಯಾರನ್ನು ಕೇಂದ್ರೀಕರಿಸಿ, ಯಾವ ಗುಂಪನ್ನು ಪ್ರಚೋದಿಸಿತ್ತು ಎಂಬುದು ಮನದಟ್ಟಾಗುತ್ತೆ.
ಇಷ್ಟುದಿನ ಸುಷ್ಮಾ ಮಾತ್ರ ಈ ಬಂಡಾಯದ ಕಣದಲ್ಲಿದ್ದರು. ಆದರೆ ಯಾವಾಗ ಮೋದಿ ಟ್ರೋಲಿಗರನ್ನು ಉತ್ತೇಜಿಸುವಂತೆ ಟ್ವೀಟ್ ಮಾಡಿದರೊ, ಅದಾದ ಮೂರೇ ದಿನಗಳ ನಂತರ ಗೃಹಮಂತ್ರಿ ರಾಜನಾಥ್ ಸಿಂಗ್ ತಮ್ಮ ಮೌನ ಮುರಿದು, ಸುಷ್ಮಾ ವಿರುದ್ಧ ನಡೆಯುತ್ತಿರುವ ಟ್ರೋಲ್ `ದುರಾದೃಷ್ಟಕರ’ ಎಂಬ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಅದಾದ ಎರಡನೇ ದಿನಕ್ಕೆ, ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿಗೆ ನಿನ್ನ ಹತ್ತು ವರ್ಷದ ಮಗಳನ್ನು ಅತ್ಯಾಚಾರ ಮಾಡಿಬಿಡುತ್ತೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬೆದರಿಕೆ ಹಾಕಿದ್ದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವಂತೆ ತಮ್ಮ ಇಲಾಖೆಗೆ ನಿರ್ದೇಶನವನ್ನೂ ನೀಡಿದ್ದರು. ಪೊಲೀಸರು ಇದೀಗ, ಗುಜರಾತ್ ಮೂಲದ ಗಿರೀಶ್ ಮಹೇಶ್ವರಿ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅಚ್ಚರಿಯೆಂದರೆ, ಆತನೇ ಫೇಸ್‍ಬುಕ್ ಖಾತೆಯಲ್ಲಿ ಹೇಳಿಕೊಂಡಿರುವಂತೆ ಆತ ಬಿಜೆಪಿ ಪಕ್ಷದ ಅಕೌಂಟಿಂಗ್ ಅಸಿಸ್ಟೆಂಟ್!
ರಾಜನಾಥ್ ಸಿಂಗ್ ನಂತರ, ಮತ್ತೋರ್ವ ಹಿರಿಯ ಸಚಿವ ನಿತಿನ್ ಗಡ್ಕರಿಯೂ ಸುಷ್ಮಾ ಟ್ರೋಲ್ ವಿಚಾರದಲ್ಲಿ ಮೌನ ಮುರಿದು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಟ್ರೋಲ್‍ಗೆ ಮೋದಿಯ ಕೃಪೆ ಇದೆ ಎನ್ನುವುದು ಸ್ಪಷ್ಟವಾಗಿ ಮನದಟ್ಟಾದ ಮೇಲೂ ಹೀಗೆ ಹಿರಿಯ ಲೀಡರುಗಳು ಸುಷ್ಮಾ ಬೆನ್ನಿಗೆ ನಿಲ್ಲುತ್ತಿರೋದು ಬಿಜೆಪಿಯೊಳಗೆ ಸಣ್ಣದೊಂದು ಬಿರುಕನ್ನು ಶುರು ಮಾಡಿದೆ. ಅದು ದೊಡ್ಡದಾಗಿ, ಮೋದಿಯನ್ನೇ ಆಹುತಿ ತೆಗೆದುಕೊಳ್ಳಲಿದೆ ಎಂಬುದನ್ನು ಇವತ್ತಿನ ಪರಿಸ್ಥಿತಿಯಲ್ಲಿ ನಂಬಲು ಕಷ್ಟವೆನಿಸಿದರೂ, ಯಾವ ಸಾಧ್ಯತೆಯನ್ನೂ ತಳ್ಳಿಹಾಕಲು ಬರುವುದಿಲ್ಲ.
ಹೌದು, ಇವತ್ತು ಮೋದಿ ಬಿಜೆಪಿಯೊಳಗೆ ಸುಪ್ರೀಂ ಲೀಡರ್. ತನ್ನ ರಾಜಕೀಯ ಗುರು ಅಡ್ವಾನಿಯಂತವರನ್ನೇ ಮುಲಾಜಿಲ್ಲದೆ `ಮಾರ್ಗದರ್ಶಕ ಮಂಡಳಿ’ ಎಂಬ ಮೂಲೆ ಹಿಡಿಸಿರುವ ಮೋದಿಯವರು ಉಳಿದವರನ್ನು ಕೇರ್ ಮಾಡುವ ದರ್ದಿನಲ್ಲಿಲ್ಲ. ಆದರೆ ಪರಿಸ್ಥಿತಿ ಹೀಗೇ ಇರುತ್ತೆ ಎನ್ನಲಾಗದು. ಈಗಾಗಲೇ ಮಿತ್ರಪಕ್ಷಗಳು ಒಂದೊಂದಾಗಿ ಎನ್‍ಡಿಎ ತೊರೆದು ದೂರ ಸರಿಯುತ್ತಿವೆ. ಮುಂಬರುವ ಎಲೆಕ್ಷನ್ ವೇಳೆಗೆ ಕಳೆದ ಸಾರಿಯಂತೆ ಸ್ವಂತ ಬಲದ ಮೇಲೆ ಅಧಿಕಾರ ಸ್ಥಾಪಿಸುವ ಸಾಮಥ್ರ್ಯ ಬಿಜೆಪಿಯಿಂದ ಹಿಂಸರಿದಿರುತ್ತೆ. ಆಗ ಮಿತ್ರಪಕ್ಷಗಳನ್ನು ಓಲೈಸಲೇಬೇಕಾದ ಪರಿಸ್ಥಿತಿ ಎದುರಾಗೋದು ಸಹಜ. ಮೋದಿ ಮತ್ತು ಶಾ ಜುಗಲ್‍ಬಂಧಿಯ ಸರ್ವಾಧಿಕಾರಿ ಧೋರಣೆಯನ್ನು ಕಂಡಿರುವ ಮಿತ್ರಪಕ್ಷಗಳು ಅವರನ್ನೇ ಮತ್ತೆ ಗದ್ದುಗೆಯಲ್ಲಿ ಕೂರಿಸಲು ಒಪ್ಪದೇ, ಪರ್ಯಾಯ ನಾಯಕನ ಪ್ರಸ್ತಾಪ ಮುಂದಿಡಬಹುದು. ಆಗ, ರಾಷ್ಟ್ರ ರಾಜಕಾರಣದಲ್ಲಿ ಮೋದಿಗಿಂತಲೂ ಸೀನಿಯಾರಿಟಿಯಲ್ಲಿರುವ ತಮಗೆ ಪ್ರಧಾನಿಯಾಗುವ ಅವಕಾಶ ಬಂದರೂ ಬರಬಹುದು ಎಂಬ ಬಲುದೂರದ ಲೆಕ್ಕಾಚಾರದಲ್ಲಿ ಅವರೆಲ್ಲ `ಡೂ ಆರ್ ಡೈ’ ಹೋರಾಟವನ್ನು ಕೈಗೆತ್ತಿಕೊಂಡಿರುವಂತಿದೆ. ಮೋದಿ-ಶಾ ಕೂಟಕ್ಕೆ ಟಾಂಗ್ ನೀಡುವ ಮೂಲಕ ಮಿತ್ರಪಕ್ಷಗಳ ಮನಸ್ಸಿನಲ್ಲಿ ಪರ್ಯಾಯ ಆಯ್ಕೆಯಾಗುವ ಅಭಿಲಾಷೆ ಅವರ ಮನಸ್ಸಿನಲ್ಲಿದೆಯಾದರು, ಈ ಪರಿಸ್ಥಿತಿಯಲ್ಲಿ ಅವರು ಅಂತಹ ದುಸ್ಸಾಹಸಕ್ಕೆ ಕೈಹಾಕಲು ಇನ್ನೂ ಒಂದು ಕಾರಣವಿದೆ.
ಮೋದಿಯಂತೆ ತಾವೂ ಹಿಂದೂತ್ವದ ದೋಣಿಯ ನಾವಿಕರಾದರು ತಮ್ಮ ಮೇಲೆ ಮೋದಿಗೆ ವಿಶೇಷ ಮಮಕಾರವೇನೂ ಇಲ್ಲ ಅನ್ನೋದು ಇಂತಹ ಸೀನಿಯರ್ ಲೀಡರುಗಳಿಗೆ ಮನದಟ್ಟಾಗಿದೆ. ಹಾಗಾಗಿ, ತಾವು ಅನುಭವಿಸುತ್ತಿರುವ ಈ ಅಧಿಕಾರ ಇದೇ ಕೊನೇ ಚಾನ್ಸ್ ಎನ್ನುವ ಅರಿವೂ ಅವರಿಗಿದೆ. ಮುಂದಿನ ಸಲ ಎನ್‍ಡಿಎ ಅಧಿಕಾರಕ್ಕೆ ಬಂದರು ಸಹಾ, ಮೋದಿ ತಮ್ಮನ್ನು ಮೂಲೆಗುಂಪು ಮಾಡಿ `ಮಾರ್ಗದರ್ಶಕ ಮಂಡಳಿ’ಗೆ ಕತ್ತು ಹಿಡಿದು ನೂಕುವ ಭವಿಷ್ಯ ಎಲ್ಲರಿಗಿಂತ ಅವರಿಗೇ ಚೆನ್ನಾಗಿ ಗೊತ್ತಿದೆ. ಅಡ್ವಾನಿಯಂತಹ ರಥಯಾತ್ರಿಗೇ ಆ ಪರಿಸ್ಥಿತಿ ಬಂದಿರುವಾಗ, ವಾಸ್ತವವನ್ನು ಒಪ್ಪಿಕೊಳ್ಳದೇ ಇರಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೇಗೂ, ಮೋದಿ ತಮ್ಮ ರಾಜಕೀಯ ಬದುಕಿಗೆ ಫುಲ್‍ಸ್ಟಾಪ್ ಇಡೋದು ಶತಃಸಿದ್ದ. ತೆಪ್ಪಗಿದ್ದರೂ ಮಾರ್ಗದರ್ಶಕ ಮಂಡಳಿ, ತಿರುಗಿ ಬಿದ್ದರೂ ಮಾರ್ಗದರ್ಶಕ ಮಂಡಳಿ! ಇಂಥಾ ಸಂದರ್ಭದಲ್ಲಿ ತಾವು ಮೋದಿಗೆ ತಿರುಗಿಬೀಳುವುದರಿಂದ ಆಗುವ ಲುಕ್ಸಾನಿಗಿಂತ ಲಾಭವೇ ಜಾಸ್ತಿ. ಮಿತ್ರಪಕ್ಷಗಳ ವಿಶ್ವಾಸಕ್ಕೆ ತುತ್ತಾಗಿ, ಸಮ್ಮಿಶ್ರ ಸರ್ಕಾರದಲ್ಲಿ ಪ್ರಧಾನಿಯೇ ಆಗಬಹುದು ಅಥವಾ ಪ್ರಮುಖ ಹುದ್ದೆಗಳಲ್ಲಾದರು ಠಳಾಯಿಸಬಹುದು ಅಂತಲೇ ಅವರೆಲ್ಲ ಈಗ ಡೋಂಟ್ ಕೇರ್ ನಡವಳಿಕೆಗಳನ್ನು ಪ್ರದರ್ಶಿಸುತ್ತಿದ್ದಾರೆ.
ಆದರೆ ಕೇಶುಭಾಯ್ ಪಟೇಲ್‍ರಿಂದ ಆರಂಭಿಸಿ ಯಶವಂತ್ ಸಿನ್ಹಾ, ಮುರುಳಿ ಮನೋಹರ್ ಜೋಷಿ, ಅಡ್ವಾಣಿಯವರೆಗೆ ಒಂದೇ ಮಗ್ಗುಲಿಗೆ ಎಡೆಕುಂಟೆ ಹೊಡೆದ ರಾಜಕೀಯ ಒಕ್ಕಲುಗಾರ ಮೋದಿ ಮುಂದೆ ಇವರ ಬಂಡಾಯ ಬದುಕಿ, ಬಾಳೀತಾ…?

– ಜೀಟಿ ಮಾಚಯ್ಯ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial