ಅಮೆರಿಕದಿಂದ ಗಡೀಪಾರು ಮಾಡಲಾದ ಭಾರತೀಯ ವಲಸಿಗರ ಅಮಾನವೀಯ ವರ್ತನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಹಳೆಯ ಸ್ನೇಹಿತ’ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡಿ ಭಾರತೀಯರನ್ನು ಈ ರೀತಿ ವಾಪಸ್ ಕಳುಹಿಸದಂತೆ ಕೇಳಿಕೊಳ್ಳಬೇಕಿತ್ತು ಎಂದು ಬುಧವಾರ ಹೇಳಿದರು.
ಮೋದಿ ಬುಧವಾರದಿಂದ ಎರಡು ದಿನಗಳ ಕಾಲ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲಿದ್ದು, ಅಧ್ಯಕ್ಷ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, “ಮೋದಿಗೆ ಆರಂಭದಲ್ಲಿ ಆಹ್ವಾನ ಬಂದಿರಲಿಲ್ಲ. ಆದರೂ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕಕ್ಕೆ ಹೋಗಿ ವ್ಯವಸ್ಥೆ ಮಾಡಿದರು. ಈಗ, ಮೋದಿ ಆಹ್ವಾನ ಸ್ವೀಕರಿಸಿ ಭೇಟಿ ನೀಡುತ್ತಿದ್ದಾರೆ, ಇದು ಯಶಸ್ವಿ ಸಭೆಯಾಗುತ್ತದೆಯೇ” ಎಂದು ಖರ್ಗೆ ಪ್ರಶ್ನಿಸಿದರು.
“ಮೋದಿ ಅವರೇ ತಮ್ಮ ‘ಹಳೆಯ ಸ್ನೇಹಿತ’ (ಟ್ರಂಪ್) ಜೊತೆ ಮಾತನಾಡುತ್ತಿದ್ದೇನೆಂದು ಹೇಳಿಕೊಂಡಿದ್ದಾರೆ, ಇದು ದೇಶಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ಅವರು ನಿಜವಾಗಿಯೂ ಆಪ್ತ ಸ್ನೇಹಿತರಾಗಿದ್ದರೆ, ಭಾರತೀಯ ವಲಸೆ ಕಾರ್ಮಿಕರನ್ನು ಈ ರೀತಿ ಗಡೀಪಾರು ಮಾಡದಂತೆ ಟ್ರಂಪ್ ಅವರನ್ನು ದೂರವಾಣಿಯಲ್ಲಿ ಕೇಳಬೇಕಿತ್ತು” ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು.
“ಭಾರತೀಯ ವಲಸಿಗರನ್ನು ಸರಕು ವಿಮಾನದಲ್ಲಿ ಭಾರತಕ್ಕೆ ಮರಳಿ ಕರೆತರಲಾಯಿತು, ಕಸಕ್ಕಿಂತ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು” ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಆರೋಪಿಸಿದರು.
ಈ ವಲಸಿಗರನ್ನು ಪ್ರಯಾಣಿಕ ವಿಮಾನದಲ್ಲಿ ಕಳುಹಿಸಲು ಮೋದಿ ಟ್ರಂಪ್ ಅವರನ್ನು ಕೇಳಲಿಲ್ಲ, ಅಥವಾ ಭಾರತದಿಂದ ವಿಮಾನವನ್ನು ವ್ಯವಸ್ಥೆ ಮಾಡಲಿಲ್ಲ, ಇದು ಅವರ ಆಪ್ತ ಸ್ನೇಹದ ಹಕ್ಕು ಸುಳ್ಳು ಎಂದು ಸಾಬೀತುಪಡಿಸುತ್ತದೆ ಎಂದು ಕಿಡಿಕಾರಿದರು.
ವೈಯಕ್ತಿಕ ಸ್ನೇಹ ಉತ್ತಮವಾಗಿದ್ದರೂ, ದೇಶಗಳು ಸ್ನೇಹ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಹೆಚ್ಚು ಮುಖ್ಯ. ಜನರು ಪರಸ್ಪರ ವೈಯಕ್ತಿಕವಾಗಿ ತಿಳಿದಿರಬಹುದು. ಆದರೆ, ಭಾರತದ ಹಿತಾಸಕ್ತಿಗಳ ಬಗ್ಗೆ ಕಾಳಜಿಯನ್ನು ತೋರಿಸದಿರಬಹುದು ಎಂದು ಅವರು ವಾದಿಸಿದರು.
“ಮೋದಿ ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ. ಆದರೆ, ಅವರಿಗೆ ಸುಳ್ಳು ಹೇಳುವ ಅಭ್ಯಾಸವೂ ಇದೆ. ಆದ್ದರಿಂದ, ಅವರಿಗೆ ಉತ್ತಮ ಫಲಿತಾಂಶ ಸಿಗುವುದಿಲ್ಲ” ಎಂದು ಖರ್ಗೆ ಹೇಳಿದರು.
ಇದನ್ನೂ ಒದಿ; ನಾಲ್ಕು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ದೇಶದ ಚಿಲ್ಲರೆ ಹಣದುಬ್ಬರ; ಜನವರಿಯಲ್ಲಿ ಶೇ.4.31 ಕ್ಕೆ ಕುಸಿತ


