ದಿನಕ್ಕೆ ಮೂರು ನಾಲ್ಕು ಡ್ರೆಸ್ ಹಾಕಿಕೊಂಡು ಚೆನ್ನಾಗಿ ಕಾಣುವುದೇ ಮೋದಿ ಅವರ ಸಾಧನೆಯಾಗಿದೆ ಎಂದು ಪ್ರಧಾನಿ ಮೋದಿ ವಿರುದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಲಗ್ಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ದೇವೇಗೌಡರ ಕುಟುಂಬವನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಲು ಆಗುವುದಿಲ್ಲ. ಇಡೀ ದೇಶದಲ್ಲಿ ಸಾರ್ವಜನಿಕವಾಗಿ ಮುಖ್ಯಮಂತ್ರಿಯೊಬ್ಬ ಕಣ್ಣೀರು ಹಾಕಿದ್ದಾರೆ ಅಂದರೆ ಅದು ನಾನು ಮಾತ್ರ. ಅಂತಹ ವಾತಾವರಣದಲ್ಲಿ ನಾನಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೆಜೆ ಹಳ್ಳಿ-ಡಿಜೆ ಹಳ್ಳಿ ಅಶಾಂತಿಗೆ ಕಾಂಗ್ರೆಸ್ ನಾಯಕರೇ ಕಾರಣ: ಕುಮಾರಸ್ವಾಮಿ ಆರೋಪ
ಆರು ವರ್ಷದಲ್ಲಿ ಪ್ರಧಾನಿ ಮೋದಿ ಅವರಿಂದ ದೇಶ ಚೀನಾ ವಿರುದ್ಧ ಸ್ಪರ್ಧೆ ಮಾಡುವುದು ಇರಲಿ, ಬಾಂಗ್ಲಾದೇಶದ ಜೊತೆ ಸ್ಪರ್ಧೆ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ದಿನಕ್ಕೆ ಮೂರು ನಾಲ್ಕು ಡ್ರೆಸ್ ಹಾಕಿಕೊಂಡು ಚೆನ್ನಾಗಿ ಕಾಣುವುದೇ ಮೋದಿ ಅವರ ಸಾಧನೆಯಾಗಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ಇಲ್ಲಿ ಕೃಷ್ಣಮೂರ್ತಿ ಅಭ್ಯರ್ಥಿಯಲ್ಲ, ಕಾರ್ಯಕರ್ತರೇ ಅಭ್ಯರ್ಥಿಗಳು ಎಂದು ತಿಳಿದು ಜೆಡಿಎಸ್ ಸಮಾಧಿ ಮಾಡುತ್ತೇವೆ ಎಂದವರಿಗೆ ಉತ್ತರ ನೀಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾಂಗ್ರೆಸ್‌ಗೆ ಬಿಜೆಪಿಗಿಂತ ಜೆಡಿಎಸ್ ಮೇಲೆಯೇ ಅವರಿಗೆ ಹೆಚ್ಚು ಸಿಟ್ಟಿದೆ, ಜೆಡಿಎಸ್ ಮುಗಿಸಬೇಕು ಎಂಬುದೇ ಕಾಂಗ್ರೆಸ್ ನಾಯಕರ ಅಜೆಂಡಾ, ಅದು ಆಕ್ರೋಶವೋ, ಭಯವೋ ಗೊತ್ತಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ಹಾಗೂ ಬಿಜೆಪಿ ಅಭ್ಯರ್ಥಿ ಬಗ್ಗೆ ಕುಮಾರಸ್ವಾಮಿ ಸಾಫ್ಟ್‌ಕಾರ್ನರ್ ಹೊಂದಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಜನರ ಹಣ ಲೂಟಿ ಹೊಡೆಯೋರ ಬಗ್ಗೆ ನಾನು ಮಾತಾಡಲ್ಲ. 250 ಕೋಟಿ ರೂ. ಕಳ್ಳ ಬಿಲ್ ಮಾಡಿ ಹಣ ಗುಳುಂ ಮಾಡಿದ್ದಾರೆ. ಬೆವರು ಸುರಿಸಿ ದುಡಿದ ಹಣದಲ್ಲಿ ನಮ್ಮ ಅಭ್ಯರ್ಥಿ ಕೃಷ್ಣಮೂರ್ತಿ ಕೊರೊನಾ ಸಮಯದಲ್ಲಿ ಜನಕ್ಕೆ ಸಹಾಯ ಮಾಡಿದ್ದಾರೆ. ಆದರೆ, ಜನರ ಪಾಪದ ಹಣದಲ್ಲಿ ಬಿಜೆಪಿ ಅಭ್ಯರ್ಥಿ ಫುಡ್‌ಕಿಟ್ ನೀಡಿದ್ದಾರೆ ಎಂದು ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದರು.
ನನ್ನ ಸರಕಾರವನ್ನು ಯಾರೂ 10 ಪರ್ಸೆಂಟ್ ಸರಕಾರ ಎಂದು ಯಾರೂ ಹೇಳಲಿಲ್ಲ. ನಾನು ಅಧಿಕಾರದಲ್ಲಿದ್ದಾಗ ಜನರಿಗೆ ಶಾಶ್ವತ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಪ್ರಧಾನಿ ಮೋದಿ ನಮ್ಮ ಮುಖ್ಯಮಂತ್ರಿ ಜೊತೆ ಮಾತನಾಡಲು ಸಮಯ ನೀಡುತ್ತಿಲ್ಲ. ಈ ರೀತಿ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಅವಮಾನ ಮಾಡುತ್ತಿವೆ. ಕನ್ನಡಿಗರ ಸ್ವಾಭಿಮಾನ, ಗೌರವ ಉಳಿಸಲು ಈ ಚುನಾವಣೆ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಉತ್ತರ ನೀಡಿ ಎಂದು ಕುಮಾರಸ್ವಾಮಿ ಕರೆನೀಡಿದರು.
ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಮನುಷ್ಯತ್ವ ಇದೆಯಾ?; ಕುಮಾರಸ್ವಾಮಿ ಆಕ್ರೋಶ


