ರಾಜಕೀಯ ಅರಾಜಕತೆ ಉಂಟಾಗಿರುವ ಸಿರಿಯಾದ ಹಂಗಾಮಿ ಪ್ರಧಾನಿಯಾಗಿ ಮೊಹಮ್ಮದ್ ಅಲ್ ಬಶೀರ್ ಆಯ್ಕೆಯಾಗಿದ್ದಾರೆ. ಮಂಗಳವಾರ (ಡಿ.10) ಹಾಲಿ ಸರ್ಕಾರ ಮತ್ತು ಮುಂಬರುವ ಸರ್ಕಾರದ ಮುಖ್ಯಸ್ಥರ ಜೊತೆ ಬಶೀರ್ ಸಭೆ ನಡೆಸಿದ್ದಾರೆ.
ವರದಿಗಳ ಪ್ರಕಾರ, ಸಿರಿಯಾದ ಅಧ್ಯಕ್ಷರಾಗಿದ್ದ ಬಶರ್ ಅಲ್ ಅಸದ್ ಪಲಾಯನ ಮಾಡಿದ ಬಳಿಕ, ಪ್ರಧಾನಿ ಮೊಹಮ್ಮದ್ ಘಾಝಿ ಅಲ್ ಜಲಾಲಿ ಬಂಡುಕೋರರನ್ನು ಬೆಂಬಲಿಸಿದ್ದಾರೆ. ನೂತನ ಮಧ್ಯಂತರ ಸರ್ಕಾರ ರಚನೆಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಹಾಗಾಗಿ, ಬಂಡುಕೋರರ ಗುಂಪಿನ ನಾಯಕ ಮೊಹಮ್ಮದ್ ಅಲ್ ಬಶೀರ್ ಅಧಿಕಾರವಹಿಸಿಕೊಂಡಿದ್ದಾರೆ. 2025ರ ಮಾರ್ಚ್‌ವರೆಗೆ ಅವರು ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಲಿದ್ದಾರೆ. ಬಶೀರ್ ಆಡಳಿತವನ್ನು ‘ಪರಿವರ್ತನಾ ಸರ್ಕಾರ’ (Transitional Govt) ಎಂದು ಹೇಳಲಾಗಿದೆ.
ಸೋಮವಾರ (ಡಿ.9) ಬಂಡುಕೋರರ ಗುಂಪಿನ ಕಮಾಂಡರ್ ಅಬು ಮೊಹಮ್ಮದ್ ಅಲ್-ಜುಲಾನಿ ಅವರು ಪ್ರಧಾನಿ ಮೊಹಮ್ಮದ್ ಘಾಝಿ ಅಲ್ ಜಲಾಲಿ ಮತ್ತು ಉಪಾಧ್ಯಕ್ಷ ಫೈಸಲ್ ಮೆಕ್ದಾದ್ ಅವರನ್ನು ಭೇಟಿಯಾಗಿ ಮಧ್ಯಂತರ ಸರ್ಕಾರ ರಚನೆ ಕುರಿತು ಚರ್ಚೆ ನಡೆಸಿದ್ದರು.
ಆ ಬಳಿಕ, ಹೋರಾಟಗಾರರ ಗುಂಪಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ನನ್ನ ಸರ್ಕಾರ ಇನ್ನುಮುಂದೆ ಹೋರಾಟಗಾರರ ಸರ್ಕಾರವಾಗಿ ಬದಲಾಗಲಿದೆ ಎಂದು ಪ್ರಧಾನಿ ಜಲಾಲಿ ಹೇಳಿದ್ದರು.
ವಾಯುವ್ಯ ಸಿರಿಯಾದ ಇದ್ಲಿಬ್ ಮತ್ತು ಅಲೆಪ್ಪೋ ಪ್ರಾಂತ್ಯವನ್ನು ಬಂಡುಕೋರರ ಪ್ರಬಲ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್ (ಹೆಚ್‌ಟಿಎಸ್) ತನ್ನ ವಶಕ್ಕೆ ಪಡೆದುಕೊಂಡ ಬಳಿಕ, ಕಳೆದ ಜನವರಿಯಿಂದ ಮೊಹಮ್ಮದ್ ಅಲ್ ಬಶೀರ್ ಅಲ್ಲಿನ ಆಡಳಿತ ನೋಡಿಕೊಳ್ಳುತ್ತಿದ್ದರು. ಬಶೀರ್ ಆಡಳಿತವನ್ನು ಬಂಡುಕೋರರ ಗುಂಪು ‘ಮುಕ್ತಿ ಸರ್ಕಾರ’ (Salvation government) ಎಂದಿದೆ.
ಮಂಗಳವಾರ ನಡೆಸಿದ ಸಭೆಯಲ್ಲಿ ಮೊಹಮ್ಮದ್ ಅಲ್ ಬಶೀರ್ ಅವರು ಮುಂದಿನ ಜವಾಬ್ದಾರಿ ಹಂಚಿಕೆ ಕುರಿತು ಮಾತುಕತೆ ನಡೆಸಿದ್ದಾರೆ. ದೇಶದ ಜನರು ‘ಸ್ಥಿರತೆ ಮತ್ತು ಶಾಂತತೆಯನ್ನು ಆನಂದಿಸಿ’ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಸಿರಿಯಾದ ಹೊಸ ಸರ್ಕಾರ ‘ಉತ್ತಮ ಸಂದೇಶ’ ಸಾರಲಿ ಎಂದು ಸಿರಿಯಾದ ವಿಶ್ವಸಂಸ್ಥೆಯ ಪ್ರತಿನಿಧಿ ಹೇಳಿದ್ದಾರೆ.
ಸಿರಿಯಾದ ಭವಿಷ್ಯದ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಹೊಸ ಸರ್ಕಾರ ಅಲ್ಪಸಂಖ್ಯಾತರನ್ನು ಗೌರವಿಸಲಿ, ವಿಶ್ವಾಸಾರ್ಹತೆ ಕಾಪಾಡಲಿ ಮತ್ತು ಎಲ್ಲರ ಒಳಗೊಳ್ಳುವಿಕೆಯನ್ನು ಖಾತ್ರಿಪಡಿಸಲಿ ಎಂದು ಯುಎಸ್ ಸರ್ಕಾರದ ಕಾರ್ಯದರ್ಶಿ ಆಂಟೋನಿ ಜೆ. ಬ್ಲಿಂಕೆನ್ ತಿಳಿಸಿದ್ದಾರೆ.
ಮೊಹಮ್ಮದ್ ಬಶೀರ್ ಯಾರು?
ಎಲೆಕ್ಟ್ರಿಕಲ್ ಎಂಜಿನಿಯರ್ ಪದವಿ ಪಡೆದಿರುವ ಸಿರಿಯಾದ ನೂತನ ಹಂಗಾಮಿ ಪ್ರಧಾನಿ ಮೊಹಮ್ಮದ್ ಅಲ್ ಬಶೀರ್, 2011 ರಲ್ಲಿ ದೇಶದಲ್ಲಿ ಅಂತರ್ಯುದ್ಧ ಪ್ರಾರಂಭವಾಗುವ ಮೊದಲು ಅನಿಲ ಸ್ಥಾವರಗಳಲ್ಲಿ ಕೆಲಸ ಮಾಡಿದ್ದರು.
ಕಳೆದ ಜನವರಿಯಲ್ಲಿ ಬಶೀರ್ ಅವರನ್ನು ತಮ್ಮ ನಿಯಂತ್ರಣದಲ್ಲಿರುವ ಇದ್ಲಿಬ್ ಮತ್ತು ಅಲೆಪ್ಪೋ ಪ್ರಾಂತ್ಯಗಳ ‘ಮುಕ್ತಿ ಸರ್ಕಾರ’ದ (Salvation government) ಪ್ರಧಾನ ಮಂತ್ರಿಯಾಗಿ ಅಥವಾ ಆಡಳಿತಗಾರನಾಗಿ ಹಯಾತ್ ತಹ್ರೀರ್ ಅಲ್-ಶಾಮ್ (ಹೆಚ್‌ಟಿಎಸ್) ನೇಮಿಸಿತ್ತು.
ಇಸ್ಲಾಮಿಕ್ ನೀತಿಗಳಿಂದ ಮಾರ್ಗದರ್ಶಿಸಲ್ಪಟ್ಟ ಧಾರ್ಮಿಕ ಮಂಡಳಿಯ ಮೂಲಕ ಸಚಿವಾಲಯಗಳು, ಸ್ಥಳೀಯ ಇಲಾಖೆಗಳು, ನ್ಯಾಯಾಂಗ ಮತ್ತು ಭದ್ರತಾ ಅಧಿಕಾರಿಗಳೊಂದಿಗೆ ಬಂಡುಕೋರರ ಮುಕ್ತಿ ಸರ್ಕಾರ ಒಂದು ರಾಜ್ಯದಂತೆ ಕಾರ್ಯನಿರ್ವಹಿಸಿತ್ತು.
ಬಂಡುಕೋರರ ಗುಂಪು ಹೆಚ್‌ಟಿಎಸ್ ಮತ್ತು ಅದರ ಮಿತ್ರರು ಇದ್ಲಿಬ್ ಮತ್ತು ಅಲೆಪ್ಪೋ ಪ್ರಾಂತ್ಯಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ, ಅಲ್ಲಿನ ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲಾ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿತ್ತು. ಆಗ ಮುಕ್ತಿ ಸರ್ಕಾರದ ಮೂಲಕ ಅವುಗಳನ್ನು ಮೊಹಮ್ಮದ್ ಅಲ್ ಬಶೀರ್ ಪುನಃ ಸ್ಥಾಪಿಸಿದ್ದರು.
ಬಂಡುಕೋರರ ಗುಂಪು ಸಿರಿಯಾದ ರಾಜಧಾನಿ ಡಮಾಸ್ಕಸ್ ಮೇಲೆ ಡಿ.8ರಂದು ಹಿಡಿತ ಸಾಧಿಸಿದ್ದಾರೆ. ಆ ಬಳಿಕ ಅಧ್ಯಕ್ಷ ಬಶರ್ ಅಲ್ ಅಸಾದ್ ಮತ್ತು ಕುಟುಂಬ ರಷ್ಯಾದ ಮಾಸ್ಕೋಗೆ ಪಲಾಯನ ಮಾಡಿದೆ. ಸಿರಿಯಾ ಬಂಡುಕೋರರ ವಶವಾಗುವ ಮೂಲಕ ಬಶರ್ ಅಲ್ ಅಸಾದ್ ಕುಟುಂಬದ 50 ವರ್ಷಗಳ ನಿರಂಕುಶ ಆಡಳಿತ ಕೊನೆಗೊಂಡಿದೆ. ಬಂಡುಕೋರರ ಗುಂಪು, ” ನಮ್ಮ ಹೋರಾಟ ಅಸದ್ ಆಡಳಿತ ವಿರುದ್ದವಾಗಿತ್ತು. ಆತನ ಹುದ್ದೆಯಿಂದ ಕೆಳಗಿಳಿದ ಬಳಿಕ ಮುಂದೆ ಎಲ್ಲರನ್ನು ಒಳಗೊಂಡ ಸರ್ಕಾರ ರಚಿಸಿ ದೇಶ ಮುನ್ನಡೆಸುತ್ತೇವೆ” ಎಂದಿದೆ.
ಇದನ್ನೂ ಓದಿ : ಉತ್ತರ ಪ್ರದೇಶ | 180 ವರ್ಷ ಹಳೆಯ ಮಸೀದಿಯನ್ನು ಭಾಗಶಃ ಕೆಡವಿದ ಜಿಲ್ಲಾಡಳಿತ


