ಪಾರದರ್ಶಕ ಆಡಳಿತ ನೀಡುವುದಾಗಿ ಗಾಳಿಯಲ್ಲಿ ಕೈ ಬೀಸುತ್ತಾ ಮಾತನಾಡುವ ಪ್ರಧಾನಿ ಮೋದಿ, ನ್ಯಾಯಾಂಗದಲ್ಲೂ ಕೈಯಾಡಿಸಿ ಜಾತಿ-ಧರ್ಮದ ಕೆಸರು ಎಬ್ಬಿಸಿ, ಆಡಳಿತವೆಲ್ಲ ರಾಡಿ ಮಾಡುವ ಇವರ ಮುಖವಾಡ ಬಯಲಾಗಿದೆ. ಸಮಾಧಾನಕರ ಸಂಗತಿ ಎಂದರೆ, ಪ್ರಧಾನಿ ಮೋದಿ ಪ್ರಭಾವಕ್ಕೆ ಮಣಿಯದ ಸುಪ್ರೀಂಕೋರ್ಟ್‍ನ ಕೊಲಿಜಿಯಂ ಮಾತ್ರ ಕೇಂದ್ರ ಸರ್ಕಾರವನ್ನೇ ಪ್ರಶ್ನಿಸಿ, ನ್ಯಾಯಪರತೆಯನ್ನು ಎತ್ತಿ ಹಿಡಿದಿದೆ.
ಹಿಂದೂ ವಕೀಲೆಯೊಬ್ಬರು ಮುಸ್ಲಿಂ ಉದ್ಯಮಿಯನ್ನು ಮದುವೆಯಾಗಿ ಆ ಧರ್ಮದ ಅನುಯಾಯಿಯಾಗಿದ್ದನ್ನು ಸಹಿಸದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈ ವಕೀಲೆಗೆ ಜಮ್ಮು-ಕಾಶ್ಮೀರ ಹೈಕೋರ್ಟ್ ನ್ಯಾಯಾಧೀರಾಗುವುದನ್ನು ತಪ್ಪಿಸಲು ಸಾಧ್ಯವಿದ್ದ ಎಲ್ಲ ಪ್ರಯತ್ನ ಮಾಡಿರುವ, 56 ಅಂಗುಲ ಎದೆ ವಿಸ್ತಾರದ ಮನಸ್ಸಿನ ಸಣ್ಣತನ ಬಹಿರಂಗ ಚರ್ಚೆಗೆ ಆಹ್ವಾನ ನೀಡುತ್ತಿದೆ.
ಮೋಕ್ಷಾ ಖಸ್ಮಿ ಖಜುರಿಯಾ ಮೂಲತಃ ಹಿಂದೂ, ಜಮ್ಮು ನಿವಾಸಿ. ವೃತ್ತಿಯಿಂದ ವಕೀಲೆ. ಶ್ರೀನಗರದ ಬಾರ್‍ಜುಲ್ಲಾ ನಿವಾಸಿ ಹಾಗೂ ಉದ್ಯಮಿ ಯಾಸೀರ್ ಸೈಯದ್ ಖಸ್ಮಿ ಅವರೊಂದಿಗೆ ಮದುವೆಯಾಗಿ ಮುಸ್ಲಿಂ ಧರ್ಮವನ್ನು ಒಪ್ಪಿಕೊಂಡಿದ್ದರು.
ಕೊಲಿಜಿಯಂ ಆಯ್ಕೆ
ಜಮ್ಮು-ಕಾಶ್ಮೀರ ಹೈಕೋರ್ಟ್ ಕೊಲಿಜಿಯಂ ಮೋಕ್ಷಾ ಖಸ್ಮಿ ಖಜುರಿಯಾ ಸೇರಿದಂತೆ ಇಬ್ಬರು ವಕೀಲರ ಹೆಸರನ್ನು ಜಮ್ಮು-ಕಾಶ್ಮೀರ ಹೈಕೋರ್ಟ್ ನ್ಯಾಯಮೂರ್ತಿಯ ಹುದ್ದೆಗೆ ನೇಮಿಸಲು ಶಿಫಾರಸು ಮಾಡಿತ್ತು. ಅಕ್ಟೋಬರ್ 15 ರಂದು ನಡೆದ ಸಭೆಯಲ್ಲಿ ಈ ಹೆಸರುಗಳನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ಅನುಮೋದಿಸಿ, ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಳುಹಿಸಿತ್ತು.
ಕೇಂದ್ರ ಸರ್ಕಾರದ ತಡೆ
ಈ ಇಬ್ಬರ ಹೆಸರಿಗೆ ಒಪ್ಪಿಗೆ ಸೂಚಿಸದ ಕೇಂದ್ರ ಸರ್ಕಾರ, ಏಕಾಏಕಿಯಾಗಿ ಮೋಕ್ಷಾ ಖಸ್ಮಿ ಖಜುರಿಯಾ ಅವರ ವಾರ್ಷಿಕ ಆದಾಯ ಹೆಚ್ಚಿದೆ ಎಂಬ ಸಬೂಬು ನೀಡಿ ವಿಳಂಬ ಧೋರಣೆ ಅನುಸರಿಸಿತು. ಮೋಕ್ಷಾ ಅಂತರ್ ಧರ್ಮೀಯ ಮದುವೆಯಾಗಿದ್ದಾರೆ ಎಂಬ ಅಂಶಕ್ಕೆ ಪರ್ಯಾಯವಾಗಿ ಆದಾಯ ಹೆಚ್ಚಿದ್ದರ ಬಗ್ಗೆ ಸಂಶಯ ವ್ಯಕ್ತಪಡಿಸಿತ್ತು. ಮಾತ್ರವಲ್ಲ; ಮೋಕ್ಷಾ ಅವರ ಆದಾಯವನ್ನೇ ಪ್ರಮುಖ ಗುರಾಣಿಯಾಗಿಸಿ, ಕೊಲಿಜಿಯಂ ಶಿಫಾರಸುಗಳಿಗೆ ತಡೆಯೊಡ್ಡಿತು.
2012 ರಿಂದ 2016ರವರೆಗೆ ಈ ಮೂರು ವರ್ಷಗಳ ಅವಧಿಯಲ್ಲಿ ಕ್ರಮವಾಗಿ 2.50 ಲಕ್ಷ ರೂ.ಗಳಿಂದ 3.25 ಲಕ್ಷ ರೂ.ಗಳಿತ್ತು. ಆದರೆ, 2016 ಹಾಗೂ 2017-18ರಲ್ಲಿ ಕ್ರಮವಾಗಿ 12 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ಆದಾಯ ಹೆಚ್ಚಿದೆ ಎಂಬುದು ಕೇಂದ್ರ ಸರ್ಕಾರದ ಆಕ್ಷೇಪವಾಗಿತ್ತು.
ಕೊಲಿಜಿಯಂ ಪ್ರತಿಕ್ರಿಯೆ
ಮದುವೆ ವಿಷಯಕ್ಕೆ ಸಂಬಂಧಿಸಿದಂತೆ, ಕೋಲಿಜಿಯಂ ಮಾತ್ರ ಅಂತರ್ ಧರ್ಮೀಯ ಮದುವೆ ಅಪರಾಧವೇ? ಎಂದು ಪ್ರತಿಕ್ರಿಯಿಸಿತ್ತು. ಆದಾಯ ಹೆಚ್ಚಳ ವಿಷಯದಲ್ಲಿ ಕೇಂದ್ರ ಸರ್ಕಾರದ ಆರೋಪ ಆಧಾರರಹಿತವಾಗಿದೆ ಎಂದು ಪ್ರತಿಕ್ರಿಯಿಸಿ, ಸರ್ಕಾರದ ತಡೆಯನ್ನು ನಿರ್ಲಕ್ಷಿಸಿ, ಮೋಕ್ಷಾ ಖಸ್ಮಿ ಖಜುರಿಯಾ ಅವರನ್ನು ಜಮ್ಮು-ಕಾಶ್ಮೀರ ಹೈಕೋರ್ಟ್‍ಗೆ ನ್ಯಾಯಾಧೀಶರನ್ನಾಗಿ ನೇಮಿಸಿದೆ.
ಇದೇ ಮೋಕ್ಷಾ ಖಸ್ಮಿ ಖಜುರಿಯಾ, ಜಮ್ಮು-ಕಾಶ್ಮಿರದಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದು, ಆ ಸರ್ಕಾರದ ಕಾನೂನು ಸಚಿವ ಅಬ್ದುಲ್ ಹಖ್ ಖಾನ್ ಹಾಗೂ ಅಡ್ವೊಕೇಟ್ ಜನರಲ್ ಜಹಾಂಗೀರ್ ಇಕ್ಬಾಲ್ ಗನೈ ಅವರೊಂದಿಗಿನ ಮನಸ್ತಾಪದ ಹಿನ್ನೆಲೆಯಲ್ಲಿ ಹುದ್ದೆಯನ್ನು ತೊರೆದಿದ್ದರು.
ಪತಿ ಖಸ್ಮಿ ಖಜುರಿಯಾ ಸಹ ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿಯ ಮುಖಂಡರಾಗಿದ್ದಾರೆ.
ಆಧಾರ: ದಿ ಪ್ರಿಂಟ್


