‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ ಪ್ರಕರಣದಲ್ಲಿ ದೊಡ್ಡ ಕಾನೂನು ಜಯ ಸಿಕ್ಕಿದಂತಾಗಿದೆ.
ಲೋಕಪಾಲ್ ತಮ್ಮ ರಕ್ಷಣಾತ್ಮಕ ವಾದಗಳನ್ನು ಪರಿಗಣಿಸಿಲ್ಲ, ಇದು ನೈಸರ್ಗಿಕ ನ್ಯಾಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಮಹುವಾ ಲೋಕಪಾಲ್ ಆದೇಶದ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅನಿಲ್ ಕ್ಷೇತ್ರಪಾಲ ಮತ್ತು ನ್ಯಾಯಮೂರ್ತಿ ಹರೀಶ್ ವೈದ್ಯನಾಥನ್ ಶಂಕರ್ ಅವರ ದೆಹಲಿ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ನಡೆಸಿದೆ.
ಈ ಪ್ರಕರಣದಲ್ಲಿ ಲೋಕಪಾಲ್ ಕಾನೂನು ಪ್ರಕ್ರಿಯೆಗಳನ್ನು ಸರಿಯಾಗಿ ಪಾಲಿಸಿಲ್ಲ ಮತ್ತು ಮೊಯಿತ್ರಾ ಅವರ ವಾದಗಳನ್ನು ಪರಿಗಣಿಸದೆ ತಪ್ಪು ಮಾಡಿದೆ ಎಂದು ಹೇಳಿರುವ ದೆಹಲಿ ಹೈಕೋರ್ಟ್ ಒಂದು ತಿಂಗಳೊಳಗೆ ಈ ಬಗ್ಗೆ ಮರುಪರಿಶೀಲಿಸುವಂತೆ ಲೋಕಪಾಲ್‌ಗೆ ಸೂಚನೆ ನೀಡಿದೆ.
ಏನಿದು ಪ್ರಶ್ನೆಗಾಗಿ ಕಾಸು ಪ್ರಕರಣ?
ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಹಣ ಮತ್ತು ದುಬಾರಿ ಉಡುಗೊರೆಗಳನ್ನು ಪಡೆದು ಸಂಸತ್ತಿನಲ್ಲಿ ಅದಾನಿ ಸಮೂಹದ ವಿರುದ್ಧ ಮೊಯಿತ್ರಾ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು 2023ರ ಅಕ್ಟೋಬರ್‌ನಲ್ಲಿ ಸಂಸದ ನಿಶಿಕಾಂತ್ ದುಬೆ ಸ್ಪೀಕರ್‌ಗೆ ದೂರು ನೀಡಿದ್ದರು. ಮೊಯಿತ್ರಾ ಅವರು ಸಂಸತ್ತಿನ ಅಧಿಕೃತ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಹಿರಾನಂದಾನಿ ಅವರಿಗೆ ನೀಡಿದ್ದರು ಎಂದು ಆರೋಪಿಸಲಾಗಿತ್ತು.
ಅದಾದ ಬಳಿಕ ಅದೇ ವರ್ಷದ ಡಿಸೆಂಬರ್‌ನಲ್ಲಿ ಎಥಿಕ್ಸ್ ಕಮಿಟಿ(ನೈತಿಕ ಸಮಿತಿ) ಶಿಫಾರಸಿನ ಮೇರೆಗೆ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು. 2024ರ ಮಾರ್ಚ್‌ನಲ್ಲಿ ಲೋಕಪಾಲ್ ಆದೇಶದ ಮೇರೆಗೆ ಸಿಬಿಐ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದೆ. 2025ರ ನವೆಂಬರ್‌ನಲ್ಲಿ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಲೋಕಪಾಲ್ ಅನುಮತಿ ನೀಡಿದೆ.
ಇನ್ನು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಗೆ ತಮ್ಮ ಸಂಸತ್ತಿನ ಲಾಗಿನ್ ಮತ್ತು ಪಾಸ್‌ವರ್ಡ್ ನೀಡಿರುವುದನ್ನು ಮೊಯಿತ್ರಾ ಒಪ್ಪಿಕೊಂಡಿದ್ದಾರೆ. ಆದರೆ ಇದು ಕೇವಲ ಪ್ರಶ್ನೆಗಳನ್ನು ಟೈಪ್ ಮಾಡಲು ಸಹಾಯ ಪಡೆಯುವ ಉದ್ದೇಶದಿಂದ ಆಗಿತ್ತೇ ಹೊರತು ಹಣದ ಬದಲಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಹಿರಾನಂದಾನಿ ಅವರಿಂದ ಯಾವುದೇ ರೀತಿಯ ಹಣವನ್ನು ಪಡೆದಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಇಡೀ ಪ್ರರಕಣವು ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಸೇಡಿನಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.


