ದುಬೈಗೆ ತೆರಳುತ್ತಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರೆ. ಜೊತೆಗೆ ನಟಿಗೆ ದೇಶ ಬಿಟ್ಟು ಹೊರ ಹೋಗದಂತೆ ಸೂಚನೆ ನೀಡಲಾಗಿದೆ.
ಸುಕೇಶ್ ಚಂದ್ರಶೇಖರ್ ಮತ್ತು ಶ್ರೀಲಂಕಾ ಮೂಲದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ನಡುವೆ ಅಕ್ರಮ ಹಣ ವರ್ಗಾವಣೆ ಆಗಿದೆ. ಫರ್ನಾಂಡಿಸ್ ಅವರು ಸುಕೇಶ್ ಅವರಿಂದ 52 ಲಕ್ಷ ರೂ. ಮೌಲ್ಯದ ಕುದುರೆ, 9 ಲಕ್ಷ ರೂ. ಮೌಲ್ಯದ ಪರ್ಷಿಯಾ ದೇಶದ ಬೆಕ್ಕು ಸೇರಿದಂತೆ 10 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ಪಡೆದಿದ್ದಾರೆ ಎಂಬುದರ ಬಗ್ಗೆ ಇಡಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿದೆ. ಆ ಹಿನ್ನೆಲೆಯಲ್ಲಿ ಜ್ಯಾಕ್ವೆಲಿನ್‌ರ ವಿರುದ್ಧ “ಲುಕ್ ಔಟ್ ಸರ್ಕ್ಯುಲರ್ ‘ ಜಾರಿಗೊಳಿಸಲಾಗಿದ್ದು, ಅವರನ್ನು ಈ ವಿಚಾರಕ್ಕಾಗಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಅಕ್ರಮ ಹಣ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಇಡಿ ಹಲವು ಬಾರಿ ವಿಚಾರಣೆಗೆ ಒಳಪಡಿಸಿತ್ತು.
ಇದನ್ನೂ ಓದಿ: ಗ್ಯಾಂಗ್ ರೇಪ್: ಮಹಿಳೆಯರ ಮೇಲಿನ ಅಪರಾಧಗಳಿಗೆ ಕುರುಡಾಗದಿರಿ, ದನಿ ಎತ್ತಿ- ನಟಿ ರಮ್ಯಾ ಆಕ್ರೋಶ
ಜಾಕ್ವೆಲಿನ್ ಫರ್ನಾಂಡಿಸ್ ಹಿನ್ನೆಲೆ
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಮೂಲತಃ ಶ್ರೀಲಂಕಾದವರು. ಸುದ್ದಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು, ಅಲಾದಿನ್ (2009) ಚಿತ್ರದ ಮೂಲಕ ಹಿಂದಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಜಾಕ್ವೆಲಿನ್ 2006 ರಲ್ಲಿ ಮಿಸ್ ಯೂನಿವರ್ಸ್ ಶ್ರೀಲಂಕಾ ಕಿರೀಟ ಧರಿಸಿದ್ದು, ಅದೇ ವರ್ಷ ವಿಶ್ವ ಸುಂದರಿ ಸ್ಪರ್ಧೆಯಲ್ಲಿಯೂ ಶ್ರೀಲಂಕಾವನ್ನು ಪ್ರತಿನಿಧಿಸಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಹಿಂದಿ ಚಿತ್ರೋದ್ಯಮದಲ್ಲಿ ಸಕ್ರಿಯವಾಗಿರುವ ಅವರು ಮರ್ಡರ್ 2, ಕಿಕ್, ರಾಯ್, ಡ್ರೈವ್, ಜುಡ್ವಾ 2, ಹೌಸ್‌ಫುಲ್ 2, ಮತ್ತು ಮಿಸಸ್ ಸೀರಿಯಲ್ ಕಿಲ್ಲರ್ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಬ್ರಿಟಿಷ್ ಚಲನಚಿತ್ರ ಡೆಫಿನಿಷನ್ ಆಫ್ ಫಿಯರ್, ಶ್ರೀಲಂಕಾದ ಸಿನಿಮಾ ಇಂಡಸ್ಟ್ರಿಯಲ್ಲೂ ಅವರು ಕೆಲಸ ಮಾಡಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ಪ್ರಸ್ತುತ ಬಚ್ಚನ್ ಪಾಂಡೆ, ಅಟ್ಯಾಕ್, ಸರ್ಕಸ್, ರಾಮ್ ಸೇತು, ಪವನ್ ಕಲ್ಯಾಣ್ ಅಭಿನಯದ ತೆಲುಗು ಚಿತ್ರ ಹರಿ ಹರ ವೀರ ಮಲ್ಲು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಕನ್ನಡ ಸಿನಿಮಾ ಸುದೀಪ್ ಅಭಿನಯದ ವಿಕ್ರಾಂತ್ ರೋಣಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಏಕೆ ವಶಕ್ಕೆ ಪಡೆಯಲಾಗಿದೆ…?
ಜಾಕ್ವೆಲಿನ್ ಫೆರ್ನಾಂಡಿಸ್ ವಿರುದ್ಧ ಜಾರಿ ನಿರ್ದೇಶನಾಲಯವು ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಿದೆ. ಹೀಗಾಗಿ, ಅವರನ್ನು ಭಾನುವಾರ ಮುಂಬೈನಲ್ಲಿ ವಶಕ್ಕೆ ಪಡೆಯಲಾಗಿದೆ. ಸುಕೇಶ್ ಚಂದ್ರಶೇಖರ್ ಸುಲಿಗೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಫರ್ನಾಂಡಿಸ್ ಅವರ ಹೆಸರು ಕೇಳಿಬಂದಿದ್ದು, ಅದಕ್ಕೆ ಕೆಲವು ಸಾಕ್ಷಿಗಳು ದೊರೆತಿವೆ. ಜಾಕ್ವೆಲಿನ್ ಅವರನ್ನು ದೆಹಲಿಗೆ ಕರೆದೊಯ್ದು ವಿಚಾರಣೆ ನಡೆಸಲಿದ್ದು, ತನಿಖೆ ಮುಗಿಯುವವರೆಗೂ ಜಾಕ್ವೆಲಿನ್ ಅವರು ದೇಶವನ್ನು ತೊರೆಯುವಂತಿಲ್ಲ.
ಪ್ರಕರಣವೇನು?
ಚುನಾವಣಾ ಆಯೋಗವನ್ನು ಒಳಗೊಂಡಿರುವ ಲಂಚದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ವಿರುದ್ಧ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣವಿದೆ. ಸುಕೇಶ್ ಚಂದ್ರಶೇಖರ್ ಮತ್ತು ಇತರರ ವಿರುದ್ಧ ಇಡಿ ಇತ್ತೀಚೆಗೆ ಆರೋಪಪಟ್ಟಿ ಸಲ್ಲಿಸಿತ್ತು. ಆರೋಪದ ಪ್ರಕಾರ, ತಿಹಾರ್ ಜೈಲಿನಲ್ಲಿ ಸುಕೇಶ್ ಶಿಕ್ಷೆ ಅನುಭವಿಸುತ್ತಿದ್ದಾಗ, ಉದ್ಯಮಿಯೊಬ್ಬರ ಪತ್ನಿಯಿಂದ ಹಣ ಸುಲಿಗೆ ಮಾಡಿದ್ದ. ಅಲ್ಲದೆ, ಈ ವೇಳೆ ನಟಿ ಜಾಕ್ವೆಲಿನ್ ಅವರು ಸುಕೇಶ್ ಜೊತೆ ಹಣದ ವಹಿವಾಟು ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜಾಕ್ವೆಲಿನ್‌ಗೆ ಸುಕೇಶ್ ಉಡುಗೊರೆಗಳನ್ನು ನೀಡಿದ್ದಾರೆ ಎಂದು ಇಡಿ ಹೇಳಿದೆ. ಜಾಕ್ವೆಲಿನ್ ಜೊತೆಗೆ ನಟಿ ನೋರಾ ಫತೇಹಿ ಅವರನ್ನೂ ಇಡಿ ವಿಚಾರಣೆ ಕರೆದಿತ್ತು.


