ಗಾಝಾ ನಗರದ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 100ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ದರಾಜ್ ಪ್ರದೇಶದ ಅಲ್-ತಬಿನ್ ಶಾಲೆಯಲ್ಲಿ ಬೆಳಗ್ಗಿನ ಪ್ರಾಥನೆ ನಡೆಯುತ್ತಿದ್ದ ವೇಳೆ ಇಸ್ರೇಲ್ ದಾಳಿ ನಡೆಸಿದೆ. ಇದರಿಂದ ಹೆಚ್ಚು ಸಾವು ನೋವುಗಳು ಸಂಭವಿಸಿದೆ ಎಂದು ಗಾಝಾದ ಸರ್ಕಾರಿ ಮಾಧ್ಯಮಗಳು ಹೇಳಿವೆ.
ಶಾಲೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡಿರುವ ಇಸ್ರೇಲ್ ವಾಯುಪಡೆ, ಹಮಾಸ್ ಕಮಾಂಡ್ ಸೆಂಟರ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದಿದೆ.
ದಾಳಿಗೂ ಮುನ್ನ ನಾಗರಿಕರಿಗೆ ಅಪಾಯ ಉಂಟಾಗುವುದನ್ನು ತಪ್ಪಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದೆ. ಹಾಗಿದ್ದರೆ, 100 ಅಧಿಕ ಜನರು ವಿಶೇಷವಾಗಿ ಮಕ್ಕಳು ಬಲಿಯಾಗಿದ್ದು ಹೇಗೆ? ಎಂಬ ಪ್ರಶ್ನೆ ಉದ್ಬವಿಸಿದೆ.
ಅಲ್-ತಬಿನ್ ಶಾಲೆಯ ಪ್ರಾರ್ಥನಾ ಕೊಠಡಿಯನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದ್ದು, ತರಗತಿ ಕೊಠಡಿಗಳಲ್ಲೂ ಜನರನ್ನು ಹತ್ಯೆ ಮಾಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಬಲಿಯಾಗಿದ್ದಾರೆ. ಹಲವು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಅಲ್ ಅಹ್ಲಿ ಅರಬ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಯ ತೀವ್ರತೆಗೆ ಜನರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೆಲವರ ದೇಹಗಳು ಸುಟ್ಟು ಕರಕಲಾಗಿತ್ತು. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಸಿಬ್ಬಂದಿ, ಮತ್ತು ಅಗತ್ಯ ವಸ್ತುಗಳು ಲಭ್ಯವಿಲ್ಲ. ಹಾಗಾಗಿ, ಬಳಸಿದ ವಸ್ತುಗಳನ್ನೇ ಮತ್ತೆ ಬಳಸುವ ಅನಿವಾರ್ಯತೆ ಎದುರಾಗಿದೆ. ಇತರ ಸಮಯಗಳಲ್ಲಿ ಬಳಸಿ ಬಿಸಾಡುವ ವೈದ್ಯಕೀಯ ಸಾಮಗ್ರಿಗಳನ್ನು ಇಲ್ಲಿ ಜೀವ ಉಳಿಸಲು ಪುನರ್ಬಳಕೆ ಮಾಡಲಾಗುತ್ತಿದೆ ಎಂದು ಅಲ್-ಜಝೀರಾದ ವರದಿಗಾರ ಹನಿ ಮಹಮೂದ್ ಹೇಳಿದ್ದಾರೆ.
ಪ್ಯಾಲೇಸ್ತೀನ್ ನಿರಾಶ್ರಿತರಿಗಾಗಿ ಕೆಲಸ ಮಾಡುವ ವಿಶ್ವಸಂಸ್ಥೆಯ ‘ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಫಾರ್ ಪ್ಯಾಲೆಸ್ತೀನ್ ‘ ಪ್ರಕಾರ ಇಸ್ರೇಲಿ ಸೇನಾಪಡೆ ದಕ್ಷಿಣ ಗಾಝಾದ ಖಾನ್ ಯೂನುಸ್ ಪ್ರದೇಶದಿಂದ ಸುಮಾರು 60ರಿಂದ 70 ಸಾವಿರ ಜನರನ್ನು ಈಗಾಗಲೇ ಜನಸಂಖ್ಯೆಯಿಂದ ತುಂಬಿರುವ ಮವಾಸಿ ಪ್ರದೇಶಕ್ಕೆ ಸ್ಥಳಾಂತರಿಸಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ.
ದರಾಜ್ ಶಾಲೆ ಮೇಲಿನ ದಾಳಿಗೆ ಇಸ್ರೇಲ್ 2,000 ಪೌಂಡ್ ಬಾಂಬ್‌ಗಳನ್ನು ಬಳಸಿದೆ ಎಂದು ಗಾಝಾದ ಮಾಧ್ಯಮ ಕಚೇರಿಗಳು ಹೇಳಿವೆ.
ಇಂದಿನ ದಾಳಿಗೂ ಮುನ್ನ ಕೊನೆಯದಾಗಿ ಇಸ್ರೇಲ್ ನಡೆಸಿದ ದಾಳಿಯಿಂದ ಖಾನ್ ಯೂನುಸ್‌ನಲ್ಲಿ 19 ಸೇರಿ ಗಾಝಾದ ವಿವಿದೆಡೆ ಒಟ್ಟು 35 ಮಂದಿ ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 7, 2023ರಿಂದ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣದಿಂದ ಇದುವರೆಗೆ 39,699 ಜನರು ಸಾವನ್ನಪ್ಪಿದ್ದು, 91,722 ಜನರು ಗಾಯಗೊಂಡಿದ್ದಾರೆ.
ಫೋಟೋ ಸಾಂದರ್ಭಿಕ
ಇದನ್ನೂ ಓದಿ : ಎಸ್‌ಸಿ, ಎಸ್‌ಟಿಯಲ್ಲಿ ‘ಕೆನೆಪದರ’ಕ್ಕೆ ಅವಕಾಶವಿಲ್ಲ, ಸಂವಿಧಾನಕ್ಕೆ ಬದ್ದ : ಕೇಂದ್ರ ಸರ್ಕಾರ


