ಬೆಂಗಳೂರು: ನಿಗದಿತ ವೇತನ, ಸರ್ಕಾರದಿಂದ ಪ್ರೋತ್ಸಾಹ ಧನಕ್ಕೆ ಆಗ್ರಹಿಸಿ ಮಂಗಳವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ 25 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ರಾಜ್ಯದಲ್ಲಿರುವ 42,000 ಜನ ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಹಲವು ವರ್ಷಗಳಿಂದ ಈಡೇರಿಲ್ಲ. ಆದ್ದರಿಂದ ಕೆಲಸ ಸ್ಥಗಿತಗೊಳಿಸಿ ಧರಣಿಗೆ ನಿರ್ಧರಿಸಿದ್ದೇವೆ ಎಂದು ಪ್ರತಿಭಟನಾ ನಿರತರು ತಿಳಿಸಿದರು.
8 ವರ್ಷಗಳಿಂದಲೂ ಆಶಾ ಕಾರ್ಯಕರ್ತೆಯರು ಮಾಡುತ್ತಿರುವ ಕೆಲಸಗಳು ಆಶಾ ನಿಧಿ ಪೋರ್ಟಲ್‌ನಲ್ಲಿ ದಾಖಲಾಗುತ್ತಿಲ್ಲ. ರಾಜ್ಯಾದ್ಯಂತ ಬಾಕಿ ಇರುವ 3 ತಿಂಗಳ ಪ್ರೋತ್ಸಾಹಧನ ಕೂಡಲೇ ಬಿಡುಗಡೆಗೊಳಿಸಬೇಕು ಹಾಗೂ ಆಶಾ ಕಾರ್ಯಕರ್ತೆಯರಿಗೆ ವಹಿಸಿರುವ ಮೊಬೈಲ್ ಆಧಾರಿತ ಕೆಲಸಗಳನ್ನ ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳಬಾರದು. ಇಲ್ಲದಿದ್ದರೆ ಮೊಬೈಲ್ ಆಧಾರಿತ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ, ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್, ಎಐಯುಟಿಯುಸಿ ರಾಜ್ಯ ಅಧ್ಯಕ್ಷ ಕೆ.ಸೋಮಶೇಖರ್, ರಾಜ್ಯ ಉಪಾಧ್ಯಕ್ಷ ಉಮಾದೇವ, ಟಿ.ಎಸ್.ರಮಾ ಮುಂತಾದವರು ಹಾಜರಿದ್ದರು.
ಆಶಾ ಕಾರ್ಯಕರ್ತ ಬೇಡಿಕೆಗಳೇನು?
– ನಗರ ಪ್ರದೇಶದ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ವೆಚ್ಚಗಳಿಗೆ ಅನುಗುಣವಾಗಿ ಗೌರವಧನವನ್ನು ಮಾಸಿಕ ರೂ.20 ಸಾವಿರಕ್ಕೆ ಹೆಚ್ಚಿಸಬೇಕು.
– 8 ವರ್ಷಗಳಿಂದ ಆಶಾನಿಧಿ ಪೋರ್ಟಲ್‌ನಲ್ಲಿ ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸಗಳು ದಾಖಲಾಗದೇ, ಪ್ರೋತ್ಸಾಹಧನವೂ ಬಂದಿಲ್ಲ. ರಾಜ್ಯದಾದ್ಯಂತ ಬಾಕಿ ಇರುವ 3 ತಿಂಗಳ ಪ್ರೋತ್ಸಾಹಧನ ಕೂಡಲೇ ಬಿಡುಗಡೆಗೊಳಿಸಬೇಕು.
– ಮೊಬೈಲ್ ಆಧಾರಿತ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳಬಾರದು. ಇಲ್ಲದಿದ್ದರೆ ಮೊಬೈಲ್ ಆಧಾರಿತ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿಪಡಿಸಬೇಕು.
– ಪಶ್ಚಿಮ ಬಂಗಾಳದ ಮಾದರಿಯಲ್ಲಿ ಸೇವಾ ನಿವೃತ್ತಿ ಪಡೆಯುವ ಆಶಾ ಕಾರ್ಯಕರ್ತೆಯರಿಗೆ ವರ್ಷಕ್ಕೆ ರೂ.5 ಲಕ್ಷ ನೀಡಬೇಕು.
– ಪ್ರತಿವರ್ಷ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಸೌಲಭ್ಯ ಕಲ್ಪಿಸಬೇಕು. ನಮ್ಮನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಗ್ರಾಚ್ಯುಟಿ, ಭವಿಷ್ಯನಿಧಿ, ಕಾರ್ಮಿಕರ ರಾಜ್ಯ ವಿಮೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಆರೋಗ್ಯ ಇಲಾಖೆ ಹೇಳುವುದೇನು?
– ರಾಜ್ಯ ಸರ್ಕಾರದ ವತಿಯಿಂದ ಮಾಸಿಕ ಗೌರವಧನ ರೂ.5000/- ಗಳನ್ನು ನೀಡಲಾಗುತ್ತಿದೆ.
-ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಎಂಟು ಆವರ್ತಕ ಮತ್ತು ನಿಯಮಿತ ಚಟುವಟಿಕೆಗಳಿಗೆ ಮಾಸಿಕ ಪ್ರೋತ್ಸಾಹಧನ ರೂ.2000/-ಗಳನ್ನು ನೀಡಲಾಗುತ್ತಿದೆ.
– ಆಯುಷ್ಮಾನ್ ಆರೋಗ್ಯ ಮಂದಿರದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಕರ್ತೆಯರಿಗೆ ಮಾಸಿಕ ರೂ.1000/-ಗಳ ಟೀಮ್ ಬೇಸ್ಟ್ ಇನ್ಸೆಂಟಿವ್ ಕೊಡಲಾಗುತ್ತಿದೆ.
– 34 ಆರೋಗ್ಯ ಚಟುವಟಿಕೆಗಳ ಕಾರ್ಯಕ್ರಮ ಅನುಷ್ಠಾನದ ಆಧಾರದ ಪ್ರೋತ್ಸಾಹಧನ ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ (PMSBY) ಯಡಿಯಲ್ಲಿ ತಲಾ ಎರಡು ಲಕ್ಷಗಳ ರೂ. ವಿಮಾ ಸೌಲಭ್ಯ ಮುಖಾಂತರ ಸಾಮಾಜಿಕ ಸುರಕ್ಷೆ ಒದಗಿಸಲಾಗಿದೆ.
– ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಯೋಜನೆಯ ವೈದ್ಯಕೀಯ ವಿಮಾ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ.
– ಆಶಾ ಕಾರ್ಯಕರ್ತೆಯರು ಇಲಾಖೆಯ ಇತರ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರೊಂದಿಗೆ ಆರೋಗ್ಯ ಸೇವೆಗೆ ಸಂಬಂಧಿಸಿದ ಮಾಹಿತಿ ವಿನಿಮಯಕ್ಕಾಗಿ ಸಿಯುಜಿ ಸಿಮ್‌ಗಳ ಸೌಲಭ್ಯವನ್ನು ಕಲ್ಪಿಸುವ ಅವಕಾಶ ಇದೆ.
– ಆಶಾ ಕಾರ್ಯಕರ್ತೆಯರು ಆರೋಗ್ಯ ಚಟುವಟಿಕೆಗಳನ್ನು ಸ್ಮಾರ್ಟ್ ಫೋನ್ ಬಳಸಿ ದಾಖಲಿಸಲು ಮಾಸಿಕ ರೂ.280/- ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ವಾರ್ಷಿಕ ಎರಡು ಜೊತೆ ಸಮವಸ್ತ್ರಗಳನ್ನು ನೀಡಲಾಗುತ್ತಿದೆ.
– ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ತ್ರೈಮಾಸಿಕ ಆಶಾ ಕಾರ್ಯಕರ್ತೆಯರ ಕುಂದುಕೊರತೆ ನಿವಾರಣಾ ಸಭೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದೆ.
– ರಾಜ್ಯ ಮಟ್ಟದಲ್ಲಿ ಆಶಾ ಸಂಘಟನೆಯ ಮುಖಂಡರ ಜೊತೆ ನಿರಂತರವಾಗಿ ಸಭೆಗಳನ್ನು ಸಹ ಸಂಧರ್ಭಕ್ಕೆ ಅನುಸಾರವಾಗಿ ನಡೆಸಿ ನೈಜ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿರುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.


