ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾ ಬಳಿ ಶುಕ್ರವಾರ (ಫೆ.28) ಸಂಭವಿಸಿದ ಹಿಮಪಾತದಲ್ಲಿ ಗಡಿ ರಸ್ತೆ ಸಂಸ್ಥೆಯ (ಬಿಆರ್‌ಒ) 41 ಕಾರ್ಮಿಕರು ಹಿಮದಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ದುರಂತ ಸಂಭವಿಸಿದಾಗ ಸುಮಾರು 57 ಕಾರ್ಮಿಕರು ಸ್ಥಳದಲ್ಲಿದ್ದರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇಲ್ಲಿಯವರೆಗೆ 16 ಜನರನ್ನು ರಕ್ಷಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಾನಾ ಬಳಿಯ ಸೇನಾ ಶಿಬಿರಕ್ಕೆ ಕಳುಹಿಸಲಾಗಿದೆ. ಜಿಲ್ಲಾಡಳಿತದ ಮೂಲಗಳ ಪ್ರಕಾರ, ಗಾಯಗೊಂಡ ಮೂವರು ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
“ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಭಾರತೀಯ ಸೇನೆ ಮತ್ತು ಐಟಿಬಿಪಿ ತಂಡ ಘಟನಾ ಸ್ಥಳಕ್ಕೆ ಆಗಮಿಸಿವೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತದ ಮೂಲಗಳ ಆರಂಭಿಕ ಮಾಹಿತಿಯ ಪ್ರಕಾರ, ಉಳಿದ 41 ಜನರಿಗಾಗಿ ಶೋಧ ಪ್ರಯತ್ನಗಳು ಮುಂದುವರೆದಿವೆ.
ಅಪಾಯಕ್ಕೆ ಸಿಲುಕಿರುವರು ಬಿಆರ್‌ಒಗೆ ಸಂಬಂಧಿಸಿದ ಗುತ್ತಿಗೆ ಕಾರ್ಮಿಕರು ಎಂದು ನಂಬಲಾಗಿದೆ. ಕಾರ್ಮಿಕರು ಮಾನಾದಿಂದ ಮಾನಾ ಪಾಸ್‌ವರೆಗಿನ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹೆದ್ದಾರಿ ಅಗಲೀಕರಣ ಮತ್ತು ಡಾಂಬರೀಕರಣ ಕೆಲಸಗಳಲ್ಲಿ ತೊಡಗಿರುವ ಕಂಪನಿಯ ಪರವಾಗಿ ಕೆಲಸ ಮಾಡುತ್ತಿದ್ದರು. ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಇಪಿಸಿ ಗುತ್ತಿಗೆದಾರರ ಮೂಲಕ ಈ ರಸ್ತೆ ನಿರ್ಮಾಣ ಮಾಡುತ್ತಿದೆ.
“ಪ್ರಸಿದ್ಧ ಬದರಿನಾಥ ದೇವಾಲಯದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಹೆದ್ದಾರಿಯ ಬಳಿ ಹಿಮಪಾತ ಸಂಭವಿಸಿದೆ. ಉತ್ತರಾಖಂಡದಲ್ಲಿ ಸತತ ಮೂರು ದಿನಗಳಿಂದ ಹವಾಮಾನ ಪ್ರತಿಕೂಲವಾಗಿದ್ದು, ಎತ್ತರದ ಶಿಖರಗಳಲ್ಲಿ ಹಿಮಪಾತ ಮುಂದುವರೆದಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಆರ್‌ಒ ಕಾರ್ಯನಿರ್ವಾಹಕ ಇಂಜಿನಿಯರ್ ಸಿಆರ್ ಮೀನಾ ಮಾತನಾಡಿ, “ಮೂರರಿಂದ ನಾಲ್ಕು ಆಂಬ್ಯುಲೆನ್ಸ್‌ಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ, ಆದರೆ ಭಾರೀ ಹಿಮಪಾತದಿಂದಾಗಿ ರಕ್ಷಣಾ ತಂಡವು ಅಲ್ಲಿಗೆ ತಲುಪಲು ತೊಂದರೆಗಳನ್ನು ಎದುರಿಸುತ್ತಿದೆ” ಎಂದು ಹೇಳಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್) ಕಮಾಂಡೆಂಟ್ ಅರ್ಪಣ್ ಯಾದವಂಶಿ ಮಾತನಾಡಿ, “ಎಸ್‌ಡಿಆರ್‌ಎಫ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಎರಡನ್ನೂ ಸ್ಥಳಕ್ಕೆ ರವಾನಿಸಲಾಗಿದೆ. ಆದಾಗ್ಯೂ, ಹೆದ್ದಾರಿ ಮುಚ್ಚಿರುವುದರಿಂದ ಅವರು ಪ್ರಸ್ತುತ ಸಿಲುಕಿಕೊಂಡಿದ್ದಾರೆ. ಇಂಡೋ-ಟಿಬೆಟಿಯನ್ ಗಡಿ ಪೊಲೀಸರು (ಐಟಿಬಿಪಿ) ಪ್ರಸ್ತುತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಹನುಮಾನ್ ಚಟ್ಟಿಯ ಆಚೆಯ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ.


