ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಾಲ್ವರು ಬಾಲಕರ ವಿರುದ್ಧ ಬಾಲಕಿಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಪೊಲೀಸರು ಬಾಲಕರ ತಾಯಂದಿರನ್ನು ‘ಪ್ರಿವೆಂಟಿವ್ ಅರೆಸ್ಟ್’ ಮಾಡಿದ್ದಾರೆ ಎಂದು indianexpress.com ಶನಿವಾರ (ಡಿ.20) ವರದಿ ಮಾಡಿದೆ.
ಆರೋಪಿತ ಬಾಲಕರನ್ನು ಅವರ ತಾಯಂದಿರು ಸರಿಯಾಗಿ ಬೆಳೆಸಿಲ್ಲ, ಉತ್ತಮ ಸಂಸ್ಕಾರ ಕೊಟ್ಟಿಲ್ಲ. ಹಾಗಾಗಿ, ಅವರಿಗೆ ಪಾಠ ಕಲಿಸಲು ಬಂಧಿಸಿರುವುದಾಗಿ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್‌ಹೆಚ್‌ಒ) ಸಮರ್ಥಿಸಿಕೊಂಡಿರುವುದಾಗಿ ವರದಿ ಉಲ್ಲೇಖಿಸಿದೆ.
ಈ ಬಗ್ಗೆ ಮಾಹಿತಿ ಪಡೆಯಲು ನಾವು ಬದೌನ್ ಎಸ್‌ಎಸ್‌ಪಿ ಬ್ರಿಜೇಶ್ ಕುಮಾರ್ ಸಿಂಗ್ ಅವರನ್ನು ಸಂಪರ್ಕಿಸಿದ್ದೇವೆ. ಅವರ ಅಧಿಕೃತ ಸಂಖ್ಯೆಗೆ ಕರೆ ಮಾಡಿದಾಗ ಪಿಆರ್‌ಒ ಕರೆ ಸ್ವೀಕರಿಸಿದ್ದಾರೆ. ಆದರೆ, ಪಿಆರ್‌ಒಗೆ ಈ ಪ್ರಕರಣದ ಬಗ್ಗೆ ಗೊತ್ತಿರಲಿಲ್ಲ. ಬರೇಲಿ ಡಿಐಜಿ ಅಜಯ್ ಕುಮಾರ್ ಸಾಹ್ನಿ ಅವರಿಗೂ ನಾವು ಕರೆ ಮಾಡಿದ್ದೇವೆ ಮತ್ತು ಮಾಹಿತಿ ಕೋರಿ ಮೆಸೇಜ್ ಕಳುಹಿಸಿದ್ದೇವೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿ ಹೇಳಿದೆ.
ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಅಜಯ್ ಪಾಲ್ ಸಿಂಗ್, ಬುಧವಾರ ಅಪ್ರಾಪ್ತ ಹುಡುಗಿಯ ಪೋಷಕರು ಒಂದೇ ಗ್ರಾಮದ ನಾಲ್ವರು ಹುಡುಗರು ಶಾಲೆಗೆ ಹೋಗಿ ಹಿಂತಿರುಗುವಾಗ ಅಶ್ಲೀಲವಾಗಿ ಮಾತನಾಡುತ್ತಾ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಬಿಎನ್‌ಎಸ್ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 13 ವರ್ಷದೊಳಗಿನ ಬಾಲಕರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ಎಸ್‌ಎಚ್‌ಒ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಬಾಲಕರು ಅಪ್ರಾಪ್ತ ವಯಸ್ಕರಾಗಿರುವುದರಿಂದ, ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆಗಳಿಗೆ ನೋಟಿಸ್ ನೀಡಿದ ನಂತರ ಶುಕ್ರವಾರ ಅವರ ತಾಯಂದಿರನ್ನು ಬಿಎನ್‌ಎಸ್‌ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ. ಅಪರಾಧ ಎದುರಿಸುತ್ತಿರುವ ಅಪ್ರಾಪ್ತ ವಯಸ್ಕರ ಪ್ರಕರಣಗಳಲ್ಲಿ ಪೋಷಕರಿಗೆ ನೋಟಿಸ್ ನೀಡಲಾಗುತ್ತದೆ ಎಂದು ಠಾಣಾಧಿಕಾರಿ ಸಿಂಗ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ತಾಯಂದಿರನ್ನು ಏಕೆ ಬಂಧಿಸಲಾಗಿದೆ? ಎಂದು ಕೇಳಿದಾಗ, “ಆ ನಾಲ್ವರು ಹುಡುಗರು ಅಸಭ್ಯ ವರ್ತನೆಯುಳ್ಳವರು ಮತ್ತು ದುಷ್ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಹಾಗಾಗಿ, ಉತ್ತಮ ಮೌಲ್ಯಗಳನ್ನು ಕಲಿಸದ ಮತ್ತು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡದ ಕಾರಣ ಅವರು ಇಂತಹ ಅಪರಾಧಗಳನ್ನು ಮಾಡುತ್ತಾರೆ ಎಂದು ಪೋಷಕರಿಗೆ ಸಂದೇಶ ಕಳುಹಿಸಬೇಕಿದೆ ಮತ್ತು ಪಾಠ ಕಲಿಸಬೇಕಿದೆ ಎಸ್‌ಎಚ್‌ಒ ಸಿಂಗ್ ಹೇಳಿದ್ದಾರೆ ಎಂದು ವರದಿ ವಿವರಿಸಿದೆ.
ನಾಲ್ವರ ತಂದೆಯಂದಿರು ಉತ್ತರ ಪ್ರದೇಶದ ಹೊರಗೆ ಉದ್ಯೋಗದಲ್ಲಿದ್ದು, ಮನೆಗೆ ಬಂದ ನಂತರ ಅವರನ್ನೂ ಬಂಧಿಸಲಾಗುವುದು.ಕಳೆದ ಹಲವು ದಿನಗಳಿಂದ ಬಾಲಕಿ ಹುಡುಗರಿಂದ ಕಿರುಕುಳಕ್ಕೊಳಗಾಗುತ್ತಿದ್ದಳು ಎಂದು ಸಿಂಗ್ ತಿಳಿಸಿದ್ದಾರೆ.
ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವೈಯಕ್ತಿಕ ಬಾಂಡ್‌ಗಳನ್ನು ಸಲ್ಲಿಸಿದ ನಂತರ ತಾಯಂದಿರನ್ನು ಬಿಡುಗಡೆ ಮಾಡಲಾಗಿದೆ. ಬಂಧನದ ದಿನವೇ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು ಎಂದು ವರದಿ ಹೇಳಿದೆ.


