Homeಅಂಕಣಗಳುಪಿಕೆ ಟಾಕೀಸ್ 02: ಅರ್ಥಕ್ಕಿಂತಲೂ ಅನುಭವಕ್ಕೆ ಸಿಕ್ಕುವ - ಮಾನವೀಯತೆಯನ್ನು ಕಲಕುವ ಥಿಯೋಡೊರಸ್ ಸಿನಿಮಾಗಳು

ಪಿಕೆ ಟಾಕೀಸ್ 02: ಅರ್ಥಕ್ಕಿಂತಲೂ ಅನುಭವಕ್ಕೆ ಸಿಕ್ಕುವ – ಮಾನವೀಯತೆಯನ್ನು ಕಲಕುವ ಥಿಯೋಡೊರಸ್ ಸಿನಿಮಾಗಳು

- Advertisement -
- Advertisement -

ಜಾಗತಿಕ ಸಿನಿಮಾ/ ಗ್ರೀಸ್ ಸಿನಿಮಾ/ ಥಿಯೋಡೊರಸ್ ಅಂಜೊಲಾಪೊಲಸ್

1. ಎಟರ್ನಿಟಿ ಅಂಡ್ ಅ ಡೇ (1998) ಮೂವರು ಕವಿಗಳು, ನೂರಾರು ವರ್ಷಗಳ ಗ್ರೀಸ್‌ನ ಇತಿಹಾಸ, ಗಡಿಗಳನ್ನು ಮೀರಿದ ಮಾನವತಾವಾದ, ಕೊನೆಯಿಲ್ಲದ ಕಲ್ಪನೆ ಹೀಗೆ ಎಲ್ಲವನ್ನು ದೃಶ್ಯರೂಪದ ಕವಿತೆಯನ್ನಾಗಿಸಿದರೆ ಅದೇ ಈ ಸಿನಿಮಾ. ಆನಾರೋಗ್ಯದಿಂದ ಬಳಲುತ್ತಿರುವ ಐವತ್ತರ ಅಸುಪಾಸಿನ ಕವಿ ಅಲೆಕ್ಸಾಂಡ್ರೊಸ್ ಮರುದಿನ ಆಸ್ಪತ್ರೆಗೆ ಸೇರುವ ತಯಾರಿಯಲ್ಲಿರುತ್ತಾನೆ. ಮಗಳನ್ನು ಮಾತನಾಡಿಸಿ, ತನ್ನ ಸಾಕುನಾಯಿಯ ಪಾಲನೆಯ ಜವಾಬ್ದಾರಿಯನ್ನು ವರ್ಗಾಯಿಸುವ ಸಲುವಾಗಿ ಹೊರಟು, ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿರುವಾಗ, ಹದಿಮೂರು ವಯಸ್ಸಿನ ಕೆಳಗಿರುವ ಅಲ್ಬೆನಿಯನ್ ಹುಡುಗರ ಗುಂಪೊಂದು ನಿಂತಿರುವ ಕಾರುಗಳ ಗಾಜುಗಳನ್ನು ಒರೆಸಿ ಹಣ ಕೇಳುತ್ತಿರುತ್ತಾರೆ. ಅದೇ ಸಮಯಕ್ಕೆ ಪೊಲೀಸರ ಪಡೆಯೊಂದು ಆ ನಿರಾಶ್ರಿತ ಹುಡುಗರ ಗುಂಪನ್ನು ಹಿಡಿಯಲು ಮುಂದಾದಾಗ, ಆರು ವರ್ಷದ ಬಾಲಕನನ್ನು ತನ್ನ ಕಾರಿಗೆ ಹತ್ತಿಸಿಕೊಂಡು ಅಲೆಕ್ಸಾಂಡ್ರೊಸ್ ಕಾಪಾಡುತ್ತಾನೆ.

ಪೊಲೀಸರಿಂದ ಕಾಪಾಡಲ್ಪಟ್ಟ ಪುಟ್ಟ ಬಾಲಕನಿಗೆ ಸುರಕ್ಷಿತ ನೆಲೆ ಹುಡುಕುತ್ತಾ ಸಿನಿಮಾ ಮುಂದೆ ಸಾಗುತ್ತದೆ. ಅಲ್ಬೆನಿಯಾಗೆ ವಾಪಸ್ ಕಳುಹಿಸಲು ಗಡಿಯ ಬಳಿಗೆ ಇಬ್ಬರು ಬಂದು ನಿಲ್ಲಲು ಗಡಿಯ ಇಪ್ಪತ್ತೈದು ಅಡಿ ಎತ್ತರದ ಬೇಲಿಯ ಮೇಲೆ ಅಲ್ಬೆನಿಯಾದಿಂದ ಗ್ರೀಸ್‌ಗೆ ಬರಲು ಪ್ರಯತ್ನಿಸಿ ಚಳಿಯ ಮಂಜಿಗೆ ಹತ್ತಾರು ಮಕ್ಕಳು ಮರಗಟ್ಟಿ ಸತ್ತ ದೃಶ್ಯ ಎದೆ ಕಲಕುವಂತೆ ಮಾಡುತ್ತದೆ. ಮತ್ತೆ ಬಾಲಕನನ್ನು ನಿರಾಶ್ರಿತರಿರುವ ಜಾಗಕ್ಕೆ ಬಿಟ್ಟಾಗ, ಅಲ್ಲಿಂದ ಮಕ್ಕಳನ್ನು ಕದ್ದು ಶ್ರೀಮಂತ ದಂಪತಿಗಳಿಗೆ ಮಾರುವ ಗುಂಪಿನ ಕೈಗೆ ಬಾಲಕ ಸಿಕ್ಕಿಕೊಳ್ಳುತ್ತಾನೆ. ಆ ಸನ್ನಿವೇಶದಲ್ಲಿ ಹೇಗೆ ಬಡರಾಷ್ಟ್ರಗಳಲ್ಲಿ ಅಗತ್ಯಕ್ಕೂ ಮೀರಿ ಮಕ್ಕಳಿರುತ್ತಾರೋ ಅದಕ್ಕೆ ತದ್ವಿರುದ್ಧವಾಗಿ ಶ್ರೀಮಂತ ರಾಷ್ಟ್ರಗಳಲ್ಲಿ ಮಕ್ಕಳಿಲ್ಲದ ದಂಪತಿಗಳನ್ನು ನೋಡಬಹುದು.

PC : EUFORIA (ಎಟರ್ನಿಟಿ ಅಂಡ್ ಅ ಡೇ)

ಹೀಗೆ ಒಂದೇ ದಿನದ ಅವಧಿಯಲ್ಲಿ, ತೀರಿಹೋದ ಹೆಂಡತಿಯ ನೆನಪಿನಲ್ಲಿರುವ ಕವಿ, ನೆಲೆ ಹುಡುಕುತ್ತಿವ ನಿರಾಶ್ರಿತ ಪುಟ್ಟ ಬಾಲಕನ ನಡುವೆ ನಡೆಯುವ ’ಪದಗಳ ವ್ಯವಹಾರ’ದ ಕಥೆಯ ಜೊತೆಗೆ, ಹತ್ತೊಂಬತ್ತನೆ ಶತಮಾನದಲ್ಲಿದ್ದ ಗ್ರೀಸ್ ರಾಷ್ಟ್ರೀಯ ಕವಿ ಡಿಯೊನಿಸಿಯೊಸ್ ಸೋಲೊಮೊಸ್ ಕಥೆಯೂ ಬಂದು ಸೇರಿಕೊಳ್ಳುತ್ತದೆ. ಕವಿ ಸೋಲೋಮೊಸ್ ಗ್ರೀಸ್‌ನಲ್ಲಿ ಹುಟ್ಟಿದರೂ, ವಿದ್ಯಾಭ್ಯಾಸಕ್ಕಾಗಿ ಇಟಲಿಗೆ ಹೋಗಿ ಅಲ್ಲೇ ನೆಲಿಸಿ ಇಟಲಿ ಭಾಷೆಯಲ್ಲಿಯೇ ಕವಿತೆ ಬರೆಯುತ್ತಿರುತ್ತಾನೆ. ತಿರುಗಿ ಗ್ರೀಸ್‌ಗೆ ಮರಳಿದಾಗ ತನ್ನ ತಾಯ್ನುಡಿಯಲ್ಲಿ ಕವಿತೆ ಬರೆಯುವ ಉದ್ದೇಶದಿಂದ ಜನಗಳ ನಡುವಿನಲ್ಲಿದ್ದು, ಪ್ರತಿ ಪದಕ್ಕಿಷ್ಟು ಹಣ ಎಂಬಂತೆ ನಿಗದಿ ಮಾಡಿ, ಕೊಟ್ಟು ಗ್ರೀಸ್ ಭಾಷೆ ಕಲಿತು, ಅನೇಕ ಕವಿತೆಗಳನ್ನು ಬರೆದಿರುತ್ತಾನೆ. ಹಾಗೆ ಬರೆದ ಪದ್ಯದ ಮೊದಲ ಎರಡು ಚರಣಗಳು ಇಂದಿನ ಗ್ರೀಸ್ ದೇಶದ ರಾಷ್ಟ್ರ ಗೀತೆ.

ಅಲೆಕ್ಸಾಂಡ್ರೊಸ್ ಕೂಡ ಬಾಲಕನಿಗೆ ಹಣ ನೀಡಿ ಜನರ ರೂಢಿ ಪದಗಳನ್ನು ಕಲಿಯುತ್ತಾನೆ. ದಿನವೆಲ್ಲ ಒಂದಲ್ಲ ಒಂದು ಸನ್ನಿವೇಶಗಳಲ್ಲಿ ಸಿಕ್ಕಿಹಾಕಿಕೊಂಡು, ರಾತ್ರಿಯಾಗುತ್ತಲೇ ಬಾಲಕ ’ನನಗೆ ಭಯವಾಗುತ್ತಿದೆ’ ಎಂದಾಗ, ಅಲೆಕ್ಸಾಂಡ್ರೊಸ್ ಕೂಡ ’ನನಗೂ ಭಯವಾಗುತ್ತಿದೆ’ ಎಂದು ಪರಸ್ಪರ ಅಪ್ಪಿಕೊಳ್ಳುವ ದೃಶ್ಯ ಮಾನವ ಸಂಬಂಧಗಳ ಸರಳತೆಯನ್ನು ಮತ್ತು ಅಗತ್ಯತೆಯನ್ನು ತೋರಿಸುತ್ತದೆ.

ಥಿಯೋ ಸಿನಿಮಾಟಿಕ್ ಸೂಕ್ಷ್ಮತೆಗಳಲ್ಲಿ ಮಾಸ್ಟರ್. ಪದೇ ಪದೇ ಸರಳವಾದ ಒಂದೇ ರಾಗವನ್ನು ಹಿನ್ನೆಲೆ ಸಂಗೀತವಾಗಿ ಬಳಸಿರುವ ವಿನ್ಯಾಸಕ್ಕೆ ಮೈದೂಗುತ್ತಾ, ಮತ್ತೇರಿದವರಂತೆ ಮೂಕವಿಸ್ಮಿತರಾಗಿ ಕೂರುವರಂತೆ ಮಾಡುತ್ತದೆ.

ದೃಶ್ಯವಿನ್ಯಾಸದಲ್ಲಿ ಥಿಯೋರಿಗೆ ಬೇರೆ ಯಾರು ಸಾಟಿಯಿಲ್ಲ. ಅಲೆಕ್ಸಾಂಡ್ರೊಸ್ ಮತ್ತು ಬಾಲಕ ನದಿಯ ಬದಿಯಲ್ಲಿ ನಡೆದು ಬರುವ ದೃಶ್ಯದಿಂದ ಪ್ಯಾನ್ ಮಾಡಲು ಅದೇ ನದಿಯ ಬದಿಯಲ್ಲಿ ಕವಿ ಸೋಲೊಮೊಸ್ ಬರೆಯುತ್ತಾ ನಿಂತಿರುವುದು ನೋಡಿದರೆ, ಭೂತ, ವರ್ತಮಾನ, ಭವಿಷ್ಯದ ಘಟನೆಗಳೆಲ್ಲ ನಿರಂತರವಾಗಿ ನಡೆಯುತ್ತಿವೆ ಎನ್ನುವುದು ನಿರ್ದೇಶಕನ ವಾದ ಅಥವಾ ದರ್ಶನವೆನಿಸುತ್ತದೆ.

ಅಲೆಕ್ಸಾಂಡ್ರೊಸ್ ಪದೇಪದೇ ತನ್ನ ಪ್ರೀತಿಯ ಮಡದಿಯನ್ನು ಭೇಟಿಯಾಗುವ ಕನಸಿನ ದೃಶ್ಯಗಳು ಎಷ್ಟು ಸುಂದರವಾಗಿರುತ್ತದೆಯೋ ಹಾಗೆಯೇ ನಿರಾಶ್ರಿತರ ಬದುಕಿನ ಭೀಕರ ದೃಶ್ಯಗಳು ವೀಕ್ಷಕನ ಮನಸ್ಸನ್ನು ಹಿಡಿದಿಡುತ್ತವೆ.

2. ಲ್ಯಾಂಡ್‌ಸ್ಕೇಪ್ ಇನ್ ದಿ ಮಿಸ್ಟ್ (1988)

ಕೇವಲ ತಾಯಿಯ ಮಾತುಗಳನ್ನು ಕೇಳಿ ಐದು ವರ್ಷದ ಬಾಲಕ ಹಾಗೂ ಹನ್ನೆರಡು ವರ್ಷದ ಅಕ್ಕ, ಇಬ್ಬರೂ ಸೇರಿ ತಂದೆಯನ್ನು ಹುಡುಕುತ್ತಾ ಗ್ರೀಸ್‌ನಿಂದ ಜರ್ಮನಿಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಭೇಟಿಯಾಗುವ ಜನಗಳು ಮತ್ತು ಬರುವ ಸನ್ನಿವೇಶಗಳೇ ಈ ಸಿನಿಮಾ.

ಅತಿ ಮುಗ್ಧವಾಗಿ ಪ್ರಯಾಣ ಆರಂಭಿಸುವ ಮಕ್ಕಳು, ಟಿಕೆಟ್ ಇಲ್ಲದೆ ಸಿಕ್ಕಿಹಾಕಿಕೊಂಡು, ಸಂಬಂಧಿಯ ಬಳಿಗೆ ಹೋದಾಗ, ಆ ಸಂಬಂಧಿ ಪೊಲೀಸರ ಬಳಿ, ಈ ಮಕ್ಕಳಿಗೆ ತಂದೆ ಇಲ್ಲವೆಂದೂ, ತಂದೆ ಇರುವುದಾಗಿ ತಾಯಿ ಸುಮ್ಮನೆ ಹೇಳಿದ್ದಾಳೆಂಬ ಮಾಹಿತಿ ತಿಳಿಯುತ್ತದೆ. ಆದರೆ ಮಕ್ಕಳು ಅವನ ಮಾತುಗಳನ್ನು ಒಪ್ಪದೆ ತಮ್ಮ ಪ್ರಯಾಣವನ್ನು ಮುಂದುವರೆಸುತ್ತಾರೆ.

ಪ್ರಯಾಣದ ದಾರಿಯಲ್ಲಿ ನಾಟಕ ತಂಡದ ಯುವಕನೊಬ್ಬ ಇವರಿಬ್ಬರಿಗೂ ಸ್ವಲ್ಪ ದೂರದವರೆಗೂ ಬಿಡುತ್ತಾರೆ. ಮುಂದಿನ ಪ್ರಯಾಣದಲ್ಲಿ ಮಕ್ಕಳಿಗೆ ಟ್ರಕ್ ಡ್ರೈವರ್ ಒಬ್ಬನ ಪರಿಚಯವಾಗುತ್ತದೆ. ಮೊದಲಿಗೆ ಅವನು ಇಬ್ಬರಿಗೂ ತಿನ್ನಲು ತಿಂಡಿ-ತಿನಿಸುಗಳನ್ನು ಕೊಡಿಸಿ, ತುಸು ದೂರದ ಪ್ರಯಾಣದ ನಂತರ ಹುಡುಗಿಯನ್ನು ಟಾರ್‌ಪಾಲ್ ಮುಚ್ಚಿದ ಟ್ರಕ್ಕಿನೊಳಗೆ ಎತ್ತಿಕೊಂಡು ಹೋಗಿ, ಅತ್ಯಾಚಾರವೆಸಗುತ್ತಾನೆ. ಇಲ್ಲಿ ನಿರ್ದೇಶಕ ಯಾವುದೇ ಹಿಂಸೆಯನ್ನು ವೈಭವೀಕರಿಸದೆ ರಸ್ತೆಯಲ್ಲಿ ಹಾದುಹೋಗುವ ವಾಹನಗಳ ಶಬ್ದಗಳಲ್ಲೇ ಕ್ರೌರ್ಯವನ್ನು ಮನಸ್ಸಿಗೆ ಮುಟ್ಟಿಸುತ್ತಾನೆ.

ಮೊದಮೊದಲು ಅತಿ ಮಾತನಾಡುತ್ತಿದ್ದ ಬಾಲಕ ಗಂಭೀರವಾಗುತ್ತಾನೆ. ಹುಡುಗಿಯೂ ನಾಟಕ ತಂಡದ ಯುವಕನನ್ನು ಮತ್ತೆ ಭೇಟಿಯಾದಾಗ ಅವನ ಮೇಲೆ ಪ್ರೀತಿಯ ಭಾವನೆಗಳನ್ನು ತೋರಿಸುತ್ತಾಳೆ. ಆದರೆ ಅವನು ಮತ್ತೊಬ್ಬ ಬೈಕ್ ಕೊಳ್ಳಲು ಬಂದವನ ಜೊತೆ ನಿಕಟವಾಗಿರುವುದನ್ನು ನೋಡಿ, ಕೋಪದಿಂದ ಮತ್ತೆ ಇಬ್ಬರೇ ಪ್ರಯಾಣವನ್ನು ಮುಂದುವರಿಸುತ್ತಾರೆ.

PC : Cinemascope – blogger (ಲ್ಯಾಂಡ್‌ಸ್ಕೇಪ್ ಇನ್ ದಿ ಮಿಸ್ಟ್)

ಸಿನಿಮಾದ ಕೊನೆಯ ಭಾಗದಲ್ಲಿ ಹುಡುಗಿ ರೈಲ್ವೇ ನಿಲ್ದಾಣದಲ್ಲಿ ಮಿಲಿಟರಿ ಬಟ್ಟೆಗಳನ್ನು ಧರಿಸಿರುವ ವ್ಯಕ್ತಿಯನ್ನು ಹಣ ಕೇಳಿದಾಗ, ಅವನು ಲೈಂಗಿಕ ದೌರ್ಜನ್ಯದ ದೃಷ್ಟಿಯಲ್ಲೇ ಆಕೆಯನ್ನು ಕಂಡು ರೈಲುಗಳ ನಡುವೆ ಹೋಗಿ ನಿಲ್ಲುತ್ತಾನೆ. ಹುಡುಗಿಯೂ ಅವನ ಮುಂದೆ ಬಂದು ನಿಲ್ಲುತ್ತಾಳೆ. ಮುಗ್ದವಾಗಿದ್ದ ಹುಡುಗಿಯ ಮನಸ್ಸು, ಗಂಡು-ಹೆಣ್ಣಿನ ದೈಹಿಕ ವಹಿವಾಟನ್ನು ಅರಿತಂತೆ, ಆಕೆ ನಿಂತಿರುವುದನ್ನು ನೋಡಿದರೆ, ದೌರ್ಜನ್ಯದ ಕ್ರೌರ್ಯ ಪ್ರತಿಫಲಿಸುತ್ತದೆ.

ಯಾವುದೇ ಸಿನಿಮಾದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತೋರಿಸಿದರೆ ಸಾಕು ನಿರಾತಂಕವಾಗಿ ವೀಕ್ಷಕರ ಮನಸ್ಸನ್ನು ಕರಗಿಸಬಹುದು, ಆದರೆ ಈ ಸಿನಿಮಾದ ಶೈಲಿಯನ್ನು ಗಮನಿಸಿದರೆ, ಪಾತ್ರಗಳಿಗೂ ಮತ್ತು ಕ್ಯಾಮರಾಕ್ಕೂ ಸದಾ ಅಂತರವನ್ನು ಉಳಿಸಿಕೊಂಡು ಪ್ರೇಕ್ಷಕನ ಮನಸ್ಸನ್ನು ಮ್ಯಾನಿಪುಲೇಟ್ ಮಾಡದೆ, ಸಮಾಜದ ವಾಸ್ತವತೆ ಮತ್ತು ಮಕ್ಕಳ ಮುಗ್ಧತೆಯನ್ನು ಯಥಾವತ್ತಾಗಿ ಕಟ್ಟುವ ಪ್ರಯತ್ನವನ್ನು ಮಾತ್ರ ಮಾಡಲಾಗಿದೆ.

ಸಾಯುತ್ತಿರುವ ಕುದುರೆಯನ್ನು ನೋಡಿ ಬಿಕ್ಕಿ ಬಿಕ್ಕಿ ಅಳುವ ಮಕ್ಕಳ ಹಿಂದೆಯೇ ಮದುವೆ ಸಂಭ್ರಮದ ಗುಂಪಿನ ಹಾಡು ನೃತ್ಯದ ದೃಶ್ಯ, ಅಕ್ಕನನ್ನು ಹುಡುಕುತ್ತಿರುವ ಪುಟ್ಟ ಬಾಲಕ ಮುಂದೆ ಹಾದುಹೋಗುವ ಸೈನಿಕರ ಪೆರೇಡಿನ ದೃಶ್ಯಗಳಲ್ಲಿ, ಇಡೀ ನಾಗರಿಕತೆಯ ಮತ್ತು ಅದರ ಸುತ್ತಲಿನ ವೈಭವ ಹಾಗೂ ಸಂಭ್ರಮಗಳ ಟೊಳ್ಳುತನನ್ನು ಮಾರ್ಮಿಕವಾಗಿ ಕಾಣಬಹುದು.

ಪುಟ್ಟ ಬಾಲಕ ’ಗಡಿ ರೇಖೆ ಎಂದರೇನು’ ಎಂದು ಪ್ರಶ್ನಿಸಿದಾಗ, ದೇಶಗಳ ಕಲ್ಪನೆಯ ಸಂಕೀರ್ಣತೆಯನ್ನು ಮಕ್ಕಳು ಅರ್ಥಮಾಡಿಕೊಳ್ಳಲಾಗದೆ, ಬೇರೊಂದು ದೇಶಕ್ಕೆ ಹೋಗಲು ಕಾಗದಪತ್ರಗಳಿಲ್ಲದೆ, ಸೈನಿಕರ ಕಣ್ತಪ್ಪಿಸಿ ಗಡಿ ದಾಟಿ ರಾತ್ರಿಯನ್ನು ಭಯದಲ್ಲೇ ಕಳೆದು ಬೆಳಕಿನಲ್ಲಿ ಮರವನ್ನು ಅಪ್ಪಿಕೊಂಡು ನಿಟ್ಟುಸಿರು ಬಿಡುವುದೇ ಅಂತ್ಯ.

ಥಿಯೋಡೊರಸ್ ಅಂಜೊಲಾಪೊಲಸ್

ಜಾಗತಿಕ ಸಿನಿಮಾದಲ್ಲಿ ಅತಿ ಮುಖ್ಯವಾದ ನಿರ್ದೇಶಕ ಥಿಯೋಡೊರಸ್ ಅಂಜೊಲಾಪೊಲಸ್. ಆತನ ಸಿನಿಮಾಗಳಲ್ಲಿ ಒಳಗೊಳ್ಳುವ ವಿಶಾಲವಾದ ಫ್ರೇಮ್, ಆಕಾಶ, ಮಂಜು ಮುಸುಕಿದ ಬೆಟ್ಟಗಳು, ಎತ್ತರವಾದ ಮರಗಳು, ಹಚ್ಚಹಸುರಿನ ಹುಲ್ಲಿನ ನಡುವೆ ನಡೆದುಬರುತ್ತಿರುವ ಪಾತ್ರಗಳು ಇವುಗಳನ್ನೆಲ್ಲಾ ಸಾವಿರ ಪದಗಳ ವಿವರಣೆಯಲ್ಲಿ ಒಳಗೊಳ್ಳಲು ಅಸಾಧ್ಯ.

ವಾಣಿಜ್ಯ ಮತ್ತು ಮನರಂಜನಾ ಉದ್ದೇಶಗಳಿಗಾಗಿಯೇ ನಿರ್ದೇಶಿಸುವ ಸಿನಿಮಾಗಳನ್ನು ನೋಡಿದ ಪ್ರೇಕ್ಷಕರು ಅತಿವೇಗದ ಎಡಿಟಿಂಗ್‌ಗೆ ಹೊಂದಿಕೊಂಡಿರುತ್ತಾರೆ. ಅದೇ ದೃಷ್ಟಿಕೋನದಲ್ಲಿ ಥಿಯೋರ ಸಿನಿಮಾ ನೋಡಲು ಮೊದಲಿಗೆ ಕಸಿವಿಸಿಯಾಗಿ, ನಿಧಾನವೆನಿಸುವುದು ಅತಿ ಸಹಜ.

ಥಿಯೋರ ಫ್ರೇಮ್ ಸಂಯೋಜನೆ ಚಿತ್ರಕಲೆಯಂತೆ. ಪ್ರೇಕ್ಷಕನ ಕಣ್ಣುಗಳನ್ನು ಒಂದು ಕಡೆಗೆ ನಿರ್ಬಂಧಿಸದೆ, ಫ್ರೇಮ್‌ನ ಎಲ್ಲ ಭಾಗಗಳನ್ನು ತನ್ನಿಚ್ಛೆಯಂತೆ ನೋಡುವ ಅವಕಾಶ ಮಾಡಿಕೊಡುತ್ತಾ, ವೇಗದ ಕೃತಕತೆಯಿಲ್ಲದೆ ಧ್ಯಾನಸ್ಥ ಸ್ಥಿತಿಯಲ್ಲಿ ಚಲಿಸುವ ಕ್ಯಾಮರಾ, ಸುದೀರ್ಘವಾದ ಶಾಟ್ಸ್, ಮಿತವಾದ ಸಂಭಾಷಣೆ, ಯಾವುದೇ ರೀತಿಯ ಉದ್ವೇಗಗಳಿಲ್ಲದ ನಟನೆ ನೋಡಸಿಗುವುದೇ ಅತಿ ಅಪರೂಪ. ಇವುಗಳೇ ಥಿಯೋರ ಸಿನಿಮಾಗಳ ಗಟ್ಟಿತನ.

ಥಿಯೋರ ಪೋಟೋಗ್ರಫಿಯಂತೂ ಅತಿ ಸಾಹಸಮಯವಾದದ್ದು. ಲ್ಯಾಂಡ್‌ಸ್ಕೇಪ್ ಪೋಟೋಗ್ರಫಿಯನ್ನು ನೋಡಿ ಮೈಮರೆಯಬೇಕಷ್ಟೇ ಮತ್ತು ಯಾವುದೇ ಕಾರಣಕ್ಕೂ ಕ್ಯಾಮರಾ ನಟರ ಕ್ಲೋಸ್‌ಅಪ್‌ಗೆ ಹೋಗುವುದೇ ಇಲ್ಲ. ಕ್ಲೋಸ್‌ಅಪ್‌ಅನ್ನು ಬಳಸದೆ ಸದಾ ಒಂದು ಅಂತರದಿಂದಲೇ ಸೆರೆ ಹಿಡಿಯುವುದು ಮತ್ತು ಎಡಿಟಿಂಗ್ ಕ್ಯಾಮರಾ ಚಿತ್ರೀಕರಣದ ಜೊತೆಗೇ ಆಗಿರುವುದು ಥಿಯೋರ ಕೌಶಲ್ಯ. ಹೀಗೆ ದೃಶ್ಯವನ್ನು ಪದೇಪದೇ ತುಂಡಾಗಿಸದೇ, ಒಂದೇ ಉಸಿರಿನಲ್ಲೇ ದೃಶ್ಯವನ್ನು ನೋಡುವಾಗ ವೀಕ್ಷಕ ಸಮಯದ ಪರಿಯನ್ನು ಕಳೆದುಕೊಳ್ಳುವುದು ವಿಸ್ಮಯ.

PC : Mubi (ಥಿಯೋಡೊರಸ್ ಅಂಜೊಲಾಪೊಲಸ್)

ಸ್ಲೋ ಸಿನಿಮಾ ಮೂವ್‌ಮೆಂಟ್‌ನಲ್ಲಿ ರಷ್ಯಾದ ಅಂಡ್ರೊವ್ ಟಾರ್ಕೊವ್‌ಸ್ಕಿ, ಇಟಲಿಯ ಮೈಕಲಾಂಜಿಲೋ ಅಂಟೋನಿಯೋನಿರ ಜೊತೆ ಥಿಯೋ ಅಂಜೊಲಪೊಲಾಸ್ ಕೂಡ ಅತಿ ಪ್ರಮುಖರು.

ಥಿಯೋರ ಕಥಾವಸ್ತುಗಳೆಂದರೆ ಗ್ರೀಸ್‌ನ ಇತಿಹಾಸ, ದೇಶಗಳ ನಡುವಿನ ಗಡಿಗಳು, ಬದುಕನ್ನು ಅರಸಿ ಅವುಗಳನ್ನು ದಾಟಿದ ನಿರಾಶ್ರಿತರು, ಎಲ್ಲೋ ಹೋಗುವ ಧಾವಂತದ ಪ್ರಯಾಣ, ಕನಸ್ಸುಗಳು, ನಿಶಬ್ದ.

ದಿ ಸಸ್ಪೆಂಡೆಡ್ ಸ್ಟೆಪ್ಸ್ ಆಫ್ ದಿ ಸ್ಟೊರ್ಟ್(1991) ಸಿನಿಮಾದಲ್ಲಿ ಗಡಿ ರೇಖೆಯಲ್ಲಿ ನಿಂತು ಒಂದು ಕಾಲನ್ನು ಗಾಳಿಯಲ್ಲಿಟ್ಟು, “ಇನ್ನೊಂದು ಹೆಜ್ಜೆ ಇಟ್ಟರೆ, ನಾನು ಮತ್ತೆಲ್ಲೋ ಇರುತ್ತೇನೆ, ಇಲ್ಲ ಸಾಯಬಹುದು”, ಎನ್ನುವ ಸಂಭಾಷಣೆ ಥಿಯೋರ ಮನಸ್ಸನ್ನು ಹಿಡಿದಿಡುತ್ತದೆ.

ಥಿಯೋರ ಸೃಷ್ಟಿಯಲ್ಲಿ ಭೂತಕಾಲ, ಕನಸಿನ ಲೋಕ, ವಾಸ್ತವಗಳೆಂದು ಯಾವುದೇ ವಿಭಜನೆಗಳಿರುವುದಿಲ್ಲ. ಯುಲಿಸಿಸ್ ಗೇಸ್ (1995) ಸಿನಿಮಾದಲ್ಲಿ ನಲವತ್ತು ವಯಸ್ಸಿನ ಪಾತ್ರ ರೈಲ್ವೇ ಸ್ಟೇಷನ್ ಇಳಿದಕೂಡಲೇ ಮೂವತ್ತರ ಆಸುಪಾಸಿನ ಹೆಣ್ಣಿನ ಕೈಹಿಡಿದು ತಾಯಿಯಂತೆ ಮಾತಾಡಿಸುವುದು, ಅವಳು ಮಗನಂತೆ ನಡೆಸಿಕೊಂಡು ಮನೆಗೆ ಹೋದಾಗ, ಭೂತಕಾಲದಲ್ಲಿದ್ದ ಎಲ್ಲರೂ ಇವನನ್ನು ನೋಡಿ ಮಾತಾಡಿಸುವುದೇ ಮ್ಯಾಜಿಕಲ್ ಅನಿಸುತ್ತದೆ.

ಥಿಯೋ ಕವಿಯಾಗ ಬೇಕೆಂದುಕೊಂಡವರು. ಅವರು ಕ್ಯಾಮರಾದಿಂದ ಕಟ್ಟಿದ ಕವಿತೆಗಳೇ ಸಿನಿಮಾಗಳು. ಅವರ ಸಿನಿಮಾಗಳನ್ನು ಒಮ್ಮೆ ನೋಡಿ ಅರ್ಥವಾಗಲಿಲ್ಲವೆನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಹೇಗೆ ಕವಿತೆಯನ್ನು ಪದೇಪದೇ ಓದಿದಾಗ ಹೊಸ ಅನುಭವಗಳು, ಅರ್ಥಗಳು ಹುಟ್ಟುತ್ತವೆಯೋ, ಹಾಗೆಯೇ ಇವರ ಸಿನಿಮಾಗಳು ಕೂಡ.

ಕಲೆ ಅರ್ಥಕ್ಕೆ ದೂರ, ಅನುಭವಕ್ಕೆ ಹತ್ತಿರದ ಮಧ್ಯಮ. ಅರ್ಥಮಾಡಿಕೊಳ್ಳುವುದನ್ನು ಬಿಟ್ಟು ಕೇವಲ ಅನುಭವಿಸದಾಗ ಮಾತ್ರ ಕಲೆಯ ಸಾರ್ಥಕತೆಯಾಗುತ್ತದೆ, ಅರ್ಥವಾಗದೇ ಅನುಭವಿಸುವುದೇ ಹೇಗೆಂಬ ಪ್ರಶ್ನೆ ಕೂಡ ಇದ್ದೇ ಇದೆ. ಹೌದು, ಬದುಕಿನ ಎಷ್ಟೋ ವಿಷಯಗಳು ಅರ್ಥವಾಗದೇ ಹೋದರೂ ಅನುಭವಕ್ಕೆ ಬರುತ್ತದೆ.

ಥಿಯೋರ ಸಿನಿಮಾಗಳನ್ನು ಕಥೆಗಳಂತೆ ನೋಡದೆ, ಕವಿತೆಗಳಂತೆ ಪದೇ ಪದೇ ನೋಡಿದಾಗ ಅನುಭವದ ಪರಿಧಿಯು ವಿಶಾಲವಾಗುತ್ತಾ, ಬದುಕನ್ನು ನೋಡುವ ದೃಷ್ಟಿಕೋನದಲ್ಲಿ ಮಾನವೀಯತೆ, ಅನುಭೂತಿ ತುಂಬುವುದು ನಿಶ್ಚಿತ.


ಇದನ್ನೂ ಓದಿ: ಮೌನ ಮುರಿಯುವ ಹೊತ್ತಿದು; ಮಂದಿರದ ಹೆಸರಿನಲ್ಲಿ ಮನುಷ್ಯ ಸಂಬಂಧಗಳನ್ನು ಹದಗೆಡಿಸಲು ಬಿಡದಿರೋಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...