Homeಕರ್ನಾಟಕ"ಹಿಂದಿ ನಮ್ಮ ರಾಷ್ಟ್ರ ಭಾಷೆ": ದೊಡ್ಡರಂಗೇಗೌಡರ ಹೇಳಿಕೆಗೆ ಕನ್ನಡಿಗರ ವಿರೋಧ

“ಹಿಂದಿ ನಮ್ಮ ರಾಷ್ಟ್ರ ಭಾಷೆ”: ದೊಡ್ಡರಂಗೇಗೌಡರ ಹೇಳಿಕೆಗೆ ಕನ್ನಡಿಗರ ವಿರೋಧ

- Advertisement -
- Advertisement -

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ದೊಡ್ಡರಂಗೇಗೌಡರ “ಹಿಂದಿ ನಮ್ಮ ರಾಷ್ಟ್ರ ಭಾಷೆ – ತಿರಸ್ಕಾರ ಏಕೆ?” ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಸಾವಿರಾರು ಕನ್ನಡಿಗರು ಹೇಳಿಕೆ ವಿರುದ್ಧ ಮುಗಿಬಿದ್ದಿದ್ದಾರೆ.

ದೊಡ್ಡರಂಗೇಗೌಡರು ಪ್ರಜಾವಾಣಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ “ಇಂಗ್ಲಿಷ್ ಭಾಷೆಯನ್ನು ಒಪ್ಪುವ ನಾವು ಹಿಂದಿ ಭಾಷೆಯನ್ನು ತಿರಸ್ಕರಿಸುವುದು ಏಕೆ? ಇಲ್ಲಿ ಕನ್ನಡ ಹೇಗೋ ಅದೇ ರೀತಿ ಉತ್ತರ ಭಾರತದಲ್ಲಿ ಹಿಂದಿಗೆ ಸ್ಥಾನಮಾನವಿದೆ. ಅದು ನಮ್ಮ ರಾಷ್ಟ್ರಭಾಷೆ” ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ತೀವ್ರವಾಗಿ ವಿರೋಧಿಸಿರುವ ಕನ್ನಡಿಗರು ಆ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.

ಹಿಂದಿ ರಾಷ್ಟ್ರಭಾಷೆಯಲ್ಲ. ನಮ್ಮ ಒಕ್ಕೂಟ ರಾಷ್ಟ್ರದಲ್ಲಿರುವ ಹಲವು ಭಾಷೆಗಳ ರೀತಿ ಅದು ಸಹ ಒಂದು ಭಾಷೆಯೇ ಹೊರತು ರಾಷ್ಟ್ರಭಾಷೆಯಲ್ಲ ಎಂದು ನೂರಾರು ಜನ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಿಂದಿ ಬಳಕೆಗೂ, ಹಿಂದಿ ಹೇರಿಕೆಗೂ ದೊಡ್ಡ ವ್ಯತ್ಯಾಸವಿದೆ. ಅದನ್ನು ತಿಳಿದುಕೊಂಡು ಮಾತನಾಡಿ ಎಂದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕನ್ನಡಿಗರು ಯಾವತ್ತೂ ಹಿಂದಿ ಭಾಷೆಯ ವಿರೋಧಿಗಳಲ್ಲ, ಅವರು ಏನಿದ್ದರೂ ಹಿಂದಿ ಭಾಷೆ ಹೇರಿಕೆಯ ವಿರೋಧಿಗಳು. ಇದರ ಕನಿಷ್ಠ ಜ್ಞಾನ ಇಲ್ಲದವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೆ ಹೇಗೆ? ಕನ್ನಡಿಗರ, ಕನ್ನಡದ ಮೇಲೆ ಅಭಿಮಾನ ಇದ್ದವರು ಮಾತ್ರ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷರಾಗಲಿ. ಅಧ್ಯಕ್ಷರು_ಬದಲಾಗಲಿ ಎಂದು ಫೈಜಲ್ ಎಂಬುವವರು ಒತ್ತಾಯಿಸಿದ್ದಾರೆ.

#ಹಿಂದಿಹೇರಿಕೆ ಬಗ್ಗೆ ತುಟಿ ಬಿಚ್ಚದ ದೊಡ್ಡಮನುಷ್ಯ ಕನ್ನಡ ಅಭಿವೃದ್ಧಿ ಪ್ರಾಧೀಕಾರದ ಅಧ್ಯಕ್ಷ. #ಹಿಂದಿ ರಾಷ್ಟ್ರೀಯ ಭಾಷೆ ಅನ್ನುವ ದೊಡ್ಡಮನುಷ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ. 35000 ಗುಡಿಗಳನ್ನ ಕಟ್ಟಬೇಕು ಅನ್ನೋ ದೊಡ್ಡಮನುಷ್ಯ ಸಮಾಜದ ಹಿರಿಯ ಚಿಂತಕ-ಸಾಹಿತಿ. ಇವರಿಗೆಲ್ಲ ಬೇಕಿರೋದು ಕನ್ನಡವಲ್ಲ – ಪರಿಷತ್, ರಾಜ್ಯಸಭೆ, ಜ್ಞಾನಪೀಠ ಎಂದು ರವಿ ಎನ್‌ ಎಂಬುವವರು ಕಿಡಿಕಾರಿದ್ದಾರೆ.

ಯಾವ ವೇದಿಕೆಯ ಮೇಲೆ ಬರಿ ಕನ್ನಡ ಮೆಳೈಸಬೇಕೊ, ಹಿಗ್ಗಿ ಉಬ್ಬಬೇಕೊ, ರಾರಾಜಿಸಬೇಕೊ, ಮೆರೆಯಬೇಕೊ, ಆಗಸದೆತ್ತರಕ್ಕೆ ಜಿಗಿಯಬೇಕೊ, ಜಗತ್ತಿಗೆ ತನ್ನ ಹಿರಿಮೆ ಪಸರಿಸಬೇಕೊ, ತನ್ನ ಒಡಲಿನ ಸಾಹಿತ್ಯ ಕಂದಮ್ಮಗಳ ಬಗ್ಗೆ ಹೆಮ್ಮೆಯಿಂದ ಸಾರಬೇಕೊ, ಗಟ್ಟಿಯಾಗಿ ತನ್ನ ಸಾವಿರಾರು ವರ್ಷಗಳ ವೈಭವ ಹೇಳಬೇಕೊ ಅಂತಹ ವೇದಿಕೆಯ ಅಧ್ಯಕ್ಷರಿಂದ ಹಿಂದಿ ಒಪ್ಪಿ ಎಂಬ ಸಂದೇಶ.. ಎಂದು ರೋಹಿತ್ ಸಿಂಹ ಎಂಬುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂದಿ ರಾಷ್ಟ್ರ ಭಾಷೆಯಂತೆ.. ಹೀಗೆ ಹೇಳಿ ಹೇಳಿ ತಾನೇ ಕನ್ನಡಿಗರನ್ನು ಗುಲಾಮಗಿರಿಗೆ ತಳ್ಳಿರೋದು. ಕರ್ನಾಟಕದಲ್ಲಿ ಕನ್ನಡಕ್ಕೆ ಪುರಸ್ಕಾರ ಯಾಕಿಲ್ಲಾ ಅಂತ ಕೇಳೋದು ಬಿಟ್ಟು ಹಿಂದಿಗೆ ಯಾಕೆ ತಿರಸ್ಕಾರ ಅಂತ ಕೇಳ್ತಿದ್ದಾರೆ.. ಹಿಂದಿಗರು ಹಿಂದಿ ಜೊತೆಗೆ ವಿಶ್ವ ಸಂಪರ್ಕ ಭಾಷೆ ಆಂಗ್ಲ ಕಲಿಯಬಹುದು ಆದರೆ ಅದೇ ನಮ್ಮ ಕನ್ನಡಿಗರು ಆಂಗ್ಲ ಕಲಿಯಬಾರದೇ ಎಂದು ರೂಪೇಶ್ ರಾಜಣ್ಣ ಪ್ರಶ್ನಿಸಿದ್ದಾರೆ.

ಹಿಂದಿ ರಾಷ್ಟ್ರ ಭಾಷೆ ಹೇಗೆ!? ಒಕ್ಕೂಟ ವ್ಯವಸ್ಥೆಯಲ್ಲಿ ಇರುವ ಅನೇಕ ದೇಶ ಭಾಷೆಗಳಲ್ಲಿ ಹಿಂದಿ ಕೂಡ ಒಂದು. ಅದೊಂದು ಅಧಿಕೃತ ಭಾಷೆ ಅಷ್ಟೆ. ಈ ಮೂಲಭೂತ ಸತ್ಯದ ಅರಿವು ಕೂಡ ಇರದವರನ್ನು ಕನ್ನಡ ಸಾಹಿತಿ ಎಂದು ಒಪ್ಪಿಕೊಳ್ಳುವುದು ಹೇಗೆ? ಇಂತಹ ಕನ್ನಡ ನುಡಿ ದ್ರೋಹಿಯನ್ನು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡುವುದು ಯಾವ ಕಾರಣಕ್ಕೂ ಸಮಂಜಸವಲ್ಲ. ಬೇಕಾದರೆ ಅಭಾಹಿಂಸಾಸ (ಅಖಿಲ ಭಾರತ ಹಿಂದಿ ಸಾಹಿತ್ಯ ಸಮ್ಮೇಳನ) ಕ್ಕೆ ಅಧ್ಯಕ್ಷರಾಗಲಿ ಎಂದು ದಾದಾ ಖಲಂಧರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ದೊಡ್ಡರಂಗೇಗೌಡರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಕವನವೊಂದನ್ನು ಬರೆದಿದ್ದರು. ಹಾಗಾಗಿಯೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಇವರು ಅಗ್ರಹಾರದ ಗೇಟ್ ಕೀಪರ್ ಕೆಲಸ ಮಾಡುತ್ತಿದ್ದಾರೆ ಎಂದೆಲ್ಲಾ ಕನ್ನಡಿಗರು ಟೀಕಿಸಿದ್ದಾರೆ.


ಇದನ್ನೂ ಓದಿ: ಹಿಂದಿ ಹೇರಿಕೆಗೆ ತೀವ್ರ ವಿರೋಧ: ಹಿಂದಿಗುಲಾಮಗಿರಿಬೇಡ ನ್ಯಾಷನಲ್ ಟ್ರೆಂಡಿಂಗ್‌!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...