ತಮಿಳುನಾಡಿಗೆ ಸಮಗ್ರ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ಯೋಜನೆಯಡಿ ಶಿಕ್ಷಣ ನಿಧಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಅವರ ಆರೋಗ್ಯ ಹದಗೆಟ್ಟಿದ್ದು, ಶನಿವಾರ (ಆ.30) ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಎಸ್‌ಎಸ್‌ಎ ಯೋಜನೆಯಡಿಯಲ್ಲಿ ಹಂಚಿಕೆಯಾದ ಸುಮಾರು 2,000 ಕೋಟಿ ರೂ.ಗಳನ್ನು ವಿತರಿಸುವಲ್ಲಿ ಕೇಂದ್ರದ ವಿಳಂಬವನ್ನು ವಿರೋಧಿಸಿ ಸೆಂಥಿಲ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ತಮಿಳುನಾಡು ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೆ ತರಲು ನಿರಾಕರಿಸಿದ್ದರಿಂದ ಶಿಕ್ಷಣ ನಿಧಿ ಬಿಡುಗಡೆಯನ್ನು ತಡೆಯಲಾಗಿದೆ ಎಂದು ಸೆಂಥಿಲ್ ಆರೋಪಿಸಿದ್ದಾರೆ.
ಉಪವಾಸ ಮಾಡುತ್ತಿದ್ದ ಸೆಂಥಿಲ್ ಅವರಿಗೆ ಅಧಿಕ ರಕ್ತದೊತ್ತಡ ಕಾಣಿಸಿಕೊಂಡಿದ್ದು, ತಿರುವಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಸ್ವತಃ ಸೆಂಥಿಲ್ ಅವರೇ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದು, “ಎಸ್‌ಎಸ್‌ಎ ಅಡಿಯಲ್ಲಿ ತಮಿಳುನಾಡಿನ ನ್ಯಾಯಯುತ ನಿಧಿಯನ್ನು ಕೋರಿ ನಾನು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಮೂರನೇ ದಿನವಾದ ಇಂದು ನನಗೆ ಅಧಿಕ ರಕ್ತದೊತ್ತಡವಿದೆ. ನನಗೆ ಸರಿಯಾದ ವೈದ್ಯಕೀಯ ಆರೈಕೆ ನೀಡಲಾಗುತ್ತಿದೆ ಮತ್ತು ನನ್ನ ಆರೋಗ್ಯ ಸ್ಥಿರವಾಗಿದೆ” ಎಂದು ತಿಳಿಸಿದ್ದಾರೆ.
ರಾಜ್ಯ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಳಿ ಮತ್ತು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೂಡ ಶಿಕ್ಷಣ ನಿಧಿ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ. “ಕೇಂದ್ರವು ಶಿಕ್ಷಣ ನಿಧಿಯನ್ನು ರಾಜಕೀಯಗೊಳಿಸುತ್ತಿದೆ ಮತ್ತು ಎನ್‌ಇಪಿ ವಿರುದ್ಧದ ನಿಲುವಿಗಾಗಿ ತಮಿಳುನಾಡಿಗೆ ದಂಡ ವಿಧಿಸುತ್ತಿದೆ” ಎಂದು ಟೀಕಿಸಿದ್ದಾರೆ.
ಸೆಂಥಿಲ್ ಈ ಹಿಂದೆ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದು ಬಾಕಿ ಇರುವ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ನಿಧಿ ನೀಡುವುದು ವಿಳಂಬ ಮಾಡಿರುವುದರಿಂದಾಗಿ ಶಿಕ್ಷಣ ಹಕ್ಕು (RTE) ನಿಧಿಗಳ ವಿತರಣೆ ಮತ್ತು ಶಿಕ್ಷಕರಿಗೆ ಸಂಬಳ ಪಾವತಿ ಸೇರಿದಂತೆ ರಾಜ್ಯದ ಪ್ರಮುಖ ಶಿಕ್ಷಣ ಯೋಜನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.