ನವಿ ಮುಂಬೈನ ಪನ್ವೇಲ್-ಸಿಎಸ್‌ಎಂಟಿ ಮಾರ್ಗದಲ್ಲಿ ಚಲಿಸುವ ಸ್ಥಳೀಯ ರೈಲಿನಿಂದ 18 ವರ್ಷದ ಬಾಲಕಿಯನ್ನು ತಳ್ಳಿದ ಆರೋಪದ ಮೇಲೆ 50 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ‘ಮಾನಸಿಕವಾಗಿ ಅಸ್ವಸ್ಥ’ ಎಂದು ಕಂಡುಬಂದ ಆ ವ್ಯಕ್ತಿ ಮಹಿಳೆಯರ ಕೋಚ್ ಹತ್ತಿದ್ದರು, ನಂತರ ಪ್ರಯಾಣಿಕರು ಅವನನ್ನು ಕೆಳಗಿಳಿಯಲು ಹೇಳಿದ್ದರು. ಈ ವೇಳೆ ಬಾಗಿಲಿನ ಬಳಿ ನಿಂತಿದ್ದ 18 ವರ್ಷದ ವಿದ್ಯಾರ್ಥಿನಿಯನ್ನು ಆತ ಹೊರಗೆ ತಳ್ಳಿದ್ದಾನೆ ಎನ್ನಲಾಗಿದೆ.
ಡಿಸೆಂಬರ್ 18 ರ ಗುರುವಾರದಂದು ಈ ಘಟನೆ ನಡೆದಿದ್ದು, ಸಂತ್ರಸ್ತೆ ಶ್ವೇತಾ ಮಹಾದಿಕ್ ಮತ್ತು ಆಕೆಯ ಸ್ನೇಹಿತೆ ಖಾರ್ಘರ್‌ನಲ್ಲಿರುವ ತಮ್ಮ ಕಾಲೇಜಿಗೆ ಪ್ರಯಾಣಿಸುತ್ತಿದ್ದರು. ಅವರು ಬೆಳಿಗ್ಗೆ 7:59 ಕ್ಕೆ ಪನ್ವೇಲ್‌ನಿಂದ ಪನ್ವೇಲ್-ಸಿಎಸ್‌ಎಂಟಿ ಸ್ಥಳೀಯ ರೈಲಿನ ಮಹಿಳಾ ಕೋಚ್ ಹತ್ತಿದ್ದರು. ಶೇಖ್ ಅಖ್ತರ್ ನವಾಜ್ ಎಂದು ಗುರುತಿಸಲಾದ 50ವರ್ಷದ ಆರೋಪಿ ಕೂಡ ಮಹಿಳಾ ಕೋಚ್‌ಗೆ ಪ್ರವೇಶಿಸಿದ್ದ.
ಆ ವ್ಯಕ್ತಿಯನ್ನು ನೋಡಿದಾಗ, ಮಹಿಳಾ ಪ್ರಯಾಣಿಕರು ಅವರ ಪ್ರವೇಶವನ್ನು ವಿರೋಧಿಸಿದರು ಮತ್ತು ಅವರನ್ನು ಹೊರಹೋಗುವಂತೆ ಕೇಳಿಕೊಂಡರು. ಈ ವೇಳೆ ಆ ವ್ಯಕ್ತಿ ಹೊರಗೆ ಹೋಗದೇ ಅಲ್ಲೇ ನಿಂತಿದ್ದನು. ಇದು ಕೋಚ್ ಒಳಗೆ ಮಾತಿನ ಚಕಮಕಿಗೆ ಕಾರಣವಾಯಿತು. ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಮಹಿಳಾ ಕೋಚ್‌ನ ಫುಟ್‌ಬೋರ್ಡ್ ಬಳಿ ನಿಂತಿದ್ದ ವಿದ್ಯಾರ್ಥಿನಿ ಶ್ವೇತಾ ಅವರನ್ನು ಆರೋಪಿ ತಳ್ಳಿದನೆಂದು ಆರೋಪಿಸಲಾಗಿದೆ.
ಇದನ್ನು ನೋಡಿದ ಮಹಿಳಾ ಪ್ರಯಾಣಿಕರು ರೈಲ್ವೆ ಸಹಾಯವಾಣಿ ಸಂಖ್ಯೆಗೆ ಮಾಹಿತಿ ನೀಡಿದಾಗ, ಶೇಖ್ ಅವರನ್ನು ಖಂಡೇಶ್ವರ ಪೊಲೀಸ್ ಠಾಣೆಯಲ್ಲಿ ಜಿಆರ್‌ಪಿ ವಶಕ್ಕೆ ಪಡೆದರು.


