ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪ್ಯಾಲೆಸ್ತೀನ್ ಪರ ಮತ್ತು ಮೋದಿ ವಿರುದ್ಧದ ಪೋಸ್ಟ್‌ಗೆ ಲೈಕ್ ಮಾಡಿದ ಕಾರಣಕ್ಕೆ ಮುಂಬೈನ ಸೋಮಯ್ಯ ಶಾಲೆಯ ಪ್ರಾಂಶುಪಾಲೆ ಪರ್ವೀನ್ ಶೇಖ್ ಅವರಲ್ಲಿ ಶಾಲಾ ಆಡಳಿತ ಮಂಡಳಿ ರಾಜೀನಾಮೆ ಕೇಳಿರುವ ಬಗ್ಗೆ ವರದಿಯಾಗಿದೆ.
ವರದಿಗಳ ಪ್ರಕಾರ, OpIndia ಎಂಬ ಹಿಂದುತ್ವಪರ ಪೋರ್ಟಲ್‌ವೊಂದು ಏಪ್ರಿಲ್ 24ರಂದು ಶೇಖ್ ಅವರನ್ನು “ಹಮಾಸ್ ಸಹಾನುಭೂತಿ” ಮತ್ತು “ಹಿಂದೂ ವಿರೋಧಿ” ಎಂದು ಆರೋಪಿಸಿ ಸ್ಟೋರಿಯನ್ನು ಪ್ರಕಟಿಸಿತ್ತು. ಅವರು ಪ್ರಾಂಶುಪಾಲರಾಗುವುದಕ್ಕೆ ಅನರ್ಹರು ಎಂದು ಟೀಕಿಸಿತ್ತು.
ಶೇಖ್ ಅವರು ತನ್ನ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ, ನನ್ನನ್ನು ಮೌನಗೊಳಿಸುವ ಉದ್ದೇಶದಿಂದ ಮಾಡಿದ “ದುರುದ್ದೇಶಪೂರಿತ ಪ್ರತಿಕ್ರಿಯೆ”ಗೆ ಬಲಿಯಾಗಿದ್ದೇನೆ. ನಾನು ಪ್ರಜಾಸತ್ತಾತ್ಮಕ ಭಾರತದಲ್ಲಿ ವಾಸಿಸುತ್ತಿದ್ದೇನೆ, ನಾನು ವಾಕ್ ಸ್ವಾತಂತ್ರ್ಯದ ತತ್ವವನ್ನು ಹೆಚ್ಚು ಗೌರವಿಸುತ್ತೇನೆ ಏಕೆಂದರೆ ಅದು ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ. ನನ್ನ ಅಭಿವ್ಯಕ್ತಿ ಈ ರೀತಿ ಕ್ರಮಕ್ಕೆ ಪ್ರಚೋದಿಸುತ್ತದೆ ಎಂದು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.
ಕಾಲೇಜು ಆಡಳಿತ ಮಂಡಳಿಯು ಯಾವಾಗಲೂ ನನಗೆ ಬೆಂಬಲ ನೀಡಿದೆ ಮತ್ತು ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ. ಶಾಲೆಯ ಬೆಳವಣಿಗೆ ಮತ್ತು ಯಶಸ್ಸಿನಲ್ಲಿ ನನ್ನ ಪಾತ್ರವನ್ನು ಅವರು ಒಪ್ಪಿಕೊಂಡಿದ್ದಾರೆ ಮತ್ತು ನನ್ನ ಕೆಲಸದಿಂದ ಸಂತೋಷಪಟ್ಟಿದ್ದಾರೆ. ಇದು ಅವರಿಗೆ ಕಠಿಣ ನಿರ್ಧಾರ ಎಂದು ಅವರು ಹೇಳುತ್ತಾರೆ ಎಂದು ಪರ್ವೀನ್ ಶೇಖ್ ಹೇಳಿದ್ದಾರೆ.
ನೌಕರರ ರಾಜಕೀಯ ಹೇಳಿಕೆಗಳ ಬಗ್ಗೆ ಶಾಲಾ ಆಡಳಿತವು ಯಾವುದೇ ಔಪಚಾರಿಕ ನೀತಿಯನ್ನು ಹೊಂದಿಲ್ಲ. ಆದರೆ ಮಾರ್ಚ್‌ನಲ್ಲಿ ನಡೆದ ಸಭೆಯಲ್ಲಿ, ಉದ್ಯೋಗಿಗಳು ತಮ್ಮ ಖಾಸಗಿ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅನುಮತಿಸಲಾಗಿದೆ, ಇವುಗಳು ವೈಯಕ್ತಿಕ ಅಭಿಪ್ರಾಯಗಳು ಎಂದು ಸ್ಪಷ್ಟಪಡಿಸಲಾಗಿದೆ ಎಂದು ಅವರು ಹೇಳಿದರು.
ಎಕ್ಸ್‌ನಲ್ಲಿ ಅಪರೂಪವಾಗಿ ಪೋಸ್ಟ್ ಮಾಡುವ ಶೇಖ್, ಗಾಝಾದಲ್ಲಿ ಇಸ್ರೇಲ್ ಹತ್ಯಾಕಾಂಡವನ್ನು ಖಂಡಿಸುವ ಪೋಸ್ಟ್‌ಗಳಿಗೆ ಲೈಕ್ ಮಾಡಿದ್ದಾರೆ. ಇದಲ್ಲದೆ ಭಾರತೀಯ ಜನತಾ ಪಕ್ಷ ಮತ್ತು ಪ್ರಧಾನಿ ಮೋದಿ ಅವರನ್ನು ಟೀಕಿಸುವ ಹಲವಾರು ಪೋಸ್ಟ್‌ಗಳಿಗೆ ಅವರು ಲೈಕ್ ಹಾಕಿದ್ದರು.
ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಹೇಳಿಕೆಯಲ್ಲಿ ಶೇಖ್, ನನ್ನ ಬಗ್ಗೆ ಲೇಖನವನ್ನು ಪ್ರಕಟಿಸಿದ ಸುದ್ದಿ ಪೋರ್ಟಲ್ ಜಾತ್ಯತೀತ ಸಾಂವಿಧಾನಿಕ ನೀತಿ ಮತ್ತು ಪ್ಯಾಲೆಸ್ತೀನ್ ವಿರುದ್ಧ ಪಕ್ಷಪಾತಕ್ಕೆ ಹೆಸರುವಾಸಿಯಾಗಿದೆ. ನನ್ನನ್ನು ಟ್ರೋಲ್ ಮಾಡಿದ ಅದರ ಅನುಯಾಯಿಗಳು ಕೂಡ ಅದೇ ರೀತಿಯ ಪಕ್ಷಪಾತೀಯ ನಿಲುವನ್ನು ಹೊಂದಿರುವವರಾಗಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ರಾಯ್ ಬರೇಲಿ, ಅಮೇಥಿ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ರಾಹುಲ್ ಗಾಂಧಿ, ಕಿಶೋರಿ ಲಾಲ್ ಶರ್ಮಾ ಸ್ಪರ್ಧೆ


