ಮಾಜಿ ಸಚಿವ ಜನಾರ್ದನ ರೆಡ್ಡಿ ಬಳಿಕ ಅವರ ಸಹೋದರ ಹಾಗೂ ಶಾಸಕ ಸೋಮಶೇಖರ ರೆಡ್ಡಿಗೆ ಸಿಬಿಐ ಕಂಟಕ ಎದುರಾಗುವ ಸೂಚನೆ ಕಂಡುಬಂದಿದೆ. 2010 ರಲ್ಲಿ ನಡೆದ ನಗರಸಭೆ (ಬಳ್ಳಾರಿ) ಸದಸ್ಯೆ ಜಿ.ಪದ್ಮಾವತಿ ಯಾದವ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್ಡಿ ಸಹೋದರರ ಕೈವಾಡ ಇದೆಯೆಂದು ಪದ್ಮಾವತಿ ಸಹೋದರ ಸುಬ್ಬಾರಾವ್ ದೂರು ದಾಖಲಿಸಿದ್ದರು.
ಇದೀಗ ಈ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಒಳಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ಬಂದಿದ್ದು, ಸಿಬಿಐಗೆ ಪ್ರಕರಣ ವಹಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಮಾಹಿತಿ ನೀಡುವಂತೆ ಪತ್ರ ಬರೆಯಲಾಗಿದೆ.
ಪದ್ಮಾವತಿ ಸಹೋದರ ಸುಬ್ಬಾರಾವ್, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಪ್ರಕರಣದ ಹಿನ್ನೆಲೆ:
ಬಳ್ಳಾರಿ ನಗರದ ಎಂಎಂಟಿಸಿ ಕಾಲನಿಯಲ್ಲಿ2010, ಫೆ.4ರ ರಾತ್ರಿ 8.45ರ ವೇಳೆಗೆ ಪದ್ಮಾವತಿ ಯಾದವ್ ಅವರನ್ನು ಅಪರಿಚಿತ ನಾಲ್ವರು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡ ಅವರು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅಸುನೀಗಿದ್ದರು. ಈ ಬಗ್ಗೆ ಸೋದರ ಸುಬ್ಬರಾಯುಡು ಅವರು ದೂರು ನೀಡಿದ್ದರು. ಈ ಪ್ರಕರಣವನ್ನು ಸರ್ಕಾರ 2010, ಫೆ.5ರಂದು ಸಿಐಡಿ ತನಿಖೆಗೆ ಒಪ್ಪಿಸಿತ್ತು. ತನಿಖೆ ನಡೆದು 5 ವರ್ಷಗಳಾದರೂ ಸಿಐಡಿಯವರು, ನ್ಯಾಯಾಲಯಕ್ಕೆ ವರದಿ ನೀಡಿರಲಿಲ್ಲ. ಸಿಐಡಿಗೆ ವರದಿ ಸಲ್ಲಿಸಲು ಸೂಚಿಸುವಂತೆ ಸುಬ್ಬರಾಯುಡು ಹೈಕೋರ್ಟ್ ಮೊರೆ ಹೋಗಿದ್ದರು.
ತಕ್ಷಣ ತನಿಖಾ ವರದಿ ಸಲ್ಲಿಸಬೇಕೆಂದು 2015, ಡಿಸೆಂಬರ್ 12ರಂದು ಸಿಐಡಿಗೆ ನ್ಯಾಯಾಲಯ ಸೂಚಿಸಿತ್ತು. ಈ ಸೂಚನೆ ಆಧರಿಸಿ, ಬಳ್ಳಾರಿ ನ್ಯಾಯಾಲಯಕ್ಕೆ ಸಿಐಡಿಯವರು 2016, ಸೆ.21ರಂದು ಆರೋಪಿಗಳು ಸಿಕ್ಕಿಲ್ಲವೆಂದು ಸಿ ರಿಪೋರ್ಟ್ ಸಲ್ಲಿಸಿದ್ದರು.
”ಸಿಐಡಿಯವರ ವರದಿ ಸಮಂಜಸವಾಗಿಲ್ಲ. ಸಿಐಡಿ, ಸಿ ರಿಪೋರ್ಟ್ ಸಲ್ಲಿಕೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಮತ್ತು ಪ್ರಕರಣದ ಮರು ತನಿಖೆ ನಡೆಸಬೇಕು” ಎಂದು ಸುಬ್ಬರಾಯುಡು ಅವರು, ಬಳ್ಳಾರಿ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಜೂನಿಯರ್ ಡಿವಿಜನ್ ನ್ಯಾಯಾಲಯಕ್ಕೆ 2017 ಮೇನಲ್ಲಿ ಅವರು ಅರ್ಜಿ ಸಲ್ಲಿಸಿದ್ದರು.
ಸಿಬಿಐ ತನಿಖೆಗೆ ನೀಡುವ ಅಧಿಕಾರ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿತ್ತು. ಆದರೆ, ಪ್ರಕರಣವನ್ನು ಸಿಐಡಿ ಮರುವಿಚಾರಣೆಗೆ ನ್ಯಾಯಾಧೀಶರು ಆದೇಶಿಸಿದ್ದರು.


