ಪತ್ನಿ ತವರು ಮನೆಯಿಂದ ವಾಪಸ್ ಆಗದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಆಕೆಯ ಸಹೋದರಿಯ ಆರು ವರ್ಷದ ಮಗನನ್ನು ಕೊಲೆಗೈದ ಮೈಸೂರಿನ ಎಚ್‌ಡಿ ಕೋಟೆ ತಾಲೂಕಿನ ಕರಿಗಾಲ ಗ್ರಾಮದ ನಿವಾಸಿ ನಾರಾಯಣ ಎಂಬಾತನಿಗೆ ಕರ್ನಾಟಕ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಆರೋಪಿ ನಾರಾಯಣನನ್ನು ಖುಲಾಸೆಗೊಳಿಸಿದ್ದ ಮೈಸೂರಿನ ಸತ್ರ ನ್ಯಾಯಾಲಯದ ತೀರ್ಪನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ಉಮೇಶ್ ಎಂ. ಅಡಿಗ ಅವರ ವಿಭಾಗೀಯ ಪೀಠ ರದ್ದುಪಡಿಸಿದೆ ಎಂದು ವರದಿ ಹೇಳಿದೆ.
ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಎಚ್‌ಡಿ ಕೋಟೆ ಠಾಣಾ ಪೊಲೀಸರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ ವಿಭಾಗೀಯ ಪೀಠ, ನಾರಾಯಣನನ್ನು ದೋಷಿಯಾಗಿ ತೀರ್ಮಾನಿಸಿ ಶಿಕ್ಷೆ ವಿಧಿಸಿದೆ.
ನಾರಾಯಣನನ್ನು ಖುಲಾಸೆಗೊಳಿಸಿ ಮೈಸೂರಿನ 3ನೇ ಹೆಚ್ಚುವರಿ ಸತ್ರ ನ್ಯಾಯಾಲಯ 2016ರ ಆಗಸ್ಟ್ 28ರಂದು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಎಚ್‌ಡಿ ಕೋಟೆ ಠಾಣಾ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿವರ : ಕರಿಗಾಲ ಗ್ರಾಮದ ನಿವಾಸಿ ಸಿದ್ದೇಗೌಡ ಅವರ ಪುತ್ರಿ ಸುಶೀಲಾಳನ್ನು ನಾರಾಯಣ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಟ್ರ್ಯಾಕ್ಟರ್ ಚಾಲನಾಗಿದ್ದ ನಾರಾಯಣ ಮದ್ಯ ವ್ಯಸನಿಯಾಗಿದ್ದ. ಆತನ ಪತ್ನಿಗೆ ಅದೇ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಆದರೆ ಉದ್ಯೋಗ ಬಿಡುವಂತೆ ಪತ್ನಿಗೆ ಒತ್ತಾಯಿಸುತ್ತಿದ್ದ ಹಾಗೂ ಆಕೆಯ ಶೀಲ ಶಂಕಿಸುತ್ತಿದ್ದ. ಇದೇ ವಿಚಾರವಾಗಿ ಪತ್ನಿಯೊಂದಿಗೆ ಜಗಳವಾಡಿ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತ ಸುಶೀಲ ಅದೇ ಗ್ರಾಮದಲ್ಲಿದ್ದ ತಂದೆ ಮನೆಗೆ ತೆರಳಿ ನೆಲೆಸಿದ್ದರು.
ನಾರಾಯಣ ಹಲವು ಬಾರಿ ಮನವಿ ಮಾಡಿದ್ದರೂ ಸುಶೀಲ ಗಂಡನ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಸೇಡು ತೀರಿಸಿಕೊಳ್ಳಲು ನಾರಾಯಣ, 2014ರಲ್ಲಿ ಸುಶೀಲ ಅವರ ತಂದೆಯ ಮನೆಯಲ್ಲಿದ್ದ ಆಕೆಯ ಅಕ್ಕನ ಪುತ್ರ ಮದನ್‌ಗೆ ಬಿಸ್ಕೆಟ್ ಕೊಡಿಸುವುದಾಗಿ ಪುಸಲಾಯಿಸಿ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದ. ಈ ಕುರಿತು ಸುಶೀಲ ತಂದೆ ಎಚ್ ಡಿ ಕೋಟೆ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಕೊಲೆ ಅಪರಾಧದಡಿ ಆರೋಪ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ : ಬಿಜೆಪಿ ಟಿಕೆಟ್ ಕೊಡಿಸುವುದಾಗಿ ₹ 2 ಕೋಟಿ ಸುಲಿಗೆ ಆರೋಪ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರರ ವಿರುದ್ಧ ಎಫ್ಐಆರ್


