Homeಮುಖಪುಟಕರ್ನಾಟಕದಲ್ಲಿ ಸಂಗೀತ ಮತ್ತು ಮೈಸೂರು ದಸರಾ - ಡಾ. ಶಶಿಕಾಂತ್ ಕೌಡೂರ್

ಕರ್ನಾಟಕದಲ್ಲಿ ಸಂಗೀತ ಮತ್ತು ಮೈಸೂರು ದಸರಾ – ಡಾ. ಶಶಿಕಾಂತ್ ಕೌಡೂರ್

ಕೃಷ್ಣರಾಜ ಒಡೆಯರ ಸಂಗೀತಾಸಕ್ತಿ ಬರೇ ಕರ್ನಾಟಕ ಸಂಗೀತಕ್ಕೆ ಮಾತ್ರ ಸೀಮಿತವಾಗದೇ ಹಿಂದುಸ್ತಾನೀ, ಪಾಶ್ಚಾತ್ಯ ಸಂಗೀತ ಇತ್ಯಾದಿಗಳಿಗೂ ಹಬ್ಬಿತ್ತು ಮತ್ತು ದಸರಾ ಅದಕ್ಕೊಂದು ಸಂದರ್ಭವನ್ನೊದಗಿಸುತ್ತಿತ್ತು.

- Advertisement -
- Advertisement -

ಕರ್ನಾಟಕ ಸಂಗೀತಕ್ಕೂ ಹಾಗೂ ಕರ್ನಾಟಕವೆಂಬ ಭೂ-ರಾಜಕೀಯ ಪ್ರದೇಶಕ್ಕೂ ಸಮೀಕರಣ ಮಾಡುವಂಥ ಪ್ರವೃತ್ತಿ ಇಪ್ಪತ್ತನೇ ಶತಮಾನದ ಆದಿಭಾಗದಿಂದ ಬೆಳೆದುಬಂತೆಂದು ಕರ್ನಾಟಕ ಸಂಗೀತ ವಿಮರ್ಶಕ ದಿವಂಗತ ಶ್ರೀ ಬಿ.ವಿ.ಕೆ. ಶಾಸ್ತ್ರಿ ಹೇಳಿದ್ದಾರೆ. ಶಾಸ್ತ್ರಿ ಅವರ ಪ್ರಕಾರ ಈ ತಪ್ಪು ನೆಲೆನಿಲ್ಲಲು ಕಾರಣವೆಂದರೆ ಮದ್ರಾಸ್ ವಿ.ವಿ ಯಲ್ಲಿ ಸಂಗೀತದ ಪ್ರಾಧ್ಯಾಪಕರಾಗಿದ್ದ ಪ್ರೊ. ಸಾಂಬಮೂರ್ತಿ ಅವರು. ಸಾಂಬಮೂರ್ತಿ ಅವರು ತಮ್ಮ ಒಂದು ಬರಹದಲ್ಲಿ ಈ ಕೆಳಗಿನ ಶ್ಲೋಕವನ್ನು ಉದ್ಧರಿಸುತ್ತಾರೆ:

ತದಾಪಿ ದ್ವಿವಿಧಮ್ ಜ್ಞೇಯಮ್ ದಕ್ಷಿಣೋತ್ತರ ಭೇದತಃ
ಕರ್ನಾಟಕಮ್ ದಾಕ್ಷಿಣೇಸ್ಯಾತ್ ಹಿಂದುಸ್ತಾನಿ ತಥೋತ್ತರೇ

(ದಕ್ಷಿಣ ಮತ್ತು ಉತ್ತರದ ಭೇದದಿಂದ ಎರಡು ತರಹದ ಸಂಗೀತಗಳಿವೆಯೆಂದು ತಿಳಿಯತಕ್ಕದ್ದು: ಕರ್ನಾಟಕ[ಸಂಗೀತ]ವು ದಕ್ಷಿಣದಲ್ಲೂ, ಹಿಂದುಸ್ತಾನಿ[ಸಂಗೀತ]ವು ಉತ್ತರದಲ್ಲೂ ಇರುವುವು.) ಸಾಂಬಮೂರ್ತಿ ಅವರು ಈ ಶ್ಲೋಕ ‘ಸಂಗೀತ ಸುಧಾಕರ’ ಎಂಬ 15ನೇ ಶತಮಾನದ ಕೃತಿಯಲ್ಲೇ ಬಂದಿರುವುದರಿಂದ ಕರ್ನಾಟಕ ಹಾಗೂ ಹಿಂದುಸ್ತಾನೀ ಸಂಗೀತ ಎಂಬ ವಿಭಾಗ ಆಗಿಂದಲೇ ಇತ್ತು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಆದರೆ ಶಾಸ್ತ್ರಿಯವರ ಪ್ರಕಾರ ‘ಸಂಗೀತ ಸುಧಾಕರ’ ಎಂಬ ಹೆಸರಿನ ಇನ್ನೊಂದು ಕೃತಿಯು 1911ರಷ್ಟು ತಡವಾಗಿ ಹೈದರಾಬಾದಿನ ಕಾಶೀನಾಥ ಅಪ್ಪಾ ತುಳಸಿ ಎಂಬುವರಿಂದ ರಚಿತವಾಗಿತ್ತು ಹಾಗೂ ಸಾಂಬಮೂರ್ತಿಯವರು ತೆಗೆದುಕೊಂಡ ಶ್ಲೋಕ ಈ ಗ್ರಂಥದಲ್ಲಿ ಉಧ್ಧೃತವಾದದ್ದಾಗಿತ್ತು. ಆದರೆ ಸಾಂಬಮೂರ್ತಿಯವರ ಸ್ಕಾಲರ್‌ಶಿಪ್‍ಅನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲವಾದ್ದರಿಂದ ಅವರ ಅಭಿಪ್ರಾಯ ಹಾಗೇ ನೆಲೆಗೊಂಡಿತು.

ಇದರೊಂದಿಗೆ ಬಹಳಷ್ಟು ಜನ ಕರ್ನಾಟಕ ಸಂಗೀತವೆಂದರೆ ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಸಂಗೀತವೆಂಬ ಅಭಿಪ್ರಾಯಕ್ಕೆ ಬಂದಿದ್ದರು. ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಕನ್ನಡ ರಾಷ್ಟ್ರೀಯವಾದಿಗಳೂ ಕೂಡಾ ಈ ಅಭಿಪ್ರಾಯವನ್ನು ತಮ್ಮ ರಾಜಕೀಯ ಚಳುವಳಿಯಲ್ಲಿ ಉಪಯೋಗಿಸಿಕೊಂಡರು. ಇಂಥವರಲ್ಲಿ ‘ಕರ್ನಾಟಕ ಪಿತಾಮಹ’ರಾದ ಆಲೂರು ವೆಂಕಟರಾಯರು ಪ್ರಮುಖರು. ಕನ್ನಡದ ರಾಷ್ಟ್ರೀಯವಾದಿಗಳಿಗೆ ಕನ್ನಡವೇ ಹೆಚ್ಚಾಗಿ ಆಡುಮಾತಾಗಿದ್ದ ಬೇರೆ ಬೇರೆ ಪ್ರದೇಶಗಳನ್ನು ಸೇರಿಸಿ ಕರ್ನಾಟಕವೆಂಬ ಭೂ-ರಾಜಕೀಯ ಪ್ರದೇಶವನ್ನು ನಿರ್ಮಿಸುವುದು ಉದ್ದೇಶವಾಗಿತ್ತು. ಹೀಗಿರುವಾಗ ಯಾವುದೇ ಸಾಂಸ್ಕೃತಿಕ ಪ್ರಕಾರಕ್ಕೆ ಕರ್ನಾಟಕವೆಂಬ ಹೆಸರಿದ್ದರೆ ಅದು ಬಹಳ ಉಪಯೋಗದ್ದೇ ಆಗಿದ್ದಿತು. ಕರ್ನಾಟಕ ಸಂಗೀತವೆಂಬುದು ಇಡೀ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಬಹುದೆಂಬ ಆಲೋಚನೆ ವೆಂಕಟರಾಯರದ್ದಾಗಿತ್ತು. ಆದರೆ ಸಂಗೀತಕ್ಕೆ ಈ ಭೂ-ರಾಜಕೀಯ ಪ್ರದೇಶದಲ್ಲಿ ಅಂಥ ಒಂದು ಏಕರೂಪತೆ ಇರಲಿಲ್ಲ. ಇದು ನಮಗೆ ಕೆಲವು ಲೇಖಕರ ಬರಹಗಳಲ್ಲಿ ಗೊತ್ತಾಗುತ್ತದೆ.

ಕನ್ನಡದ ಒಬ್ಬ ಪ್ರಮುಖ ಲೇಖಕರಾದ ಬೆಟಗೇರಿ ಕೃಷ್ಣಶರ್ಮ ಅವರು 1920ರ ದಶಕದಲ್ಲಿ ಬೆಳಗಾಮ್‍ನಲ್ಲಿ ಜರುಗಿದ ಕಾಂಗ್ರೆಸ್‍ನ ರಾಷ್ಟ್ರೀಯ ಅಧಿವೇಶನದ ಬಗ್ಗೆ ಅಂದಿನ ಪತ್ರಿಕೆ ‘ಜಯಕರ್ನಾಟಕ’ದಲ್ಲಿ ಬರೆದ ಮಾಹಿತಿ ಆಸಕ್ತಿದಾಯಕವಾಗಿದೆ. ಆ ಅಧಿವೇಶನದಲ್ಲಿ ವೀಣೆಯನ್ನು ನುಡಿಸಲು ವೀಣೆ ಶೇಷಣ್ಣ ಬಂದಿದ್ದರಂತೆ. ಆದರೆ ಉತ್ತರ ಕರ್ನಾಟಕದ ಜನರಿಗೆ ಕರ್ನಾಟಕ ಸಂಗೀತದ ಸರಿಯಾದ ರುಚಿ ಇಲ್ಲ ಎನ್ನುತ್ತಾ ಕೃಷ್ಣಶರ್ಮ ಹೀಗೆನ್ನುತ್ತಾರೆ: “ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸಂಗೀತವನ್ನು ಹೇಳುವ ಕಂಠಗಳಿಲ್ಲ; ಕೇಳಿ ಆನಂದಿಸುವ ಕಿವಿಗಳಿಲ್ಲ. ಕತ್ತೆ ಕುದುರೆಗಳ ಮಧ್ಯದ ಜಾತಿಯ ಪ್ರಾಣಿಯಂತೆ, ಹಿಂದುಸ್ತಾನಿ-ಕರ್ನಾಟಕ ಸಂಗೀತಗಳ ಮಧ್ಯದ ಮಿಶ್ರಜಾತಿಯ ಸಂಗೀತ ಇಲ್ಲಿಯವರ ಕಿವಿಗಳನ್ನು ಕಿಲುಬುಗಟ್ಟಿಸಿಬಿಟ್ಟಿದೆ.” (ಕರ್ನಾಟಕ ಸಂಗೀತದ ಬಗೆಗಿನ ತಮ್ಮ ಮುಂಚಿನ ಅಜ್ಞಾನವನ್ನೂ ಅವರು ನಿವೇದಿಸಿಕೊಳ್ಳುತ್ತಾರೆ: ಕೃಷ್ಣಶರ್ಮರಿಗೆ ವೀಣೆಯೆಂದರೆ ತಂಬೂರಕ್ಕಿಂತ ಭಿನ್ನವಾದ ಒಂದು ವಾದ್ಯ ಪ್ರಕಾರವೆಂದು ಆಗಲೇ ಪಟ್ಟಣಕ್ಕೆ ಬಂದಿದ್ದ ಅವರ ಸಹೋದರನೊಬ್ಬ ಅವರಿಗೆ ಹೇಳಿದ್ದರು) ಇದು ಸರಿಯೆಂಬಂತೆ ಶೇಷಣ್ಣನವರು ಸುಮಾರು ಎರಡು ಸಾವಿರ ಜನರ ‘ಗುಜುಗುಜು-ಗುಣುಗುಣು’ವಿನಲ್ಲಿ ಜನರಿಗೆ ಕೇಳಿಸದಿದ್ದರೂ ತನ್ನ ವಾದನವನ್ನು ನುಡಿಸಿಯೇಬಿಟ್ಟರಂತೆ. ಕೃಷ್ಣಶರ್ಮರ ಮಾತನ್ನೇ ಅನುಮೋದಿಸುವ ರೀತಿಯಲ್ಲಿ ಆಗಿನ ಉತ್ತರ ಕರ್ನಾಟಕದ ಇನ್ನೊಬ್ಬ ಪ್ರಮುಖರಾದ ಶ್ಯಾಮರಾವ್ ತಟ್ಟಿಯವರು ಹೇಳುತ್ತಾರೆ: “ಈ ಪ್ರದೇಶದಲ್ಲಿ ಕನ್ನಡಿಗರು ಯಾರಾದರೂ ಹಾಡಿದರೆ ಅವರು ಹಿಂದುಸ್ತಾನಿ ಸಂಗೀತವನ್ನೋ ಅಥವಾ ಒಂದು ಬಗೆಯ ಮಿಶ್ರ ಸಂಗೀತವನ್ನೋ ಹಾಡುತ್ತಾರೆ. ದಕ್ಷಿಣ ಭಾರತದ ಸಂಗೀತವನ್ನು ಹಾಡುವವರು ಬಲು ವಿರಳ”.

ಆದರೆ ಉತ್ತರ ಕರ್ನಾಟಕದಲ್ಲಿ ಆ ಮುಂಚೆ ಕರ್ನಾಟಕ ಸಂಗೀತ ಇದ್ದಿಲ್ಲವೆಂದು ಇದರ ಅರ್ಥವಲ್ಲ. ಹತ್ತೊಂಭತ್ತನೇ ಶತಮಾನದಲ್ಲಿ ಕರ್ನಾಟಕ ಸಂಗೀತ, ಸಂಗೀತದ ರಾಗಗಳು, ತ್ಯಾಗರಾಜರ ಕೃತಿಗಳು ಉತ್ತರ ಕರ್ನಾಟಕದಲ್ಲಿ ಅಂದರೆ ಧಾರವಾಡ-ಹುಬ್ಬಳ್ಳಿ ಪ್ರದೇಶದಲ್ಲಿ ಪ್ರಚಲಿತವಿದ್ದಂತಿದೆ (ದಕ್ಷಿಣ ಮಹಾರಾಷ್ಟ್ರದಲ್ಲೂ ಕೂಡಾ ಕರ್ನಾಟಕ ಸಂಗೀತದ ರಾಗಗಳು ಪ್ರಚಲಿತದಲ್ಲಿದ್ದಿತ್ತಂತೆ). ಮರಾಠೀ ನಾಟಕಗಳ ಪ್ರಮುಖ ಪ್ರದರ್ಶಕರಾದ ಅಣ್ಣಾಸಾಹೇಬ್ ಕಿರ್ಲೋಸ್ಕರ್ ಅವರ ನಾಟಕಗಳಲ್ಲಿ ಕರ್ನಾಟಕ ಸಂಗೀತದ ರಾಗಗಳೇ ಇದ್ದವೆಂದು ಬೆಟಗೇರಿ ಕೃಷ್ಣಶರ್ಮರು ‘ನನ್ನ ನೆನಪು’ ಎಂಬ ಪುಸ್ತಕದಲ್ಲಿ ಹೇಳುತ್ತಾರೆ. ಹಾಗೆಯೇ ಚುರಮುರಿ ಶೇಷಗಿರಿರಾಯರ ‘ಶಾಕುಂತಲ’ವೆಂಬ ನಾಟಕದಲ್ಲಿಡೀ ಕರ್ನಾಟಕ ಸಂಗೀತದ ಹಾಡುಗಳೇ ಇದ್ದುವಂತೆ. ಶ್ರೀಮತಿ ಗಂಗೂಬಾಯಿ ಹಾನಗಲ್ ಅವರ ತಾಯಿಯಾದ ಅಂಬಾಬಾಯಿ ಅವರು ತ್ಯಾಗರಾಜರ ಕೃತಿಗಳನ್ನು ಚೆನ್ನಾಗಿ ಹಾಡುತ್ತಿದ್ದರೆಂದು ಹಾನಗಲ್ ಅವರೇ ತಮ್ಮ ಆತ್ಮಚರಿತ್ರೆ ‘ನನ್ನ ಬದುಕಿನ ಹಾಡು’ ಇದರಲ್ಲಿ ಹೇಳಿಕೊಳ್ಳುತ್ತಾರೆ. ಇದನ್ನು ಕೇಳಿದ ಅಬ್ದುಲ್ ಕರೀಂ ಖಾನ್‍ರಂತಹ ಹಿಂದುಸ್ತಾನಿ ಸಂಗೀತದ ದಿಗ್ಗಜ ಅಂಬಾಬಾಯಿಯವರಿಂದ ಸ್ವಲ್ಪ ಮಟ್ಟಿನ ಕರ್ನಾಟಕ ಸಂಗೀತವನ್ನೂ ಕಲಿತಿದ್ದರಂತೆ. ಹಿಂದುಸ್ತಾನಿ ಸಂಗೀತದ ಇನ್ನೊಬ್ಬ ದಿಗ್ಗಜ ಬಸವರಾಜ ರಾಜಗುರು ಅವರು ತಮ್ಮ ಸಂಗೀತಾಭ್ಯಾಸವನ್ನು ಕರ್ನಾಟಕ ಸಂಗೀತದಿಂದ ಆರಂಭಿಸಿದ್ದರು.

ಮುದವೀಡು ಕೃಷ್ಣರಾಯರಂತೂ ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸಂಗೀತದ ‘ಅವನತಿ’ಯನ್ನು 1895ರಿಂದ ಎನ್ನುವಷ್ಟು ಕರಾರುವಾಕ್ಕಾಗಿ ಗುರುತಿಸುತ್ತಾರೆ (ರಾ.ಯ. ಧಾರವಾಡ್ಕರ್ ಅವರ ‘ಹೊಸಗನ್ನಡ ಸಾಹಿತ್ಯದ ಉದಯಕಾಲ’ ಎಂಬ ಪುಸ್ತಕದಲ್ಲಿ). ಅವರ ಪ್ರಕಾರ ಧಾರವಾಡದಲ್ಲಿ ಚಿಮ್ಮಲಗಿ ವೆಂಕಣ್ಣ ಎಂಬುವವರು ಕರ್ನಾಟಕ ಸಂಗೀತದ ಕೊನೆಯ ಪ್ರಮುಖ ಗುರುಗಳಾಗಿದ್ದರು. ತಂಜಾವೂರಿನಲ್ಲಿ ಸಂಗೀತ ಶಿಕ್ಷಣ ಪಡೆದು ಧಾರವಾಡಕ್ಕೆ ಬಂದು ಅಲ್ಲಿ ಸಂಗೀತ ಕಲಿಸುತ್ತಿದ್ದರು. 1893ರಲ್ಲಿ ಅವರು ತೀರಿಕೊಂಡಾಗ ಆ ಜಾಗವನ್ನು ಬೇರಾರೂ ತುಂಬಲಿಲ್ಲ. ಅದೇ ಸಮಯಕ್ಕೆ ಧಾರವಾಡದ ಟೀಚರ್ಸ್ ಟ್ರೇನಿಂಗ್ ಕಾಲೇಜಿಗೆ ಬಂದು ಸೇರಿಕೊಂಡ ಭಾಸ್ಕರ ಬುವಾ ಬಖಲೆ ಹಿಂದುಸ್ತಾನಿಯ ಉಚ್ಛ್ರಾಯಕ್ಕೆ ಇನ್ನೊಂದು ಮುಖ್ಯ ಕಾರಣರಾದರು. ಅಲ್ಲಿ ತರಬೇತಿಗೆ ಸೇರಿದ ಶಿಕ್ಷಕರೆಲ್ಲಾ ಹಿಂದುಸ್ತಾನೀ ಸಂಗೀತದ ಅಲ್ಪಸ್ವಲ್ಪ ತರಬೇತಿಯನ್ನೂ ಪಡೆದು ಧಾರವಾಡ ಪ್ರದೇಶದ ಬೇರೆ ಬೇರೆ ಹಳ್ಳಿಗಳಲ್ಲಿ ಶಿಕ್ಷಕರಾಗಿ ಸೇರಿದ್ದರಿಂದಾಗಿ ಹಿಂದುಸ್ತಾನೀ ಸಂಗೀತದ ರುಚಿ ಸಾಮಾನ್ಯರಲ್ಲೂ ಹತ್ತತೊಡಗಿತು, ಎನ್ನುತ್ತಾರೆ ಮುದವೀಡು ಕೃಷ್ಣರಾಯರು.

ಮೈಸೂರಿನಲ್ಲಿ ಪ್ರತೀ ವರ್ಷ ದಸರಾ ಮಹೋತ್ಸವ ಅಥವಾ ಮಹಾರಾಜರ ವರ್ಧಂತಿ ಇತ್ಯಾದಿ ನಡೆದಾಗ ಉತ್ತರ ಭಾರತದ ಸಂಗೀತಗಾರರು ಮೈಸೂರಿಗೆ ಬರುತ್ತಿದ್ದರು. ಹಾಗೆ ಬರುವಾಗ ಅವರಿಗೆ ಉತ್ತರಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತದ ಜನಪ್ರಿಯತೆ ಹೆಚ್ಚುತ್ತಿದ್ದುದು ಗೊತ್ತಾಗಿತ್ತು. ಮುಂಬಯಿಯಿಂದ ಮೈಸೂರಿಗೆ ಬರುವಾಗ ಧಾರವಾಡದ ಮೂಲಕ ಬಂದು ಭಾಸ್ಕರ ಬುವಾ ಬಖಲೆಯವರ ಮತ್ತು ಧಾರವಾಡದ ಶಿಕ್ಷಣಾಧಿಕಾರಿಯವರಾದ ಬಲವಂತರಾವ್ ಸಹಸ್ರಬುದ್ಧೆ ಅವರ ಆತಿಥ್ಯವನ್ನು ಸ್ವೀಕರಿಸುತ್ತಿದ್ದರು. ವಾಪಾಸು ಹೋಗುವಾಗಲೂ ಧಾರವಾಡದಲ್ಲಿ ಹಲವಾರು ದಿನಗಳ ಮಟ್ಟಿಗೆ ತಂಗಿದ್ದು ಮರಳಿ ಉತ್ತರ ಭಾರತಕ್ಕೆ ತೆರಳುತ್ತಿದ್ದರು. ಹೀಗೆ ಬರುತ್ತಿದ್ದವರಲ್ಲಿ ನತ್ಥನ್ ಖಾನ್ ಅವರು ಮುಖ್ಯರು ಎಂದು ಬಿ. ಆರ್. ದೇವ್‍ಧರ್ ಅವರು ತಮ್ಮ ‘ಪಿಲ್ಲರ್ಸ್ ಆಫ್ ಹಿಂದುಸ್ತಾನೀ ಮ್ಯೂಸಿಕ್’ ಎಂಬ ಪುಸ್ತಕದಲ್ಲಿ ಹೇಳುತ್ತಾರೆ. ಬರ್ಕತುಲ್ಲಾ ಖಾನ್, ದುಲ್ಲೇ ಖಾನ್, ಬಾಬಲೀ ಬಾಯಿ ಇವರನ್ನೂ ಕೂಡಾ ಬಖಲೆಯವರು ಆಮಂತ್ರಿಸಿಕೊಳ್ಳುತ್ತಿದ್ದರಂತೆ (ವಿದ್ಯಾ ಸಪ್ರೆ ಚೌಧರಿಯವರು ಬರೆದು ಶುಭದಾ ಅಮೀನಭಾವಿಯವರು ಕನ್ನಡಕ್ಕೆ ಅನುವಾದಿಸಿದ ಮನ್ಸೂರರ ಜೀವನಚರಿತ್ರೆ ‘ನಾದನದಿ’ಯನ್ನು ನೋಡಿ). ಹೀಗೆ ಹಿಂದುಸ್ತಾನೀ ಸಂಗೀತಕ್ಕೆ ಸಾರ್ವಜನಿಕರಲ್ಲಿ ಬೆಳೆದ ಒಲವು 1920 ಹಾಗೂ 1930ರ ದಶಕಕ್ಕಾಗುವಾಗ ಬೆಳೆದು ಹೆಮ್ಮರವಾಗಿತ್ತು. ಹೀಗೆ ಮೈಸೂರಿಗೆ ಬರುತ್ತಿದ್ದ ನತ್ಥನ್ ಖಾನರು ತದನಂತರ ಮೈಸೂರಿನ ಆಸ್ಥಾನ ವಿದ್ವಾಂಸರೆಂದು ಅನಿಸಿಕೊಂಡರು.

ಕರ್ನಾಟಕದ ಶಿಲ್ಪಿ ಎಂದು ಹೆಸರಾದ ಆಲೂರು ವೆಂಕಟರಾಯರು ಉತ್ತರ ಕರ್ನಾಟಕದ ಸಂಗೀತದ ರುಚಿಯನ್ನು ಮರಳಿಸುವ ಪ್ರಯತ್ನವೊಂದನ್ನು ಈ ಸಮಯದಲ್ಲಿ ಮಾಡಿದ್ದರು. ಕರ್ನಾಟಕವಿಡೀ ಅದೇ ಹೆಸರಿನ ಸಂಗೀತವನ್ನು ನೆಚ್ಚಿಕೊಳ್ಳಬೇಕು ಎಂಬ ಅವರ ಆಸೆ ಮಹತ್ವಾಕಾಂಕ್ಷಿಯಾಗಿತ್ತು. ಅದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡಿದರು. ಕರ್ನಾಟಕ ಸಂಗೀತ ವಿಶಾರದೆಯಾಗಿದ್ದ ಮೈಸೂರಿನ ತಿರುಮಲೆ ರಾಜಮ್ಮ ಅವರನ್ನು ಧಾರವಾಡಕ್ಕೆ ಕರೆಸಿ ಸುಮಾರು ಹತ್ತು ದಿವಸದ ತನಕ ಕಛೇರಿ ನಡೆಸಿದರು. ಅದಾದ ಮೇಲೆ ನರಸಿಂಗ ರಾವ್ ಎಂಬ ಕೊಳಲು ವಾದಕರನ್ನು ಕರೆಸಿ ಅವರಿಂದ ಕಛೇರಿ ಮಾಡಿಸಿದರು. ಕಡೆಗೆ ದಾಸರ ಪದಗಳಿಂದ ಜನರ ಆಸಕ್ತಿ ಕೆರಳೀತು ಎಂದುಕೊಂಡು ದಕ್ಷಿಣ ಕರ್ನಾಟಕದ ಯೋಗಾನರಸಿಂಹ ಅವರಿಂದ ಕರ್ನಾಟಕ ಶೈಲಿಯಲ್ಲಿ ದಾಸರ ಪದಗಳ ಕಛೇರಿ ನಡೆಸಿದರು. ಈ ಮೂರೂ ಪ್ರಯತ್ನಗಳಿಂದ ಸ್ವಲ್ಪವೂ ಪ್ರತಿಫಲ ಬರದಿದ್ದಾಗ ಇದು ಸಾಧ್ಯವಾಗದ ಕೆಲಸವೆಂದು ಕೈ ಬಿಟ್ಟರು (ವೆಂಕಟರಾಯರ ‘ಕರ್ನಾಟಕತ್ವದ ವಿಕಾಸ’ ಎಂಬ ಪುಸ್ತಕ ನೋಡಿ).

ಕೃಷ್ಣರಾಜ ಒಡೆಯರ ಸಂಗೀತಾಸಕ್ತಿ ಬರೇ ಕರ್ನಾಟಕ ಸಂಗೀತಕ್ಕೆ ಮಾತ್ರ ಸೀಮಿತವಾಗದೇ ಹಿಂದುಸ್ತಾನೀ, ಪಾಶ್ಚಾತ್ಯ ಸಂಗೀತ ಇತ್ಯಾದಿಗಳಿಗೂ ಹಬ್ಬಿತ್ತು ಮತ್ತು ದಸರಾ ಅದಕ್ಕೊಂದು ಸಂದರ್ಭವನ್ನೊದಗಿಸುತ್ತಿತ್ತು. ಈಗಿನ ಉತ್ತರ ಕರ್ನಾಟಕದಲ್ಲಿ ಹಿಂದುಸ್ತಾನೀ ಸಂಗೀತ ಹಬ್ಬಲು ಅವರೂ ಒಬ್ಬ ಪರೋಕ್ಷ ಕಾರಣರು. ಕರ್ನಾಟಕ ಸಂಗೀತ ಒಂದು ಕಲಾಪ್ರಕಾರದ ಹೆಸರನ್ನು ಸೂಚಿಸುತ್ತದೆಯೇ ಹೊರತು ಒಂದು ಇಡೀ ಭೂ-ರಾಜಕೀಯ ಪ್ರದೇಶದ ಸಂಸ್ಕೃತಿಯನ್ನಲ್ಲ. ಭಾರತದ ಈಗಿನ ಭೂ-ರಾಜಕೀಯ ಪ್ರದೇಶಗಳು, ಅದರಲ್ಲೂ ಕರ್ನಾಟಕವು ವಿಭಿನ್ನ ಚಾರಿತ್ರಿಕ-ರಾಜಕೀಯ ಕಾರಣಗಳಿಂದಾಗಿ ವೈಶಿಷ್ಟ್ಯಪೂರ್ಣ ಸಂಸ್ಕೃತಿಗಳನ್ನೊಳಗೊಂಡಿದೆ. ನಿರಂತರ ಬದಲಾವಣೆಗೊಳಗಾಗುವ ಈ ಸಾಂಸ್ಕೃತಿಕ ಪ್ರಕಾರಗಳು ಕೆಲವೊಮ್ಮೆ ಕರ್ನಾಟಕದ ‘ಒಳಗಿನದ್ದು’ ಮತ್ತು ‘ಹೊರಗಿನದ್ದು’ ಎಂದು ವಿಭಜಿಸಲು ಕಷ್ಟವಾಗುವಂಥವು. ಅಂಥಾ ವೈಶಿಷ್ಟ್ಯಪೂರ್ಣತೆ ಮತ್ತು ಬಹುತ್ವ ನಮ್ಮಲ್ಲಿ ಸಾಂಸ್ಕೃತಿಕ ಸಹಿಷ್ಣುತೆಯನ್ನು ಬೇಡುತ್ತದೆ. ಮೈಸೂರು ದಸರಾ ಈ ಬಹುತ್ವಕ್ಕೆ ಒಂದು ರೂಪಕವಾಗಿ ನಿಲ್ಲಬಲ್ಲುದಾಗಿದೆ.

ಡಾ. ಶಶಿಕಾಂತ್ ಕೌಡೂರ್

(ಸುರತ್ಕಲ್‍ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (NITK) ಮಾನವಿಕ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಶಶಿಕಾಂತ್ ಅವರು ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಹಲವು ಲೇಖನಗಳನ್ನು ಬರೆದಿದ್ದಾರೆ. ಕರ್ನಾಟಕ ಹಾಗೂ ಹಿಂದುಸ್ತಾನೀ ಸಂಗೀತಗಳೆರಡರಲ್ಲೂ ತಕ್ಕಮಟ್ಟಿಗೆ ಪರಿಶ್ರಮ ಇರುವ ಇವರು ಕೆಲವು ನಾಟಕಗಳಿಗೆ ಸಂಗೀತವನ್ನೂ ನಿರ್ದೇಶಿಸಿದ್ದಾರೆ. ಪಂಜೆ ಮಂಗೇಶರಾಯರ ‘ಕೋಟಿ ಚೆನ್ನಯ’ ಇತಿಹಾಸ ಕಥನವನ್ನು ಇಂಗ್ಲಿಷ್‍ಗೆ ಅನುವಾದಿಸಿದ್ದಾರೆ.)


ಇದನ್ನೂ ಓದಿ: ‘ಮಹಿಷಾ ದಸರಾ,’ ಮರೆತ ಇತಿಹಾಸದ ಮರುಶೋಧ: ಡಾ.ಎಚ್.ಡಿ ಉಮಾಶಂಕರ್‌
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...