ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ 2019ಕ್ಕೆ ಹೋಲಿಕೆ ಮಾಡಿದರೆ ಮುಸ್ಲಿಂ ಸಮುದಾಯಕ್ಕೆ ಈ ಬಾರಿ ಕಡಿಮೆ ಪ್ರಾತಿನಿಧ್ಯ ನೀಡಿರುವುದು ಕಂಡು ಬಂದಿದೆ. ಪ್ರಮುಖ ರಾಷ್ಟ್ರೀಯ ಪಕ್ಷ ಬಿಜೆಪಿ ಕೇವಲ ಓರ್ವ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಎನ್‌ಡಿಎ ಮಿತ್ರ ಪಕ್ಷ ಜೆಡಿಯು ಬಿಹಾರದಲ್ಲಿ ಮತ್ತೋರ್ವ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಪ್ರಮುಖ ವಿರೋಧ ಪಕ್ಷಗಳಲ್ಲಿಯೂ ಸಹ ಮುಸ್ಲಿಮರ ಪ್ರಾತಿನಿಧ್ಯ ಕುಸಿದಿದ್ದು, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್‌ಜೆಡಿ, ಎನ್‌ಸಿಪಿ ಮತ್ತು ಸಿಪಿಐ(ಎಂ) ಸೇರಿ ಈ ಬಾರಿ 78 ಮುಸ್ಲಿಂ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದೆ. 2019ಕ್ಕೆ ಹೋಲಿಕೆ ಮಾಡಿದರೆ 37 ಅಂಕಿಗಳು ಈ ಬಾರಿ ಕಡಿಮೆಯಾಗಿದ್ದು, 2019ರಲ್ಲಿ 115 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು.
2019ರಲ್ಲಿ 26 ಮುಸ್ಲಿಂ ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗಿದ್ದರು. ಅವರಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿಯಿಂದ ತಲಾ ನಾಲ್ವರು, ಬಿಎಸ್‌ಪಿ ಮತ್ತು ಎಸ್‌ಪಿಯಿಂದ ತಲಾ ಮೂವರು ಮತ್ತು ಎನ್‌ಸಿಪಿ ಮತ್ತು ಸಿಪಿಐ(ಎಂ)ನಿಂದ ತಲಾ ಒಬ್ಬರು ಆಯ್ಕೆಯಾಗಿದ್ದರು. ಇತರರು ಅಸ್ಸಾಂನ AIUDF, ಲೋಕ ಜನಶಕ್ತಿ ಪಾಸ್ವಾನ್, IUML ಮತ್ತು J&K ನ್ಯಾಷನಲ್ ಕಾನ್ಫರೆನ್ಸ್‌ಗೆ ಸೇರಿದವರಾಗಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ BSP ಪಕ್ಷವು 35 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಇದು ಎಲ್ಲಾ ಪಕ್ಷಗಳಿಗಿಂತ ಅತ್ಯಧಿಕವಾಗಿದೆ. ಇವುಗಳಲ್ಲಿ ಉತ್ತರ ಪ್ರದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 17 ಅಭ್ಯರ್ಥಿಗಳನ್ನು ಬಿಎಸ್ಪಿ ಕಣಕ್ಕಿಳಿಸಿದೆ. ಮಧ್ಯಪ್ರದೇಶದಲ್ಲಿ ನಾಲ್ವರು, ಬಿಹಾರ ಮತ್ತು ದೆಹಲಿಯಲ್ಲಿ ತಲಾ ಮೂವರು, ಉತ್ತರಾಖಂಡದಲ್ಲಿ ಇಬ್ಬರು ಮತ್ತು ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಳ, ಜಾರ್ಖಂಡ್, ತೆಲಂಗಾಣ ಮತ್ತು ಗುಜರಾತ್‌ನಲ್ಲಿ ತಲಾ ಓರ್ವ ಮುಸ್ಲಿ ಅಭ್ಯರ್ಥಿಯನ್ನು ಬಿಎಎಸ್ಪಿ ಕಣಕ್ಕಿಳಿಸಿದೆ.
2019ರಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ ಬಿಎಸ್‌ಪಿ 39 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಅವರಲ್ಲಿ ಮೂವರು ಅಭ್ಯರ್ಥಿಗಳು ಗೆಲುವನ್ನು ಕಂಡಿದ್ದರು. ಈಗ 35 ಮುಸ್ಲಿಂ ಅಭ್ಯರ್ಥಿಗಳು ಬಿಎಸ್ಪಿಯಿಂದ ಕಣದಲ್ಲಿದ್ದು, 2014ಕ್ಕೆ ಹೋಲಿಸಿದರೆ ಮುಸ್ಲಿಂ ಅಭ್ಯರ್ಥಿಗಳ ಅರ್ಧದಷ್ಟು ಅಂದರೆ 61 ಅಭ್ಯರ್ಥಿಗಳನ್ನು ಬಿಎಸ್ಪಿ 2014ರಲ್ಲಿ ಕಣಕ್ಕಿಳಿಸಿತ್ತು. 2014 ರಲ್ಲಿ 503 ಸ್ಥಾನಗಳಲ್ಲಿ ಬಿಎಸ್ಪಿ ಸ್ಪರ್ಧಿಸಿತ್ತು.
ಈ ಬಾರಿ ಯುಪಿಯಲ್ಲಿ ಬಿಎಸ್ಪಿ 17 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, 2019 ರಲ್ಲಿ ಅದು ಉತ್ತರಪ್ರದೇಶದಲ್ಲಿ 6 ಮಂದಿಯನ್ನು ಮಾತ್ರ ಕಣಕ್ಕಿಳಿಸಿತ್ತು, ಆ ವೇಳೆ ಎಸ್ಪಿ ದೊಡ್ಡ ಮಟ್ಟದಲ್ಲಿ ಮುಸ್ಲಿಂ ಮತಬ್ಯಾಂಕ್‌ನ್ನು ಹೊಂದಿತ್ತು. ಕಾಂಗ್ರೆಸ್ ಮತ್ತು ಎಸ್‌ಪಿಯನ್ನು ಒಳಗೊಂಡಿರುವ ಇಂಡಿಯಾ ಮೈತ್ರಿ ಪಕ್ಷಗಳು, ಬಿಎಎಸ್ಪಿ ಈ ಬಾರಿ ಯುಪಿಯಲ್ಲಿ ಬಿಜೆಪಿಗೆ ಸಹಾಯ ಮಾಡಲು ಮತ್ತು ಮುಸ್ಲಿಂ ಮತಗಳನ್ನು ವಿಭಜನೆ ಮಾಡಲು ಹೆಚ್ಚು ಮುಸ್ಲಿ ಅಭ್ಯರ್ಥಿಗಳನ್ನು ಕಾರ್ಯತಂತ್ರವಾಗಿ ಕಣಕ್ಕಿಳಿಸಿದೆ ಎಂದು ಆರೋಪಿಸಿದೆ.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 19 ಮುಸ್ಲಿಂ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ, ಪಶ್ಚಿಮ ಬಂಗಾಳದಲ್ಲಿ ಆರು ಮಂದಿ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ ಮತ್ತು ಯುಪಿಯಲ್ಲಿ ತಲಾ ಇಬ್ಬರನ್ನು ಮತ್ತು ಕರ್ನಾಟಕ, ಕೇರಳ, ಒಡಿಶಾ, ತೆಲಂಗಾಣ ಮತ್ತು ಲಕ್ಷದ್ವೀಪದಲ್ಲಿ ತಲಾ ಓರ್ವ ಮುಸ್ಲಿಂ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. 2019ರಲ್ಲಿ ಕಾಂಗ್ರೆಸ್ 34 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಅದರಲ್ಲಿ 10 ಅಭ್ಯರ್ಥಿಗಳು ಬಂಗಾಳ ಮತ್ತು 8 ಮಂದಿ ಯುಪಿಯಲ್ಲಿ ಕಣದಲ್ಲಿದ್ದರು. ಅವರಲ್ಲಿ ನಾಲ್ವರು ಗೆಲುವನ್ನು ಸಂಸತ್ತಿಗೆ ಪ್ರವೇಶಿಸಿದ್ದರು.
2014ರಲ್ಲಿ ಕಾಂಗ್ರೆಸ್ 464 ಸ್ಥಾನಗಳಲ್ಲಿ ಸ್ಪರ್ಧಿಸಿದಾಗ 31 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅದರಲ್ಲಿ ಕೇವಲ ಮೂವರು ಮಾತ್ರ ಗೆಲುವನ್ನು ಕಂಡಿದ್ದರು. ಟಿಎಂಸಿ ಈ ಬಾರಿ ಮೂರನೇ ಅತಿ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಳಿಸಿದ ಪಕ್ಷವಾಗಿದೆ. ಟಿಎಂಸಿಯ 6 ಅಭ್ಯರ್ಥಿಗಳಲ್ಲಿ ಐವರನ್ನು ತನ್ನ ತವರು ರಾಜ್ಯವಾದ ಬಂಗಾಳದಲ್ಲಿ ಕಣಕ್ಕಿಳಿಸಿದೆ. ಅಸ್ಸಾಂನಲ್ಲಿ ಓರ್ವ ಮುಸ್ಲಿಂ ಅಭ್ಯರ್ಥಿಯನ್ನು ಟಿಎಂಸಿ ಕಣಕ್ಕಿಳಿಸಿದೆ.
2019ರಲ್ಲಿ ಟಿಎಂಸಿ ಪಶ್ಚಿಮ ಬಂಗಾಳ, ಒಡಿಶಾ, ತ್ರಿಪುರ, ಅಸ್ಸಾಂ ಮತ್ತು ಬಿಹಾರ ರಾಜ್ಯಗಳಾದ್ಯಂತ 13 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಅವರಲ್ಲಿ ನಾಲ್ವರು ಗೆದ್ದಿದ್ದಾರೆ. 2014ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ಮೂರು ವರ್ಷಗಳ ನಂತರ ಟಿಎಂಸಿ 24 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಅವರಲ್ಲಿ ಮೂವರು ಗೆಲುವನ್ನು ಕಂಡಿದ್ದರು.
ಉತ್ತರಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ಪ್ರಬಲ ಬೆಂಬಲದ ಹೊರತಾಗಿಯೂ, ಎಸ್‌ಪಿ ಈ ಬಾರಿ ಕೇವಲ ನಾಲ್ಕು ಮುಸ್ಲಿಂ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದೆ. ಇದು 2019ಕ್ಕೆ ಹೋಲಿಕೆ ಮಾಡಿದರೆ ಇದು ಅರ್ಧದಷ್ಟು ಸಂಖ್ಯೆಯಾಗಿದ್ದು, 2019ರಲ್ಲಿ ಎಸ್ಪಿಯಿಂದ ಮೂವರು ಗೆಲುವನ್ನು ಕಂಡಿದ್ದರು. ಈಗ SPಯ ಮುಸ್ಲಿಂ ಅಭ್ಯರ್ಥಿಗಳಲ್ಲಿ ಮೂವರು ಯುಪಿಯಿಂದ ಸ್ಪರ್ಧಿಸಿದ್ದರೆ, ನಾಲ್ಕನೆಯವರು ಆಂಧ್ರಪ್ರದೇಶದಿಂದ ಸ್ಪರ್ಧಿಸುತ್ತಿದ್ದಾರೆ. ಸಮಾಜವಾದಿ ಪಕ್ಷವು 2019ರಲ್ಲಿ ಮಹಾರಾಷ್ಟ್ರದಿಂದ ಮೂವರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಈ ಬಾರಿ ಮಹಾರಾಷ್ಟ್ರದಲ್ಲಿ ಯಾವುದೇ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ, ಎಸ್ಪಿ ನಾಯಕರು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.
ಮುಸ್ಲಿಂ-ಯಾದವ್ ಮತ ಬ್ಯಾಂಕ್ ಹೊಂದಿರುವ ಮತ್ತೊಂದು ಪಕ್ಷವಾದ ಆರ್‌ಜೆಡಿ ಈ ಬಾರಿ ಬಿಹಾರದಲ್ಲಿ ಇಬ್ಬರು ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, 2019ರಲ್ಲಿ ಐವರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅವರಲ್ಲಿ ಯಾರೂ ಗೆಲ್ಲಲಿಲ್ಲ. 2014ರಲ್ಲಿ ಆರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಒಬ್ಬರು ಮಾತ್ರ ಗೆಲುವನ್ನು ಕಂಡಿದ್ದರು.
ಎನ್‌ಸಿಪಿ 2019ರಲ್ಲಿ ಮೂವರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅವರಲ್ಲಿ ಒಬ್ಬರು ಗೆದ್ದಿದ್ದರು. ಈ ಬಾರಿ ಪಕ್ಷ ಎರಡು ಬಣವಾಗಿದ್ದು ಲಕ್ಷದ್ವೀಪದಲ್ಲಿ ತಲಾ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. 2014ರಲ್ಲಿ ಎನ್‌ಸಿಪಿ ಮೂವರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಅವರಲ್ಲಿ ಇಬ್ಬರು ಗೆಲುವನ್ನು ಕಂಡಿದ್ದರು.
2019ರಲ್ಲಿ ಬಿಜೆಪಿ ಸ್ಪರ್ಧಿಸಿದ 436 ಸ್ಥಾನಗಳಲ್ಲಿ ಕೇವಲ ಮೂವರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಅವರಲ್ಲಿ ಯಾರೂ ಗೆಲ್ಲಲಿಲ್ಲ. 2014ರಲ್ಲಿ ಸ್ಪರ್ಧಿಸಿದ 428 ಸ್ಥಾನಗಳಲ್ಲಿ ಬಿಜೆಪಿ 7 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಅವಾಗಲೂ ಯಾರೂ ಗೆದ್ದಿಲ್ಲ. ಈ ಬಾರಿ ಬಿಜೆಪಿ 440 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಓರ್ವ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
CPI ಮತ್ತು CPI(M) ಒಟ್ಟಾಗಿ 2019ರಲ್ಲಿ 13 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಇದರಲ್ಲಿ ಪಶ್ಚಿಮ ಬಂಗಾಳದಲ್ಲಿ 7 ಮತ್ತು ಲಕ್ಷದ್ವೀಪ ಮತ್ತು ಕೇರಳದ ತಲಾ ಓರ್ವ ಅಭ್ಯರ್ಥಿಗಳು ಸೇರಿದ್ದಾರೆ. ಅವರಲ್ಲಿ ಒಬ್ಬರು ಗೆದ್ದಿದ್ದಾರೆ. 2024ರಲ್ಲಿ ಸಿಪಿಐ(ಎಂ) ಬಂಗಾಳದಲ್ಲಿ ಐವರು, ಕೇರಳದಲ್ಲಿ ನಾಲ್ವರು ಮತ್ತು ತೆಲಂಗಾಣದಲ್ಲಿ ಒಬ್ಬರು ಸೇರಿದಂತೆ ಒಟ್ಟು 10 ಮಂದಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಸಣ್ಣ ಪಕ್ಷಗಳಾದ AIMIM, IUML ಮತ್ತು AIUDF ಮೂಲಭೂತವಾಗಿ ಮುಸ್ಲಿಂ ಹಿತಾಸಕ್ತಿಗಳನ್ನು ಹೊಂದಿದ ಪಕ್ಷಗಳಾಗಿದ್ದು, ವಿವಿಧ ರಾಜ್ಯಗಳಾದ್ಯಂತ ಕೆಲವು ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಜಮ್ಮು-ಕಾಶ್ಮೀರವನ್ನು ಹೊರತು ಪಡಿಸಿ ಉತ್ತರಪ್ರದೇಶದಲ್ಲಿ(22), ಪಶ್ಚಿಮ ಬಂಗಾಳದಲ್ಲಿ(17), ಬಿಹಾರದಲ್ಲಿ(7), ಕೇರಳ(6) ಮತ್ತು ಮಧ್ಯಪ್ರದೇಶದಲ್ಲಿ(4) ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲಿನ ವಿಷಯದಲ್ಲಿ ಅತ್ಯಧಿಕವಾಗಿರುವ ಅಸ್ಸಾಂ, ಈ ಬಾರಿ ಮೂವರು ಮಾತ್ರ ಮುಸ್ಲಿಂ ಅಭ್ಯರ್ಥಿಗಳನ್ನು ಹೊಂದಿದ್ದು, ಕಳೆದ ಬಾರಿಗಿಂತಲೂ ಕಡಿಮೆ ಅಭ್ಯರ್ಥಿಗಳನ್ನು ಹೊಂದಿದೆ. ಅಂದರೆ ಕಳೆದ ಬಾರಿ ಅಸ್ಸಾಂನಲ್ಲಿ ನಾಲ್ವರು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಒಟ್ಟಿನಲ್ಲಿ ಕಳೆದ ಲೋಕಸಭೆ ಚುನಾವಣೆಯನ್ನು ಗಮನಿಸಿದಾಗ ಈ ಬಾರಿ ಮುಸ್ಲಿಮರಿಗೆ ರಾಜಕೀಯ ಪಕ್ಷಗಳು ಕಡಿಮೆ ಪ್ರಾತಿನಿಧ್ಯ ನೀಡಿರುವುದು ಕಂಡು ಬಂದಿದೆ.
ಇದನ್ನು ಓದಿ: ಮೋದಿ ಸ್ಪರ್ಧಿಸುವ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಡೆದಿದ್ಯಾ ಅಕ್ರಮ?


