ಗುಂಪು ದಾಳಿಯಿಂದ ತಂದೆಯನ್ನು ರಕ್ಷಿಸಲು ಹೋದ 15 ವರ್ಷದ ಬಾಲಕಿ ಅಲಿಯಾ ಬೇಗಂ ಸ್ವತಃ ದಾಳಿಗೆ ಒಳಗಾಗಿ ಸಾವನ್ನಪ್ಪಿದ ದುರಂತ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಅಂತರಾಮ್ ಗ್ರಾಮದಲ್ಲಿ ನಡೆದಿದೆ.
ಫೆಬ್ರವರಿ 11ರಂದು ಅಲಿಯಾ ಮೇಲೆ ದಾಳಿ ನಡೆದಿದ್ದು, ಫೆಬ್ರವರಿ 15ರಂದು ಅವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಅಲಿಯಾ ಅವರ ತಂದೆ ಮೊಹಮ್ಮದ್ ಇಸ್ಮಾಯಿಲ್ ಅವರು ವೀರಾ ರೆಡ್ಡಿ ಮತ್ತು ವಿಜಯ್ ರೆಡ್ಡಿ ಎಂಬುವರಿಗೆ ಸೇರಿದ ಮನೆಗಳ ಬಳಿ ಮೂತ್ರ ವಿಸರ್ಜಿಸುತ್ತಿದ್ದಾಗ ಕನಿಷ್ಠ 40 ಜನರ ಗುಂಪೊಂದು ಅವರ ಮೇಲೆ ದಾಳಿ ನಡೆಸಿದೆ. ತನ್ನ ತಂದೆಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನೋಡಿದ ಆಲಿಯಾ, ಅವರನ್ನು ರಕ್ಷಿಸಲು ಧಾವಿಸಿದ್ದಾರೆ. ಈ ವೇಳೆ ಆಕೆಯ ಮೇಲೆ ಕಲ್ಲಿನಿಂದ ದಾಳಿ ಮಾಡಲಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಲಿಯಾ ಅವರನ್ನು ಆರಂಭದಲ್ಲಿ ಸ್ಥಳೀಯ ಪೆದ್ದಚೆಲ್ಮೇಡ ಗ್ರಾಮದ ವೈದ್ಯರ ಬಳಿ ಕರೆದೊಯ್ಯಲಾಗಿತ್ತು. ಅವರ ಆರೋಗ್ಯ ತೀರಾ ಹದಗೆಟ್ಟ ನಂತರ, ಬೇರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಆಲಿಯಾ, ಫೆಬ್ರವರಿ 15ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಗಳು ಹೇಳಿವೆ.
ಈ ದುರಂತ ಘಟನೆಯು ಇಡೀ ಗ್ರಾಮವನ್ನೇ ದಿಗ್ಭ್ರಮೆಗೊಳಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ.
ಮೃತ ಆಲಿಯಾ ಅವರ ಕುಟುಂಬಸ್ಥರನ್ನು ಭೇಟಿ ಮಾಡಿರುವ ಶಾಸಕ ಕೌಸರ್ ಮೊಹಿಯುದ್ದೀನ್, “ಈ ಕ್ರೂರ ದಾಳಿಯು ಆಲಿಯಾ ಮತ್ತು ಆಕೆಯ ತಂದೆಯ ಮೇಲೆ ಮಾತ್ರ ನಡೆದ ದಾಳಿಯಲ್ಲ. ಇಡೀ ಮುಸ್ಲಿಂ ಸಮುದಾಯದ ಮೇಲೆ ನಡೆದ ದಾಳಿ” ಎಂದಿದ್ದಾರೆ.
“ಘಟನೆ ಕುರಿತು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು. ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಮೃತಳ ಕುಟುಂಬಕ್ಕೆ ಇಂದಿರಮ್ಮ ವಸತಿ ಯೋಜನೆಯಡಿಯ ಮನೆ ಮತ್ತು ಸರ್ಕಾರಿ ಉದ್ಯೋಗ ಒದಗಿಸಬೇಕು. ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು” ಎಂದು ಮಜ್ಲಿಸ್ ಬಚಾವೋ ತೆಹ್ರೀಕ್‌ನ ಅಮ್ಜದುಲ್ಲಾ ಖಾನ್ ಆಗ್ರಹಿಸಿದ್ದಾರೆ.
ಈ ನಡುವೆ, ವಕೀಲರಾದ ಅಫ್ಸರ್ ಜಹಾನ್, ಸುಜಾತ್ ಮತ್ತು ಇತರರು ಸೇರಿದಂತೆ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಸದಸ್ಯರು ಸಂಗರೆಡ್ಡಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾದ ನಂತರ ಪೊಲೀಸರು ರೆಡ್ಡಿ ಸಹೋದರರು ಸೇರಿದಂತೆ ಇತರ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡದಂತೆ ನೋಡಿಕೊಳ್ಳಲು ಕಾನೂನು ತಂಡವು ಪಬ್ಲಿಕ್ ಪ್ರಾಸಿಕ್ಯೂಟರ್ ಲತೀಫ್ ಉರ್ ರೆಹಮಾನ್ ಅವರನ್ನು ಸಹ ಭೇಟಿ ಮಾಡಿದೆ.
ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕೆಲ ವರದಿಗಳು ಹೇಳಿವೆ. ಆದರೆ, ದಾಳಿಯಲ್ಲಿ ಭಾಗಿಯಾದ ಎಲ್ಲಾ 40 ಜನರನ್ನು ಬಂಧಿಸಬೇಕು ಎಂದು ಅಮ್ಜದುಲ್ಲಾ ಖಾನ್ ಒತ್ತಾಯಿಸಿದ್ದಾರೆ.
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಮುಸ್ಲಿಮರ ಸುರಕ್ಷತೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ಮೇಲೆ ಇಂತಹ ದಾಳಿಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೊಳದ ಮೇಲೆ ಅಕ್ರಮ ಮದರಸಾ ನಿರ್ಮಾಣ ಆರೋಪ: ಭಾರೀ ಪೊಲೀಸ್ ಬಂದೋಬಸ್ತಿನೊಂದಿಗೆ ಸಂಪೂರ್ಣ ಧ್ವಂಸ


