ಗಣಪತಿ ಮೂರ್ತಿ ಬಳಿ ನೈವೇದ್ಯಕ್ಕೆಂದು ಇಡಲಾಗಿದ್ದ ಬಾಳೆಹಣ್ಣನ್ನು ಕೊಂಡೊಯ್ದ ಶಂಕೆಯಲ್ಲಿ ಮುಸ್ಲಿಂ ಯುವಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಅಮಾನುಷವಾಗಿ ಥಳಿಸಲಾಗಿದ್ದು, ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಇಸಾರ್ ಮೊಹಮ್ಮದ್ (26) ಥಳಿತದಿಂದ ಮೃತಪಟ್ಟ ಯುವಕನಾಗಿದ್ದಾನೆ. ಈತ ದೆಹಲಿಯ ಸುಂದರ್ ನಗರಿ ಪ್ರದೇಶದಲ್ಲಿ ವಾಸಿಸುತ್ತಿದ್ದನು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 17 ವರ್ಷದ ಅಪ್ರಾಪ್ತ ಸೇರಿ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ದುಷ್ಕರ್ಮಿಗಳನ್ನು ಕಮಲ್, ಮನೋಜ್, ಯೂನಸ್, ಕಿಶನ್, ಲಕ್ಕಿ ಮತ್ತು ಪಪ್ಪು ಎಂದು ಗುರುತಿಸಲಾಗಿದೆ.
ಸುಂದರ್ ನಗರಿ ಪ್ರದೇಶದ ಜಿ4 ಬ್ಲಾಕ್‌ನಲ್ಲಿ ಗಣೇಶ ಚತುರ್ಥಿ ಆಚರಣೆಗೆ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು. ಕಿರಿದಾದ ಓಣಿಯಲ್ಲಿ ವೇದಿಕೆ ಸಜ್ಜುಗೊಳಿಸಲಾಗಿತ್ತು. ಸೆ.27ರಂದು ಬೆಳಗ್ಗೆ ಗಣಪತಿ ಮೂರ್ತಿಯ ಮುಂದೆ ಇಟ್ಟಿದ್ದ ಬಾಳೆಹಣ್ಣು ಇಸಾರ್ ಎತ್ತಿಕೊಂಡು ಬಂದಿದ್ದ ಎಂದು ಆರೋಪಿಸಿ 8- 10 ಮಂದಿ ಆತನನ್ನು ಹಿಡಿದು ವೇದಿಕೆಯಿಂದ ಕೇವಲ 20 ಅಡಿ ದೂರದಲ್ಲಿರುವ ವಿದ್ಯುತ್ ಕಂಬಕ್ಕೆ ಕಟ್ಟಿ ಸುಮಾರು ಎರಡು ಗಂಟೆಗಳ ಕಾಲ ತೀವ್ರವಾಗಿ ಥಳಿಸಿದ್ದಾರೆ. ಹಲ್ಲೆಯ ವೀಡಿಯೊಗಳನ್ನು ರೆಕಾರ್ಡ್ ಮಾಡಲಾಗಿದೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ವೈರಲ್ ಮಾಡಲಾಗಿದೆ.
G4 ಬ್ಲಾಕ್‌ನ ನಿವಾಸಿಯೊಬ್ಬರು ಈ ಬಗ್ಗೆ ಮಾತನಾಡಿದ್ದು,ಬೆಳಿಗ್ಗೆ 4.30 ರ ಸುಮಾರಿಗೆ ನಾನು ಜೋರಾಗಿ ಕಿರುಚಾಟ ಕೇಳಿ ಎಚ್ಚರಗೊಂಡೆ. ನಾನು ಹೊರಗೆ ಬಂದಾಗ ಜನರ ಗುಂಪೊಂದು ಯಾರನ್ನೋ ಅಮಾನುಷವಾಗಿ ಥಳಿಸುತ್ತಿರುವುದನ್ನು ಕಂಡು ಗಾಬರಿಯಾಯಿತು. ಈ ವೇಳೆ ನೆರೆಹೊರೆಗೆ ಎಚ್ಚರಿಸಿದೆ ಎಂದು ಹೇಳಿದ್ದಾರೆ.
ಇಸಾರ್ ಗಂಭೀರವಾಗಿ ಗಾಯಗೊಂಡು ಚಲಿಸಲು ಸಾಧ್ಯವಾಗಲಿಲ್ಲ. ಅವರನ್ನು ಮನೆಗೆ ಹೇಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದಿಲ್ಲ. ಘಟನೆ ನಡೆದ ಸ್ಥಳದಿಂದ ಕೇವಲ 200 ಮೀಟರ್ ದೂರದಲ್ಲಿ ಇಸಾರ್ ಅವರ ಮನೆ ಇದೆ. ಅಲ್ಲಿ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಇಸಾರ್ ತಂದೆ ವಾಜಿದ್ ಹಣ್ಣು ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಾಲ್ವರು ಪುತ್ರಿಯರಿದ್ದಾರೆ. ಇಸಾರ್ ಅವರ ತಾಯಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು.
ಗಣಪತಿಗೆ ಅರ್ಪಿಸಿದ ಪ್ರಸಾದವನ್ನು ತೆಗೆದುಕೊಂಡಿದ್ದಾನೆಂದು ಅವರು ನನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಾನು ಅರಿತುಕೊಂಡೆ. ಅವರು ನನ್ನ ಮಗನ ಕೈ ಮತ್ತು ಕಾಲುಗಳನ್ನು ಬಿಗಿಯಾಗಿ ಕಟ್ಟಿಹಾಕಿದ್ದಾರೆ. ನೀರು ಕೇಳಿದರೂ ಕೊಡದೆ ಅವರು ಅವನಿಗೆ ಅಮಾನವೀಯವಾಗಿ ಥಳಿಸಿದ್ದಾರೆ. ನಮಗೆ ನ್ಯಾಯ ಬೇಕು. ನಾನು ಹಲವು ಬಾರಿ ಪ್ರಸಾದ ತಿಂದಿದ್ದೇನೆ. ಇಲ್ಲಿನ ಹಿಂದೂ ಬಾಂಧವರು ನನಗೆ ಪ್ರಸಾದ ಕೊಟ್ಟಿದ್ದಾರೆ. ನನ್ನ ಮಗನ ಅಗಲಿಕೆ ನಮ್ಮ ಜೀವನವನ್ನು ಛಿದ್ರಗೊಳಿಸಿದೆ ಎಂದು ಇಸಾರ್ ತಂದೆ ವಾಜಿದ್ ದಿ ವೈರ್ ಜೊತೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ.
ಮತ್ತೊಬ್ಬ ಸ್ಥಳೀಯ ಶ್ಯಾಮ್ ಅವರು ಈ ಬಗ್ಗೆ ಮಾತನಾಡಿದ್ದು, ಇಸಾರ್ ಪರಿಚಿತ, ಕಳ್ಳತನ ಮಾಡಿದ್ದಾನೆಂದು ಅವನನ್ನು ಥಳಿಸಲಾಯಿತು ಎಂದು ಕೆಲವರು ಹೇಳಿಕೊಂಡಿದ್ದಾರೆ. ಅವನು ನಿರಪರಾಧಿ ಎಂದು ನಾನು ಬಲವಾಗಿ ನಂಬುತ್ತೇನೆ. ಅವನು ಇತರರಿಗೆ ಸಹಾಯ ಮಾಡುತ್ತಿದ್ದ ಮತ್ತು ಅವನು ಕಳ್ಳತನ ಈವರೆಗೆ ಮಾಡಿದ ಬಗ್ಗೆ ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿದ್ದಾರೆ.
ಈಶಾನ್ಯ ಡಿಸಿಪಿ ಜಾಯ್ ಎನ್ ಟಿರ್ಕಿ ಈ ಬಗ್ಗೆ ಮಾತನಾಡಿದ್ದು , ಮುಂಜಾನೆ 5 ಗಂಟೆಯ ಸುಮಾರಿಗೆ ಅವರು ಇಸಾರ್‌ನನ್ನು ಹಿಡಿದಿದ್ದಾರೆ. ಕಳ್ಳನೆಂದು ಭಾವಿಸಿ ಆತನಿಗೆ ಪ್ರಶ್ನೆಗಳನ್ನು ಕೇಳಿದರು ಆದರೆ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರಿಂದ ಸರಿಯಾಗಿ ಉತ್ತರಿಸಲು ಸಾಧ್ಯವಾಗಲಿಲ್ಲ. ನಂತರ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ ಎಂದು ಹೇಳಿದ್ದಾರೆ.
ಇಸಾರ್‌ನ ನೆರೆಹೊರೆಯವರು ಮತ್ತು ಕುಟುಂಬದ ಸದಸ್ಯರು ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂಬ ಹೇಳಿಕೆಯನ್ನು ಸುಳ್ಳು ಎಂದು ಹೇಳಿದ್ದಾರೆ.
ನೆರೆಹೊರೆಯವರಾದ ಮೊಹಮ್ಮದ್ ಸಮೀಮ್ ಈ ಕುರಿತು ಮಾತನಾಡಿದ್ದು, ಇಸಾರ್ ಯಾವುದೇ ಮಾನಸಿಕ ಅಸ್ವಸ್ಥ ಯುವಕ ಅಲ್ಲ. ನಾನು ಅವರನ್ನು ಬಹಳ ಸಮಯದಿಂದ ಬಲ್ಲೆ. ಅವರ ಮೇಲಿನ ಕಳ್ಳತನದ ಆರೋಪ ನಿರಾಧಾರ. ಅವರು ಕೇವಲ ಮುಸ್ಲಿಂ ಮತ್ತು ಪ್ರಸಾದ ತೆಗೆದುಕೊಂಡ ಕಾರಣಕ್ಕಾಗಿ ಈ ಕ್ರೌರ್ಯಕ್ಕೆ ಒಳಗಾಗಿ ಹತ್ಯೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಗುಜರಾತ್: ದಲಿತ ಇಂಜಿನಿಯರ್‌ಗೆ ಜಾತಿ ನಿಂದಿಸಿ ಥಳಿತ


