ಗ್ರಾಮದ ಮಾಜಿ ಮುಖ್ಯಸ್ಥ ಮತ್ತು ಆತನ ಇಬ್ಬರು ಸಹಚರರ ವಿರುದ್ಧ ಸಾಮೂಹಿಕ ಅತ್ಯಾಚಾರ ದೂರು ದಾಖಲಿಸಿದ್ದ ಮುಸ್ಲಿಂ ವ್ಯಕ್ತಿಯೊಬ್ಬರ ಶವ ಸುಟ್ಟ ರೀತಿಯಲ್ಲಿ ಗದ್ದೆಯಲ್ಲಿ ಪತ್ತೆಯಾದ ಘಟನೆ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ನಡೆದಿದೆ.
ಪ್ರಕರಣದ ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಯಲಾಗಿದ್ದು, ಮೃತನ ಪತ್ನಿ ಮತ್ತು ಆಕೆಯ ಪ್ರಿಯತಮ ಎನ್ನಲಾದ ಪಕ್ಕದ ಮನೆಯ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೈಯ್ಯುವ ಮೊದಲು ಮಹಿಳೆ ತನ್ನ ಪತಿಗೆ ಮಾದಕ ದ್ರವ್ಯ ನೀಡಿದ್ದರು. ಬಳಿಕ ಆಕೆಯ ಪ್ರಿಯತಮ ಗದ್ದೆಗೆ ಎಳೆದೊಯ್ದು ಪ್ರಜ್ಞೆ ತಪ್ಪಿಸಿ ಸಜೀವ ದಹನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ (ಫೆ.17) ಬೆಳಿಗ್ಗೆ 40 ವರ್ಷದ ಮೊಹಮ್ಮದ್ ಸಾಜಿದ್ ಅವರ ಸುಟ್ಟ ಶವ ಗದ್ದೆಯಲ್ಲಿ ಪತ್ತೆಯಾಗಿತ್ತು. ಅವರ ತಂದೆ ಮರುದಿನ ಪೊಲೀಸ್ ದೂರು ದಾಖಲಿಸಿ, ತನ್ನ ಮಗನನ್ನು ಕೊಂದು ಗುರುತು ಮರೆಮಾಡಲು ದೇಹವನ್ನು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿದ್ದರು.
“ನನ್ನ ಮಗನ ದೇಹವನ್ನು ಗುರುತು ಹಿಡಿಯಲು ಸಾಧ್ಯವಾಗದಂತೆ ಸುಟ್ಟು ಹಾಕಲಾಗಿದೆ. ಆತನ ಪತ್ನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದೆ. ಅತ್ಯಾಚಾರ ಆರೋಪಿ ಗ್ರಾಮದ ಮುಖ್ಯಸ್ಥ ಭೋಲಾ ಯಾದವ್, ನ್ಯಾಯಾಲಯದ ಹೊರಗೆ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದ” ಎಂದು ಸಾಜಿದ್ ತಂದೆ ಆಶಿಕ್ ಅಲಿ ತಮ್ಮ ದೂರಿನಲ್ಲಿ ತಿಳಿಸಿದ್ದರು. ದೂರು ಆಧರಿಸಿ ಪೊಲೀಸರು ಭೋಲಾ ಯಾದವ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು.
ಆದರೆ, ತನಿಖೆ ವೇಳೆ ಸಾಜಿದ್ ಅವರ ಪತ್ನಿ ಮತ್ತು ಆಕೆ ನೆರೆ ಮನೆಯ 30ರ ಹರೆಯದ ಸುಮಿತ್ ಕುಮಾರ್ ಸಾಜಿದ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಬುಧವಾರ (ಫೆ.19) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮೈನ್‌ಪುರಿ ಎಸ್‌ಪಿ ಗಣೇಶ್ ಪ್ರಸಾದ್ ಸಹಾ ಅವರು “ಬಿಚುವಾ ಪೊಲೀಸ್ ಠಾಣೆ ವ್ಯಾಪ್ತಿಯ ಹೊಲವೊಂದರಲ್ಲಿ ಸುಟ್ಟ ಮೃತದೇಹ ಪತ್ತೆಯಾಗಿರುವ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ತಲುಪಿದಾಗ, ಆ ಶವ ಸಾಜಿದ್ ಅವರದ್ದು ಎಂದು ಗೊತ್ತಾಯಿತು. ನಾವು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆವು. ಸಾಜಿದ್ ಅವರ ಕುಟುಂಬಸ್ಥರು ಭೋಲಾ ಯಾದವ್ ಮತ್ತು ಅವರ ಸಹಚರರು ಕೊಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು” ಎಂದು ತಿಳಿಸಿದ್ದಾರೆ.
“ಪ್ರಕರಣದ ತನಿಖೆಗಾಗಿ ತಂಡ ರಚಿಸಿದ್ದೆವು. ತನಿಖೆ ವ್ಯವಸ್ಥಿತವಾಗಿ ನಡೆದು ಹಂತ ಹಂತವಾಗಿ ಪ್ರಕರಣದ ಹಿನ್ನೆಲೆ ಬಹಿರಂಗಗೊಂಡಿದೆ. ಮೃತನ ಪತ್ನಿ ಹಲವು ದಿನಗಳಿಂದ ನೆರೆ ಮನೆಯ ಸುಮಿತ್ ಕುಮಾರ್ ಜೊತೆ ಸಂಪರ್ಕದಲ್ಲಿದ್ದರು. ಅವರ ಸಂಬಂಧಕ್ಕೆ ಅಡ್ಡಿಯಾದ ಪತಿ ಸಾಜಿದ್ ಅವರನ್ನು ಕೊಲೆ ಮಾಡಲು ಇಬ್ಬರು ಸಂಚು ಹೂಡಿದ್ದರು. ಆರಂಭದಲ್ಲಿ ಮಹಿಳೆ ತನ್ನ ಪತಿಗೆ ಮಾದಕ ದ್ರವ್ಯ ನೀಡಿದ್ದರು. ನಂತರ ಸುಮಿತ್ ಗದ್ದೆಗೆ ಎಳೆದೊಯ್ದು ತಲೆಗೆ ಸ್ಫ್ಯಾನರ್‌ನಿಂದ ಸಾಜಿದ್ ತಲೆಗೆ ಹೊಡೆದು ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿದ್ದಾರೆ” ಎಂದು ಗಣೇಶ್ ಪ್ರಸಾದ್ ಹೇಳಿದ್ದಾರೆ.
“ಗ್ರಾಮದ ಮಾಜಿ ಮುಖ್ಯಸ್ಥ ಭೋಲಾ ಯಾದವ್ ವಿರುದ್ದ ಸಾಜಿದ್ ಅತ್ಯಾಚಾರ ದೂರು ದಾಖಲಿಸಿದ್ದರು. ಹಾಗಾಗಿ, ಕೊಲೆ ಪ್ರಕರಣವನ್ನು ಯಾದವ್ ಮತ್ತು ಅವರ ಸಹಚರರ ತಲೆಗೆ ಕಟ್ಟಬಹುದು ಎಂದು ಆರೋಪಿಗಳು ಯೋಚಿಸಿದ್ದರು. ಆದರೆ, ಅವರ ಸಂಚು ವಿಫಲವಾಗಿದೆ” ಎಂದು ತಿಳಿಸಿದ್ದಾರೆ.
“ಪೊಲೀಸ್ ತಂಡ ಶ್ರದ್ಧೆಯಿಂದ ಕೆಲಸ ಮಾಡಿ 24 ಗಂಟೆಯೊಳಗೆ ಪ್ರಕರಣವನ್ನು ಬೇಧಿಸಿದೆ. ಆರೋಪಿಗಳಿಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಕೊಲೆಗೆ ಬಳಸಲಾದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಹಿಳೆ ಮತ್ತು ಸುಮಿತ್ ನಡುವಿನ ಕಾಲ್ ಡೀಟೇಲ್ಸ್ ವಿಶ್ಲೇಷಣೆಯು ಪೊಲೀಸರ ತನಿಖೆಗೆ ಸಹಾಯ ಮಾಡಿತು. ವಿಚಾರಣೆಯ ಸಮಯದಲ್ಲಿ ಸುಮಿತ್ ಮತ್ತು ಮಹಿಳೆ ಒಟ್ಟಾಗಿ ಸಾಜಿದ್ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
“ಭೋಲಾ ಯಾದವ್ ವಿರುದ್ದ ಸಾಜಿದ್ ದೂರು ದಾಖಲಿಸಿದ್ದರಿಂದ ಆತನೇ ಕೊಲೆ ಮಾಡಿಸಿರಬಹುದು ಎಂದು ನನ್ನ ತಂದೆ ದೂರು ಕೊಟ್ಟಿದ್ದರು. ಆದರೆ, ಪೊಲೀಸರ ತನಿಖೆಯಲ್ಲಿ ಅತ್ತಿಗೆ ಮತ್ತು ಪಕ್ಕದ ಮನೆಯ ಸುಮಿತ್ ಕುಮಾರ್ ಕೊಲೆ ಮಾಡಿಸಿರುವುದು ಗೊತ್ತಾಗಿದೆ. ಪೊಲೀಸರ ತನಿಖೆಯಲ್ಲಿ ನಮಗೆ ತೃಪ್ತಿಯಿದೆ. ಸುಮಿತ್ ನನ್ನ ಅಣ್ಣನಿಗೆ ಪರಿಚಯಸ್ಥನಾಗಿದ್ದ. ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿದ್ದ. ಈ ವೇಳೆ ಅತ್ತಿಗೆ ಜೊತೆ ಸಂಪರ್ಕ ಬೆಳೆಸಿರಬಹುದು” ಎಂದು ಮೃತ ಸಾಜಿದ್‌ನ ಸಹೋದರ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಅಸ್ಸಾಂ| 44 ದಿನಗಳ ನಂತರ ಗಣಿಯಿಂದ 5 ಕಾರ್ಮಿಕರ ಶವ ಹೊರತೆಗೆದ ಭದ್ರತಾ ಸಿಬ್ಬಂದಿ


