ಕೇಂದ್ರ ಸರ್ಕಾರದ ವಿವಾದಾತ್ಮಕ ವಕ್ಫ್ ಕಾನೂನಿನ ವಿರುದ್ಧ ನಿರ್ಣಯ ಅಂಗೀಕರಿಸುವಂತೆ ರಾಜ್ಯ ಸರ್ಕಾರವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಆಗ್ರಹಿಸಿದೆ.
ಬೆಂಗಳೂರಿನ ಶಾಸಕರ ಭವನದಲ್ಲಿ ಸೋಮವಾರ (ಜೂ.24) ಜರುಗಿದ ಸಮಾಲೋಚನಾ ಸಭೆಯಲ್ಲಿ, ರಾಜ್ಯದ ವಿವಿಧ ಸಾಮಾಜಿಕ ಸಂಘಟನೆಗಳು, ಧಾರ್ಮಿಕ ಸಮುದಾಯಗಳ ಸಂಸ್ಥೆಗಳು ಹಾಗೂ ಪ್ರಮುಖ ಗಣ್ಯರು ಭಾಗವಹಿಸಿ, ಸರ್ವಾನುಮತದಿಂದ ಕೆಲವು ನಿರ್ಣಯಗಳನ್ನು ಘೋಷಿಸಿದರು.
“ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿರುವ ವಿವಾದಾತ್ಮಕ ವಕ್ಫ್ ತಿದ್ದುಪಡಿ ಕಾಯ್ದೆಗಳು ಕೇವಲ ಭೇದಭಾವ ಹಾಗೂ ವಿಭಜಕ ಸ್ವರೂಪದ್ದಾಗಿಲ್ಲದೆ, ಭಾರತ ಸಂವಿಧಾನದ ಮೂಲಭೂತ ಆಶಯಗಳಿಗೆ ನೇರವಾಗಿ ವಿರುದ್ಧವಾಗಿವೆ. ಈ ತಿದ್ದುಪಡಿಗಳು ಭಾರತ ಸಂವಿಧಾನದ ಮೂಲಭೂತ ಹಕ್ಕುಗಳಾದ ಕಲಂ 34, 25, 26, 29 ಮತ್ತು 30 ನ್ನು ಸ್ಪಷ್ಟವಾಗಿ ಅತಿಕ್ರಮಿಸುತ್ತವೆ” ಎಂದು ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
“ಈ ತಿದ್ದುಪಡಿಗಳು ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿಗಳಿಂದ, ಹಿಂದೂ, ಸಿಖ್, ಕ್ರಿಶ್ಚಿಯನ್ ಮತ್ತು ಬೌದ್ಧ ಮುಂತಾದ ಇತರೆ ಧಾರ್ಮಿಕ ಸಮುದಾಯಗಳ ದತ್ತಿ ಆಸ್ತಿಗಳಿಗೆ ನೀಡಿರುವ ಸಂರಕ್ಷಣೆಯನ್ನು ವಂಚಿಸುತ್ತವೆ. ಇದು ಸ್ಪಷ್ಟವಾದ ತಾರತಮ್ಯವನ್ನು ಪ್ರದರ್ಶಿಸುತ್ತದೆ. ಇವು ಮುಸ್ಲಿಮರಿಂದ ಅವರ ಧಾರ್ಮಿಕ ಸ್ವಾತಂತ್ರ್ಯ (ಕಲಂ 25) ಹಾಗೂ ತಮ್ಮ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ವ್ಯವಸ್ಥಾಪನೆ ಮತ್ತು ಆಡಳಿತದ ಹಕ್ಕನ್ನು (ಕಲಂ 26 ಮತ್ತು 29) ಹರಣ ಮಾಡುತ್ತವೆ” ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
“ಯಾವುದೇ ಮುಸ್ಲಿಂ ವ್ಯಕ್ತಿಯು ತನ್ನ ವೈಯಕ್ತಿಕ ಆಸ್ತಿಯನ್ನು ವಕ್ಫ್‌ಗೆ ಸಮರ್ಪಿಸಲು ಹೊಂದಿರುವ ಧಾರ್ಮಿಕ ಮತ್ತು ಸಾಂವಿಧಾನಿಕ ಸ್ವಾತಂತ್ರ್ಯವನ್ನು ಈ ತಿದ್ದುಪಡಿ ಕ್ಷೀಣಗೊಳಿಸುತ್ತದೆ. ವಿಶೇಷವಾಗಿ, ಆ ವ್ಯಕ್ತಿ ನಿರಂತರ ಐದು ವರ್ಷಗಳ ಕಾಲ ‘ನಿಷ್ಠಾವಂತ ಮುಸ್ಲಿಂ’ ಆಗಿರಬೇಕು ಎಂಬ ಷರತ್ತನ್ನು ವಿಧಿಸುತ್ತದೆ” ಎಂಬುದನ್ನು ನಿರ್ಣಯದಲ್ಲಿ ವಿರೋಧಿಸಲಾಗದೆ.
“ಯಾವುದೇ ವಕ್ಫ್ ಆಸ್ತಿಯ ಮೇಲೆ ಸರ್ಕಾರದ ಹಕ್ಕು ಅಥವಾ ಮಾಲೀಕತ್ವದ ಕುರಿತು ವಿವಾದವಿದ್ದಲ್ಲಿ, ಈ ತಿದ್ದುಪಡಿಯ ನಂತರ ಆ ಆಸ್ತಿಯು ಸರ್ಕಾರದ ಅಧೀನವಾಗುತ್ತದೆ. ಏಕೆಂದರೆ, ಅಂತಹ ವಿವಾದದ ನಿರ್ಣಯವನ್ನು ವಕ್ಫ್ ಮಂಡಳಿ ನಿರ್ಧರಿಸುವ ಬದಲಿಗೆ ಸರ್ಕಾರದ ನಿಯುಕ್ತ ಅಧಿಕಾರಿ ನಿರ್ಧರಿಸುತ್ತಾನೆ. ವಕ್ಫ್ ಮಂಡಳಿ ಹಾಗೂ ಕೇಂದ ವಕ್ಫ್ ಕೌನ್ಸಿಲ್‌ನ ಸದಸ್ಯತ್ವಕ್ಕೆ ಮುಸ್ಲಿಮನಾಗಿರಬೇಕೆಂಬ ಷರತ್ತನ್ನು ಈಗ ರದ್ದುಪಡಿಸಲಾಗಿದೆ. ಇದಲ್ಲದೆ, ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ಚುನಾವಣಾ ಪ್ರಕ್ರಿಯೆಯನ್ನು ನಾಮನಿರ್ದೇಶನದಿಂದ ಬದಲಾಯಿಸಲಾಗಿದೆ” ಎಂದು ನಿರ್ಣಯದಲ್ಲಿ ವಿವರಿಸಲಾಗಿದೆ.
‘ಬಳಕೆಯಿಂದ ವಕ್ಫ್ ಆಸ್ತಿಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು. ಅಂತಹ ಆಸ್ತಿಗಳ ಕುರಿತು ಯಾವುದೇ ವಿವಾದವೆದ್ದರೆ, ಆ ಆಸ್ತಿಗಳು ತಮ್ಮ ವಕ್ಫ್ ಸ್ಥಾನಮಾನವನ್ನು ಕಳೆದುಕೊಳ್ಳುತ್ತವೆ ಎಂಬ ತಿದ್ದುಪಡಿಗಳ ಅನ್ವಯ, ಯಾವುದೇ ಅನಿವಾಸಿ ಮುಸ್ಲಿಂ ತನ್ನ ವೈಯಕ್ತಿಕ ಆಸ್ತಿಯನ್ನು ವಕ್ಫ್ ಗೆ ಸಮರ್ಪಿಸಲು ಅವಕಾಶವಿರುವುದಿಲ್ಲ. ವಕ್ಫ್ ಕಾಯ್ದೆ 2025, ಮುಸ್ಲಿಮರಿಗೆ ತಮ್ಮ ಸಂಸ್ಥೆಗಳನ್ನು ಸ್ಥಾಪಿಸಲು, ನಿರ್ವಹಿಸಲು ಮತ್ತು ಆಡಳಿತ ನಡೆಸಲು ಇರುವ
ಮೂಲಭೂತ ಸಾಂವಿಧಾನಿಕ ಹಕ್ಕಿನ ಮೇಲೆ ನಿರ್ಬಂಧ ಹೇರುವಂತಿದೆ” ಎಂದು ನಿರ್ಣಯದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

“ನಾವು ಎಲ್ಲರೂ ಈ ವಿವಾದಾತ್ಮಕ ತಿದ್ದುಪಡಿಗಳನ್ನು ನಿರ್ದಿಷ್ಟವಾಗಿ ತಿರಸ್ಕರಿಸುತ್ತೇವೆ. ಸರ್ಕಾರವು ಇವುಗಳನ್ನು ಹಿಂತೆಗೆದುಕೊಂಡು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ತತ್ತ್ವಗಳನ್ನು ಗೌರವಿಸಬೇಕೆಂದು ದೃಢವಾಗಿ ಆಗ್ರಹಿಸುತ್ತೇವೆ” ಎಂದು ಒತ್ತಾಯಿಸಿದ್ದಾರೆ.
“ಇದಲ್ಲದೆ, ಕರ್ನಾಟಕ ರಾಜ್ಯ ಸರ್ಕಾರವೂ ಈ ವಿವಾದಾತ್ಮಕ ಕಾನೂನಿನ ವಿರುದ್ಧ ನಿರ್ಣಯವನ್ನು ಅಂಗೀಕರಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಜೊತೆಗೆ, ಈ ವಿವಾದಾತ್ಮಕ ಕಾಯ್ದೆಯ ವಿರುದ್ಧ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದ ಅಂತಿಮ ತೀರ್ಪು ಹೊರಬೀಳುವವರೆಗೆ, ಈ ಕಾಯ್ದೆಯ ಜಾರಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಬೇಕೆಂದು ನಾವು ಆಗ್ರಹಿಸುತ್ತೇವೆ” ಎಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.
Latest Update | ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್: ಮೂವರು ಸಾವು


