‘ಭಾರತದ ಮುಸ್ಲಿಮರು, ದೇಶದಲ್ಲಿ ಕೋಮು ಸಾಮರಸ್ಯಕ್ಕಾಗಿ ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು’ ಎಂದು ಜಮಾಅತೆ-ಇ-ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ ಅವರು ಒತ್ತಾಯಿಸಿದರು.
ಕೋಮು ಸಾಮರಸ್ಯ ಇಲಾಖೆಯು ಆಯೋಜಿಸಿದ್ದ ‘ಅಖಿಲ ಭಾರತ ಕೋಮು ಸಾಮರಸ್ಯ ಸಂಯೋಜಕರ ಸಭೆ’ ಎಂಬ ಎರಡು ದಿನಗಳ ಕಾರ್ಯಕ್ರಮದಲ್ಲಿ ಹುಸೈನಿ ಮಾತನಾಡಿದರು. ದೇಶದಾದ್ಯಂತ ಸುಮಾರು 20 ರಾಜ್ಯಗಳಿಂದ ಕೋಮು ಸಾಮರಸ್ಯಕ್ಕಾಗಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು. ವಿವಿಧ ರಾಜ್ಯಗಳಲ್ಲಿನ ಕೋಮು ಸಾಮರಸ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು, ಇಲ್ಲಿಯವರೆಗೆ ನಡೆಸಲಾದ ಕೆಲಸವನ್ನು ಪರಿಶೀಲಿಸುವುದು ಮತ್ತು ಭವಿಷ್ಯದ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡುವುದು ಸಭೆಯ ಉದ್ದೇಶವಾಗಿತ್ತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೋಮು ಸಾಮರಸ್ಯಕ್ಕಾಗಿ ನಾವು ಮಾಡುವ ಕೆಲಸವು ತಾತ್ಕಾಲಿಕವಲ್ಲ. ಆದರೆ, ಶಾಶ್ವತ ಸ್ವರೂಪದ್ದಾಗಿದೆ ಎಂದು ಜಮಾಅತ್ ಮುಖ್ಯಸ್ಥರು ಹೇಳಿದರು. “ಇಸ್ಲಾಂ, ಜನರ ನಡುವಿನ ಸಂಬಂಧಗಳನ್ನು ಸರಿಪಡಿಸುವುದು ಮತ್ತು ಅವರನ್ನು ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡುವುದರ ಮೇಲೆ ಸ್ಥಾಪಿತವಾಗಿದೆ. ಕುರಾನ್ ಇದಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಪ್ರವಾದಿ ಮುಹಮ್ಮದ್ ತಮ್ಮ ಇಡೀ ಜೀವನವನ್ನು ಈ ಕಾರಣಕ್ಕಾಗಿ ಮುಡಿಪಾಗಿಟ್ಟರು” ಎಂದು ಅವರು ಹೇಳಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಟಿ. ಆರಿಫ್ ಅಲಿ ಮಾತನಾಡಿ, “ಕೋಮು ಸಾಮರಸ್ಯಕ್ಕಾಗಿ ಪ್ರಯತ್ನಗಳು ಸನ್ನಿವೇಶದ ಒತ್ತಡಕ್ಕೆ ಪ್ರತಿಕ್ರಿಯೆಯಲ್ಲ, ಬದಲಾಗಿ ಜವಾಬ್ದಾರಿಯಾಗಿದೆ. ನಮ್ಮ ಒfರಯತ್ನಗಳು ಯಾವಾಗಲೂ ಜಮಾಅತೆ-ಇ-ಇಸ್ಲಾಮಿ ಹಿಂದ್‌ನ ನೀತಿಯ ಭಾಗವಾಗಿದೆ. ದೇವರ ಸೃಷ್ಟಿಯ ಪ್ರತಿಯೊಂದು ಅಂಶದಲ್ಲೂ ಸಾಮರಸ್ಯ ಇರುವಂತೆಯೇ, ಮಾನವರ ನಡುವೆ ಸಾಮರಸ್ಯವೂ ಅತ್ಯಗತ್ಯ” ಎಂದು ಅವರು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ, ಸ್ವಾಮಿ ಸರ್ವಲೋಕ್ ಆನಂದ್ ಜಿ ಮಹಾರಾಜ್ ಅವರು ಕೋಮು ಸಾಮರಸ್ಯಕ್ಕಾಗಿ ಅಂತರಧರ್ಮೀಯ ಸಂವಾದದ ಮಹತ್ವದ ಕುರಿತು ಮಾತನಾಡಿದರು. “ಜನರು ತಮ್ಮ ಸ್ವಂತ ನಂಬಿಕೆಗಳನ್ನು ಮತ್ತು ಇತರರ ನಂಬಿಕೆಗಳನ್ನು ಅರ್ಥಮಾಡಿಕೊಂಡು ಗೌರವಿಸಬೇಕು” ಎಂದರು.
ಗ್ಯಾನಿ ಮಂಗಲ್ ಸಿಂಗ್ ಅವರು, ಎಲ್ಲಾ ಸಮುದಾಯಗಳ ನಡುವೆ ಸೇತುವೆಗಳನ್ನು ನಿರ್ಮಿಸುವ ಮಹತ್ವದ ಕುರಿತು ಮಾತನಾಡಿದರು. ಜನರಿಗೆ ನಿಸ್ವಾರ್ಥ ಸೇವೆಯು ಇದನ್ನು ಸಾಧಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಹೇಳಿದರು.
ಜಮಾಅತೆ-ಇ-ಇಸ್ಲಾಮಿ ಹಿಂದ್‌ನ ರಾಷ್ಟ್ರೀಯ ಕಾರ್ಯದರ್ಶಿ ಶೈಸ್ತಾ ರಿಫತ್ ಅವರು ‘ಕೋಮು ಸಾಮರಸ್ಯದಲ್ಲಿ ಮಹಿಳೆಯರ ಪಾತ್ರ’ದ ಕುರಿತು ಮಾತನಾಡಿದರು. “ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರನ್ನು (ಮಹಿಳೆಯರು) ಈ ಪ್ರಯತ್ನದಿಂದ ಹೊರಗಿಡಲು ಸಾಧ್ಯವಿಲ್ಲ. ಮಹಿಳೆಯರು ಮುಂದೆ ಬಂದು ಸಕ್ರಿಯ ಪಾತ್ರ ವಹಿಸಬೇಕು. ಈ ನಿಟ್ಟಿನಲ್ಲಿ ಸಮಾಜ ಮತ್ತು ರಾಷ್ಟ್ರವು ಅವರಿಗೆ ಗರಿಷ್ಠ ಅವಕಾಶಗಳನ್ನು ಒದಗಿಸಬೇಕು” ಎಂದು ಅವರು ಹೇಳಿದರು.
ಕಾರ್ಯಕ್ರಮದ ಸಮಯದಲ್ಲಿ, ಧರಮಿಕ್ ಜನ ಮೋರ್ಚಾ ಮತ್ತು ಸದ್ಭಾವನಾ ಮಂಚ್ ಅನ್ನು ದೇಶಾದ್ಯಂತ ಹೆಚ್ಚು ಸಕ್ರಿಯ ಮತ್ತು ಪರಿಣಾಮಕಾರಿಯಾಗಿಸಲು ವಿವಿಧ ವಿಚಾರಗಳ ಕುರಿತು ಭಾಗವಹಿಸುವವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಜಮಾತೆ-ಇ-ಇಸ್ಲಾಮಿ ಹಿಂದ್‌ನ ಉಪಾಧ್ಯಕ್ಷ ಪ್ರೊ. ಸಲೀಂ ಎಂಜಿನಿಯರ್, ಕಾರ್ಯಕರ್ತರು ಆತ್ಮವಿಶ್ವಾಸದಿಂದ ಮತ್ತು ತಾರತಮ್ಯವಿಲ್ಲದೆ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.


