ಮತ್ತೆ ಫೆಬ್ರವರಿ ತಿಂಗಳು. 2004ರ ಇದೇ ತಿಂಗಳ ಮೂರನೆಯ ತಾರೀಕು ಅವರು ನಮ್ಮನ್ನು ಬಿಟ್ಟು ಹೋದ ದಿನ ಮತ್ತು 13 ಅವರು ಹುಟ್ಟಿದ ದಿನ. ಹುಟ್ಟು ಸಾವು ನಿಸರ್ಗದಲ್ಲಿ ಒಂದು ಸಹಜ ಪ್ರಕ್ರಿಯೆ. ಆದರೆ ಬದುಕಿಗೆ ಸಾರ್ಥಕತೆ ತಂದುಕೊಳ್ಳಲೆಂದು ಜೀವನ ನಡೆಸುವವರು ಕೆಲವರು. ಅವರೊಳಗೆ ನನ್ನ ಪಪ್ಪ ಕೂಡ ಒಬ್ಬರು. ನನಗೆ ಸಿಕ್ಕ ಒಂದು ಅದ್ಭುತ ಜಗತ್ತು ಅವರು. ನನ್ನ ಬದುಕಿನ ಒಂದು ಅಪರೂಪದ ಅನುಭವ ಅವರಾಗಿದ್ದರು.
ನನಗೆ ಗೊತ್ತಾಗದಂತೆಯೇ ಅವರು ನನ್ನನ್ನು ಆವರಿಸಿಕೊಂಡುಬಿಟ್ಟಿದ್ದರು ಅನ್ನಿಸುತ್ತೆ. ಎಷ್ಟರ ಮಟ್ಟಿಗೆ ಎಂದರೆ ನನಗಾಗ ಎರಡು ಮೂರು ವರ್ಷ ಇರಬಹುದು. ನಾನು ಅವರ ಹಾಗೇ ಕೈ ಹಿಂದೆ ಕೈಕಟ್ಟಿಕೊಂಡು ನಡೆಯುತ್ತಿದ್ದನಂತೆ. ಅವರ ಒಡನಾಡಿಗಳಾಗಿದ್ದ ಪ್ರೊ. ರವಿವರ್ಮ ಕುಮಾರ್ ಮತ್ತು ನ್ಯಾಯಾಧೀಶರಾಗಿದ್ದ ಶ್ರೀ. ಎಸ್. ಆರ್.ನಾಯಕರು ನಾನು ಪಪ್ಪನ ರೀತಿ ನಡೆಯುತ್ತಿದ್ದನ್ನು ನೋಡಿ ಎಲ್ಲರಿಗೂ ತೋರಿಸುತ್ತಾ ಖುಷಿ ಪಡುತ್ತಿದ್ದರಂತೆ. ಅಮ್ಮ ಆಗಾಗ ಈ ವಿಷಯ ಹೇಳುತ್ತಲೇ ಇರುತ್ತಿದ್ದರು.
ನನ್ನನ್ನು ಅತೀ ಹೆಚ್ಚು ಪ್ರೇರೇಪಿಸಿದ ವ್ಯಕ್ತಿ ಅವರು. ನಾನು ಅತಿ ಹೆಚ್ಚು ಪ್ರೀತಿಸಿದ ಮತ್ತು ಪ್ರೀತಿಸುವ ವ್ಯಕ್ತಿ ಅವರು. ನಾನು ಮಾಡುತ್ತಿದ್ದ ಚಿಕ್ಕಪುಟ್ಟ ಸಾಧನೆಗಳಿಗೆ ಅವರಿಂದ ಮನ್ನಣೆ ಸಿಕ್ಕಿತೆಂದರೆ ಜಗತ್ತೇ ಗೆದ್ದ ಖುಷಿ ಆಗುತ್ತಿತ್ತು.
ಅನೇಕ ಹಾರ್ಡ್‌ಕೋರ್ ಚಳವಳಿಗಾರರಿಗೆ ಮೊದಲ ವಿರೋಧಿ ತಮ್ಮ ಕುಟುಂಬದವರೇ ಆಗಿರುತ್ತಾರೆ. ಅವರು ಕುಟುಂಬಕ್ಕೆ ಹೆಚ್ಚು ಗಮನ ಕೊಡುತ್ತಿಲ್ಲವೆಂಬ ಕಾರಣಕ್ಕೆ. ನಮ್ಮ ಕುಟುಂಬವೂ ಇದಕ್ಕೆ ಹೊರತಾಗಿರಲಿಲ್ಲ. ಆಗಾಗ ವಾದ-ವಿವಾದಗಳು ನಡೆಯುತ್ತಲೇ ಇರುತ್ತಿದ್ದವು. ಅದೆಲ್ಲದರ ನಡುವೆಯೂ ನಮ್ಮ ಜೊತೆ ಖುಷಿಯಾಗಿ ಕಾಲ ಕಳೆದದ್ದು, ನಮಗೆ ಕನ್ನಡ ವ್ಯಾಕರಣ ಹೇಳಿಕೊಡುತ್ತಿದ್ದುದು, ಅಮ್ಮನಿಗೆ ಕ್ರೋಷಾ ಎಣಿಸುವಾಗ ಕೈಜೋಡಿಸುತ್ತಿದ್ದುದು, ತಾನು ಜರ್ಮನಿಯಿಂದ ತಂದ ಮಿಕ್ಸರ್‌ಅನ್ನು ಹೊರಗೆ ರಿಪೇರಿಗೆ ಕೊಡದೆ ತಾನೆ ಜೋಪಾನವಾಗಿ ರಿಪೇರಿ ಮಾಡುತ್ತಿದ್ದದ್ದು, ನಮಗೆ ಒಂದಗಳೂ ಬಿಡದಂತೆ ಊಟ ಮಾಡಲು ಹೇಳಿಕೊಡುತ್ತಿದ್ದದ್ದು, ಮಗ್ಗಿ ಕಲಿಯಿರಿ..ಮಗ್ಗಿ ಕಲಿಯಿರಿ.. ಅಂತ ಕೆನಡಾದಿಂದ, ಸ್ಜಿಜರ್‌ಲ್ಯಾಂಡನಿಂದ ಪೋಸ್ಟ್ ಕಾರ್ಡ್ ಕಳಿಸುತ್ತಿದ್ದುದು.. ತಮ್ಮ ಕಾರಿಗೆ ಹಾಕುತ್ತಿದ್ದ ರೈತ ಸಂಘದ ಬಾವುಟದ ನೇಗಿಲನ್ನೂ ಪೇಯಿಂಟ್ ಮಾಡುತ್ತಿದ್ದುದು.. ಹೀಗೆ ಅವರು ನಮ್ಮೊಡನೆ ಕಳೆಯುತ್ತಿದ್ದ ಕಾಲ ಅತ್ಯಮೂಲ್ಯವಾದದ್ದು. ಹಾಗಾಗಿಯೇ ಅವರು ನನಗೆ ಸಿಕ್ಕಿದ್ದು ಕೇವಲ ಇಪ್ಪತ್ತೆರಡು ವರ್ಷವಾದರೂ ಅವರು ನನ್ನೊಂದಿಗೆ ಇದ್ದಷ್ಟು ಕಾಲ ಪ್ರಭಾವಿಸಿದ್ದು ಇಂದಿಗೂ ನನಗೆ ಪ್ರಸ್ತುತ ಅನ್ನಿಸುವುದು.
ಪಪ್ಪನಿಗೆ 1980ರಲ್ಲಿ ರೈತ ಹೋರಾಟ ಮತ್ತು ಬದುಕಿನ ಹೋರಾಟ ಒಟ್ಟಿಗೇ ಶುರುವಾದವು. ಪಪ್ಪ ನಾಸ್ತಿಕವಾದಿಯಾದರೆ ಅಮ್ಮನಿಗೆ ಆಧ್ಯಾತ್ಮದ ಕಡೆಗೆ ಒಲವು. ಮೊದಮೊದಲು ಪಪ್ಪ ಜನರಿಗೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂಬ ಗ್ರಹಿಕೆ ಬಿಟ್ಟರೆ ಅಮ್ಮನಿಗೆ ಬೇರೇನೂ ಗೊತ್ತಾಗುತ್ತಿರಲಿಲ್ಲವಂತೆ. ಆ ಸಾಮಾನ್ಯ ಗ್ರಹಿಕೆಯಿಂದಲೇ ಅಮ್ಮ ಪಪ್ಪನ ಬೆನ್ನೆಲುಬಾಗಿದ್ದರು. ಚಳವಳಿ ಉತ್ತುಂಗಕ್ಕೆ ಹೋದಂತೆ ಅಮ್ಮ ಪೊಲೀಸರ ದಿಕ್ಕು ತಪ್ಪಿಸುವಷ್ಟು ಪ್ರಬುದ್ಧರಾಗಿಹೋಗಿದ್ದರು.
ಯಾವ ಅಧಿಕಾರ, ಸ್ಥಾನ-ಮಾನಗಳಿಗೂ ದುಂಬಾಲು ಬೀಳದೇ ತಾನು ನಂಬಿದ ಮತ್ತು ಪ್ರತಿಪಾದಿಸುತ್ತಿದ್ದ ವಿಚಾರಗಳನ್ನು ನಡೆಯುತ್ತಾ ನಡೆಸಿದ ಬದುಕೇ ನಮಗೆ ಮಾದರಿ.
ಯಾರಿಗೆ ಫೋನ್ ಮಾಡಿದರೂ.. ನಮಸ್ಕಾರ ನಾನು ನಂಜುಂಡಸ್ವಾಮಿ, ರೈತ ಸಂಘ ಎಂದಷ್ಟೇ ಪರಿಚಯಿಸಿಕೊಳ್ಳುತ್ತಿದ್ದರು. ಎಂದೂ ನಾನು ರಾಜ್ಯಾಧ್ಯಕ್ಷ ಎಂದು ಹೇಳಿಕೊಳ್ಳುತ್ತಿರಲಿಲ್ಲ. ಅದರ ಹಿಂದಿದ್ದ ಒಂದೇ ಶಕ್ತಿ ಅವರಿಗಿದ್ದ ಅಪಾರವಾದ ಓದು ಮತ್ತು ಅಗಾಧವಾದ ಜ್ಞಾನ, ಜ್ಞಾನದಿಂದ ಬಂದ ವೈಚಾರಿಕ ಸ್ಪಷ್ಟತೆ, ವೈಚಾರಿಕ ಸ್ಪಷ್ಟತೆಯಿಂದ ಹೊರಬಂದ ರಾಜಿರಹಿತವಾದ ವ್ಯಕ್ತಿತ್ವ.
ರೈತ ಹೋರಾಟದ, ಸಮಾವೇಶಗಳ ಮತ್ತೆಲ್ಲ ಕಾರ್ಯಕ್ರಮಗಳ ಕರಪತ್ರಗಳ, ಪೋಸ್ಟರ್‌ಗಳ ಒಕ್ಕಣೆ ಅವರೇ ಬರೆಯುತ್ತಿದ್ದರು. ’ನಿದ್ದೆಯಲ್ಲಿರುವ ವಿಧಾನಸೌಧವನ್ನು ಎಬ್ಬಿಸಲು’, ’ಹೊಸ ಕರ್ನಾಟಕ ಕಟ್ಟಲು ರೈತರ ಬೃಹತ್ ಸಮಾವೇಶ’ ಎಂಬ ಕಬ್ಬನ್ ಪಾರ್ಕಿನ ಸಮಾವೇಶದ ಬ್ಯಾನರ್ ಇರಬಹುದು.. ಕುಲಾಂತರಿ ಬಿ.ಟಿ.ಹತ್ತಿಯ ವಿರುದ್ಧ ನಡೆದ ರೈತರ ನೇರ ಕಾರ್ಯಾಚರಣೆಗೆ ಅವರು ಇಟ್ಟ ಹೆಸರು ‘Cremation Action Monsanto’ (ಮೊನ್ಸ್ಯಾಂಟೋದ ಶವದಹನ ಕ್ರಿಯೆ). ಆಹಾರ ಭದ್ರತೆ ಬಗ್ಗೆಯಷ್ಟೇ ಮಾತನಾಡುತ್ತಿದ್ದ ವಿಶ್ವ ಸಂಸ್ಥೆಗೆ ಆಹಾರದ ಸಾರ್ವಭೌಮತೆಯ ಪರಿಕಲ್ಪನೆಯನ್ನು ಹೇಳಿಕೊಡುವ ಮುಖಾಂತರ ರೈತರ, ಶ್ರಮಿಕರ ಬದುಕುವ ಹಕ್ಕಿನ ಹೋರಾಟಕ್ಕೆ ನುಡಿಗಟ್ಟುಗಳನ್ನು ಕಟ್ಟಿಕೊಡುತ್ತಿದ್ದರು.
ಅವರೆಂದೂ ಮನವಿ ಕೊಟ್ಟು ಫೋಟೋ ತೆಗೆಸಿಕೊಳ್ಳುವ ಹೋರಾಟಗಳನ್ನು ಮಾಡುತ್ತಿರಲಿಲ್ಲ. ಅವರಿಗಿದ್ದ ನಂಬಿಕೆ Direct Action ಬಗ್ಗೆ ಮಾತ್ರ. ಅದೂ ಅಹಿಂಸಾತ್ಮಕವಾದ ನೇರ ಕಾರ್ಯಾಚರಣೆ. ಅದು ಸಮಾಜದ ಗಮನ ಸೆಳೆಯಲು ಮತ್ತು ಸಮಾಜವನ್ನು ಎಚ್ಚರಿಸಲು ಬಳಸುತ್ತಿದ್ದ ಕಾರ್ಯತಂತ್ರವೂ ಆಗಿತ್ತು. ಜಪ್ತಿಗೆ ವಿರುದ್ಧ ಮರುಜಪ್ತಿ, ಸಾಮಾಜಿಕ ಅರಣ್ಯದ ಹೆಸರಿನಲ್ಲಿ ನೆಡುತ್ತಿದ್ದ ಮಾರಕ ನೀಲಗಿರಿ ಗಿಡಗಳನ್ನು ಕಿತ್ತು ಹಾಕಿದ ಕಾರ್ಯಕ್ರಮ, ಅಕ್ರಮ ಗಣಿಗಾರಿಕೆಯನ್ನು ತಡೆಯಲು ರೈತರು ತಮ್ಮ ಹಳ್ಳಿಗಳಲ್ಲಿ ರಾತ್ರೋ ರಾತ್ರಿ ಕಾದು ಲಾರಿಗಳನ್ನು ತಡೆದು ಅಕ್ರಮವಾಗಿ ಸಾಗಿಸುತ್ತಿದ್ದ ನೈಸರ್ಗಿಕ ಸಂಪತ್ತಿನ ಸಂರಕ್ಷಣೆಗೆ ನಡೆದ ಹೋರಾಟ, ಬ್ರಿಗೇಡ್ ರೋಡಿನ ಕಾರ್ಗಿಲ್ ಬೀಜದ ಕಂಪೆನಿ ಮತ್ತು ಕೆಂಟುಕಿ ಫ್ರೈಡ್ ಚಿಕನ್ ಮೇಲೆ ನಡೆಸಿದ ನೇರ ಕಾರ್ಯಾಚರಣೆ, ನೀರಾ ಚಳವಳಿ, ಮೀಟರ್ ವಾಪಸಾತಿ ಚಳವಳಿ ಇವೆಲ್ಲಾ Direct Action ಚಳವಳಿಗೆ ಕೆಲವು ಉದಾಹರಣೆಗಳು..
ಈ ರೀತಿಯ ಚಳವಳಿಗಳು ಕೇವಲ ಇಲ್ಲಿಯ ರೈತರನ್ನಷ್ಟೇ ಅಲ್ಲ. ಬ್ರೆಜಿಲ್ ದೇಶದ ಭೂಹೀನರ ಸಂಘ, ಇಂಡೋನೇಷ್ಯಾದ ರೈತರ ಸಂಘ ಹಾಗೂ ಫ್ರಾನ್ಸ್ ದೇಶದ ರೈತ ಸಂಘಗಳನ್ನೂ ಪ್ರೇರೇಪಿಸಿದವು. ಅವರು ಪ್ರತಿಪಾದಿಸುತ್ತಿದ್ದ ಆಹಾರ ಸಾರ್ವಭೌಮತ್ವದ ಸಿದ್ಧಾಂತ ಮಾಲಿ, ನೇಪಾಳ ಮತ್ತು ಬೊಲಿವಿಯಾ ದೇಶಗಳ ಸಂವಿಧಾನದ ಮೂಲಭೂತ ಹಕ್ಕುಗಳಾಗಿ ಸೇರಿಕೊಂಡವು.
ಆದರೆ ದುಃಖದ ಸಂಗತಿಯೆಂದರೆ ಅವರ ನಂತರ ಅವರ ಗರಡಿಯಲ್ಲೇ ಪಳಗಿದ ರೈತ ಚಳವಳಿಯ ಎರಡನೇ ಅಥವಾ ಮೂರನೇ ತಲೆಮಾರಿನ ರೈತ ನಾಯಕರುಗಳು ಇವ್ಯಾವ ವಿಚಾರಗಳನ್ನೂ ಗಂಭೀರವಾಗಿ ಮುನ್ನಡೆಸದೆ ಹೋದದ್ದು. ಹೊಸ ತಲೆಮಾರಿನ ರೈತ ಚಳವಳಿಗಾರರಿಗಂತೂ ವೈಚಾರಿಕ ಶೂನ್ಯತೆಯನ್ನು ಇದು ಕೊಡುಗೆಯಾಗಿ ಕೊಟ್ಟಿದೆ.
ಇಂದು ರೈತ ಸಂಘದ ಹೆಸರಿನಲ್ಲಿ ನೂರಾರು ಸಂಘಟನೆಗಳು ಹುಟ್ಟಿಕೊಂಡಿವೆ. ಅದರಲ್ಲಿ ಲೆಟರ್‌ಹೆಡ್ ಸಂಘಟನೆಗಳೇ ಹೆಚ್ಚು. ಎಲ್ಲರೂ ಪಪ್ಪನ ಫೋಟೋ ಬಳಸುತ್ತಾರೆ. ದುರಂತವೆಂದರೆ ಇವರ್‍ಯಾರೂ ಅವರ ವಿಚಾರಗಳ ಮೇಲೆ ಸಂಘಟನೆ ಕಟ್ಟುತ್ತಿಲ್ಲ ಎನ್ನುವುದು.
ಈ ಎಲ್ಲ ಸ್ನೇಹಿತರು ಒಮ್ಮೆ ನಂಜುಂಡಸ್ವಾಮಿಯವರನ್ನು ಮತ್ತು ಅವರು ಪ್ರತಿಪಾದಿಸುತ್ತಿದ್ದ ವಿಚಾರಗಳ ಬಗ್ಗೆ ಗಂಭೀರವಾಗಿ ತಿಳಿದುಕೊಳ್ಳುವಂತಾಗಲಿ. ಒಂದು ನಿಮಿಷ ಕಣ್ಣುಮುಚ್ಚಿ ಅವರ ನಡೆನುಡಿಯ ಬಗ್ಗೆ ಯೋಚಿಸುವಂತಾಗಲಿ. ಇದೊಂದೇ ಮಗಳಾಗಿ ಅವರ ಹುಟ್ಟಿದ ದಿನದ ಈ ಫೆಬ್ರವರಿ ತಿಂಗಳಿನಲ್ಲಿ ನಾನು ಮಾಡುವ ಮನವಿ…
ಮಿಸ್ ಯು ಪಪ್ಪಾ…

ಚುಕ್ಕಿ ನಂಜುಂಡಸ್ವಾಮಿ
ಚಿಕ್ಕಂದಿನಿಂದಲೂ ರೈತ ಚಳವಳಿಯ ಜೊತೆಗೇ ಬೆಳೆದ ಚುಕ್ಕಿ, ಈಗ ರೈತ ಚಳವಳಿಯ ರಾಜ್ಯ ನಾಯಕಿಯರಲ್ಲೊಬ್ಬರು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹಾಗೂ ತೃತೀಯ ದೇಶಗಳ ರೈತರನ್ನು ಪ್ರತಿನಿಧಿಸುವವರು. ಪ್ರಸ್ತುತ ಚಾಮರಾಜನಗರದ ಅಮೃತಭೂಮಿಯ ವಿಶಿಷ್ಟ ರೈತ ಪ್ರಯೋಗ ಶಾಲೆಯ ಮುಖ್ಯಸ್ಥರು.
ಇದನ್ನೂ ಓದಿ: ಕರ್ನಾಟಕವನ್ನಾವರಿಸಿದ ರೈತ ಚಳುವಳಿ; ಮತ್ತಷ್ಟು ಸಂಗತಿಗಳು ಮತ್ತು ನೆನಪುಗಳು



Very wonderful huma being, Karnataka will
be remembering forever for his human service to farming community